Advertisement

ಸಂಪ್ರದಾಯ ನೆನಪಿಸಿದ ದೊಂದಿಯ ನೆರಳು ಬೆಳಕಿನ ಸಂಯೋಜನೆ

06:00 AM Dec 28, 2018 | Team Udayavani |

ಹುಭಾಶಿಕ ಕೊರಗ ಯುವ ಕಲಾ ವೇದಿಕೆ (ರಿ.) ಬಾರಕೂರು ಆಶ್ರಯದಲ್ಲಿ ಮಕ್ಕಳ ಮನೆ ಕುಂಭಾಸಿ ಸಾಂಸ್ಕೃತಿಕ ಬೆಳವಣಿಗೆ ಸಹಾಯಾರ್ಥ ಪ್ರಶಾಂತ್‌ ಮಲ್ಯಾಡಿ ಸಂಯೋಜನೆಯಲ್ಲಿ ಬಡಗಿನ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ನಡುತಿಟ್ಟಿನ ಪಾರಂಪರಿಕ  ಶೈಲಿಯಲ್ಲಿ ದೊಂದಿ ಬೆಳಕಿನ ಯಕ್ಷಗಾನ ಡಿ.15 ರಂದು ಕುಂಭಾಸಿಯಲ್ಲಿ ಪ್ರದರ್ಶನಗೊಂಡು ಕಲಾರಸಿಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. 

Advertisement

 ಗುಡ್ಡದ ನಡುವೆ ಸಂಪೂರ್ಣ ಹಳೆಯ ಸಂಪ್ರದಾಯದೊಂದಿಗೆ ಸೂರ್ಯಾಸ್ತಮಾನವಾಗುತ್ತಿದ್ದಂತೆ ವಿದ್ಯುತ್‌ನ ಪ್ರಖರ ಬೆಳಕಿನ ವ್ಯವಸ್ಥೆಗಳಿಲ್ಲದೆ, ಅರ್ಧ ಕಿಲೋಮೀಟರ್‌ ದೂರದಿಂದಲೇ ಸಂಪೂರ್ಣ ದೊಂದಿ ಬೆಳಕಿನ ವಾತಾವರಣ ಸƒಷ್ಟಿಸಿ ಸಂಪ್ರದಾಯದ ಪರಂಪರೆಯ ಯಕ್ಷಗಾನ ವಾತಾವರಣವನ್ನು ಸೃಷ್ಟಿಸುವಲ್ಲಿ ಸಂಘಟಕರು ಯಶಸ್ವಿಯಾಗಿದ್ದಾರೆ. ತೆರೆಯ ಹಿಂದಿನ ರಂಗ ಸಿದ್ಧತೆ ಹಾಗೂ ದೊಂದಿ ಬೆಳಕಿಗೆ ಜೀವಂತಿಕೆ ನೀಡುವಲ್ಲಿ ತಾಂತ್ರಿಕ ಶಿಲ್ಪಿ ಕೋಟದ ರಾಮಚಂದ್ರ ಆಚಾರ್ಯ ಸಂಯಮದಿಂದ ನಿರ್ವಹಿಸಿದ್ದಾರೆ. ಕಾರ್ಯಕ್ರಮದ ಯಶಸ್ಸಿಗೆ ದುಡಿದ ಪ್ರಶಾಂತ್‌ ಮಲ್ಯಾಡಿ, ವೆಂಕಟೇಶ್‌ ವೈದ್ಯ ಕೊಮೆ ಹಾಗೂ ಕುಂದಾಪುರ ಕೊರಗ ಶ್ರೇಯೋಭಿವೃದ್ಧಿ ಸಮಿತಿಯ ಅಧ್ಯಕ್ಷ ಗಣೇಶ್‌ ವಿ. ಹಾಗೂ ಗಣೇಶ್‌ ಬಾರಕೂರು ಇವರ ಪರಿಶ್ರಮ ಎದ್ದು ಕಾಣುತ್ತಿತ್ತು.

ಹಿಮ್ಮೇಳ ಮುಮ್ಮೇಳ ಮತ್ತು ಕೊಡಂಗಿ ಸಹಿತ ರಂಗಸ್ಥಳ ಪ್ರವೇಶ ಬಾಲಗೋಪಾಲ , ಪೀಠಿಕೆ ಸ್ತ್ರೀ ವೇಷ , ಒಡ್ಡೊಲಗ , ಯುದ್ಧ ಕುಣಿತ , ಪ್ರಯಾಣ ಕುಣಿತ , ಕಿರಾತ ( ಕೊರೆ ಮುಂಡಾಸಿನ) ಒಡ್ಡೋಲಗ, ಬಣ್ಣದ ( ಚುಟ್ಟಿ ವೇಷದ )ಒಡ್ಡೋಲಗ , ಕಿರಾತ ಪಡೆಯ ವಿಶಿಷ್ಟವಾದ ಬೇಟೆಯ ಸನ್ನಿವೇಶ , ಮುಂಡಾಸಿನ ವೇಷದೊಂದಿಗೆ ಯಕ್ಷಲೋಕಾಗ್ನಿ ವಿಭಿನ್ನ ಕಲ್ಪನಾ ಸ್ತರದೆಡೆಗೆ ಕೊಂಡೊಯ್ಯಿತು. 

ಯಕ್ಷ ಲೋಕಾಗ್ನಿ (ಧ್ರುವ ಚರಿತ್ರೆ): ಬಹಿìಷ್ಮಾಖ್ಯಪುರದ ಆಡಳಿತವನ್ನು ಧ್ರುವನು ತಂದೆಯಾದ ಉತ್ಥಾನಪಾದನಿಂದ ಪಡೆದು ತಾಯಿ ಸೀತಾದೇವಿ ಮತ್ತು ತಮ್ಮನಾದ ಉತ್ತಮನೊಂದಿಗೆ ಆಳಿಕೊಂಡಿರುತ್ತಾನೆ. ಒಂದು ದಿನ ವನಪಾಲಕರು ಕಾಡು ಪ್ರಾಣಿಗಳಿಂದ ಆದ ತೊಂದರೆಯನ್ನು ಧ್ರುವನಲ್ಲಿ ತೋಡಿಕೊಳ್ಳುತ್ತಾರೆ. ಧ್ರುವನು ಬೇಟೆಗೆ ತೆರಳಲು ಸಜ್ಜಾಗುತ್ತಾನೆ. ಉತ್ತಮನು ತಾನೇ ಹೋಗುತ್ತೇನೆಂದು ಅಪ್ಪಣೆ ಪಡೆದು ತೆರಳುತ್ತಾನೆ. ಕಾಡಿನಲ್ಲಿ ಸುನೇತ್ರನೆಂಬ ಯಕ್ಷನು ಕಿರಾತನ ವೇಷದಲ್ಲಿ ಉತ್ತಮನಿಗೆ ಎದುರಾಗುತ್ತಾನೆ. ಅಲ್ಲಿ ಉತ್ತಮನಿಗೂ, ಯಕ್ಷನಿಗೂ ಯುದ್ಧವಾಗಿ ಉತ್ತಮನು ಅಸುನೀಗುತ್ತಾನೆ. ತಮ್ಮನ ಮರಣದ ವಾರ್ತೆಯನ್ನು ಕೇಳಿದ ಧ್ರುವ ದುಃಖೀತನಾಗುತ್ತಾನೆ. ಕ್ರೋಧಗೊಂಡು ಯಕ್ಷರ ವಂಶವನ್ನೇ ನಿರ್ನಾಮ ಮಾಡುತ್ತೇನೆಂದು ಹೊರಡುವಾಗ ತಾಯಿಯಾದ ಸುರುಚಿಯು ತಾನೂ ಬರುವೆನೆಂದು ಧ್ರುವನೊಂದಿಗೆ ಹೊರಡುತ್ತಾಳೆ. ಹೀಗೆ ಉತ್ತಮನ ಶವವನ್ನು ಅರಸುತ್ತಾ ಕಾಡಿನಲ್ಲಿ ಅಲೆಯುವಾಗ ಹಿಂದೆ ಧ್ರುವನನ್ನು ಕಾಡಿಗೆ ಕಳುಹಿಸಿದ ಶಾಪದಿಂದ ಕಾಡ್ಗಿಚ್ಚಿನಲ್ಲಿ ಸುರುಚಿ ಭಸ್ಮವಾಗುತ್ತಾಳೆ. ಧ್ರುವನು ಯಕ್ಷರನ್ನು ಅರಸುತ್ತಾ ಮುಂದುವರಿಯುತ್ತಾನೆ. ಕುಬೇರನು ಮಾಯಾಕೋವಿದ ಎನ್ನುವ ರಕ್ಕಸನನ್ನು ಧ್ರುವನಲ್ಲಿ ಕಳುಹಿಸುತ್ತಾನೆ. ಮಾಯಾಕೋವಿದ ಮತ್ತು ಧ್ರುವ ದೀರ್ಘ‌ ಕಾಲದವರೆಗೆ ಯುದ್ಧ ಮಾಡುತ್ತಾರೆ. ರಕ್ಕಸನ ಮಾಯಾವಿದ್ಯೆಗೆ ತತ್ತರಿಸಿದ ಧ್ರುವನು ನಾರಾಯಣಾಸ್ತ್ರವನ್ನು ಪ್ರಯೋಗಿಸುವುದಕ್ಕೆ ಮುಂದಾಗಿ ಶ್ರೀಹರಿಯನ್ನು ಧ್ಯಾನಿಸುತ್ತಾನೆ. ಇದನ್ನು ಅರಿತ ಧ್ರುವನ ಅಜ್ಜ ಸ್ವಯಂಭುಮಾನು ತಡೆದು, ಸಾಂತ್ವನವನ್ನು ಹೇಳುತ್ತಾನೆ. ಇದನ್ನೆಲ್ಲಾ ಅರಿತ ಕುಬೇರನು ಸಖ್ಯ ಬೆಳೆಸಿ ಧ್ರುವನನ್ನು ಪುರಕ್ಕೆ ಕಳುಹಿಸುತ್ತಾನೆ. ಎಚ್‌.ಸುಜಯೀಂದ್ರ ಹಂದೆ(ಧ್ರುವ ), ತೀರ್ಥಹಳ್ಳಿ ಗೋಪಾಲ್‌ ಆಚಾರ್‌ (ಉತ್ತಮ), ಸುಹಾಸ್‌ ಕರಬ(ವನಪಾಲಕ), ಮಾಧವ ನಾಗೂರು(ಸುರುಚಿ),ತಮ್ಮಣ್ಣ ಗಾಂವ್ಕರ್‌(ಕುಬೇರ ), ಸಂಜೀವ ಸುವರ್ಣ (ಮಾಯಾಕೋವಿದ), ಆನಂದ ಕೆಕ್ಕಾರ (ಕಿರಾತ), ಪ್ರಶಾಂತ್‌ ಆಚಾರ್‌ ಕಳಕಳಿ (ಸ್ವಯಂಭೂಮನು), ಕೋಡಂಗಿ, ಬಾಲಗೋಪಾಲ ಹಾಗೂ ಪೀಠಿಕಾ ಸ್ತ್ರೀ ವೇಷ ದಲ್ಲಿ ಯಶಸ್ವಿ ಕಲಾವೃಂದದ ವಿದ್ಯಾರ್ಥಿಗಳು ಪಾತ್ರ ನಿರ್ವಹಿಸಿದರು.  ಭಾಗವತರಾಗಿ ಕೂಡ್ಲಿ ದೇವದಾಸ್‌ ರಾವ್‌, ಕೆ.ಪಿ. ಹೆಗಡೆ ಪ್ರಾಚಾರ್ಯರು , ಲಂಬೋದರ ಹೆಗಡೆ ನಿಟ್ಟೂರು, ಪ್ರಸಾದ್‌ ಮೊಗೆಬೆಟು, ಲೋಹಿತ್‌ ಕೊಮೆ (ಮದ್ದಲೆ) ಹಾಗೂ ಕೃಷ್ಣಾನಂದ ಶೆಣೈ (ಚಂಡೆ) ಸಹಕರಿಸಿದರು.  

ಟಿ.ಲೋಕೇಶ್‌ ಆಚಾರ್ಯ ತೆಕ್ಕಟ್ಟೆ 

Advertisement
Advertisement

Udayavani is now on Telegram. Click here to join our channel and stay updated with the latest news.

Next