Advertisement

ಮತ ರಹಸ್ಯ ಬಯಲು ಮಾಡಿದರೆ ಕಠಿನ ಕ್ರಮ: ಡಿಸಿ ಎಚ್ಚರಿಕೆ

10:42 PM Apr 09, 2019 | sudhir |

ಉಡುಪಿ: ಜಿಲ್ಲೆಯಲ್ಲಿ ವಿವಿಧ ಖಾಸಗಿ ಟಿವಿ ವಾಹಿನಿಗಳು, ಲೋಕಸಭಾ ಚುನಾವಣೆಯ ಕುರಿತು ಸಾರ್ವಜನಿಕರ ಅಭಿಪ್ರಾಯ ಪಡೆಯುವ ಕಾರ್ಯಕ್ರಮ ನಡೆಸುತ್ತಿವೆ. ನಿಮ್ಮ ಮತ ಯಾರಿಗೆ ಎಂದು ನೇರವಾಗಿ ಮತದಾರರನ್ನು ಪ್ರಶ್ನಿಸಿ ಅಭಿಪ್ರಾಯ ಸಂಗ್ರಹಿಸಿ ಪ್ರಸಾರ ಮಾಡುತ್ತಿದ್ದು, ಇದು ಚುನಾವಣಾ ಗೌಪ್ಯತೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ಈ ಹಿನ್ನೆಲೆಯಲ್ಲಿ ಇಂತಹ ಅಭಿಪ್ರಾಯ ಸಂಗ್ರಹಣೆ ನಡೆಸಿದರೆ ಸಂಬಂಧಪಟ್ಟ ವಾಹಿನಿ ಹಾಗೂ ಸಾರ್ವಜನಿಕರ ವಿರುದ್ಧ ಕೇಸು ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಾಪಾಟಿ ಎಚ್ಚರಿಕೆ ನೀಡಿದ್ದಾರೆ.

Advertisement

ಅವರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಲೋಕಸಭಾ ಚುನಾವಣೆಯ ಮಾಧ್ಯಮ ಪ್ರಮಾಣೀಕರಣ ಮತ್ತು ಮೇಲ್ವಿಚಾರಣೆ ಸಮಿತಿ(ಎಂಸಿಎಂಸಿ) ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮತದಾರರು ತಮ್ಮ ಮತ ರಹಸ್ಯವನ್ನು ಬಯಲು ಮಾಡುವುದು ಕಳವಳಕಾರಿ.

ಕೆಲವು ವಾಹಿನಿಗಳಲ್ಲಿ ಇದು ನೇರವಾಗಿ ಪ್ರಸಾರವಾಗುತ್ತಿದೆ. ಮುಕ್ತ, ನ್ಯಾಯ ಸಮ್ಮತ ಚುನಾವಣೆಗೆ ಪ್ರತಿಯೊಬ್ಬ ಅಭ್ಯರ್ಥಿಗೂ ಸಮಾನ ಅವಕಾಶ ನೀಡಲಾಗುತ್ತಿದ್ದು, ಯಾವುದೇ ಒಬ್ಬ ಅಭ್ಯರ್ಥಿ ಅಥವಾ ಪಕ್ಷದ ಪರವಾಗಿ ಅಭಿಪ್ರಾಯ ಸಂಗ್ರಹಣೆ ಹಾಗೂ ಕಾರ್ಯಕ್ರಮಗಳನ್ನು ಪ್ರಸಾರ ಮಾಡದಂತೆ ಸೂಚಿಸಿದ ಜಿಲ್ಲಾಧಿಕಾರಿಗಳು, ಸಾರ್ವಜನಿಕ ಸಂದರ್ಶನಗಳು ಸಂದರ್ಶನಗಳಾಗಿರಬೇಕೆ ಹೊರತು ಪ್ರಭಾವ ಬೀರುವಂತಿರಬಾರದು ಎಂದು ಹೇಳಿದರು.

ಜಿಲ್ಲೆಯಲ್ಲಿ ಕೆಲವು ಖಾಸಗಿ ಕಾರ್ಯಕ್ರಮಗಳ ಅಹ್ವಾನ ಪತ್ರಿಕೆಗಳಲ್ಲಿ ಜಿಲ್ಲಾಧಿಕಾರಿ, ಜಿ.ಪಂ. ಸಿಇಒ ಅವರ ಹೆಸರನ್ನು ಯಾವುದೇ ಅನುಮತಿ ಪಡೆಯದೆ ಮುದ್ರಿಸುತ್ತಿದ್ದು ಕಾರ್ಯಕ್ರಮ ಆಯೋಜಕರ ವಿರುದ್ಧ ಸಹ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.ಎಂಸಿಎಂಸಿ ಸಮಿತಿ ಕಾರ್ಯ ಚಟುವಟಿಕೆಗಳನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗಳು ಸಾಮಾಜಿಕ ಜಾಲತಾಣಗಳ ಮೇಲೆ ತೀವ್ರ ನಿಗಾ ಇಡಲು ಸೂಚಿಸಿದರು. ಜಿ. ಪಂ. ಸಿಇಒ ಸಿಂಧೂ ಬಿ. ರೂಪೇಶ್‌, ಎಂಸಿಎಂಸಿ ನೋಡೆಲ್‌ ಅಧಿಕಾರಿ ಶ್ರೀನಿವಾಸ ರಾವ್‌, ಜಿಲ್ಲಾ ವಾರ್ತಾಧಿಕಾರಿ ಖಾದರ್‌ ಷಾ ಮತ್ತು ಎಂಸಿಎಂಸಿ ಸದಸ್ಯರಾದ ವರದೇಶ್‌ ಹಿರೇಗಂಗೆ, ಮಂಗಳೂರು ಆಕಾಶವಾಣಿ ಕಾರ್ಯಕ್ರಮ ನಿರ್ದೇಶಕಿ ಉಷಾಲತಾ ಸರಪಾಡಿ ಉಪಸ್ಥಿತರಿದ್ದರು.

ಉಡುಪಿ ಲೋಕ ಸಭಾ ಚುನಾವಣೆ ಮದ್ಯ ಮಾರಾಟ ನಿಷೇಧ
ಉಡುಪಿ: ಚುನಾವಣೆ ಹಿನ್ನೆಲೆಯಲ್ಲಿ ಎ. 16ರ ಸಂಜೆ 6ರಿಂದ ಮತದಾನದ ದಿನ ಎ. 18ರ ಮಧ್ಯರಾತ್ರಿ 12ರ ವರೆಗೆ ಉಡುಪಿ ಜಿಲ್ಲೆಯಾದ್ಯಂತ ಎಲ್ಲ ರೀತಿಯ ಮದ್ಯದಂಗಡಿಗಳನ್ನು, ಮದ್ಯ ಮಾರಾಟ ಡಿಪೋಗಳನ್ನು, ಡಿಸ್ಟಿಲರಿಗಳನ್ನು, ಸ್ಟಾರ್‌ ಹೊಟೇಲ್‌, ಶೇಂದಿ ಅಂಗಡಿಗಳನ್ನು ಮುಚ್ಚುವಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

Advertisement

ಜಿಲ್ಲೆಯಾದ್ಯಂತ ಯಾವುದೇ ಹೊಟೇಲ್‌ಗ‌ಳಲ್ಲಿ, ಕ್ಲಬ್‌ಗಳಲ್ಲಿ ಹಾಗೂ ಶೇಂದಿ ಅಂಗಡಿಗಳಲ್ಲಿ ಮದ್ಯ ಮಾರಾಟ / ಸರಬರಾಜು ಮಾಡುವುದನ್ನು ನಿಷೇಧಿಸಲಾಗಿದೆ.

ಕುಂದಾಪುರ, ಬೈಂದೂರಿನಲ್ಲಿ
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಎ. 23
ರಂದು ಮತದಾನ ನಡೆಯಲಿದ್ದು ಇಲ್ಲಿ ಎ. 21ರ ಸಂಜೆ 6ರಿಂದ ಎ. 23ರ ಮಧ್ಯರಾತ್ರಿ 12ರ ವರೆಗೆ ಕುಂದಾಪುರ, ಬೈಂದೂರು ತಾ| ವ್ಯಾಪ್ತಿಯಲ್ಲಿ ಎಲ್ಲ ರೀತಿಯ ಮದ್ಯದಂಗಡಿ, ಡಿಪೋ, ಡಿಸ್ಟಿಲರಿ, ಸ್ಟಾರ್‌ ಹೊಟೇಲ್‌, ಶೇಂದಿ ಅಂಗಡಿಗಳನ್ನು ಮುಚ್ಚುವಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next