Advertisement

ತಿಂಡಿ, ಚಹಾಕ್ಕೆ ಫೇಮಸ್ಸು ಕಂಠನ ಹೋಟೆಲ್‌

12:30 AM Feb 04, 2019 | |

ಬೆಳಗಾವಿ ಬಿಟ್ಟರೆ ಆ ಜಿಲ್ಲೆಯ ಎರಡನೇ ಅತಿದೊಡ್ಡ ವಾಣಿಜ್ಯ, ಜನನಿಬಿಡ ನಗರ ಗೋಕಾಕ್‌. ಬೆಲ್ಲ, ಗೋವಿನ ಜೋಳ ಮತ್ತು ಹತ್ತಿ ಬೆಳೆಗೂ ಹೆಸರುವಾಸಿಯಾಗಿರುವ ಈ ನಗರದಲ್ಲಿ ಸಿದ್ಧವಾಗುವ ಸಿಹಿ ತಿನಿಸು “ಕರದಂಟು’, ಲಡಗಿ ಲಾಡು (ಉಂಡಿ) ಲೋಕ ಪ್ರಸಿದ್ಧಿ. ಐತಿಹಾಸಿಕ ಕೋಟೆ ಹೊಂದಿರುವ ಈ ನಗರದಲ್ಲಿ ಚಹಾ ಹಾಗೂ ತಿಂಡಿಗೆ ಫೇಮಸ್ಸು ಕಂಠನ ಹೋಟೆಲ್‌. ಇಲ್ಲಿ ತಯಾರಾಗುವ ಪಾವ್‌ ಬಜ್ಜಿ, ಮೈಸೂರು ಅವಲಕ್ಕಿ, ಕೂರ್ಮಾಪೂರಿ ಗ್ರಾಹಕರಿಗೆ ಅಚ್ಚುಮೆಚ್ಚು.

Advertisement

45 ವರ್ಷಗಳ ಹಿಂದೆ ಮನೆಯಲ್ಲಿ ಜಗಳ ಮಾಡಿಕೊಂಡು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯಿಂದ ಗೋಕಾಕ್‌ ನಗರಕ್ಕೆ ಬಂದ ಟಿ.ಎಸ್‌.ಶ್ರೀಕಂಠಗೆ, ಇಲ್ಲೇ ಹೋಟೆಲ್‌ನಲ್ಲಿ ದೋಸೆ ಮಾಡಿಕೊಂಡಿದ್ದ ತೀರ್ಥಹಳ್ಳಿಯ ಸ್ನೇಹಿತರೊಬ್ಬರು ಆಶ್ರಯ ನೀಡಿದರು. ಕೆಲ ದಿನಗಳ ನಂತರ ಶ್ರೀಕಂಠ ಕೃಷ್ಣ ಹೋಟೆಲ್‌ನಲ್ಲಿ ಕೆಲಸಕ್ಕೆ ಸೇರಿಕೊಂಡರು. ಕೆಲವೊಂದು ತಿಂಗಳ ಬಳಿಕ ಕೋರ್ಟ್‌ ಬಳಿ ಸಣ್ಣದಾಗಿ ಬೀಡಾ ಅಂಗಡಿಯನ್ನು ಆರಂಭಿಸಿದರು. ನಂತರ ಸಣ್ಣದಾಗಿ ಪೆಟ್ಟಿಗೆ ಅಂಗಡಿ ತೆರೆದು ಅಲ್ಲೇ ಹೋಟೆಲ್‌ ಆರಂಭಿಸಿದರು. ಇವರಿಗೆ ಪತ್ನಿ ಪ್ರೇಮಾ ಸಾಥ್‌ ನೀಡಿದರು. ಈ ಹೋಟೆಲ್‌ನ ತಿಂಡಿ ಇಷ್ಟಪಟ್ಟ ಗ್ರಾಹಕರ ಸಂಖ್ಯೆ ಹೆಚ್ಚಾದ ಕಾರಣ ಎರಡು ವರ್ಷಗಳ ಹಿಂದೆ ಕೋರ್ಟ್‌ ಸರ್ಕಲ್‌ನಲ್ಲಿ ಒಂದು ಅಂತಸ್ತಿನ ಕಟ್ಟಡ ಕಟ್ಟಿ ಅದಕ್ಕೆ ಹೋಟೆಲ್‌ ಲಕ್ಷ್ಮೀ ಎಂದು ಹೆಸರಿಟ್ಟರು. ಈಗ ಅವರೊಂದಿಗೆ ಮಕ್ಕಳಾದ ಟಿ.ಎಸ್‌.ಸುನಿಲ್‌, ಸುಶ್ಮಿತಾ ಕೂಡ ಹೋಟೆಲ್‌ ನೋಡಿಕೊಳ್ಳುತ್ತಿದ್ದಾರೆ. 
 
ವಿಶೇಷ ತಿಂಡಿಗಳು:

ಈ ಹೋಟೆಲ್‌ನ ಎಲ್ಲಾ ತಿಂಡಿಗಳೂ ಗ್ರಾಹಕರಿಗೆ ಇಷ್ಟ. ಅದರಲ್ಲಿ ಮೈಸೂರು ಅವಲಕ್ಕಿ, ಕುರ್ಮಾಪುರಿ, ಪಾವ್‌ ಭಾಜ್ಜಿಯನ್ನು ಗ್ರಾಹಕರು ಹೆಚ್ಚಾಗಿ ಇಷ್ಟ ಪಡುತ್ತಾರೆ.

ಇತರೆ ತಿಂಡಿಗಳು:
ಕೇಸರಿಬಾತ್‌(ಶಿರಾ), ಉಪ್ಪಿಟ್ಟು, ಇಡ್ಲಿ, ವಡೆ, ಪೂರಿ, ಫ‌ಲಾವ್‌(ಮಧ್ಯಾಹ್ನ 12ರ ನಂತರ) ಸಂಜೆ 5ರ ನಂತರ ಬಜ್ಜಿ, ಮೈಸೂರು ಅವಲಕ್ಕಿ, ಕೂರ್ಮಾಪುರಿ, ದೋಸೆ ರಾತ್ರಿ 9ರವರೆಗೂ ಸಿಗುತ್ತವೆ. ತಿಂಡಿಗಳ ದರ ಗ್ರಾಹಕರ ಸ್ನೇಹಿಯಾಗಿದ್ದು, 20 ರೂ.ನಿಂದ 40 ರೂ. ಒಳಗೇ ಇದೆ. 

5 ರೂ.ಗೆ ವಾವ್‌ ಅನಿಸೋ ಚಹಾ:
ಬೆಳಗ್ಗಿನ ಉಪಾಹಾರಕ್ಕೆ ಈ ಹೋಟೆಲ್‌ ಹೇಳಿ ಮಾಡಿಸಿದಂತಿದೆ. ಒಂದು ಪ್ಲೇಟ್‌ ತಿಂಡಿ ತಿಂದು, 5 ರೂ. ಕೊಟ್ಟು ಚಹಾ ಕುಡಿದರೆ ಸಾಕು ಹೊಟ್ಟೆ ತುಂಬುತ್ತದೆ. ತಿಂಡಿಗೆ ಎಷ್ಟು ಫೇಮಸೊÕà, ಚಹಾಕ್ಕೂ ಅಷ್ಟೇ ಹೆಸರುವಾಸಿ. ಸಾಕಷ್ಟು ಗ್ರಾಹಕರು ಚಹಾ ಕುಡಿಯುವುದಕ್ಕಾಗಿಯೇ ಇಲ್ಲಿಗೆ ಬರುತ್ತಾರಂತೆ. ನೀರನ್ನು ಬೆರಸದೇ, ನೇರ ರೈತರಿಂದಲೇ ಖರೀದಿಸಿದ ಹಾಲಿನಲ್ಲಿ ಚಹಾ ತಯಾರಿಸುತ್ತಾರಂತೆ. ಹಾಲಿನ ಗುಣಮಟ್ಟ ಪರಿಶೀಲನೆಗೆ ಯಂತ್ರ ಸಹ ಇದೆಯಂತೆ.

ರಾಜಕಾರಣಿಗಳಿಗೂ ಮೆಚ್ಚಿನ ಹೋಟೆಲ್‌:
ಇಲ್ಲಿನ ಗೋಕಾಕ್‌ ಜಲಪಾತ ನೋಡಲು ಬರುವ ಪ್ರವಾಸಿಗರು, ಸ್ಥಳೀಯರಿಗಷ್ಟೇ ಅಲ್ಲ, ಸಚಿವ, ಶಾಸಕರೂ ಆಗಿರುವ ಜಾರಕಿಹೊಳಿ ಬ್ರದರ್ಸ್‌ ಹಾಗೂ ರಾಜಕಾರಣಿಗಳಿಗೆ ಈ ಹೋಟೆಲ್‌ನ ತಿಂಡಿ ಇಷ್ಟ.  

Advertisement

ಸರಳ ಜೀವನ ಮೈಗೂಡಿಸಿಕೊಂಡಿರುವ ಶ್ರೀಕಂಠ ಅವರು, ಮೊದಲಿನಿಂದಲೂ ಕಡಿಮೆ ದರದಲ್ಲಿ ಗ್ರಾಹಕರಿಗೆ ಶುಚಿ, ರುಚಿಯಾದ ಆಹಾರ ನೀಡುತ್ತಾ, ತಾಲೂಕಿನಲ್ಲಿ ಕಂಠ ಎಂದೇ ಹೆಸರು ಪಡೆದಿದ್ದಾರೆ. ಬಂದ ಅಲ್ಪ ಆದಾಯದಲ್ಲೇ ಜೀವನ ಸಾಗಿಸಬೇಕು ಎಂಬುದು ಅವರ ಹಂಬಲ.

ಹೋಟೆಲ್‌ ಸಮಯ: 
ಬೆಳಗ್ಗೆ 5ರಿಂದ ರಾತ್ರಿ 9ರವರೆಗೆ. ವಾರದ ಎಲ್ಲ ದಿನವೂ ತೆರೆದಿರುತ್ತದೆ.

ಹೋಟೆಲ್‌ ವಿಳಾಸ: 
ಬಸ್‌ ನಿಲ್ದಾಣ ಸಮೀಪ ಇರುವ ಕೋರ್ಟ್‌ ಸರ್ಕಲ್‌, ಗೋಕಾಕ್‌ ನಗರ.

– ಭೋಗೇಶ ಆರ್‌. ಮೇಲುಕುಂಟೆ

Advertisement

Udayavani is now on Telegram. Click here to join our channel and stay updated with the latest news.

Next