ಬೆಂಗಳೂರು: ಸೋಲದೇವನಹಳ್ಳಿಯ ಖಾಸಗಿ ಕಾಲೇಜಿನ ಬಳಿ 2017ರ ಜನವರಿಯಲ್ಲಿ ಗುಂಡು ಹಾರಿಸಿ ವಕೀಲ ಅಮಿತ್ ಕೇಶವಮೂರ್ತಿ ಹತ್ಯೆಗೈದಿದ್ದ ಆರೋಪಿ ರಾಜೇಶ್‌ಗೆ ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿದೆ.
ಜಾಮೀನು ಕೋರಿ ರಾಜೇಶ್ ಸಲ್ಲಿಸಿದ್ದ ಅರ್ಜಿಯನ್ನು ಗುರುವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ಅವರಿದ್ದ ಏಕಸದಸ್ಯ ಪೀಠ, ಅಮಿತ್ ಮೇಲೆ ಗುಂಡುಹಾರಿಸಿ ಆರೋಪಿ ರಾಜೇಶ್ ಕೊಲೆಗೈದಿರುವ ಬಗ್ಗೆ ದಾಖಲೆ ಹಾಗೂ ಸಾಕ್ಷ್ಯಾಧಾರಗಳು ಪ್ರಬಲವಾಗಿವೆ. ಸಾಕ್ಷಿಗಳ ಹೇಳಿಕೆಗಳಿವೆ.
ಘಟನೆ ನಡೆದ ಸ್ಥಳದ ಸಿಸಿಟಿವಿ ಪೂಟೇಜ್‌ನಲ್ಲಿ ದೃಶ್ಯಾವಳಿಗಳಿವೆ. ಮೇಲಾಗಿ ಆರೋಪಿ ಪ್ರಬಲನಾಗಿದ್ದು ಜಾಮೀನು ನೀಡಿದರೆ ಸಾಕ್ಷ್ಯಾಧಾರ ನಾಶಪಡಿಸುವ ಸಾಧ್ಯತೆಯಿದೆ ಎಂಬ ಪ್ರಾಸಿಕ್ಯೂಶನ್ ವಾದ ಪುರಸ್ಕರಿಸಿತು. ಜತೆಗೆ ಪ್ರಾಸಿಕ್ಯೂಶನ್ ಸಾಕ್ಷ್ಯಾಧಾರಗಳನ್ನು ಗಮನಿಸಿದರೆ ಆರೋಪಿ ಕೊಲೆಗೈದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಅಭಿಪ್ರಾಯಪಟ್ಟು ರಾಜೇಶ್ ಜಾಮೀನು ಅರ್ಜಿ ವಜಾಗೊಳಿಸಿತು.
ಪ್ರಾಸಿಕ್ಯೂಶನ್ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾಗಿ ಸಿ.ಎಚ್ ಹನುಮಂತರಾಯ ವಾದಿಸಿದ್ದರು. ರಾಜೇಶ್ ಪತ್ನಿ ಶ್ರುತಿ ನೆಲಮಂಗಲದಲ್ಲಿ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಯಾಗಿದ್ದು, ವಕೀಲ ಅಮಿತ್ ಜತೆ ಸ್ನೇಹವಿತ್ತು. ಇಬ್ಬರ ನಡುವೆ ಅಕ್ರಮ ಸಂಬಂಧವಿದೆ ಎಂದು ಶಂಕಿಸಿದ್ದ ರಾಜೇಶ್ 2017ರ ಜನವರಿ 13ರಂದು ಸೋಲದೇವನಹಳ್ಳಿ ಆಚಾರ್ಯ ಕಾಲೇಜು ಬಳಿ ಕಾರಿನಲ್ಲಿ ಶ್ರುತಿ ಹಾಗೂ ಅಮಿತ್ ಮಾತನಾಡುತ್ತಿದ್ದಾಗ ಅಲ್ಲಿಗೆ ತೆರಳಿ ಜಗಳವಾಡಿದ್ದ.
ಅಲ್ಲದೆ, ತನ್ನ ಬಳಿಯಿದ್ದ ಪಿಸ್ತೂಲ್‌ನಿಂದ ಅಮಿತ್ ಎದೆಗೆ ಗುಂಡು ಹಾರಿಸಿ ಕೊಲೆಗೈದಿದ್ದ. ಈ ಘಟನೆ ಬಳಿಕ ಶ್ರುತಿ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದರು.ಪ್ರಕರಣ ಸಂಬಂಧ ರಾಜೇಶ್ ಹಾಗೂ ಆತನ ತಂದೆ ಗೋಪಾಲಕೃಷ್ಣ ಇಬ್ಬರನ್ನು ಬಂಧಿಸಿದ್ದ ಪೊಲೀಸರು, ತನಿಖೆ ನಡೆಸಿ ಅಧೀನ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.