ಕಳೆದ ಶುಕ್ರವಾರದಂದು ಬಿಡುಗಡೆಯಾದ “ಕಾಳಿದಾಸ ಕನ್ನಡ ಮೇಷ್ಟ್ರು’ ಚಿತ್ರಕ್ಕೆ ಎಲ್ಲಾ ಕಡೆಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇನ್ನು “ಕಾಳಿದಾಸ’ನ ಗಳಿಕೆಯಲ್ಲೂ ನಿಧಾನ ಏರಿಕೆಯಾಗುತ್ತಿದ್ದು, ನಿರ್ಮಾಪಕರು ಮತ್ತು ನಿರ್ದೇಶಕರ ಮೊಗದಲ್ಲಿ ನಗು ಮೂಡುತ್ತಿದೆ. ಇದೇ ವೇಳೆ “ಕಾಳಿದಾಸ ಕನ್ನಡ ಮೇಷ್ಟ್ರು’ ಚಿತ್ರದ ಬಿಡುಗಡೆಯ ನಂತರದ ಬೆಳವಣಿಗೆಗಳ ಬಗ್ಗೆ ಮಾತನಾಡಲು ಚಿತ್ರತಂಡ ಮಾಧ್ಯಮಗಳ ಮುಂದೆ ಬಂದಿತ್ತು.
ಮೊದಲಿಗೆ ಚಿತ್ರದ ಬಗ್ಗೆ ಮಾತಿಗಿಳಿದ ನಿರ್ದೇಶಕ ಕಂ ಗೀತ ಸಾಹಿತಿ ಕವಿರಾಜ್ “ಬಿಡುಗಡೆ ದಿನ ಜನರು ಟಾಕೀಸಿನಲ್ಲಿ ಕಡಿಮೆ ಇರುವುದನ್ನು ಕಂಡು ಇನ್ನು ಮುಂದೆ ಹಾಡು ಬರೆಯಲಿಕ್ಕೆ ಲಾಯಕ್ಕು ಎಂದು ನಿರ್ಧಾರ ಮಾಡಿದ್ದೆ. ಆದ್ರೆ ಮಾರನೆ ದಿವಸ ಪತ್ರಿಕೆಗಳಲ್ಲಿ ಬಂದ ವಿಮರ್ಶೆ ನೋಡಿ ಸಮಾಧಾನ ಬಂದು ನಿರ್ಧಾರ ಬದಲಾಯಿಸಿಕೊಂಡೆ. ಚಿತ್ರ ನೋಡಿದ ಪ್ರತಿ ಪೋಷಕರ ಮೇಲೂ ಚಿತ್ರ ಒಂದಷ್ಟು ಪರಿಣಾಮ ಬೀರುತ್ತಿದೆ.
ಚಿತ್ರ ನೋಡಿ ಹೊರಬರುವಾಗ ಒಂದಷ್ಟು ಚಿಂತನೆ ಮೂಡಿಸಲು ಯಶಸ್ವಿಯಾಗಿದೆ. ನಮ್ಮ ಪ್ರಾಮಾಣಿಕ ಪ್ರಯತ್ನದ ಸಂದೇಶವು ಜನರಿಗೆ ಮುಟ್ಟುತ್ತಿದೆ. ತಂದೆ-ತಾಯಿ ಮಕ್ಕಳ ಬಗ್ಗೆ ಭ್ರಮೆಯಲ್ಲಿ, ಉನ್ಮಾದದಲ್ಲಿ ಓಡುತ್ತಿರುವಾಗ, ಕಾಳಿದಾಸ ಎಲ್ಲರನ್ನು ಹಿಡಿದು ನಿಲ್ಲಿಸಿದೆ ಎಂದು ಭಟ್ಟರು ಹೇಳಿದ್ದಾರೆ. ನೋಡಿದವರು ಒಬ್ಬರು ಬದಲಾದರೆ ಸಾಕು ಅಂದುಕೊಂಡವನಿಗೆ, ಸಾವಿರ ಜನರು ಬದಲಾಗಿದ್ದಾರೆ. ಇನ್ನು ಮೂರು ದಿವಸ ಪ್ರದರ್ಶನ ಕಂಡರೆ ಬಂಡವಾಳ ವಾಪಸ್ಸು ಬರುತ್ತದೆಂದು ವಿತರಕರು ಹೇಳಿದ್ದಾರೆ.
ಇದರಿಂದ ಧೈರ್ಯ ಬಂದು 2-3 ಸಿನಿಮಾಗೆ ಕಥೆ ಬರೆಯಲು ಧೈರ್ಯ ಬಂದಿದೆ’ ಎಂದರು. ನಂತರ ಮಾತನಾಡಿದ ನಟ ಜಗ್ಗೇಶ್, “ಪ್ರಾರಂಭದಲ್ಲಿ ಕವಿರಾಜ್ ಮೇಲೆ ಭಯಂಕರ ಕೋಪ ಬಂದಿತ್ತು. ಮುಂದೆ ಅವರ ಚಿಂತನೆ, ಕೆಲಸ ನೋಡಿದಾಗ ನಿಜಕ್ಕೂ ಹೆಮ್ಮೆ ಆಯಿತು. ಸಾಲು ಸಾಲು ಚಿತ್ರಗಳು ಬಿಡುಗಡೆಯಾಗುತ್ತಿದ್ದು, ಇದರ ಮಧ್ಯೆ ಕಾಳಿದಾಸನಿಗೆ ಪ್ರತ್ಯೇಕ ಸ್ಥಾನ ಸಿಕ್ಕಿದೆ. ಮಾಲ್‌ವನರು ನಮಗೂ ಪ್ರದರ್ಶನ ಕೊಡಿ ಎಂದು ಬೇಡಿಕೆ ಇಟ್ಟಿದ್ದಾರೆ.
ಉತ್ತಮವಾದ ಕೆಲಸಕ್ಕೆ ಪ್ರತಿಫಲ ಸಿಕ್ಕೇ ಸಿಗುತ್ತದೆ ಎಂಬುದಕ್ಕೆ ಇದೊಂದು ಸಾಕ್ಷಿ’ ಎಂದರು . ಇದೇ ವೇಳೆ “ಒಂದು ಸಿನಿಮಾ ಥಿಯೇಟರ್‌ನಲ್ಲಿ ಗಟ್ಟಿಯಾಗಿ ನಿಂತರೆ ನೂರು ಜನರಿಗೆ ಕೆಲಸ ಸಿಗುತ್ತದೆ. ದೇವರು ನನಗೆ ಎಲ್ಲವನ್ನು ಕೊಟ್ಟಿದ್ದಾನೆ. ಒಳ್ಳೆ ಕಥೆಗಳು ಬಂದರೆ ಮಾತ್ರ ನಟಿಸುತ್ತೇನೆ. ಈ ಎಲ್ಲಾ ಕಾರಣದಿಂದ ಮತ್ತೆ ನಿರ್ದೇಶನ ಮಾಡಲು ಮನಸ್ಸು ಮಾಡಿದ್ದೇನೆ’ ಎಂದು ನಿರ್ದೇಶನದ ಕಡೆಗಿರುವ ತಮ್ಮ ಆಸಕ್ತಿಯನ್ನು ತೆರೆದಿಟ್ಟರು.
“ನಾನು ಸಹ ಕನ್ನಡ ಶಾಲೆಯಲ್ಲಿ ಓದಿದ್ದರಿಂದ, ಅದೇ ಶಾಲೆಯ ಮಕ್ಕಳಿಗೆ ಚಿತ್ರ ತೋರಿಸಲಾಗಿದೆ. ಮಕ್ಕಳನ್ನು ಬೆಳಸವ ರೀತಿ, ಸರ್ಕಾರಿ ಶಾಲೆಗಳಲ್ಲಿ ನಡೆಯುವ ಘಟನೆಗಳು ತೋರಿಸಿರುವುದರಿಂದ, ಪ್ರತಿ ತಾಲೂಕಿನ ಪ್ರೇಕ್ಷಕರು ಇದರ ಕುರಿತಂತೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇಂತಹ ಸ್ಥಳಗಳಲ್ಲಿ ಮೂಲಭೂತ ಸೌಕರ್ಯ ಇಲ್ಲದೆ ಇರುವುದರಿಂದ ಟೆಕ್ಕಿಗಳೊಂದಿಗೆ ಸರ್ಕಾರವು ಸೇರಿಕೊಂಡು ಅಭಿವೃದ್ದಿ ಪಡಿಸಲು ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು’ ಎಂದು ನಿರ್ಮಾಪಕ ಯು.ಆರ್.ಉದಯ್‌ಕುಮಾರ್ ಅಭಿಪ್ರಾಯಪಟ್ಟರು.
“ಎರಡು ವರ್ಷದ ನಂತರ ಉತ್ತಮ ಚಿತ್ರದಲ್ಲಿ ನಟಿಸಿದೆ ಅಂತ ಸಾರ್ಥಕ ಭಾವನೆ ಈ ಸಿನಿಮಾದಲ್ಲಿ ಬಂದಿದೆ’ ಎಂದು ನಾಯಕಿ ಮೇಘನಾ ಗಾಂವ್ಕರ್ ತಮ್ಮ ಖುಷಿ ಹಂಚಿಕೊಂಡರು. ವೇದಿಕೆಯಲ್ಲಿ ಹಾಜರಿದ್ದ ಸಂಗೀತ ನಿರ್ದೇಶಕ ಗುರುಕಿರಣ್, ಕಲಾವಿದರಾದ ಆರ್ಯ, ಗ್ರೀಷ್ಟ, ಓಂ, ಗೌತಂ, ಮನೀಷ್, ಶ್ರಾವಣಿ, ಸಹ ನಿರ್ಮಾಪಕ ಶಿವಪ್ರಸಾದ್. ಎಂ.ವಿ, ವಿತರಕ ದೀಪಕ್ ಗಂಗಾಧರ್ ಮತ್ತು ಪರಿಮಳ ಜಗ್ಗೇಶ್ “ಕಾಳಿದಾಸ ಕನ್ನಡ ಮೇಷ್ಟರು’ ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.