ಕೋವಿಡ್ 19 ವೈರಸ್ ಎಲ್ಲರನ್ನೂ ಸಂಕಷ್ಟಕ್ಕೆ ದೂಡಿದೆ. ಇದರಿಂದ ಆದಂತಹ ಲಾಕ್‌ಡೌನ್ ಕೂಡ ಸಾಕಷ್ಟು ಜನರ ಬದಲಾವಣೆಗೆ ಕಾರಣವಾಗಿದೆ. ಬದುಕಿರಲಿ, ಬದುಕುವ ರೀತಿಯಾಗಲಿ ಎಲ್ಲವನ್ನೂ ಈ ಕೋವಿಡ್ 19 ಒಂದೊಳ್ಳೆಯ ಪಾಠ ಕಲಿಸಿದೆ. ಈ ಲಾಕ್‌ಡೌನ್ ಸಮಯದಲ್ಲಿ ಬಹಳಷ್ಟು ಮಂದಿ ಹೊಸತನ್ನು ಕಲಿತಿದ್ದಾರೆ. ಹೊಸ ವಿಷಯಗಳನ್ನು ಅರಿತಿದ್ದಾರೆ. ಒಂದಷ್ಟು ಸಂಬಂಧಗಳ ಮೌಲ್ಯಗಳ ಬಗ್ಗೆ ತಿಳಿದುಕೊಂಡಿದ್ದಾರೆ. ಹಾಡಿದ್ದಾರೆ, ಕುಣಿದಿದ್ದಾರೆ, ಕುಣಿಸಿದ್ದಾರೆ. ನಕ್ಕು, ನಗಿಸಿದ್ದಾರೆ. ಹಲವು ಗಾಯಕರು ತಮ್ಮ ಮನೆಯಲ್ಲೇ ಕರೋಂಕೆ ಹಾಡಿದ್ದಾರೆ.
ಇನ್ನೂ ಕೆಲವು ಸಂಗೀತ ನಿರ್ದೇಶಕರು ಸಂಯೋಚನೆ ಎಂಬ ಹೊಸ ವಿಷಯದೊಂದಿಗೆ ಸಾಹಿತ್ಯಕ್ಕೆ ರಾಗಸಂಯೋಜಿಸಿ, ಗಾಯಕರಿಗೆ ಆದನ್ನು ಹಾಡುವ ಚಾಲೆಂಜ್ ಕೂಡ ಮಾಡಿದ್ದಾರೆ. ಇದೆಲ್ಲವೂ ಕೊರೊನೊದಿಂದ ಆದಂತಹ ಲಾಕ್‌ಡೌನ್ ಹಿನ್ನೆಲೆಯಲ್ಲೇ ಆಗಿದ್ದು ಅನ್ನೋದನ್ನು ಗಮನಿಸಲೇಬೇಕು. ಈಗ ಗಾಯಕ ನವೀನ್ ಸಜ್ಜು ಕೂಡ ಈ ಲಾಕ್ ಡೌನ್ ಸಮಯದಲ್ಲಿ ಸುಮ್ಮನೆ ಕೂತಿಲ್ಲ ಎಂಬುದನ್ನು ಗಮನಿಸಲೇಬೇಕು.
ಅವರು “ಒಳಿತು ಮಾಡು ಮನುಸ ನೀ ಇರೋದು ಮೂರು ದಿವಸ ‘ ಎಂಬ ಹಾಡನ್ನು ವೇದಿಕೆಯೊಂದರಲ್ಲಿ ಹಾಡಿ ಸೈ ಎನಿಸಿಕೊಂಡವರು. ಆ ಹಾಡಿನ ಮೂಲಕವೇ ಗುರುತಿಸಿಕೊಂಡ ನವೀನ್ ಸಜ್ಜ ಹಿಂದೆ ಕೂಡ ಕನ್ನಡದ ” ಲೂಸಿಯಾ ‘ ಚಿತ್ರದಲ್ಲೂ “ಎದೆಯೊಳಗೆ ತಮತಮತಮಟೆ ಯಾರೋ ಬಡ್ದಂಗ್… ‘ಎಂಬ ಗೀತೆ ಹಾಡಿದ್ದವರು. ಅಲ್ಲಿಂದ ಸುಮಾರು ಸಿನಿಮಾಗಳಿಗೆ ಗಾಯನ ಮಾಡಿ, ಇತ್ತೀಚೆಗೆ ಜೋರು ಸುದ್ದಿಯಾದ “ಎಣ್ಣೆ ನಿಮ್ದು ಊಟ ನಮ್ದು ‘ ಹಾಡಿಗೂ ಧ್ವನಿಯಾಗಿದ್ದವರು. ಈಗ ಅವರು, ಲಾಕ್‌ಡೌನ್ ವೇಳೆ ಕೊಳಲು ವಾದನ ಮಾಡಿದ್ದಾರೆ ಎಂಬುದು ವಿಶೇಷ.
ಅವರು ಕೊಳಲು ನುಡಿಸುವುದನ್ನು ಅಭ್ಯಾಸ ಮಾಡಿ, ಕೊನೆಗೆ ಒಂದಷ್ಟು ಸಮಯ ಕೊಳಲು ನುಡಿಸಿ, ತಾನೊಬ್ಬ ಕೊಳಲು ವಾದಕ ಎಂಬುದನ್ನೂ ಸಾಬೀತುಪಡಿಸಿದ್ದಾರೆ. ತಾವು ನುಡಿಸುತ್ತಿರುವ ಕೊಳಲನ್ನು ಮುಖಪುಟದಲ್ಲಿ ಹಾಕಿಕೊಂಡಿದ್ದಾರೆ. ಅವರ ಆ ಪ್ರಯತ್ನಕ್ಕೆ ಎಲ್ಲೆಡೆಯಿಂದಲೂ ಉತ್ತಮ ಮೆಚ್ಚುಗೆ ಸಿಕ್ಕಿದೆ. ಸದ್ಯಕ್ಕೆ ಲಾಕ್‌ಡೌನ್ ಸಮಯವನ್ನು ಸರಿಯಾಗಿ ಕಳೆಯುತ್ತಿರುವ ನವೀನ್ ಸಜ್ಜು, ಹಾಡುವುದರ ಜೊತೆಯಲ್ಲಿ ರಾಗಸಂಯೋಜ ನೆಯತ್ತವೂ ಗಮನಹರಿಸಿದ್ದಾರೆ.