ಭಟ್ಕಳ: ಪುರಸಭೆ, ಜಾಲಿ ಪಪಂ, ಶಿರಾಲಿ, ಮಾವಿನಕುರ್ವೆಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಕಡವಿನಕಟ್ಟೆ ಡ್ಯಾಂ ಹೂಳು ತುಂಬಿ ನೀರೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದ್ದು ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷದಿಂದ ಜನ ಪರದಾಡುವಂತಾಗಿದೆ.
ಹಲವಾರು ವರ್ಷಗಳಿಂದ ಹೂಳು ತೆಗೆಯುವಂತೆ ಆಗ್ರಹಿಸಲಾಗಿದ್ದರೂ ಸಂಬಂಧ ಪಟ್ಟ ಇಲಾಖೆ ನಿರ್ಲಕ್ಷ್ಯದಿಂದ ಇಂದು ಜನರು ಹನಿ ನೀರಿಗಾಗಿ ಸಂಕಷ್ಟ ಪಡುವಂತಾಗಿದೆ. ಕಳೆದ ಸುಮಾರು ಒಂದು ದಶಕದ ಹಿಂದೆ ಕಡವಿನಕಟ್ಟೆ ಡ್ಯಾಂ ರಿಪೇರಿಗಾಗಿ ಹಣ ಮಂಜೂರಾಗಿತ್ತು. ಡ್ಯಾಂ ಸೈಟ್‌ನಲ್ಲಿ ರಿಪೇರಿ ಕಾರ್ಯ ವಹಿಸಿಕೊಂಡ ಗುತ್ತಿಗೆದಾರರು ಕೆಲಸ ಮುಗಿಸಿದ್ದು ಗೇಟ್ ವಾಲ್ವ್ ರಿಪೇರಿ ಮಾಡಬೇಕಾಗಿದ್ದರೂ ತಾಂತ್ರಿಕ ಕಾರಣ ನೀಡಿ ಹಾಗೆಯೇ ಬಿಟ್ಟಿದ್ದು ಇನ್ನಷ್ಟು ಪರಿಸ್ಥಿತಿ ಬಿಗಡಾಯಿಸಲು ಕಾರಣವಾಯಿತು. ಅಲ್ಲದೇ ಅಂದು ರಿಪೇರಿ ಮಾಡುವ ಸಮಯದಲ್ಲಿ ನೀರಿನ ಒತ್ತಡವನ್ನು ತಡೆಯಲು ಡ್ಯಾಂ ಸೈಟ್ ಒಳಗಡೆಯಲ್ಲಿ ತುಂಬಿದ್ದ ಮಣ್ಣನ್ನು ಸಂಪೂರ್ಣ ತೆಗೆಯುವುದರೊಳಗಾಗಿ ಮಳೆ ಆರಂಭವಾಗಿದ್ದರಿಂದ ಅಲ್ಲಿದ್ದ ಮಣ್ಣನ್ನು ಹಾಗೆಯೇ ಬಿಟ್ಟ ಗುತ್ತಿಗೆದಾರರಿಗೆ ಬಿಲ್ ಪಾವತಿಯಾಗಲು ಯಾವುದೇ ಅಡ್ಡಿಯಾಗಿಲ್ಲ. ಇದರಿಂದ ಮುಂದಿನ ವರ್ಷದಿಂದ ಡ್ಯಾಂ ಒಳಗಡೆ ನೀರು ಸಂಗ್ರಹಣೆ ಕಡಿಮೆಯಾಗುತ್ತಾ ಬಂತಲ್ಲದೇ ಇಂದು ಸಂಪೂರ್ಣ ಒಣಗಿದೆ.
ಡ್ಯಾಂ ಹೂಳೆತ್ತುವ ಕುರಿತು ಸ್ವತಃ ಶಾಸಕ ಸುನೀಲ್ ನಾಯ್ಕ ಅವರು ಭೇಟಿ ಕೊಟ್ಟು ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಸೂಚನೆ ಕೊಟ್ಟು ಆರು ದಿನಗಳು ಕಳೆದರೂ ಕೂಡಾ ಇನ್ನೂ ತನಕ ಯಾವುದೇ ಸೂಕ್ತ ಕ್ರಮ ಜರುಗಿಸಿಲ್ಲ ಎನ್ನುವುದು ಬೇಸರದ ಸಂಗತಿ. ಓರ್ವ ಜನಪ್ರತಿನಿಧಿಗಳ ಮಾತಿಗೇ ಈ ರೀತಿಯ ನಿರ್ಲಕ್ಷ ಮಾಡಿದರೆ ಇನ್ನು ಜನಸಾಮಾನ್ಯರ ಧ್ವನಿಗೆ ಬೆಲೆ ಇದೆಯೇ ಎನ್ನುವುದು ಇಲ್ಲಿ ನಾಗರಿಕರು ಕೇಳುವ ಪ್ರಶ್ನೆಯಾಗಿದೆ.
ಕಳೆದ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಪುರಸಭೆಯವರು ನೀರನ್ನು ಉಪಯೋಗಿಸುತ್ತಾ ಬಂದಿದ್ದು ಇನ್ನೂ ತನಕ ಪುರಸಭೆಯಿಂದ ಡ್ಯಾಂ ನಿರ್ವಹಣೆಗೆ ಹಣ ಖರ್ಚು ಮಾಡಿದ್ದು ಇಲ್ಲ ಎನ್ನುವ ಮಾಹಿತಿ ಸ್ವತಹ ಶಾಸಕರ ಎದುರೇ ಬಹಿರಂಗ ಗೊಂಡಿದ್ದು, ಜಾಲಿ ಪಪಂ, ಮಾವಿನಕುರ್ವೆ ಹಾಗೂ ಶಿರಾಲಿ ಗ್ರಾಪಂಗಳು ನೀರೆತ್ತಿಕೊಂಡು ಹೋಗುತ್ತಿರುವುದು ಮಾತ್ರವಾಗಿದ್ದು ನೀರಿನ ಸಂಗ್ರಹದ ಬಗ್ಗೆಯಾಗಲೀ, ನೀರಿನ ನಿರ್ವಹಣೆ ಬಗ್ಗೆಯಾಗಲೀ ಯಾವುದೇ ಯೋಜನೆ ರೂಪಿಸಿಲ್ಲ ಎನ್ನುವುದು ಮಾತ್ರ ವಿಪರ್ಯಾಸವಾಗಿದೆ. ಚಿಕ್ಕ ನೀರಾವರಿ ಇಲಾಖೆ ವತಿಯಿಂದ ರೈತರ ಜಮೀನಿಗೆ ನೀರುಣಿಸಲು ಕಟ್ಟಿದ ಡ್ಯಾಂ ನೀರನ್ನು ಕುಡಿಯುವ ನೀರಿನ ಉಪಯೋಗ ಮಾಡುತ್ತಾ ಬಂದಿದ್ದರೂ ಯಾವುದೇ ನಿರ್ವಹಣೆ ಮಾಡದಿರುವ ಕುರಿತು ಶಾಸಕರು ತರಾಟೆಗೆ ತೆಗೆದುಕೊಂಡು ಇರುವ ಅನುದಾನ ಬಳಸಿ ಹೂಳೆತ್ತುವಂತೆ ಸೂಚಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ಹೂಳೆತ್ತುವುದಾಗಿ ಭರವಸೆ ನೀಡಿದ ಅಧಿಕಾರಿಗಳು ಕೂಡಾ ಇತ್ತ ಸುಳಿಯದೇ ಯಾವುದೇ ಕಾರ್ಯವಾಗಿಲ್ಲ. ಪುರಸಭಾ ಮುಖ್ಯಾಧಿಕಾರಿಗಳು ಕಡವಿನಕಟ್ಟೆ ಡ್ಯಾಂ ಕೆಳಗಡೆಯಿಂದ ಕಾಲುವೆ ಮಾಡಿಕೊಟ್ಟು ಪಂಪ್‌ಹೌಸ್‌ಗೆ ನೀರು ಬರುವಂತೆ ಕಾಮಗಾರಿ ಮಾಡುತ್ತಿರುವುದು ಬಿಟ್ಟರೆ ಬೇರೆ ಯಾವುದೇ ಕೆಲಸವಾಗಿಲ್ಲ. ಈ ಕುರಿತು ಶಾಸಕರ ಮಾತಿಗೂ ಬೆಲೆ ಇಲ್ಲ ಎನ್ನುವಂತಾಗಿದ್ದು, ಈ ಬಾರಿಯೂ ಹೂಳೆತ್ತದೇ ಹೋದರೆ ಮುಂದಿನ ವರ್ಷ ಮಾರ್ಚ್‌ನಲ್ಲಿಯೇ ನೀರಿಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾದರೆ ಆಶ್ಚರ್ಯವಿಲ್ಲ. ಇನ್ನಾದರೂ ಅಧಿಕಾರಿಗಳು ವಿಶೇಷ ಅನುದಾನ ಬಿಡುಗಡೆ ಮಾಡಿಸಿಕೊಂಡು ಮಳೆ ಆರಂಭಕ್ಕೆ ಮುನ್ನ ಕನಿಷ್ಠ 100 ಲಾರಿಗಷ್ಟು ಮಣ್ಣನ್ನಾದರೂ ಹೊರ ಹಾಕಿದರೆ ಜನತೆ ನಿಟ್ಟುಸಿರು ಬಿಡುವಂತಾಗುವುದಂತೂ ಸತ್ಯ.
•ಆರ್ಕೆ, ಭಟ್ಕಳ