ತಿ.ನರಸೀಪುರ: ತಾಲೂಕಿನ ಮುಡುಕುತೊರೆ ತೋಪಿನ ಮಠದಲ್ಲಿ ಶನಿವಾರ ಹಾಗೂ ಭಾನುವಾರ ರಂಭಾಪುರಿ ಜಗದ್ಗುರುಗಳ ಇಷ್ಟಲಿಂಗ ಮಹಾಪೂಜೆ, ಮಹಾಲಿಂಗ ಶಿವಾಚಾರ್ಯ ಸ್ವಾಮೀಜಿ ಗುರುವಂದನೆ ಹಾಗೂ ಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀಗಳ ಗುರು ಪಟ್ಟಾಧಿಕಾರ ರಜತ ಮಹೋತ್ಸವ ಹಾಗೂ ಜನ ಜಾಗೃತಿ ಭಾವೈಕ್ಯ ಧರ್ಮ ಸಮಾರಂಭ ಹಮ್ಮಿಕೊಳ್ಳಲಾಗಿದೆ ತೋಪಿನ ಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ತೇರಿನ ಬೀದಿಯ ರೇಣುಕಾ ಸಭಾ ಭವನದಲ್ಲಿ ಕಾರ್ಯಕ್ರಮಗಳ ಪೂರ್ವಭಾವಿಯಾಗಿ ಗುರುವಾರ ನಡೆದ ವೀರಶೈವ ಸಮಾಜ ಸೇವಾ ಸಮಿತಿ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಮುಡುಕುತೊರೆಯಲ್ಲಿ ಶನಿವಾರ ಸಂಜೆ 4.30 ಗಂಟೆಗೆ ರಂಭಾಪುರಿ ಶ್ರೀಗಳ ಮೆರಣಿಗೆ ನಡೆಯಲಿದೆ. ಭಾನುವಾರ ಬೆಳಗ್ಗೆ 6 ಗಂಟೆಗೆ ಗುರುವಂದನೆ ಹಾಗೂ ಗುರು ಪಟ್ಟಾಧಿಕಾರ ರಜತ ಮಹೋತ್ಸವ ಜರುಗಲಿದ್ದು, 10.30 ಗಂಟೆಗೆ ಜನ ಜಾಗೃತಿ ಮತ್ತು ಭಾವೈಕ್ಯತೆ ಸಮಾರಂಭ ನಡೆಯಲಿದೆ ಎಂದರು.
ಕಾರ್ಯಕ್ರಮದ ಸಾನ್ನಿಧ್ಯವನ್ನು ರಂಭಾಪುರಿ ಡಾ.ವೀರಸೋಮೇಶ್ವರ ಶ್ರೀಗಳು ವಹಿಸಲಿದ್ದು, ಕನಕಪುರ ಮರಳೇರಮಠ ಡಾ.ಮುಮ್ಮಡಿ ಶಿವರುದ್ರ ಶ್ರೀ ಮತ್ತು ವಾಟಾಳು ಮಠದ ಸಿದ್ಧಲಿಂಗ ಶಿವಾಚಾರ್ಯ ಶ್ರೀ ಸಮ್ಮುಖದಲ್ಲಿ ಜಗದ್ಗುರು ರೇಣುಕಾಚಾರ್ಯ ಗುರುಕುಲ ಸಾಧಕರು ವೇದಘೋಷ ನೆರವೇರಿಸುವರು. ಮಲ್ಲಿಕಾರ್ಜುನ ಶಿವಚಾರ್ಯ ಶ್ರೀ ನೇತೃತ್ವದಲ್ಲಿ ಮಹಾಲಿಂಗ ಶಿವಾಚಾರ್ಯ ಸ್ವಾಮೀಜಿ ಗುರುವಂದನೆ ಸಮರ್ಪಣೆ ಮಾಡಲಿದ್ದು, ಕುಪ್ಪೂರು ಗದ್ದಿಗೆ ಮಠದ ಡಾ.ಯತೀಶ್ವರ ಶಿವಾಚಾರ್ಯ ಶ್ರೀ ಗುರುವಂದನಾ ನುಡಿಗಳನ್ನಾಡಲಿದ್ದಾರೆ ಎಂದರು.
ಸಮಾರಂಭವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸಲಿದ್ದು, ಶಾಸಕ ಎಂ.ಅಶ್ವಿನ್‌ಕುಮಾರ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಸಚಿವರಾದ ಡಿ.ಸಿ.ತಮ್ಮಣ್ಣ, ಸಿ.ಪುಟ್ಟರಂಗಶೆಟ್ಟಿ, ಸಂಸದ ಆರ್.ಧ್ರುವನಾರಾಯಣ, ಶಾಸಕ ನಿರಂಜನ್‌ಕುಮಾರ್, ಮಾಜಿ ಶಾಸಕಿ ಪರಿಮಳ ನಾಗಪ್ಪ, ಜಿಪಂ ಉಪಾಧ್ಯಕ್ಷ ಕೈಯಂಬಳ್ಳಿ ಜಿ.ನಟರಾಜು, ಬಿ.ಶೆಟ್ಟಹಳ್ಳಿ ಗ್ರಾಪಂ ಅಧ್ಯಕ್ಷೆ ಪುಟ್ಟಮ್ಮ ಶಂಭುಲಿಂಗಯ್ಯ, ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಕೆ.ಜೆ.ಶಿವಪ್ರಸಾದ್ ಮತ್ತಿತರರು ಉಪಸ್ಥಿತರಿರುವರು ಎಂದರು.
ಸಭೆಯಲ್ಲಿ ವೀರಶೈವ ಸೇವಾ ಸಮಿತಿ ಅಧ್ಯಕ್ಷ ಟಿ.ಎಸ್.ಶಾಂತರಾಜು, ಉಪಾಧ್ಯಕ್ಷ ಎಂ.ಶಾಂತರಾಜು, ಕಾರ್ಯದರ್ಶಿ ವೀರೇಶ್, ಸಂಚಾಲಕ ಎಂ.ವೀರೇಶ್, ಪುರಸಭಾ ಸದಸ್ಯ ಎಸ್.ಕೆ.ಕಿರಣ, ಕಸಬಾ ಪಿಎಸಿಎಸ್ ನಿರ್ದೇಶಕ ಅಂಗಡಿ ಎನ್.ಶೇಖರ್, ತೋಟದಪ್ಪ ಮೆಸ್ ಮಾಲಿಕ ಟಿ.ಸಿದ್ಧಲಿಂಗಸ್ವಾಮಿ, ಸಮಿತಿ ನಿರ್ದೇಶಕರಾದ ಎನ್.ಸಿ.ಬಸವರಾಜು, ವಿಶ್ವೇಶ್ವರಮೂರ್ತಿ, ಆರ್.ಸಿದ್ಧಲಿಂಗಸ್ವಾಮಿ, ಕೆ.ಜೆ.ನಾಗೇಶ, ಜೆ.ನೂತನ್, ಫ್ಯಾನ್ಸಿ ಮೋಹನ್, ಸುಂದರ್ ಇತರರಿದ್ದರು.