“ಚೌಕಬಾರ’ ಎಂಬ ಕಿರುಚಿತ್ರವೊಂದು ಬಂದಿರುವ ಹಾಗೂ ಆ ಚಿತ್ರ ರಾಜ್ಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿರುವ ಬಗ್ಗೆ ನೀವು ಕೇಳಿರಬಹುದು. ಆ ಚಿತ್ರವನ್ನು ನಿರ್ದೇಶಿಸಿದ್ದು ರಾಘು ಶಿವಮೊಗ್ಗ. ಆ ಕಿರುಚಿತ್ರದ ಪ್ರದರ್ಶನದ ಸಂದರ್ಭದಲ್ಲೇ ರಾಘು ಮುಂದೆ ಸಿನಿಮಾ ಮಾಡಲಿದ್ದಾರೆಂದು ಕಿರುಚಿತ್ರ ತಂಡ ಖುಷಿಯಿಂದ ಹೇಳಿಕೊಂಡಿತ್ತು. ಅದರಂತೆ ರಾಘು ಶಿವಮೊಗ್ಗ ಈಗ ಸಿನಿಮಾ ಮಾಡುತ್ತಿದ್ದಾರೆ. ಅದು “ಚೂರಿಕಟ್ಟೆ’. ಏನಿದು ಚೂರಿಕಟ್ಟೆ ಎಂದು ನೀವು ಕೇಳಬಹುದು. ಶಿವಮೊಗ್ಗ ಸಾಗರದ ಕಡೆಯಲ್ಲಿರುವ ಒಂದು ಸಣ್ಣ ಊರು. ಈಗ ಆ ಊರನ್ನೇ ಸಿನಿಮಾದ ಟೈಟಲ್ ಆಗಿಟ್ಟುಕೊಂಡು ಸಿನಿಮಾ ಮಾಡಲು ಹೊರಟಿದ್ದಾರೆ ರಾಘು ಶಿವಮೊಗ್ಗ. ಇತ್ತೀಚೆಗೆ ಈ ಸಿನಿಮಾಕ್ಕೆ ಮುಹೂರ್ತ ನಡೆದಿದೆ.
ರಾಘು ಶಿವಮೊಗ್ಗ ತಮ್ಮ ಚೊಚ್ಚಲ ನಿರ್ದೇಶನದಲ್ಲಿ ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾ ಮಾಡಲು ಹೊರಟಿದ್ದಾರೆ. ಟಿಬರ್ ಮಾಫಿಯಾ ಸುತ್ತ ಸಿನಿಮಾ ಮಾಡಲು ಹೊರಟಿರುವ ರಾಘು ಶಿವಮೊಗ್ಗ ಸಾಕಷ್ಟು ಇಂಟರೆಸ್ಟಿಂಗ್ ವಿಷಯಗಳನ್ನು ಈ ಸಿನಿಮಾದಲ್ಲಿ ಹೇಳಲಿದ್ದಾರಂತೆ. ಟಿಂಬರ್ ಎಂದಮೇಲೆ ಕಥೆ ಕಾಡಲ್ಲೇ ನಡೆಯುತ್ತದೆ ಎಂದು ಹೊಸದಾಗಿ ಹೇಳಬೇಕಿಲ್ಲ. “ಚೂರಿಕಟ್ಟೆ’ ಕೂಡಾ ಕಾಡಿನ ಬ್ಯಾಕ್‌ಡ್ರಾಪ್‌ನಲ್ಲೇ ನಡೆಯುವ ಕಥೆ. ಹೊಸನಗರ ಸುತ್ತಮುತ್ತ ಚಿತ್ರೀಕರಣ ನಡೆಸಲಿದೆ ರಾಘು ಅಂಡ್ ಟೀಂ. “ಚೂರಿಕಟ್ಟೆ’ ಎಂಬ ಹೆಸರಿನಲ್ಲಿ ಫೋರ್ಸ್ ಇದೆ ಎಂಬ ಕಾರಣಕ್ಕೆ ಚಿತ್ರಕ್ಕೆ ಅದೇ ಟೈಟಲ್ ಇಡಲಾಗಿದೆಯಂತೆ. ಅದು ಬಿಟ್ಟರೆ ಆ ಊರಿಗೆ ಕಥೆಗೂ ಯಾವುದೇ ಸಂಬಂಧವಿಲ್ಲ. “ಕತೆ ಬಹುತೇಕ ಕಾಡಲ್ಲೇ ನಡೆಯುತ್ತದೆ. ಬೇಸಿಗೆಯಲ್ಲಿ ಶೂಟಿಂಗ್ ಇರುವುದರಿಂದ ರಗಡ್ ಆಗಿರುವಂತಹ ಕಾಡನ್ನು ತೋರಿಸಬೇಕೆಂದಿದ್ದೇವೆ’ ಎನ್ನುವುದು ರಾಘು ಶಿವಮೊಗ್ಗ ಮಾತು. ಅಂದಹಾಗೆ ಈ ಚಿತ್ರವನ್ನು ನಯಾಜ್ ನಿರ್ಮಿಸುತ್ತಿದ್ದಾರೆ.
ಚಿತ್ರದಲ್ಲಿ ಪ್ರವೀಣ್ ನಾಯಕರಾಗಿ ನಟಿಸುತ್ತಿದ್ದಾರೆ. “ಸಿಂಪಲ್ಲಾಗ್ ಇನ್ನೊಂದ್ ಲವ್‌ಸ್ಟೋರಿ’ ಚಿತ್ರದಲ್ಲಿ ನಟಿಸಿದ ಪ್ರವೀಣ್‌ಗೆ ಇಲ್ಲಿ ಒಳ್ಳೆಯ ಪಾತ್ರ ಸಿಕ್ಕಿದೆಯಂತೆ. ಪೊಲೀಸ್ ಆಗಬೇಕೆಂಬ ಆಸೆ ಇಟ್ಟುಕೊಂಡಿರುವ ಹುಡುಗನಾಗಿ ಕಾಣಿಸಿಕೊಳ್ಳುತ್ತಿರುವ ಅವರ ನಡವಳಿಕೆ ಕೂಡಾ ಪೊಲೀಸ್ ರೀತಿಯಲ್ಲೇ ಇರುತ್ತದೆಯಂತೆ. “ರಾಘು ಶಿವಮೊಗ್ಗ ಅವರು ಈಗಾಗಲೇ ತಮ್ಮ ಕಿರುಚಿತ್ರದಲ್ಲೇ ಮೆಚ್ಚುಗೆ ಪಡೆದಿದ್ದಾರೆ. ಈಗ ಒಂದೊಳ್ಳೆಯ ಕಥೆಯೊಂದಿಗೆ ಸಿನಿಮಾ ಮಾಡುತ್ತಿದ್ದಾರೆ. ಅವರ ಕೆಲಸದ ಮೇಲೆ ನನಗೆ ನಂಬಿಕೆ ಇದೆ’ ಎನ್ನುವುದು ಪ್ರವೀಣ್ ಮಾತು. ಚಿತ್ರದಲ್ಲಿ ಪ್ರೇರಣಾ ಎಂಬ ಹೊಸ ಹುಡುಗಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಕಾಲೇಜಿಗೆ ಹೋಗುವ ಹುಡುಗಿಯ ಪಾತ್ರ ಎಂದಷ್ಟೇ ಹೇಳುವ ಪ್ರೇರಣಾ ಪಾತ್ರದ ಬಗ್ಗೆ ಹೆಚ್ಚು ಮಾತನಾಡಲಿಲ್ಲ.
ಇನ್ನು, ಈ ಹಿಂದೆ “ಚೌಕಬಾರ’ದಲ್ಲಿ ಪ್ರಮುಖ ಪಾತ್ರ ಮಾಡಿದ್ದ ಮಂಜುನಾಥ ಹೆಗಡೆ, ಅಚ್ಯುತ್ ಕುಮಾರ್, ಶರತ್ ಲೋಹಿತಾಶ್ವ ಕೂಡಾ “ಚೂರಿಕಟ್ಟೆ’ಯಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಮಂಜುನಾಥ ಹೆಗಡೆ ಇಲ್ಲಿ ಫಾರೆಸ್ಟ್ ಆಫೀಸರ್ ಆಗಿ ಕಾಣಿಸಿಕೊಂಡರೆ, ಅಚ್ಯುತ್ ಹೆಗಡೆ ಪೊಲೀಸ್. ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ, ಅದ್ವೆ„ತ್ ಗುರುಮೂರ್ತಿ ಛಾಯಾಗ್ರಹಣವಿದೆ.