Advertisement
ನಗರದಲ್ಲಿ ಕಳೆದ ಐದು ವರ್ಷಗಳಲ್ಲಿ ಮಾದಕದ್ರವ್ಯ ಸೇವನೆ, ಮಾರಾಟ ಮಾಡಿದ ಮಧ್ಯವರ್ತಿಗಳ ವಿರುದ್ಧ ಎನ್‌ಡಿಪಿಎಸ್ ಕಾಯ್ದೆ ಅಡಿಯಲ್ಲಿ 576 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು ನೂರಾರು ಆರೋಪಿಗಳ ಬಂಧನವಾಗಿದೆ. ಆಘಾತಕಾರಿ ಸಂಗತಿಯೆಂದರೆ ಈ ಪ್ರಕರಣಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು, 2016ರಲ್ಲಿ ರಾಜಧಾನಿಯಲ್ಲಿ ಡ್ರಗ್ಸ್ ಮಾರಾಟ, ಸೇವನೆ ಸಂಬಂಧಿಸಿದಂತೆ 128 ಪ್ರಕರಣಗಳು ದಾಖಲಾಗಿವೆ.
Related Articles
Advertisement
ಹದಿಹರೆಯದವರೇ ಟಾರ್ಗೆಟ್: ನಗರದಲ್ಲಿ ಬೇರುಬಿಟ್ಟಿರುವ ಡ್ರಗ್ಸ್ ಮಾಫಿಯಾಗೆ ಖಾಸಗಿ ಕಂಪೆನಿ ಉದ್ಯೋಗಿಗಳು, ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳು ಬಲಿಯಾಗುತ್ತಿದ್ದು, ವ್ಯಸನದಿಂದ ಹೊರಬರಲು ಪಡಿಪಾಟಲು ಬೀಳುತ್ತಾರೆ. ಆತಂಕದ ಸಂಗತಿಯೆಂದರೆ ವ್ಯಸನಮುಕ್ತವಾಗಲು ದಾಖಲಾಗುವವರಲ್ಲಿ ಹದಿಹರೆಯದವರೇ ಹೆಚ್ಚಿರುತ್ತಾರೆ. ಈ ಪ್ರಮಾಣ ತಿಂಗಳಿನಿಂದ ತಿಂಗಳಿಗೆ ಹೆಚ್ಚುತ್ತಿದೆ ಎಂದು ಮಾದಕವಸ್ತು ಸೇವನೆ ವ್ಯಸನ ಮುಕ್ತ ಖಾಸಗಿ ಕೇಂದ್ರ, “ಕದಂಬ’ದ ಅಧಿಕಾರಿಯೊಬ್ಬರು ಅಭಿಪ್ರಾಯಪಡುತ್ತಾರೆ.
ಮೂಲ ಪತ್ತೆ ಸವಾಲು ಏಕೆ?: ಎನ್‌ಡಿಪಿಎಸ್ ಕಾಯ್ದೆ ಅಡಿಯಲ್ಲಿ ನೂರಾರು ಮಂದಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತದೆ. ಆದರೆ ಬಂಧಿತ ಆರೋಪಿಗಳ ಪೈಕಿ ಬಹುತೇಕರು ಮೂಲಜಾಲದ ಬಗ್ಗೆ ಬಾಯ್ಬಿಡುವುದಿಲ್ಲ. ಸಿಕ್ಕಿಬಿದ್ದಿರುವ ಆರೋಪಿಗಳಿಗೆ ಮಧ್ಯವರ್ತಿಗಳಿಂದ ಡ್ರಗ್ಸ್ ಸರಬರಾಜಾಗಿರುತ್ತದೆ. ಎಲ್ಲಿಂದ ಈ ಡ್ರಗ್ಸ್ ಬಂದಿದೆ ಎನ್ನುವುದೇ ಗೊತ್ತಿರುವುದಿಲ್ಲ. ಯಾರೊಬ್ಬರೂ ಖಚಿತ ಮಾಹಿತಿ ನೀಡುವುದಿಲ್ಲ. ಹೀಗಾಗಿಯೇ ಮೂಲ ಜಾಲ ಪತ್ತೆ ಸವಾಲಾಗಿರುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸುತ್ತಾರೆ.
ಡ್ರಗ್ಸ್ ದಂಧೆಯ ಪ್ರಮುಖ ಆರೋಪಿಗಳು ಯಾರು?: ಕಳೆದ ಐದುವರ್ಷಗಳಲ್ಲಿ ಗಾಂಜಾ, ಚರಸ್, ಬ್ರೌನ್‌ಶುಗರ್, ಅಫೀಮು ಮಾರಾಟ, ಸೇವನೆ ಸಂಬಂಧ ದಾಖಲಾಗಿರುವ 576 ಪ್ರಕರಣಗಳ ಆರೋಪಿಗಳಲ್ಲಿ ಬಹುತೇಕರು ದಕ್ಷಿಣ ಆಫ್ರಿಕಾ, ನೈಜೀರಿಯಾ ಸೇರಿದಂತೆ ವಿವಿಧ ದೇಶ ಹಾಗೂ ಆಂಧ್ರಪ್ರದೇಶ, ತಮಿಳುನಾಡು ಮೂಲದವರೇ ಆಗಿದ್ದಾರೆ. ವಿದೇಶಿ ಆರೋಪಿಗಳು ಮಾದಕ ವಸ್ತುಗಳ ಸರಬರಾಜು ವೇಳೆ ಸಿಕ್ಕಿಬಿದ್ದರೆ, ನೆರೆರಾಜ್ಯ ಹಾಗೂ ಸ್ಥಳೀಯ ಆರೋಪಿಗಳು ಗಾಂಜಾ ಮಾರಾಟದ ವೇಳೆ ಸಿಕ್ಕಿಬಿದ್ದಿದ್ದಾರೆ.
ಮಾಫಿಯಾದ ಬಲಿಪಶುಗಳು!: ವಿಧ್ಯಾಭ್ಯಾಸದ ಕಾರಣ ನೀಡಿ ಪಾಸ್‌ಪೋರ್ಟ್ ಪಡೆದು ಸಿಲಿಕಾನ್ ಸಿಟಿಗೆ ಆಗಮಿಸುವ ವಿದೇಶಿ ವಿದ್ಯಾರ್ಥಿಗಳ ಪೈಕಿ ಕೆಲವರು ಡ್ರಗ್ಸ್‌ಗೆ ದಾಸರಾಗಿರುತ್ತಾರೆ. ಪರಿಚಯಸ್ಥ ಸ್ನೇಹಿತರು, ಸಂಬಂಧಿಕರಿಂದ ಕಳ್ಳ ಮಾರ್ಗಗಳ ಮೂಲಕ ನಗರಕ್ಕೆ ಮಾದಕ ದ್ರವ್ಯ ವಸ್ತುಗಳನ್ನು ತರಿಸಿಕೊಂಡು ತಾವು ಸೇವನೆ ಮಾಡಿ ಉಳಿದಿದ್ದನ್ನು ಮಾರಾಟ ಮಾಡಲು ಮುಂದಾಗುತ್ತಾರೆ. ಇದಕ್ಕೆ ನೇರವಾಗಿ ಅವರು ಟಾರ್ಗೆಟ್ ಮಾಡಿಕೊಳ್ಳುವುದು ಖಾಸಗಿ ಕಂಪೆನಿಗಳ ಉದ್ಯೋಗಿಗಳು ಹಾಗೂ ವಿದ್ಯಾರ್ಥಿಗಳನ್ನು. ಕೆಲವೊಮ್ಮೆ ವೀಕೆಂಡ್‌ನಲ್ಲಿ ಐಟಿ-ಬಿಟಿ ಕಂಪೆನಿಗಳ ಉದ್ಯೋಗಿಗಳು ನಡೆಸುವ ಪಾರ್ಟಿಗಳಿಗೂ ಡ್ರಗ್ಸ್ ತಲುಪಿರುತ್ತದೆ. ಆದರೆ ಇಂತಹ ಸಂಗತಿಗಳು ಬೆಳಕಿಗೆ ಬರುವುದೇ ಇಲ್ಲ.
ಗಾಂಜಾ ಸರಬರಾಜಿನ ಮೂಲ ಬೇರೆ: ದೇಸಿ ಡ್ರಗ್ಸ್ ಗಾಂಜಾ, ತಮಿಳುನಾಡು, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ, ಬಿಹಾರ ಸೇರಿ ಹಲವು ರಾಜ್ಯಗಳ ಮೂಲಕ ರಾಜ್ಯವನ್ನು ಪ್ರವೇಶಿಸುತ್ತದೆ. ಗಾಂಜಾದ 100, 200 ಗ್ರಾಂ.ಗಳ ಪ್ಯಾಕೆಟ್ ಮಾಡಿ ಸಾರ್ವಜನಿಕ ಪ್ರದೇಶಗಳಲ್ಲಿ, ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾದವರಿಗೆ, ಕೆಳ ವರ್ಗದ ಜನರಿಗೆ ಮಾರಾಟ ಮಾಡಲಾಗುತ್ತದೆ. ಆಘಾತಕಾರಿ ಸಂಗತಿ ಎಂದರೆ ಕೆಲ ಆರೋಪಿಗಳು ನಗರದ ನಿರ್ಮಾಣ ಹಂತದ ಕಟ್ಟಡಗಳಲ್ಲೇ ಗಾಂಜಾ ಬೆಳೆಸುತ್ತಾರೆ. ಕಳೆದ ವರ್ಷ ಯಶವಂತಪುರ ಪೊಲೀಸ್ ಠಾಣೆ ಸಮೀಪವೇ ನಿರ್ಮಿಸುತ್ತಿದ್ದ ಅಪಾರ್ಟ್‌ಮೆಂಟ್‌ವೊಂದರ ಶೆಡ್ ಸಮೀಪ ಪಶ್ಚಿಮ ಬಂಗಾಳ ಮೂಲದ ಕೂಲಿ ಕಾರ್ಮಿಕರು ಗಾಂಜಾ ಬೆಳೆಸಿರುವ ಸಂಗತಿ ಬೆಳಕಿಗೆ ಬಂದಿತ್ತು.
ಎನ್‌ಡಿಪಿಎಸ್ ಆ್ಯಕ್ಟ್ ಅಡಿಯಲ್ಲಿ ದಾಖಲಾದ ಪ್ರಕರಣಗಳ ವಿವರ-ವರ್ಷ ಪ್ರಕರಣಗಳ ಸಂಖ್ಯೆ
-2013 56
-2014 42
-2015 69
-2016 128
-2017 (ಸೆ.30) 281 ಈ ವರ್ಷ ಜಪ್ತಿ ಮಾಡಿದ ಮಾದಕ ವಸ್ತುಗಳ ವಿವರ
-ಗಾಂಜಾ 287 ಕೆ.ಜಿ
-ಹಗ್ಗೀಸ್ 6.ಕೆಜಿ
-ಚರಸ್ 3.ಕೆ.ಜಿ
-ಬ್ರೌನ್‌ಶುಗರ್ 500 ಗ್ರಾಂ.
-ಕೊಕೇನ್ 250 ಗ್ರಾಂ. ನಗರದಲ್ಲಿ ಡ್ರಗ್ಸ್ ಮಾಫಿಯಾಗೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಹಗಲಿರುಳು ಶ್ರಮಿಸುತ್ತಿದೆ. ಮತ್ತಷ್ಟು ಪರಿಣಾಮಕಾರಿಯಾಗಿ ಡ್ರಗ್ಸ್ ಮಾಫಿಯಾ ನಿಯಂತ್ರಿಸಲು ಎಲ್ಲ ಡಿಸಿಪಿಗಳಿಗೂ ಸೂಚನೆ ನೀಡಲಾಗಿದೆ. ಈ ಪ್ರಕರಣಗಳಲ್ಲಿ ಬಂಧಿತರಾಗಿರುವ ಹಳೇ ಆರೋಪಿಗಳ ಚಲನವಲನಗಳ ಬಗ್ಗೆ ನಿಗಾ ವಹಿಸುವಂತೆ ಸೂಚಿಸಲಾಗಿದೆ.
-ಟಿ. ಸುನೀಲ್‌ಕುಮಾರ್, ನಗರ ಪೊಲೀಸ್ ಆಯುಕ್ತ * ಮಂಜುನಾಥ ಲಘುಮೇನಹಳ್ಳಿ