Advertisement

ಕಡಿಮೆಯಾಗಿದೆ ನಾಟಕಗಳ ಪ್ರಾಮುಖ್ಯತೆ

03:26 PM Oct 22, 2018 | Team Udayavani |

ದಾವಣಗೆರೆ: ಟಿ.ವಿ, ಧಾರಾವಾಹಿ, ಮೊಬೈಲ್‌ಗ‌ಳ ಹಾವಳಿಯಲ್ಲಿ ಈಚೆಗೆ ನಾಟಕಗಳ ಪ್ರಾಮುಖ್ಯತೆ ಸಾಕಷ್ಟು ಕಡಿಮೆ ಆಗಿದೆ ಎಂದು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಾ| ಶಾಮನೂರು ಶಿವಶಂಕರಪ್ಪ ಕಳವಳ ವ್ಯಕ್ತಪಡಿಸಿದರು.

Advertisement

ಎಂ.ಸಿ.ಸಿ. ಬಿ ಬ್ಲಾಕ್‌ನ ಪದ್ಮಶ್ರೀ ಚಿಂದೋಡಿ ಲೀಲಾ ಕಲಾಕ್ಷೇತ್ರದಲ್ಲಿ ಭಾನುವಾರ ಪ್ರತಿಮಾ ಸಭಾ ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಊರ್ಮಿಳಾ ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

ಹಿಂದೆ ದಾವಣಗೆರೆಯಲ್ಲಿ ಸಾಕಷ್ಟು ನಾಟಕ ಕಂಪನಿಗಳಿದ್ದವು. ಆಗ ರಾತ್ರಿಯಿಂದ ಬೆಳಗ್ಗೆವರೆಗೆ ನಡೆಯುತ್ತಿದ್ದ ನಾಟಕಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಜನರು ವೀಕ್ಷಣೆ ಮಾಡುತ್ತಿದ್ದ ವಾತಾವರಣವಿತ್ತು. ಆದರೀಗ ಸಾಮಾಜಿಕ ಜಾಲತಾಣ, ಟಿ.ವಿ, ಮೊಬೈಲ್‌ ಹಾವಳಿಯಿಂದ ನಾಟಕ ವೀಕ್ಷಿಸುವವರ ಸಂಖ್ಯೆ ವಿರಳವಾಗಿ ನಾಟಕ ಕಂಪನಿಗಳೇ ಮಾಯವಾಗಿವೆ. ಒಂದೆರಡು ಮಾತ್ರ ಪಳಿಯುಳಿಕೆಯಂತೆ ಉಳಿದುಕೊಂಡಿವೆ ಎಂದರು.

ಈ ಹಿಂದೆ ದಾವಣಗೆರೆಯಲ್ಲಿ ನಾಟಕ ಕಂಪನಿಯವರು ನಾಟಕ ಪ್ರದರ್ಶನ ಮಾಡಿದರೆ ಎಂದಿಗೂ ಬರೀ ಕೈಯಲ್ಲಿ ಹೋಗುತ್ತಿರಲಿಲ್ಲ. ಸಾಕಷ್ಟು ಲಾಭದಾಯಕವಾಗಿಯೇ ಹಣ ಸಂಪಾದಿಸಿ ವಾಪಸ್‌ ಮರಳುವಂತಹ ಸ್ಥಿತಿ ಇತ್ತು. ಅಂತಹ ವಾತಾವರಣ ಮತ್ತೆ ನಿರ್ಮಾಣ ಆಗಲು ಜನರು, ಅಕಾಡೆಮಿಗಳು ಹೆಚ್ಚಿನ ಪ್ರೋತ್ಸಾಹ ನೀಡಬೇಕಿದೆ ಎಂದು ಹೇಳಿದರು. 

ನಾಟಕಗಳು ಹೆಚ್ಚು ಶಕ್ತಿಯುತವಾಗಿದ್ದು, ದೇಶವನ್ನು ಪ್ರಗತಿಯತ್ತ ಕೊಂಡೊಯ್ಯುವ ಸಾಮರ್ಥ್ಯ ಹೊಂದಿವೆ ಎಂದರಲ್ಲದೇ, ನಾಟಕಗಳ ಪ್ರದರ್ಶನಕ್ಕೆ ಉತ್ತೇಜನ ನೀಡುವ ಸರ್ಕಾರದ ಮಾತು ಹೆಚ್ಚಾಗಿ ಕಾರ್ಯರೂಪಕ್ಕೆ ಬರುತ್ತಿಲ್ಲ. ಕಲಾವಿದರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಅಕಾಡೆಮಿಗಳು ಬದ್ಧತೆ ರೂಢಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

Advertisement

ನಾಟಕ ಅಕಾಡೆಮಿ ಸದಸ್ಯೆ ಎಂ.ವಿ. ಪ್ರತಿಭಾ ಪ್ರಾಸ್ತಾವಿಕ ಮಾತನಾಡಿ, ರಂಗಭೂಮಿ ಕಲೆ ನಿರಂತರ ಬೆಳೆಯುತ್ತಲೇ ಇರುವ ಜೀವಂತ ಕಲೆಯಾಗಿದೆ. ಪ್ರೇಕ್ಷಕರಿಂದ ನಾಟಕಗಳ ಪ್ರದರ್ಶನ ತುಂಬಿದರೆ ಮತ್ತೆ ನಾಟಕಗಳು ಪುನಶ್ಚೇತನಗೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಅಕಾಡೆಮಿಯಿಂದ ಈಗ ತಿಂಗಳ ನಾಟಕ ಯೋಜನೆ ಜಾರಿಗೆ ತಂದಿದ್ದು, ಒಂದು ಜಿಲ್ಲೆಯ ಕಲಾತಂಡ ಮತ್ತೂಂದು ಜಿಲ್ಲೆಗೆ ಹೋಗಿ ನಾಟಕಗಳ ಪ್ರದರ್ಶನ ನೀಡುವ ಸದವಕಾಶ ಒದಗಿಸಲಾಗಿದೆ. ಈ ವರ್ಷದಲ್ಲಿ ಆ ಕಾರ್ಯ ಯಶಸ್ವಿಯಾಗುತ್ತಿದೆ ಎಂದರು.

ಯುವ ವಿದ್ಯಾರ್ಥಿಗಳನ್ನು ಒಳಗೊಂಡಂತೆ ನುರಿತ ಹಳೆಯ ಕಲಾವಿದರ ಮಾರ್ಗದರ್ಶನದಲ್ಲಿ ಈ ಬಾರಿ ದಾವಣಗೆರೆಯಲ್ಲಿ ಅತೀ ಶೀಘ್ರ ರಂಗ ತರಬೇತಿ ಶಿಬಿರವನ್ನು ಅಕಾಡೆಮಿಯಿಂದ ಆಯೋಜನೆ ಮಾಡಲಾಗುವುದು. ಆ ಮೂಲಕ ಮುಂದಿನ ಯುವ ಪೀಳಿಗೆಗೆ ರಂಗಭೂಮಿಯ ಬಗ್ಗೆ ಪರಿಚಯ ಮಾಡಿಕೊಡಲಾಗುವುದು. ಜತೆಗೆ ಮಕ್ಕಳ ರಂಗಭೂಮಿಗೂ ಹೆಚ್ಚಿನ ಹೊತ್ತು ನೀಡಲಾಗುವುದು ಎಂದು ಹೇಳಿದರು.

ಹಣ ಕೊಟ್ಟರೆ ಆರೋಗ್ಯ ಸಿಗಲ್ಲ. ಆದರೆ, ಜೀವಂತ ಕಲೆ ರಂಗಕಲೆಯಿಂದ ಉತ್ತಮ ಆರೋಗ್ಯ ಲಭಿಸುತ್ತದೆ. ಜಾತಿ, ಧರ್ಮ ಮೀರಿ ಒಂದು ಕುಟುಂಬದ ಭಾಗವಾಗಿ ಕೆಲಸ ಮಾಡುತ್ತಿರುವ ಈ ಕಲೆಯನ್ನು ಉಳಿಸಿ ಬೆಳೆಸುವ ಹೊಣೆಗಾರಿಕೆ ಪ್ರತಿಯೊಬ್ಬರ ಮೇಲಿದೆ ಎಂದರು.
 
ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪ್ರಾಂಶುಪಾಲ ಡಾ| ಎಂ.ಜಿ. ಈಶ್ವರಪ್ಪ ಮಾತನಾಡಿ, 70-80ರ ದಶಕದಲ್ಲಿ ದಾವಣಗೆರೆಯಲ್ಲಿ ಪ್ರತಿಮಾ ಸಭಾ ತನ್ನದೇ ಆದ ಗತವೈಭವ ಹೊಂದಿತ್ತು. ಪ್ರತಿವರ್ಷ 3ರಿಂದ 4 ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರ ನಡುವೆ ಸಾಮಾಜಿಕ ಸ್ವಾಸ್ಥ್ಯಕಾಪಾಡುವ ನಿಟ್ಟಿನಲ್ಲಿ ಸಮಾಜಮುಖೀ ಕಾರ್ಯದಲ್ಲಿ ತೊಡಗಿತ್ತು ಎಂದರು.

ಒಂದು ಕಾಲದಲ್ಲಿ ದಾವಣಗೆರೆಯಲ್ಲಿ ಏಕಕಾಲಕ್ಕೆ ನಾಲ್ಕೈದು ಕಡೆ ನಾಟಕಗಳ ಪ್ರದರ್ಶನ ನಡೆಯುವಂತಹ ಸ್ಥಿತಿ ಇತ್ತು. ಆಗ ಜನರು ಹಳ್ಳಿಗಳಿಂದ ಎತ್ತಿನಗಾಡಿಯಲ್ಲಿ ಬಂದು ನಾಟಕ ವೀಕ್ಷಿಸಿ, ರಾತ್ರಿ ಟೆಂಟ್‌ನಲ್ಲಿಯೇ ಮಲಗಿ, ಬೆಳಗ್ಗೆ ಬೆಣ್ಣೆದೋಸೆ ತಿಂದು ಊರ ಕಡೆ ಹೋಗುವಂತಹ ಸನ್ನಿವೇಶವಿತ್ತು. ಆಗ ಹವ್ಯಾಸಿ ರಂಗಭೂಮಿ ನೆಲೆಯೂರಿದ್ದು, ಅಂತಹ ರಂಗ ವೇದಿಕೆಗಳಲ್ಲಿ ಬಿ.ವಿ. ಕಾರಂತ್‌, ಸುಬ್ಬಣ್ಣ, ಲೋಕೇಶ್‌ ಇತರರು ನಾಟಕ ಪ್ರದರ್ಶನ ಮಾಡಿದ್ದಾರೆ ಎಂದು ನೆನೆಪು ಮಾಡಿಕೊಂಡರು. 

ನಾಟಕ ಮತ್ತು ಸಾಹಿತ್ಯಿಕ ಚಟುವಟಿಕೆಗಳಿಂದ ಮನಸ್ಸಿಗೆ ಆನಂದ, ಉಲ್ಲಾಸ ಸಿಗಲಿದ್ದು, ಅಂತಹ ಜೀವಂತ ಕಲೆಯ ಪ್ರದರ್ಶನಕ್ಕೆ ಪ್ರೋತ್ಸಾಹ ನೀಡುವ ಮೂಲಕ ಮತ್ತೆ ಗತವೈಭವ ಮರುಕಳಿಸಲು ಜನತೆ ಸಹಕರಿಸಬೇಕು ಎಂದರು. 

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್‌ ಬೆಕ್ಕೇರಿ, ಪತ್ರಕರ್ತರಾದ ಎಂ.ಎಸ್‌. ವಿಕಾಸ್‌, ಬಿ.ಎನ್‌. ಮಲ್ಲೇಶ್‌, ರಂಗಕಲಾವಿದ ಸಿದ್ಧರಾಜು, ಯಶೋಧ ವೀರಭದ್ರಪ್ಪ ಉಪಸ್ಥಿತರಿದ್ದರು.
 
ಚಿಂದಾನಂದ್‌ ಪ್ರಾರ್ಥಿಸಿದರು. ಬಾ.ಮ. ಬಸವರಾಜಯ್ಯ ಸ್ವಾಗತಿಸಿದರು. ಡಾ| ಆನಂದ ಋಗ್ವೇದಿ ನಿರೂಪಿಸಿದರು. ಭದ್ರಾವತಿಯ ಶಾಂತಲಾ ಮಹಿಳಾ ಕಲಾ ವೇದಿಕೆಯಿಂದ ಊರ್ಮಿಳಾ… ನಾಟಕ ಪ್ರದರ್ಶನ ನಡೆಯಿತು. 

ಡಿಜಿಟಲ್‌ದಾಖಲೀಕರಣ ಆರಂಭ 
ನಾಟಕ ಅಕಾಡೆಮಿಯಿಂದ ಜಿಲ್ಲಾವಾರು ಹಿರಿಯ ನಾಟಕ ಕಲಾವಿದರು, ನಾಟಕ ಪ್ರದರ್ಶನದ ಕುರಿತಂತೆ ಪೋಟೋ, ಪೇಪರ್‌ ಕಟಿಂಗ್‌ಗಳನ್ನು ಕ್ರೋಡೀಕರಿಸಿ ಡಿಜಿಟಲೀಕರಣ ಮಾಡಿ ವೆಬ್‌ ಸೈಟ್‌ಗೆ ಅಳವಡಿಸುವ ಕಾರ್ಯ ಮಾಡಲಾಗುತ್ತಿದೆ. ದಾವಣಗೆರೆ ಜಿಲ್ಲೆ ರಂಗಭೂಮಿಯ ಇತಿಹಾಸ ಹೊಂದಿದೆ. ಹಾಗಾಗಿ ರಂಗಾಸಕ್ತರು, ಕಲಾವಿದರು, ಪ್ರೇಕ್ಷಕರು ತಮ್ಮಲ್ಲಿರುವ ಪೋಟೋ, ಪೇಪರ್‌ ಕಟಿಂಗ್‌ ದಾಖಲೆ ನೀಡಿ ಸಹಕರಿಸಬೇಕು. 
ಎಂ.ವಿ. ಪ್ರತಿಭಾ, ನಾಟಕ ಅಕಾಡೆಮಿ ಸದಸ್ಯೆ

Advertisement

Udayavani is now on Telegram. Click here to join our channel and stay updated with the latest news.

Next