ಕೊರಟಗೆರೆ: ತುಮಕೂರು ಜಿಲ್ಲೆಯಲ್ಲಿ ಬರದ ತಾಲೂಕುಗಳ ಪಟ್ಟಿಯಲ್ಲಿರುವ ಕೊರಟಗೆರೆ ತಾಲೂಕು ಕುಡಿಯುವ ನೀರಿನ ಮೂಲ ಶೇ.99ರಷ್ಟು ಭಾಗ ಕೊಳವೆ ಬಾವಿಗಳನ್ನೇ ನಂಬಿ ಕೊಂಡಿದೆ. ಮಳೆಯು ಕೈಕೊಟ್ಟ ಹಿನ್ನೆಲೆ ಯಲ್ಲಿ ಕೆರೆ,ಕುಂಟೆಗಳು ಬರಿ ದಾಗಿದೆ. ಕೊಳವೆ ಬಾವಿಗಳ ನೀರಿನ ಮಟ್ಟ ಕುಸಿಯಲು ಆರಂಭಿಸಿದ್ದು, ಕುಡಿಯುವ ನೀರಿಗಾಗಿ ಸರ್ಕಾರ ನೂತನ ಬೋರ್‌ವೆಲ್ಗಳನ್ನು 1200 ಅಡಿಗಳಷ್ಟು ಕೊರೆಸಿದರು ನೀರು ಸಿಗದ ಪರಿಸ್ಥಿತಿ ಉಂಟಾ ಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ನೀರಿಗಾಗಿ ಜನರ ಪರ ದಾಟ ಹೆಚ್ಚಾಗಿದ್ದು, ಉತ್ತಮ ಮಳೆಯೇ ಇದಕ್ಕೆ ಪರಿ ಹಾರವಾಗಿದೆ. ಪ್ರಸ್ತುತವಾಗಿ ಹೇಮಾವತಿ ಕುಡಿಯುವ ನೀರಿನ ಯೋಜನೆ ಕೊರಟಗೆರೆ ಪಟ್ಟಣದ ಅಗ್ರಹಾರ ಕೆರೆ ಹಾಗೂ ತಾಲೂಕಿನ ಒಂದೆರಡು ಕೆರೆಗಳಿಗೆ ಬರುತ್ತಿದ್ದರೂ, ಯೋಜನೆ ಪ್ರಾರಂಭವಾದ ದಿನದಿಂದ ಇಲ್ಲಿಯವರೆಗೂ ಸಮರ್ಪಕವಾಗಿ ನೀರು ಬರುತ್ತಿಲ್ಲ. ಇನ್ನೂ ಎತ್ತಿನಹೊಳೆ ಯೋಜನೆಯು ತಾಲೂಕಿನ ಕೋಳಾಲ ಹೋಬಳಿಯ ಬೈರಗೊಂಡ್ಲು ಗ್ರಾಮದಲ್ಲಿ ಬೃಹತ್ ಡ್ಯಾಂ ನಿರ್ಮಾಣ ಮಾಡುವ ಯೋಜನೆ ಯನ್ನು ಸರ್ಕಾರವೂ ತ್ವರಿತಗತಿಯಲ್ಲಿ ಮಾಡುತ್ತಿದೆ. ಆದರೂ ಸದ್ಯಕ್ಕೆ ಯೋಜನೆ ರೂಪಗೊಳ್ಳುವ ಸ್ಥಿತಿ ಕಾಣುತ್ತಿಲ್ಲ. ಈ ಯೋಜನೆ ಕಾರ್ಯರೂಪಕ್ಕೆ ಬಂದರೆ, ಕೊರಟಗೆರೆ ತಾಲೂಕಿನ ಬಹುತೇಕ ಭಾಗದ ಎಲ್ಲಾ ಕೊಳವೆ ಬಾವಿಗಳಿಗೆ ಪುನಶ್ಚೇತನಗೊಳ್ಳಲಿದ್ದು, ಎಲ್ಲಾ ಕೆರೆಗಳಿಗೆ ನೀರು ಹರಿಯಲಿದೆ.
429 ಕೊಳವೆ ಬಾವಿಗಳಲ್ಲಿ ಮಾತ್ರ ನೀರಿದೆ: ತಾಲೂಕಿ ನಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿ ಗಾಗಿ ಇಲಾಖೆಯ 804 ಕೊಳವೆ ಬಾವಿಗಳಿದ್ದು, ಇದರಲ್ಲಿ 429 ಮಾತ್ರ ಕಾರ್ಯನಿರ್ವಹಿಸುತ್ತಿವೆ. ಈ ವರ್ಷದ ಬರಗಾಲದ ಬೇಗೆ ನೀಗಿಸಲು ಹೆಚ್ಚುವರಿ ಯಾಗಿ 192 ಕೊಳವೆ ಬಾವಿಗಳನ್ನು ಕೊರೆಸಿದ್ದು, ಇದರಲ್ಲಿ 127 ಕೊಳವೆ ಬಾವಿಗಳು ಕಾರ್ಯನಿರ್ವ ಹಿಸುತ್ತಿವೆ. ಬರಗಾಲದ ನಿರ್ವಹಣೆಗೆ ಟಾಸ್ಕ್ ಪೋಸ್ಕ್ ನಿಂದ 1.5 ಕೋಟಿ ಬಿಡುಗಡೆಯಾಗಿದ್ದು, 1.00 ಕೋಟಿ ರೂ.ಗಳನ್ನು ಈಗಾಗಲೇ ಖರ್ಚು ಮಾಡ ಲಾಗಿದೆ. ಉಳಿದ ಹಣಕ್ಕೂ ಯೋಜನೆ ರೂಪಿಸಲಾಗಿದೆ. ಬರ ಪರಿಹಾರಕ್ಕಾಗಿ ಯೋಜನೆಯಲ್ಲಿ 1 ಮತ್ತು 2ನೇ ಹಂತದಲ್ಲಿ 50.00 ಲಕ್ಷ ರೂ.ಗಳನ್ನು ಗ್ರಾಮೀಣ ಪ್ರದೇಶದ ಕುಡಿಯುವ ನೀರಿಗಾಗಿ ವೆಚ್ಚ ಮಾಡುತ್ತಿದೆ. ತಾಲೂಕಿನಲ್ಲಿ ಒಟ್ಟು 126 ಶುದ್ಧ ನೀರಿನ ಘಟಕಗಳನ್ನು ಗ್ರಾಮೀಣ ಭಾಗದಲ್ಲಿ ಅಳವಡಿಸಲಾಗಿದೆ. ಆದರೆ, ಇವಕ್ಕೂ ನೀರಿನ ಕೊರತೆ ಎದ್ದುಕಾಣುತ್ತಿದೆ.
21 ಗ್ರಾಮಗಳಲ್ಲಿ ಟ್ಯಾಂಕರ್ ನೀರು ಸರಬರಾಜು: ಒಂದು ಕೊಳವೆ ಬಾವಿ ಕೊರೆಸಿ, ನೀರು ನೀಡಲು 8.00 ಲಕ್ಷ ರೂ.ಗಳನ್ನು ಖರ್ಚು ಮಾಡುತ್ತಿದ್ದು, ನೀರು ಕುಸಿದ ತಕ್ಷಣ ಎಲ್ಲವೂ ವ್ಯರ್ಥವಾಗುತ್ತಿದೆ. ತಾಲೂಕಿ ನಲ್ಲಿ ಕೊಳವೆ ಬಾವಿಗಳಿಂದ ಸುಮಾರು 21 ಗ್ರಾಮ ಗಳಿಗೆ ಟ್ಯಾಂಕರ್ ಮುಖಾಂತರ ನೀರು ಸರಬರಾಜು ಮಾಡಲಾಗುತ್ತಿದೆ. ಇಲ್ಲಿಯವರೆಗೂ ಈ ಕಾರ್ಯಕ್ಕೆ 7447.00 ಲಕ್ಷ ರೂ.ಗಳನ್ನು ವೆಚ್ಚ ಮಾಡಲಾಗಿದೆ. 22 ಗ್ರಾಮೀಣ ಪ್ರದೇಶ ಭಾಗದಲ್ಲಿ ಖಾಸಗಿ ಜಮೀನು ಗಳಲ್ಲಿ ಕೊಳವೆ ಬಾವಿಗಳನ್ನು ಕುಡಿಯುವ ನೀರು ಸರಬರಾಜಿಗೆ ಗುತ್ತಿಗೆ ಪಡೆದಿದ್ದು, ತಿಂಗಳಿಗೆ ಒಂದು ಕೊಳವೆ ಬಾವಿಗೆ 18 ಸಾವಿರದಂತೆ ನೀಡಲಾಗುತ್ತಿದೆ. ತಿಂಗಳಿಗೆ 3,96,000 ರೂ.ಗಳನ್ನು ವೆಚ್ಚ ಮಾಡ ಲಾಗುತ್ತಿದೆ. ಆದರೆ, ಈ ಮೊತ್ತಗಳನ್ನು ಇನ್ನೂ ಬಿಡುಗಡೆ ಗೊಳಿಸಿಲ್ಲ ಎಂದು ಮೂಲಗಳಿಂದ ತಿಳಿದು ಬಂದಿದೆ.
ಕೆಲವು ಗ್ರಾಮಗಳಲ್ಲಿ ಟ್ಯಾಂಕರ್ ನೀರಿನ ಮೊತ್ತವನ್ನು ಸುಳ್ಳು ಲೆಕ್ಕದಲ್ಲಿ ಗ್ರಾಮ ಪಂಚಾಯ್ತಿಯವರೂ ಹಣ ವನ್ನು ದುರುಪಯೋಗ ಮಾಡಿಕೊಳ್ಳುತ್ತಿರುವ ಬಗ್ಗೆ ದೂರುಗಳು ಸಾರ್ವಜನಿಕರಿಂದ ವ್ಯಕ್ತವಾಗುತ್ತಿವೆ. ಇಷ್ಟೆಲ್ಲಾ ಮಾಡಿದರೂ, ಅಗತ್ಯವಾದ ನೀರು ಗ್ರಾಮೀಣ ಪ್ರದೇಶದಲ್ಲಿ ಬೇಕಾಗಿದೆ. ಅಧಿಕಾರಿಗಳು ಭ್ರಷ್ಟಾಚಾರ ದಲ್ಲಿ ತೊಡಗಿಸಿಕೊಳ್ಳದೇ ಕುಡಿಯುವ ನೀರಿಗೆ ಪರದಾಡುತ್ತಿರುವ ಗ್ರಾಮೀಣ ಜನರ ಅನುಕೂಲಕ್ಕಾಗಿ ಕಾರ್ಯನಿರ್ವಹಿಸಬೇಕಾಗಿದೆ.
● ಎನ್.ಪದ್ಮನಾಭ