Advertisement
ಇಂದು ನಾವು ನೋಡುತ್ತಿರುವ ಭೂಮಿ ಅಸಂಖ್ಯ ಬದಲಾವಣೆಗಳಿಗೆ ಒಳಗಾಗಿದೆ. ಬಹಳ ಹಿಂದೆ ಭೂಮಿ ಮೇಸೆ ನಡೆದಾಡಿದ್ದ ಜೀವಿಗಳಲ್ಲಿ ಅನೇಕವು ಇಂದು ನಮ್ಮೊಡನೆ ಇಲ್ಲ. ಅಲ್ಲದೆ, ಅನೇಕ ಜೀವಿಗಳು ಮಾರ್ಪಾಡುಗಳಿಗೆ ಒಳಗಾಗಿ ರೂಪಾಂತರಗೊಂಡಿವೆ. ಅದಕ್ಕೆ ಸಾಕ್ಷಿಗಳನ್ನು ಪ್ರಕೃತಿ ಭೂಮಿಯಲ್ಲಿದೆ ಉಳಿಸಿಟ್ಟಿವೆ. ಲಕ್ಷಾಂತರ ವರ್ಷಗಳ ಹಿಂದೆ ಜೀವಿಸಿದ್ದ ಪ್ರಾಣಿಗಳು ಸತ್ತಾಗ ಕಾಲ ಕ್ರಮೇಣ ಮಣ್ಣಿನಡಿಯೋ, ಮಂಜಿನಡಿಯೋ ಸೋರಿಹೋಗಿರುತ್ತದೆ. ಅವುಗಳಲ್ಲಿ ಅನೇಕವು ಮಣ್ಣಾಗಿ ಕರಗಿಹೋದರೆ, ಇನ್ನು ಕೆಲವು ನಿರ್ದಿಷ್ಟ ವಾತಾವರಣದಿಂದಾಗಿ ಕರಗದೆ ಉಳಿದುಬಿಡುತ್ತದೆ. ಅವುಗಳ ಅವಶೇಷವನ್ನು ವಿಜ್ಞಾನಿಗಳು ಹುಡುಕಿ ತೆಗೆಯುತ್ತಾರೆ. ಅದನ್ನು “ಪಳೆಯುಳಿಕೆ’ ಎನ್ನುವರು. ಜೀವ ವಿಜ್ಞಾನಿಗಳಿಗೆ ಪಳೆಯುಳಿಕೆಗಳು ಬಹಳ ಮುಖ್ಯವಾದ ಸುಳಿವುಗಳನ್ನು ಒದಗಿಸುತ್ತದೆ. ಪಳೆಯುಳಿಕೆಯನ್ನು ಬಳಸಿ ಆಯಾ ಪ್ರಾಣಿಯ ಅಂಗರಚನೆ. ಗಾತ್ರ, ಆಹಾರ ಪ್ರಕೃತಿ, ಇನ್ನೂ ಅನೇಕ ವಿಚಾರಗಳನ್ನು ತಿಳಿದುಕೊಳ್ಳಬಹುದು. ಅಂಥ ಪಳೆಯುಳಿಕೆಯೊಂದನ್ನು ವಿಜ್ಞಾನಿಗಳು ದಕ್ಷಿಣ ಅಮೆರಿಕದ ವೆನಿಝುವೆಲಾದಲ್ಲಿ ಸಂಶೋಧಿಸಿದ್ದಾರೆ.ಏನಿಲ್ಲವೆಂದರೂ ಆ ಪಳೆಯುಳಿಕೆ 70 ಲಕ್ಷ ವರ್ಷಗಳಷ್ಟು ಹಳೆಯದು ಎಂದು ಅಂದಾಜಿಸಲಾಗಿದೆ. ಆ ಪಳೆಯುಳಿಕೆ ಆಮೆಯ ಪೂರ್ವಜರದ್ದು! ಇಂದು ನಾವು ಕೈಗಳಲ್ಲಿ ಹಿಡಿದೆತ್ತುವ ಆಮೆಗಳ ಗಾತ್ರದಂತಿಲ್ಲ ಆ ಪಳೆಯುಳಿಕೆಯ ಗಾತ್ರ. ಆ ಆಮೆ ಒಂದು ಕಾರಿನಷ್ಟು ದೊಡ್ಡದಿದೆ ಎನ್ನುವುದು ಅಚ್ಚರಿಯ ಸಂಗತಿ. ಆಗಿನ ಕಾಲದಲ್ಲಿ ಆಮೆ ಅಷ್ಟು ದೊಡ್ಡದಿತ್ತು ಎನ್ನುವುದು ಇದರಿಂದ ತಿಳಿದುಬರುತ್ತದೆ. ಇನ್ನೊಂದು ವಿಚಾರವನ್ನು ತಿಳಿದರೆ ನೀವು ಮೂಈಗಿನ ಮೇಲೆ ಬೆರಳಿಡುವುದು ಖಂಡಿತ. 70 ಲಕ್ಷ ಹಿಂದಿನ ಆಮೆಯ ಪಳೆಯುಳಿಕೆ ಸಿಕ್ಕಿದ್ದು ಎಲ್ಲಿ ಗೊತ್ತಾ? ವೆನಿಝುವೆಲಾದ ಮರುಭೂಮಿಯಲ್ಲಿ! ಬದಲಾವಣೆ ಜಗದ ನಿಯಮ
ನೀರಿನಲ್ಲಿ ವಾಸಿಸುವ ಆಮೆಯ ಪಳೆಯುಳಿಕೆ ಮರುಭೂಮಿಯಲ್ಲಿ ಹೇಗೆ ಬಂತು ಎಂಬ ಪ್ರಶ್ನೆ ನಿಮ್ಮೆಲ್ಲರ ಮನದಲ್ಲಿ ಮೂಡಿರಲೇಬೇಕಲ್ಲ. ಆಗಿನ ಕಾಲದಲ್ಲಿ ಆಮೆಗಳು ಮರುಭೂಮಿಯಲ್ಲಿ ವಾಸಿಸುತ್ತಿದ್ದವೇ? ಇಲ್ಲ. ಅದು ಹಾಗಲ್ಲ. ಇಂದು ಮರುಭೂಮಿ ಇರುವ ಪ್ರದೇಶ 70 ಲಕ್ಷ ವರ್ಷಗಳ ಹಿಂದೆ ಜಲಾನಯನ ಪ್ರದೇಶವಾಗಿತ್ತು ಎಂಬುದು ಅದರ ಅರ್ಥ. ಮೊದಲೇ ಹೇಳಿದಂತೆ ನಾವು ಇಂದು ನೋಡುತ್ತಿರುವ ಭೂಮಿ ಅಸಂಖ್ಯ ಬದಲಾವಣೆಗಳಿಗೆ ಒಳಗಾಗಿದೆ. ನಾವು ವಾಸಿಸುವ ಜಾಗವನ್ನೇ ಗಮನಿಸೋಣ. ಇಂದು ಇದ್ದಂತೆ ಒಂದು ತಿಂಗಳ ನಂತರ ಇರುವುದಿಲ್ಲ. ಹೊಸ ಕಟ್ಟಡ ಎದ್ದಿರುತ್ತದೆ, ರಸ್ತೆ ನಿರ್ಮಾಣಗೊಂಡಿರುತ್ತದೆ. ಅಂಗಡಿ ಮಳಿಗೆಗಳು ಸ್ಥಳಾಂತರಗೊಂಡಿರುತ್ತವೆ. ಇನ್ನು 70 ಲಕ್ಷ ವರ್ಷಗಳ ಕಾಲ ಭೂಮಿ ಒಂದು ಸ್ಥಳದಲ್ಲಿ ಒಂದೇ ವಾತಾವರಣವನ್ನು ಕಾಯ್ದುಕೊಂಡಿರುವುದು ಸಾಧ್ಯವೇ ಇಲ್ಲ.
Related Articles
ಆ ಆಮೆ ಬದುಕಿದ್ದ ಕಾಲದಲ್ಲಿ ಡೈನೋಸಾರ್‌ಗಳು ಅಳಿವಿನಂಚಿನಲ್ಲಿದ್ದವು. ನೀರಿನಲ್ಲಿ ರಾಕ್ಷಸಾಕಾರದ ಮೊಸಳೆಗಳು ಈಜಾಡುತ್ತಿದ್ದವು. ವಿಜ್ಞಾನಿಗಳು ಆ ಆಮೆ ಸರೋವರದಲ್ಲಿಯೋ, ಹೊಳೆಯಲ್ಲಿಯೋ ಜೀವಿಸಿತ್ತು ಎಂದು ಊಹಿಸಿದ್ದಾರೆ. ಈ ಆಮೆಗೆ ಕೊಂಬು ಇದೆ ಎನ್ನುವುದು ಇನ್ನೊಂದು ಅಚ್ಚರಿಯ ಸಂಗತಿ. ಕೊಂಬುಗಳ ಮೇಲೆ ಕಲೆಗಳು, ಗುಳಿಗಳಿವೆ. ಅದರಿಂದ ಆಮೆ ಸ್ವಯಂರಕ್ಷಣೆಗೆ ಕೊಂಬನ್ನು ಬಳಸಿಕೊಳ್ಳುತ್ತಿತ್ತು ಎನ್ನುವುದನ್ನು ತಿಳಿಯಬಹುದು. ಕೊಒಂಬಿನ ಮೇಲಿನ ಗುರುತುಗಳು ಕಾದಾಟದಿಂದ ಸಂಭವಿಸಿದ್ದು ಎಂಬುದು ವಿಜ್ಞಾನಿಗಳ ಊಹೆ. ಹೀಗೆ ಜೀವ ವಿಜ್ಞಾನಿಗಳು ಒಂದು ಪಳೆಯುಳಿಕೆಯಿಂದ ಲಕ್ಷಾಂತರ ವರ್ಷಗಳ ಹಿಂದೆ ಜೀವಿಸಿದ್ದ ಪ್ರಾಣಿಯ ಜೀವನಚರಿತ್ರೆಯನ್ನೇ ದಾಖಲಿಸುವುದು ಸೋಜಿಗವೇ ಸರಿ.
Advertisement
– ಹರ್ಷವರ್ಧನ್ ಸುಳ್ಯ