Advertisement

ಶಾಂತಗೇರಿ ಗ್ರಂಥಾಲಯಕ್ಕಿಲ್ಲ ಸ್ವಂತ ಕಟ್ಟಡ

12:38 PM Nov 29, 2019 | Team Udayavani |

ಗಜೇಂದ್ರಗಡ: ಓದುಗರಿಗೆ ಅಕ್ಷರ ಜ್ಞಾನ ನೀಡಬೇಕಾಗಿದ್ದ ಗ್ರಂಥಾಲಯಕ್ಕೆ ಸ್ವಂತ ಕಟ್ಟಡವಿಲ್ಲದ ಪರಿಣಾಮ ದಿನಪತ್ರಿಕೆಗಳು ಹಾಗೂ ಪುಸ್ತಕಗಳನ್ನು ಬೇರೆ, ಬೇರೆ ಕಟ್ಟಡಗಳಲ್ಲಿ ಇರಿಸಲಾಗಿದ್ದು ಕಿರಿಕಿರಿಯನ್ನುಂಟು ಮಾಡಿದೆ.

Advertisement

ಇದು ಸಮೀಪದ ಶಾಂತಗೇರಿ ಗ್ರಾಮದಲ್ಲಿನ ಗ್ರಂಥಾಲಯದ ಪರಿಸ್ಥಿತಿ. ಈ ವಾಚನಾಲಯ 2007ರಲ್ಲಿ ಆರಂಭವಾಗಿದ್ದು, ಈ ಮೊದಲು ಗ್ರಾಮದ ಸಮಾಜ ಮಂದಿರದಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. ಬಳಿಕ ಗ್ರಾಪಂನ ಮಳಿಗೆಗೆ ಸ್ಥಳಾಂತರಿಸಲಾಯಿತು.ಆದರೆ ಗ್ರಂಥಾಲಯಕ್ಕೆ ಈವರೆಗೂ ವಿಶಾಲವಾದ ಕಟ್ಟಡವಿಲ್ಲದ ಪರಿಣಾಮ ಗ್ರಾಪಂ ನೀಡಿರುವ ಸಣ್ಣ ಕೊಠಡಿಯಲ್ಲಿಯೇ ಗ್ರಂಥಾಲಯ ಸೇವೆನೀಡುತ್ತಿರುವುದರಿಂದ ಸ್ಥಳಾವಕಾಶ ಕೊರತೆಯಿಂದ ಓದುಗರು ತೊಂದರೆ ಅನುಭವಿಸುವಂತಾಗಿದೆ.

ಇಕ್ಕಟ್ಟಾದ ಜಾಗ: ಆರು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಈ ಗ್ರಾಮದಲ್ಲಿನ ಗ್ರಂಥಾಲಯದಲ್ಲಿ ಎರಡು ಸಾವಿರ ಪುಸ್ತಕಗಳಿವೆ. ಆದರೆ ಓದುಗರಿಗೆ ಮಾತ್ರ ಸಮರ್ಪಕ ರೀತಿಯಲ್ಲಿ ದೊರೆಯುತ್ತಿಲ್ಲ. ಓದುಗರು ಕುಳಿತುಕೊಳ್ಳಲು ಇಕ್ಕಟ್ಟಾದ ಜಾಗೆ,ಆಸನಗಳ ಕೊರತೆ, ಕುಡಿಯುವ ನೀರು ಸೇರಿ ಮೂಲ ಸೌಲಭ್ಯಗಳು ಮರೀಚಿಕೆಯಾಗಿದ್ದು, ಗ್ರಾಮೀಣ ಭಾಗದಲ್ಲಿನ ಗ್ರಂಥಾಲಯಗಳಿಗೆ ಇಷ್ಟೊಂದು ತಾತ್ಸಾರವೇಕೆ ಎನ್ನುವುದು ಗ್ರಾಮಸ್ಥರ ಪ್ರಶ್ನೆ.

ಪತ್ರಿಕೆ ಓದಲು ದೂರದ ಕೊಠಡಿಗೆ ತೆರಳುವ ಸ್ಥಿತಿ: ಗ್ರಂಥಾಲಯವೆಂದರೆ ಪುಸ್ತಕಗಳು, ಪತ್ರಿಕೆಗಳು ಒಂದೆಡೆ ಇರುವುದು ಸಾಮಾನ್ಯ. ಆದರೆ ಶಾಂತಗೇರಿ ಗ್ರಾಮದಲ್ಲಿನ ಗ್ರಂಥಾಲಯದ ಚಿತ್ರಣವೇ ಬೇರೆಯಾಗಿದೆ. ಜನರು ಪತ್ರಿಕೆಗಳನ್ನು ಓದಲು ಗ್ರಂಥಾಲಯದ ಪುಸ್ತಕಗಳ ಕೊಠಡಿ ಬಿಟ್ಟು 200 ಮೀ. ದೂರದ ಮತ್ತೂಂದು ಕೊಠಡಿಗೆ ತೆರಳಬೇಕಾದ ಪರಿಸ್ಥಿತಿ ಉದ್ಭವವಾಗಿದೆ. ಇವೆರಡನ್ನೂ ಒಂದೆಡೆ ಸೇರಿಸಿ ಎಂದು ಗ್ರಾಮಸ್ಥರು ಗ್ರಾಪಂಗೆ ಹಲವಾರು ಬಾರಿ ಮನವಿ ಮಾಡಿದರೂ ಸ್ಪಂದಿಸದಿರುವುದು ಓದುಗರ ಆಕ್ರೋಶಕ್ಕೆ ಕಾರಣವಾಗಿದೆ.

ಬಿರಕು ಬಿಟ್ಟ ಕೊಠಡಿ: ಗ್ರಂಥಾಲಯದ ಪುಸ್ತಕಗಳನ್ನು ಸಂಗ್ರಹಿಸಿಟ್ಟ ಕೊಠಡಿ ಈಗಾಗಲೇ ಬಿರುಕು ಬಿಟ್ಟಿದೆ. ಜೊತೆಗೆ ಮಳೆಗಾಲದಲ್ಲಿ ಸೋರುತ್ತದೆ. ಗ್ರಂಥಾಲಯಕ್ಕೆ ಸೂಕ್ತ ಕಟ್ಟಡ ನೀಡುವಲ್ಲಿ ಸ್ಥಳೀಯ ಆಡಳಿತ ಸಂಪೂರ್ಣ ನಿರ್ಲಕ್ಷಿಸಿರುವುದರಿಂದ ಗ್ರಂಥಾಲಯದ ಸದುಪಯೋಗ ಗ್ರಾಮಸ್ಥರಿಗೆ ಸಮರ್ಪಕ ರೀತಿಯಿಲ್ಲಿ ದೊರೆಯದಂತಾಗಿದೆ. ಕೇವಲ ಮೂರು ದಿನಪತ್ರಿಕೆಗಳನ್ನು ಹೊರತು ಪಡಿಸಿದರೆ, ಮಾಸ ಪತ್ರಿಕೆ, ವಾರ ಪತ್ರಿಕೆ, ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕಗಳು ಮರೀಚಿಕೆಯಾಗಿವೆ. ಹೀಗಾಗಿ ಯುವಕರು ಪಟ್ಟಣದ ಗ್ರಂಥಾಲಯಕ್ಕೆ ಬಂದು ಓದುವ ಪರಿಸ್ಥಿತಿ ಎದುರಾಗಿದೆ.

Advertisement

ಮಾದರಿ ಗ್ರಂಥಾಲು ಮಾಡಿ: ಸ್ಥಳೀಯ ಆಡಳಿತ ಇಚ್ಛಾಶಕ್ತಿ ಪ್ರದರ್ಶಿಸಿ ಗ್ರಂಥಾಲಯಕ್ಕೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರಕವಾಗುವ ಪುಸ್ತಕಗಳು ಮತ್ತುಹೆಚ್ಚು ದಿನಪತ್ರಿಕೆಗಳಿಗೆ ಹಣ ನೀಡಲು ಮುಂದಾಗಿ ಗ್ರಾಮದ ಗ್ರಂಥಾಲಯವನ್ನು ಮಾದರಿಯಾಗಿ ಮಾಡಲು ಮುಂದಾಗಬೇಕೆನ್ನುವುದು ಗ್ರಾಮಸ್ಥರ ಒತ್ತಾಸೆಯಾಗಿದೆ.

ಇಲಾಖೆಯಿಂದ ಗ್ರಂಥಾಲಯಕ್ಕೆ ಸಮಯಕ್ಕೆ ಸರಿಯಾಗಿ ಅನುದಾನ ಬಿಡುಗಡೆಯಲ್ಲಿ ವಿಳಂಬವಾಗುತ್ತಿತ್ತು. ಈ ಕುರಿತು ಇಲಾಖೆ ಗಮನ ಸೆಳೆದ ಪರಿಣಾಮ ಅಕ್ಟೋಬರ್‌ ತಿಂಗಳಿಂದ ಗ್ರಂಥಪಾಲಕರ ವೇತನ ಸೇರಿ ಪತ್ರಿಕೆಗಳ ಬಿಲ್‌ನ್ನು ಸಹ ಗ್ರಾಪಂ ನೀಡಬೇಕೆಂದು ಆದೇಶ ಮಾಡಿದ್ದಾರೆ. ಹನಮಂತ ಕೊತಬಾಳ, ಗ್ರಂಥಾಲಯ ನಿರ್ವಾಹಕ

 

ಡಿ.ಜಿ. ಮೋಮಿನ್‌

Advertisement

Udayavani is now on Telegram. Click here to join our channel and stay updated with the latest news.

Next