ಬೆಂಗಳೂರು: ಉದ್ಯಮಿ ವಿ.ಜಿ.ಸಿದ್ಧಾರ್ಥ್ ನಿಗೂಢವಾಗಿ ನಾಪತ್ತೆಯಾದ ಹಿನ್ನೆಲೆಯಲ್ಲಿ ಸದಾಶಿವನಗರದಲ್ಲಿರುವ ಅವರ ನಿವಾಸ ಹಾಗೂ ಅವರ ಮಾವ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ನಿವಾಸದಲ್ಲಿ ನೀರವ ಮೌನ ಆವರಿಸಿತ್ತು.
ಸೋಮವಾರ ತಡರಾತ್ರಿಯೇ ಪತಿ ನಾಪತ್ತೆ ವಿಚಾರ ತಿಳಿದು ಗಾಬರಿ ಗೊಂಡ ಪತ್ನಿ ಮಾಳವಿಕಾ ಸಿದ್ಧಾರ್ಥ್ ತಮ್ಮ ಮನೆ ಸಮೀಪದಲ್ಲೇ ಇರುವ ತಂದೆ ಎಸ್.ಎಂ.ಕೃಷ್ಣ ಅವರ ಮನೆಗೆ ಧಾವಿಸಿದರು. ಆತಂಕಗೊಂಡಿದ್ದ ಪುತ್ರಿಗೆ ಎಸ್.ಎಂ.ಕೃಷ್ಣ ದಂಪತಿ ಧೈರ್ಯ ತುಂಬಿದರು. ಹತ್ತಿರದ ಸಂಬಂಧಿಗಳು, ಆಪ್ತರು ರಾತ್ರಿಯೇ ಮನೆ ಬಳಿ ಬಂದು ಜಮಾಯಿಸಿದರು.
ಮತ್ತೂಂದೆಡೆ, ಮಂಗಳವಾರ ಮುಂಜಾನೆ ಸುದ್ದಿ ಎಲ್ಲೆಡೆ ಹಬ್ಬುತ್ತಿದ್ದಂತೆ ಕೃಷ್ಣ ಅವರ ನಿವಾಸಕ್ಕೆ ರಾಜಕೀಯ, ಸಿನಿಮಾ ಕ್ಷೇತ್ರದ ಗಣ್ಯರು, ಉದ್ಯಮಿಗಳು, ಸ್ನೇಹಿತರು ಹಾಗೂ ಸಂಬಂಧಿಕರು ಆಗಮಿಸಿ ಕುಟುಂಬ ಸದಸ್ಯರನ್ನು ಸಮಾಧಾನಪಡಿಸಿದರು. ರಾಷ್ಟ್ರೀಯ ಸುದ್ದಿವಾಹಿನಿಗಳಲ್ಲಿ ಸಿದ್ಧಾರ್ಥ್ ನಾಪತ್ತೆ ಸುದ್ದಿ ಬಿತ್ತರವಾಗುತ್ತಿದ್ದಂತೆ ವಿದೇಶದಲ್ಲಿರುವ ಸಂಬಂಧಿಕರು, ಸ್ನೇಹಿತರು ಕರೆ ಮಾಡಿ ವಿಚಾರಿಸಿದರು.
ಮುಂಜಾನೆ ಏಳು ಗಂಟೆ ಸುಮಾರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಭೇಟಿ ನೀಡಿ ಎಸ್.ಎಂ. ಕೃಷ್ಣಗೆ ಧೈರ್ಯ ತುಂಬಿದರು. ಅಲ್ಲೆ ಕುಳಿತು ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್.ರಾಜು ಅವರಿಗೆ ಕರೆ ಮಾಡಿ ಸಿದ್ಧಾರ್ಥ್ ಪತ್ತೆಗಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಅಗತ್ಯ ಬಿದ್ದಲ್ಲಿ ಸೇನೆಯ ನೆರವು ಪಡೆಯುವಂತೆಯೂ ಸೂಚಿಸಿದರು.
ಗೊಂದಲಕ್ಕೀಡಾಗಿದ್ದ ಕುಟುಂಬ, ಸಂಬಂಧಿಕರು: ಮುಖ್ಯಮಂತ್ರಿ ಸೇರಿ ಹತ್ತಾರು ಮಂದಿ ಜನಪ್ರತಿನಿಧಿಗಳು ಆಗಮಿಸಿದರೂ ಸಿದ್ದಾರ್ಥ್ ನಾಪತ್ತೆ ಬಗ್ಗೆ ಸ್ಪಷ್ಟತೆ ಸಿಗದ್ದರಿಂದ ಇಡೀ ಕುಟುಂಬ, ಸ್ನೇಹಿತರು ಗೊಂದಲಕ್ಕೀಡಾ ದರು. ಕಾರ್ಯ ನಿಮಿತ್ತ ಹೊರಗಡೆ ಹೋಗಿದ್ದ ಸಿದ್ಧಾರ್ಥ್, ಏಕಾಏಕಿ ಮಂಗಳೂರು ಸಮೀಪದ ನೇತ್ರಾವತಿ ನದಿ ಕಡೆ ಏಕೆ ಹೋದರು? ಬದುಕಿ ದ್ದಾರೋ? ಅಥವಾ ಮೃತಪಟ್ಟಿದ್ದಾರೋ? ಎಂಬ ಚರ್ಚೆಗಳು ನಡೆಯು ತ್ತಿದ್ದವು. ಮನೆ ಆವರಣದಲ್ಲಿದ್ದ ಹತ್ತಿರದ ಸಂಬಂಧಿಕರು ಹಾಗೂ ಕಾಫಿ ಡೇ ಸಿಬ್ಬಂದಿ ಸಿದ್ಧಾರ್ಥ್ ಅವರು ಯಾವುದೇ ಅಪಾಯಕ್ಕೆ ಸಿಲುಕದೆ ಬದುಕಿ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿರುವ ದೃಶ್ಯ ಕೂಡ ಕಂಡು ಬಂತು.