Advertisement

ಭಗೀರಥನು ಗಂಗೆಯನ್ನು ಭೂಮಿಗೆ ತಂದ ಹಿಂದಿನ ರಹಸ್ಯ…

03:42 PM Aug 14, 2018 | |

ಪೂರ್ವದಲ್ಲಿ ಹರಿಶ್ಚಂದ್ರನ ಮಗ ರೋಹಿತನಿಗೆ ಹರಿತ ನೆಂಬ ಮಗನಿದ್ದನು. ಹರಿತನ ಮಗ ಚಂಪನು ಚಂಪಾಪುರಿಯನ್ನು ನಿರ್ಮಿಸಿದನು. ಚಂಪನಿಗೆ ಸುದೇವನೂ, ಸುದೇವನಿಗೆ ವಿಜಯನೆಂಬ ಮಗನೂ ಹುಟ್ಟಿದನು, ವಿಜಯನಿಗೆ ಭರುಕನೆಂಬ ಮಗನೂ, ಭರುಕನಿಗೆ ವೃಕನೆಂಬ ಪುತ್ರನೂ, ವೃಕನಿಗೆ ಬಾಹುಕನೆಂಬ ಪುತ್ರನಿದ್ದನು. ಅವನು ರಾಜ್ಯಭಾರ ಮಾಡುತ್ತಿರುವಾಗ ಶತ್ರುಗಳು ಅವನಿಂದ ರಾಜ್ಯವನ್ನು ವಶಪಡಿಸಿಕೊಳ್ಲಲು ಬಾಹುಕನು ತನ್ನ ಪತ್ನಿಯರೊಂದಿಗೆ ಕಾಡಿಗೆ ಹೊರಟು ಹೋದನು.

Advertisement

                 ವೃದ್ಧಾಪ್ಯದಿಂದ ಅರಣ್ಯದಲ್ಲಿ ಬಾಹುಕನು ಮೃತನಾದಾಗ ಅವನ ಧರ್ಮಪತ್ನಿಯು  ಅವನೊಂದಿಗೆ ಸಹಗಮನಕ್ಕೆ ಸಿದ್ಧಳಾದಳು. ಗರ್ಭಿಣಿಯಾದ ಅವಳನ್ನು ಮಹರ್ಷಿಯಾದ ಔರ್ವನು ಸಹಗಮನದಿಂದ ತಡೆದನು ಅವಳ ಸವತಿಯರಿಗೆ ಈ ವಿಷಯ  ತಿಳಿದು ಸವತಿಯರು ಅವಳಿಗೆ ಊಟದೊಂದಿಗೆ ಗರ (ವಿಷ)ವನ್ನು ತಿನ್ನಿಸಿದರು. ಆದರೆ ವಿಷವು ಗರ್ಭದ ಮೇಲೆ ಯಾವ ಪ್ರಭಾವವನ್ನು ಬೀರದೆ ವಿಷದೊಂದಿಗೆ ಗಂಡು ಮಗುವಿನ ಜನ್ಮವಾಯಿತು. ಗರ(ವಿಷ)ದೊಂದಿಗೆ ಹುಟ್ಟಿದ ಕರಣ ಅವನು ಸಗರನೆಂದು ವಿಖ್ಯಾತನಾದನು.

                 ಸಗರನು ಮಹಾಯಶೋವಂತನಾದ ಚಕ್ರವರ್ತಿಯೂ, ಸಾಮ್ರಾಟನೂ ಆಗಿದ್ದನು. ಅವನ ಪುತ್ರರೇ ನೆಲವನ್ನು ಅಗೆದು ಸಮುದ್ರವನ್ನು ನಿರ್ಮಿಸಿದ್ದರು. ಸಗರನು ತನ್ನ ಗುರುವಾದ ಔರ್ವನ ಆಜ್ಞೆಯನ್ನು ಗೌರವಿಸಿ ತಾಲಜಂಘ, ಯವನ , ಶಕ ,ಹೈಹಯ, ಬಾರ್ಬರಾ ಮುಂತಾದ ಜಾತಿಯವರನ್ನು ವಧಿಸದೆ ಅವರ ರೂಪವನ್ನು ವಿರೂಪಗೊಳಿಸಿದನು. ಅವರಲ್ಲಿ ಕೆಲವರು ತಲೆಯನ್ನು ಮತ್ತು ಗಡ್ಡಮೀಸೆಯನ್ನು ಬೋಳಿಸಿದರು , ಕೆಲವರು ತಲೆಯನ್ನು ಮಾತ್ರ ಬೋಳಿಸಿದರು. ಕೆಲವರು ಅರ್ಧ ತಲೆಯನ್ನು ಬೋಳಿಸಿದರು. ಕೆಲವರಿಗೆ ಸಗರನು ಬಟ್ಟೆಯನ್ನು ಉಡದೆ ಕೇವಲ ಹೊದೆಯಲು ಮಾತ್ರ ಅನುಮತಿ ನೀಡಿದ್ದನು.

            ಇದಾದ ನಂತರ ಗುರುಗಳ ಉಪದೇಶದಂತೆ ಅಶ್ವಮೇಧಯಜ್ಞದ ಮೂಲಕ ಸರ್ವಶಕ್ತನಾದ ಭಗವಂತನ ಆರಾಧನೆಯನ್ನು ಮಾಡಲು ಸಂಕಲ್ಪಿಸಿದನು. ಅವನು ಯಜ್ಞಕೋಸ್ಕರ ಬಿಟ್ಟ ಅಶ್ವವನ್ನು ಇಂದ್ರನು ಕದ್ದುಕೊಂಡು ಹೋಗಿದ್ದ. ಸುಮತಿಯ ಗರ್ಭದಿಂದ ಹುಟ್ಟಿದ ಅರವತ್ತು ಸಾವಿರ ರಾಜಕುಮಾರರು ತಂದೆಯ ಆಜ್ಞೆಯಂತೆ ಯಜ್ಞಾಶ್ವಕ್ಕಾಗಿ ಇಡೀ ಭೂಮಿಯನ್ನು ಜಾಲಾಡಿದರು ಅಶ್ವವು ಎಲ್ಲಿಯೂ ಸಿಗಲಿಲ್ಲ. ಇದರಿಂದ ಕ್ರೋಧಗೊಂಡ ಸಗರ ಪುತ್ರರು ಭೂಮಿಯನ್ನು ಅಗೆಯಲು ಪ್ರಾರಂಭಿಸಿದರು ಅಗೆಯುತ್ತಾ ಅಗೆಯುತ್ತಾ ಈಶಾನ್ಯ ದಿಕ್ಕಿನಲ್ಲಿ ತಪಸ್ಸು ಮಾಡುತಿದ್ದ ಕಪಿಲ ಮಹರ್ಷಿಗಳ ಕುಟೀರದಲ್ಲಿ ತಮ್ಮ ಯಜ್ಞಾಶ್ವವು ಕಂಡುಬಂತು. ಕುದುರೆಯನ್ನು ನೋಡುತ್ತಲೇ ರಾಜಕುಮಾರರು ಶಸ್ತ್ರಗಳನ್ನೆತ್ತಿಕೊಂಡು ಇವನೇ ನಮ್ಮ ಕುದುರೆಯನ್ನು ಕದ್ದಿರುವ ಕಳ್ಳನೆಂದು ಹೇಳುತ್ತಾ, ಇವನನ್ನು ಕೊಂದು ಬಿಡಿ ಎಂದು ಮುನಿಯತ್ತ ಧಾವಿಸಿದರು.

                 ತಾನು ಕದ್ದಿರುವ ಕುದುರೆಯನ್ನು ರಕ್ಷಿಸಲು ಇಂದ್ರನು ರಾಜಕುಮಾರರ ವಿವೇಕವನ್ನು ಮಂದಗೊಳಿಸಿ ಕಪಿಲಮುನಿಯ ಮೇಲೆ ಸಂಶಯ ಬರುವಂತೆ ಮಾಡಿದ್ದನು. ತನ್ನತ್ತ ಧಾವಿಸಿ ಬರುತ್ತಿರುವ ರಾಜಕುಮಾರರನ್ನು ಕಂಡ ಕಪಿಲ ಮುನಿಯು ತನ್ನ ಕ್ರೋಧಾಗ್ನಿಯಿಂದ ರಾಜಕುಮಾರರನ್ನು ಸುಟ್ಟು ಬೂದಿಯಾಗಿಸಿದನು.

Advertisement

                ಸಗರನಿಗೆ ಕೇಶಿನಿಯೇನೆಂಬ ಇನ್ನೋರ್ವ ಪತ್ನಿಯಲ್ಲಿ ಅಸಮಂಜಸನೆಂಬ ಪುತ್ರನಿದ್ದನು. ಅವನ ಪುತ್ರ ಅಂಶುಮಂತನು ತನ್ನ ಅಜ್ಜನಾದ ಸಗರನ ಆದೇಶವನ್ನು ಪಾಲಿಸುತ್ತ ಅವನ ಸೇವೆಯಲ್ಲೇ ತೊಡಗಿರುತ್ತಿದ್ದನು. ಅಸಮಂಜಸನಾದರೋ ಕೆಲವೊಮ್ಮೆ ನೀಚಕರ್ಮಗಳನ್ನು ಮಾಡುತ್ತ ತನ್ನನ್ನು ಹುಚ್ಚನಂತೆ ತೋರಿಸಿಕೊಳ್ಳುತ್ತಿದ್ದನು. ಆಟವಾಡುತಿದ್ದ ಬಾಲಕರನ್ನು ಸರಯೂ ನದಿಗೆ ಎಸೆಯುತ್ತಿದ್ದನು. ಇದರಿಂದ ಪ್ರಜೆಗಳು ಬಹಳ ಉದ್ವೇಗಗೊಂಡು ಸಗರನಲ್ಲಿ ತಮ್ಮ ಗೋಳನ್ನು ಅರುಹಲು, ರಾಜನು ಪುತ್ರ ಸ್ನೇಹವನ್ನು ತೊರೆದು ಅಸಮಂಜಸನನ್ನು ಕಾಡಿಗಟ್ಟಿದನು. ಆದರೆ ಅಸಮಂಜಸನು ತನ್ನ ಯೋಗಬಲದಿಂದ ತಾನು ಸರಯೂ ನದಿಗೆಸೆದ ಎಲ್ಲಾ ಬಾಲಕರನ್ನು ಪುನಃ ಜೀವಂತಗೊಳಿಸಿ ತಂದೆಗೆ ತೋರಿಸಿ ಮತ್ತೆ ಕಾಡಿಗೆ ಹೊರಟನು. ಅಯೋಧ್ಯೆಯ ನಾಗರಿಕರಿಗೆ ತಮ್ಮ ಮಕ್ಕಳು ಜೀವಂತರಾಗಿ ಬಂದಿರುವುದನ್ನು ಕಂಡು ಆಶ್ಚರ್ಯವಾಯಿತು. ಅಂತಹ ಯೋಗಿಯಾದ ಮಗನನ್ನು ಕಳೆದುಕೊಂಡದ್ದಕ್ಕಾಗಿ ಸಗರನು ಪಶ್ಚತ್ತಾಪಪಟ್ಟನು.

             ಇದಾದ ಬಳಿಕ ಸಗರನ ಆಜ್ಞೆಯಂತೆ ಮೊಮ್ಮಗ ಅಂಶುಮಂತನು ಕುದುರೆಯನ್ನು ಹುಡುಕಲು ಹೊರಟನು. ಅವನು ತನ್ನ ಚಿಕ್ಕಪ್ಪಂದಿರು ಅಗೆದು ನಿರ್ಮಿಸಿದ ಸಾಗರದ ತಟದಲ್ಲಿ ಚಿಕ್ಕಪ್ಪಂದಿರ  ಭಸ್ಮ ರಾಶಿಯನ್ನು ಯಜ್ಞಾಶ್ವವನ್ನು ನೋಡಿದನು. ಜೊತೆಗೆ ಭಗವಂತನ ಅವತಾರವಾದ ಕಪಿಲಮುನಿಯನ್ನು ನೋಡಿ ಉದಾರ ಹೃದಯನಾದ ಅಂಶುಮಂತನು ಕಪಿಲನ ಚರಣಗಳಲ್ಲಿ ವಂದಿಸಿ ಕೈಜೋಡಿಸಿಕೊಂಡು ಸ್ತುತಿಸತೊಡಗಿದನು. ಅಂಶುಮಂತನ ಸ್ತುತಿಯಿಂದ ಸಂತೃಪ್ತನಾದ ಕಪಿಲಮುನಿಯು ಅಂಶುಮಂತನನ್ನು ಅನುಗ್ರಹಿಸುತ್ತ, ವತ್ಸ “ಈ ಕುದುರೆಯು ನಿನ್ನ ತಾತನ ಯಜ್ಞ ಪಶುವಾಗಿದೆ ಇದನ್ನು ನೀನು ಕರೆದುಕೊಂಡು ಹೋಗು. ಬೂದಿಯಾಗಿರುವ ನಿನ್ನ ಚಿಕ್ಕಪ್ಪನ ಉದ್ಧಾರವು ಕೇವಲ ಗಂಗಾಜಲ ಸ್ಪರ್ಶದಿಂದ ಆಗುತ್ತದೆ .ಇದಲ್ಲದೆ ಬೇರೆ ಯಾವ ಉಪಾಯವೂ ಇಲ್ಲ” ಎಂದು ಹೇಳಿದನು.

          ಇದನ್ನು ಕೇಳಿದ ಅಂಶುಮಂತನು ಮುನಿಗೆ ಪ್ರದಕ್ಷಿಣೆ ಮಾಡಿ ನಮಸ್ಕರಿಸಿ ಕುದುರೆಯೊಂದಿಗೆ ರಾಜಧಾನಿಗೆ ಬಂದನು. ಸಗರನು ಯಜ್ಞಾಶ್ವದ ಮೂಲಕ ಉಳಿದ ಯಜ್ಞ ಪ್ರಕ್ರಿಯೆಯನ್ನು ಮುಗಿಸಿ ಅಂಶುಮಂತನಿಗೆ ಪಟ್ಟಾಭಿಷೇಕವನ್ನು ಮಾಡಿ ತಾನು ಮಹರ್ಷಿ ಔರ್ವರ ಮಾರ್ಗದರ್ಶನದಂತೆ ಪರಮಪದವನ್ನು ಪಡೆದುಕೊಂಡನು.

                   ಕಾಲಾಂತರದಲ್ಲಿ ಅಂಶುಮಂತನ ಪುತ್ರ ದೀಲಿಪನ ಮಗನಾದ ಭಗೀರಥನು ಮಹಾತಪಸ್ಸನ್ನಾಚರಿಸಿ ಗಂಗಾದೇವಿಯನ್ನು ಭೂಮಿಗೆ ಬರಮಾಡಿಕೊಂಡು ಕಪಿಲಮುನಿಯಿಂದ ಬೂದಿಯಾದ ತನ್ನ ಪಿತೃಗಳನ್ನು ಉದ್ಧರಿಸಿದನು.

Advertisement

Udayavani is now on Telegram. Click here to join our channel and stay updated with the latest news.

Next