Advertisement

ಯಕ್ಷ ದೇಗುಲಕ್ಕೆ ಹದಿನಾರರ ಸಂಭ್ರಮ 

06:00 AM Jul 13, 2018 | |

ಯಕ್ಷಗಾನ ಕಲೆಯನ್ನು ಉಳಿಸಬೇಕು, ಬೆಳೆಸಬೇಕು ಎಂಬ ಸದಾಶಯದಿಂದ ಕಾಂತಾವರದಲ್ಲಿ 2003ರಲ್ಲಿ ಸ್ಥಾಪನೆಯಾದ ಶ್ರೀಯಕ್ಷ ದೇಗುಲ ಕಾಂತಾವರ ಸಾರ್ಥಕ ಹೆಜ್ಜೆಗುರುತುಗಳನ್ನು ಮೂಡಿಸುತ್ತ ಮುನ್ನಡೆಯುತ್ತಿದೆ. ಇದರ ಸೂತ್ರಧಾರಿ, ನಿರ್ದೇಶಕ ಕಲಾವಿದ, ನಾಟ್ಯಗುರು ಮಹಾವೀರ ಪಾಂಡಿ. ಮೊದಲ ಹತ್ತು ವರ್ಷಗಳಲ್ಲಿ ಹೊಸ ಹೊಸ ಕಲಾವಿದರ ಸೇರ್ಪಡೆಯೊಂದಿಗೆ ವರ್ಷಂಪ್ರತಿ ತಾಳಮದ್ದಲೆ ಕೂಟಗಳನ್ನು ನಡೆಸುತ್ತ ಬಂದ ಸಂಸ್ಥೆ 2012ರಲ್ಲಿ ಕಾಂತಾವರ ಕ್ಷೇತ್ರದ ಧರ್ಮದರ್ಶಿ ಡಾ| ಜೀವಂಧರ ಬಲ್ಲಾಳ್‌ ಬಾರಾಡಿಬೀಡು ಅವರ ಗೌರವಾಧ್ಯಕ್ಷತೆಯೊಂದಿಗೆ ನೋಂದಾಯಿಸಲ್ಪಟ್ಟಿತು. ದಶಮಾನೋತ್ಸವ ಸಂದರ್ಭ ತೆಂಕುತಿಟ್ಟಿನ ಖ್ಯಾತ ಪುಂಡು ವೇಷಧಾರಿ ಪುತ್ತೂರು ಬಿ. ಶ್ರೀಧರ ಭಂಡಾರಿಯವನ್ನು ನಿಧಿ ಸಮರ್ಪಣೆಯೊಂದಿಗೆ ಸಮ್ಮಾನಿಸಲಾಗಿತ್ತು. 

Advertisement

ಮುಂದಿನ ವರ್ಷಗಳಲ್ಲಿ ಯಕ್ಷಗಾನ ಕಲಿಯುವ ಆಸಕ್ತಿ ಹೊಂದಿದ ಸುಮಾರು 40 ವಿದ್ಯಾರ್ಥಿಗಳನ್ನು ಒಗ್ಗೂಡಿಸಿ ಶನಿವಾರ, ರವಿವಾರಗಳಲ್ಲಿ ಉಚಿತ ಯಕ್ಷ ಶಿಕ್ಷಣ ಶಿಬಿರಗಳನ್ನು ನಡೆಸುತ್ತ ಬರಲಾಗಿದೆ. ಪ್ರಸಂಗ ಪಠಣ ಶಿಬಿರ, ಬಣ್ಣಗಾರಿಕೆ, ಅರ್ಥಗಾರಿಕೆ, ನಾಟ್ಯಗಾರಿಕೆ ಹೀಗೆ ಸರ್ವಾಂಗೀಣ ಕಲಾವಿದರನ್ನಾಗಿ ರೂಪಿಸುವಲ್ಲಿ ಪಾಂಡಿಯವರ ಶ್ರಮ ಉಲ್ಲೇಖನೀಯ. ಸಂಸ್ಥೆಯ ಅಧ್ಯಕ್ಷ ಕೆ. ಶ್ರೀಪತಿ ರಾವ್‌ ಮತ್ತು ಸಂಗಡಿಗರು ಪಾಂಡಿಯವರೊಂದಿಗೆ ಸಹಕರಿಸುತ್ತ ಬಂದಿದ್ದಾರೆ. ಈ ನಾಲ್ಕು ವರ್ಷಗಳಲ್ಲಿ ಸಂಸ್ಥೆಯ ವಾರ್ಷಿಕೋತ್ಸವವನ್ನು ತಾಳಮದ್ದಳೆ ಕೂಟ, ಬಾಲಕಲಾವಿದರಿಂದ ಬಯಲಾಟ, ಅಗಲಿದ ಕಲಾವಿದರ ಸಂಸ್ಮರಣೆ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವುದೇ ಮೊದಲಾದ ಕಾರ್ಯಕಲಾಪಗಳನ್ನು ನಡೆಸುತ್ತ ಬರಲಾಗಿದೆ. 

 ಇದೀಗ, ಜು. 15ರಂದು ಹದಿನಾರನೇ ವಾರ್ಷಿಕೋತ್ಸವ. ಬೆಳಗ್ಗೆ 10ರಿಂದ ನಿರಂತರ 12 ತಾಸುಗಳ “ಯಕ್ಷೋಲ್ಲಾಸ 2018′ ಕಾರ್ಯಕ್ರಮ. ಏಕವ್ಯಕ್ತಿ ಯಕ್ಷ ಪ್ರಯೋಗ: ಪೂರ್ವರಂಗ, ಪ್ರಸಂಗ ರೂಪಕ (ದೀವಿತ್‌ ಕೆ. ಎಸ್‌.ಪೆರಾಡಿ), ರಾಧಾ ವಿಲಾಸ ನೃತ್ಯ (ಡಾ| ವರ್ಷಾ ಶೆಟ್ಟಿ, ದಿಶಾ ಶೆಟ್ಟಿ ಸುರತ್ಕಲ್‌), “ಇಂದ್ರ ಕೀಲಕ ಊರ್ವಶೀ ಶಾಪ’ ತಾಳಮದ್ದಳೆ ಕೂಟ, ಉಜಿರೆ ಅಶೋಕ ಭಟ್ಟ ಮತ್ತು ಜಬ್ಟಾರ್‌ ಸಮೋ ಇವರಿಗೆ ಸಮ್ಮಾನ, ಏಳು ಮಂದಿ ವಿದ್ಯಾರ್ಥಿಗಳಿಗೆ ಪುರಸ್ಕಾರ ಪ್ರದಾನ, ಸಂಜೆ “ಗರುಡ ಗರ್ವಭಂಗ’ ಬಯಲಾಟ ಸಂಯೋಜಿಸಲಾಗಿದೆ. ಪುಣಿಚಿತ್ತಾಯ, ಕನ್ನಡಿಕಟ್ಟೆ, ಉಳಿತ್ತಾಯ, ಪಡ್ರೆ, ಬೊಳಿಂಜಡ್ಕ, ಜಬ್ಟಾರ್‌, ಕನ್ಯಾಡಿ, ರಮಣಾಚಾರ್‌, ಉಜಿರೆ, ಸಂಕದಗುಂಡಿ, ರಂಗಾ ಭಟ್‌, ಕೊಂಕಣಾಜೆ, ಪೊಳಲಿ, ರವಿರಾಜ್‌ ಮೊದಲಾದವರು ಭಾಗವಹಿಸಲಿದ್ದಾರೆ. 

ಧನುರ್ಧರ 

Advertisement

Udayavani is now on Telegram. Click here to join our channel and stay updated with the latest news.

Next