Advertisement
ನನಗೆ ಈಗೊಂದು ವರ್ಷದ ಹಿಂದೆ ಒಂದು ಪುಸ್ತಕ ಸಿಕ್ಕಿತ್ತು. ಮೂಲ ಲೇಖಕನ ಹೆಸರು ರೈಷಾರ್ಡ್ ಕಪುಶಿನ್‌ಸ್ಕಿ, ಪೋಲಿಶ್ ಭಾಷೆಯಲ್ಲಿ ಹೆಬಾನ ಅನ್ನುವ ಹೆಸರಿನಲ್ಲಿ ಅವನು 1998ರಲ್ಲಿ ಒಂದು ಕೃತಿ ಪ್ರಕಟಿಸಿದ್ದ. ದಿ ಶಾಡೋ ಆಫ್ ದ ಸನ್ ಎಂಬ ಅದರ ಇಂಗ್ಲಿಷ್ ಭಾಷಾಂತರವನ್ನು ಆಧರಿಸಿ ಸಹನಾ ಹೆಗಡೆ ಎನ್ನುವವರು ಸೂರ್ಯನ ನೆರಳು ಎಂದು ಕನ್ನಡಕ್ಕೆ ತಂದಿದ್ದರು. ಎಪ್ಪತ್ತರ ದಶಕದಲ್ಲಿ ಅಡಿಗರ ಸಂಪಾದಕತ್ವದಲ್ಲಿ ಬರುತ್ತಿದ್ದ ಸಾಕ್ಷಿ ನಿಯತಕಾಲಿಕೆಯ ಒಂದು ವಿಶೇಷ ಸಂಚಿಕೆ ಪೋಲಿಶ್ ಸಾಹಿತ್ಯದ ಕುರಿತಾಗಿಯೇ ಇತ್ತು. ಅಡಿಗರು ಅದರ ಸಂಪಾದಕತ್ವದ ಹೊಣೆಯನ್ನು ಎಸ್. ದಿವಾಕರ್ ಅವರಿಗೆ ವಹಿಸಿದ್ದರು. ಅದರಲ್ಲಿ ಪೋಲೆಂಡಿನ ಕತೆಗಳು, ಕವಿತೆಗಳು ಎಲ್ಲ ಇದ್ದುವು. ಅದನ್ನು ಓದಿದ ನನಗೆ ಪೋಲಿಶ್ ಸಾಹಿತ್ಯದ ಬಗ್ಗೆ ಅಪಾರ ಆಸಕ್ತಿ ಹುಟ್ಟಿದ್ದರೂ ಹೆಚ್ಚು ಓದುವುದಕ್ಕೆ ನನ್ನಿಂದ ಸಾಧ್ಯವಾಗಿರಲಿಲ್ಲ. ಆದರೂ ಮೇಜಿನ ಮೇಲಿದ್ದ ಈ ಪುಸ್ತಕ ನನ್ನನ್ನು ಓದು ಓದು ಎಂದು ಕುಟುಕುತ್ತಿತ್ತು. ಕಪಾಟುಗಳಲ್ಲಿ ಇರುವ ಪ್ರತಿಯೊಂದು ಪುಸ್ತಕವೂ ನನ್ನನ್ನು ಓದು, ಓದು, ನಿನಗಿಲ್ಲಿ ಏನೋ ಸಿಕ್ಕುವುದಿದೆ ಎಂದು ಮೌನವಾಗಿ ಕೂಗಿ ಹೇಳುತ್ತ ಇರುತ್ತದಂತೆ! ಅಂಥ ಒತ್ತಡದ ಕಾರಣದಿಂದ ನಾನು ಸುಮಾರು ಹದಿನೈದು-ಇಪ್ಪತ್ತು ದಿನಗಳ ಬಳಿಕ ಸೂರ್ಯನ ನೆರಳು ಬಿಡಿಸಿ ಓದತೊಡಗಿದೆ.
Related Articles
Advertisement
“ನಮಗೆ ದೂರದಲ್ಲಿ ಕಂಡಿದ್ದು ಎರಡು ಆಫ್ರಿಕನ್ ಗುಡಿಸಲುಗಳು. ಆದರೆ, ಒಳಗೆ ಕೆಲವು ಮಂಚಗಳಿದ್ದುವು. ಹೋಗಿ ಅಂತಹ ಒಂದು ಮಂಚದ ಮೇಲೆ ಹೇಗೆ ಬಿದ್ದುಕೊಂಡೆ ಎಂದು ನನಗೇ ತಿಳಿಯಲಿಲ್ಲ. ದಣಿವಿನಿಂದ ಅರ್ಧ ಹೆಣವಾಗಿದ್ದೆ. ಬಿಸಿಲ ಝಳಕ್ಕೆ ತಲೆಸಿಡಿಯುತ್ತಿತ್ತು. ಮಂಪರನ್ನು ದೂರವಿಡಲು ಒಂದು ಸಿಗರೇಟ್ ಹೊತ್ತಿಸಿದರೆ ಅದೂ ರುಚಿಸಲಿಲ್ಲ. ಆರಿಸಿಬಿಡೋಣ ಎಂದುಕೊಂಡವನ ದೃಷ್ಟಿ ಸಹಜವಾಗಿ ನೆಲದೆಡೆ ಚಾಚಿದ್ದ ಕೈಯತ್ತ ಹೊರಳಿತು. ಹಾಸಿಗೆಯ ಅಡಿಯೇ ಮಲಗಿದ್ದ ಹಾವೊಂದರ ತಲೆಯ ಮೇಲೆ ಇನ್ನೇನು ಸಿಗರೇಟನ್ನು ಹೊಸಕಿಯೇ ಬಿಡುತ್ತಿದ್ದೆ! ಸ್ತಬ್ಧನಾಗಿಬಿಟ್ಟೆ. ತತ್‌ಕ್ಷಣ ಕೈ ಹಿಂದೆ ಸರಿಯುವ ಬದಲಾಗಿ ಹಾಗೆಯೇ ನೇತಾಡುತ್ತಿತ್ತು-ಉರಗದ ಶಿರದ ಮೇಲೆ ಉರಿಯುವ ಸಿಗರೇಟು. ನಿಧಾನಕ್ಕೆ ವಾಸ್ತವದ ಅರಿವಾಗತೊಡಗಿತು. ನಾನು ಪ್ರಾಣಘಾತುಕ ಸರೀಸೃಪವೊಂದರ ಕೈದಿಯಾಗಿದ್ದೆ. ನನಗೆ ತಿಳಿದಿದ್ದಂತೆ ತುಸುವೇ ಅಲ್ಲಾಡಿದರೂ ಹಾವು ನನ್ನ ಮೇಲೆ ಎರಗುವುದು ನಿಶ್ಚಿತವಾಗಿತ್ತು. ಅದೊಂದು ಹಳದಿ ಛಾಯೆಯುಳ್ಳ ಬೂದುಬಣ್ಣದ ಈಜಿಪ್ಟ್ ಯನ್ ಕೋಬ್ರಾ. ಲಿಯೋ ತನ್ನೆಲ್ಲ ಭಾರವನ್ನು ಬಿಟ್ಟು ಡಬ್ಬಿಯನ್ನು ಹಾವಿನ ಮೇಲೆ ಒತ್ತಿ ನಿಂತ. ನಾನೂ ಇಡಿಯಾಗಿ ಅವನ ಮೇಲೆ ಬಿದ್ದೆ. ಬಿದ್ದ ಕ್ಷಣ ಗುಡಿಸಲಿನ ಒಳಗೆ ಮಹಾ ವಿಸ್ಫೋಟ’ (ಅನು: ಸಹನಾ ಹೆಗಡೆ)
ಕಪುಶಿನ್‌ಸ್ಕಿ ದಿ ಶ್ಯಾಡೋ ಆಫ್ ದ ಸನ್ ಅಲ್ಲದೆ ಎನದರ್ ಡೇ ಆಫ್ ಲೈಫ್, ದ ಸಾಕ್ಸರ್ ವಾರ್, ದ ಎಂಪರರ್, ಶಾಹ್ ಆಫ್ ಶಾಸ್ ಟ್ರಾವಲ್ಸ್ ವಿದ್ ಹೆರೊಡೋಟಸ್ ಮುಂತಾದ ಕೃತಿಗಳನ್ನು ಪ್ರಕಟಿಸಿದ್ದಾನೆ. ಅವನ ಒಂದು ಐ ರೋಟ್ ಸ್ಟೋನ್ ಎಂಬ ಕವಿತಾಸಂಕಲನವೂ ಇದೆ. ಅರ್ಥಶಾಸ್ತ್ರ, ಕೌನ್ಸೆಲಿಂಗ್ ಮತ್ತು ಸೈಕೊಥೆರಪಿ ಈ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಸಹನಾ ಹೆಗಡೆಯವರು ಆಫ್ರಿಕಾ ಖಂಡದ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿ ಈ ಪುಸ್ತಕದ ಭಾಷಾಂತರ ಮಾಡಿದ್ದಾರೆ. ಅಭಿನವದವರು 2017ರಲ್ಲಿ ಪ್ರಕಟಿಸಿದ ಈ ಕೃತಿಗೆ ಎಸ್. ದಿವಾಕರರ ವಿಸ್ತೃತ ಮುನ್ನುಡಿ ಇದೆ.
ಗೋಪಾಲಕೃಷ್ಣ ಪೈ