Advertisement

ಎರಡನೇ ದಿನಕ್ಕೆ ಕಾಲಿಟ್ಟಿ ಅಹೋರಾತ್ರಿ ಧರಣಿ

11:00 AM Sep 08, 2017 | Team Udayavani |

ಬೆಂಗಳೂರು: ಶಿಕ್ಷಕರು,ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳ ಸಮಸ್ಯೆಗಳ ಈಡೇರಿಕೆಗೆ ಒತ್ತಾಯಿಸಿ ಹನ್ನೆರಡು ವಿಧಾನ ಪರಿಷತ್‌ ಸದಸ್ಯರು ಪಕ್ಷಾತೀತವಾಗಿ ನಡೆಸುತ್ತಿರುವ ಅಹೋ ರಾತ್ರಿ ಧರಣಿ  ಎರಡನೇ ದಿನಕ್ಕೆ ಕಾಲಿಟ್ಟಿದೆ.

Advertisement

ವಿಧಾನಸೌಧ-ವಿಕಾಸಸೌಧ ನಡುವಿನ ಮಹಾತ್ಮಗಾಂಧಿ ಪ್ರತಿಮೆ ಬಳಿ ಧರಣಿ ನಡೆಸುತ್ತಿರುವ ವಿಧಾನ ಪರಿಷತ್‌ ಸದಸ್ಯರು, ಮುಖ್ಯಮಂತ್ರಿಯವರು ಖುದ್ದು ಸಭೆ ಆಶ್ವಾಸನೆ ಕೊಡಿಸುವವರೆಗೂ ಧರಣಿ ನಿಲ್ಲುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ಹೀಗಾಗಿ, ಬುಧವಾರ ಆರಂಭಗೊಂಡ ಧರಣಿ ಗುರುವಾರ ರಾತ್ರಿಯೂ ಮುಂದುವರಿದಿದ್ದು, ವಿಧಾನ ಪರಿಷತ್‌ ಸದಸ್ಯರು ದಿಂಬು-ಹಾಸಿಗೆ ಸಮೇತ ಠಿಕಾಣಿ ಹೂಡಿದ್ದಾರೆ. ಈ ಮಧ್ಯೆ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್‌ ಸೇಠ್ ಗುರುವಾರ ಬೆಳಗ್ಗೆ ಧರಣಿ ಸ್ಥಳಕ್ಕೆ ಭೇಟಿ ನೀಡಿದ್ದರಾದರೂ ಪ್ರಯೋಜನವಾಗಲಿಲ್ಲ.

ಬದಲಿಗೆ, ತನ್ವೀರ್‌ ಸೇಠ್, ಧರಣಿ ನಿಲ್ಲಿಸುವಂತೆ ಧಮ್ಕಿ ಹಾಕಿದ್ದಾರೆ. ಏನಾದರೂ ಮಾಡಿಕೊಳ್ಳಿ ಎಂದು ಬೇಜವಾಬ್ದಾರಿಯಾಗಿ ಮಾತನಾಡಿದ್ದಾರೆ. ಲಕ್ಷಾಂತರ ಶಿಕ್ಷಕರು ಹಾಗೂ ವಿದ್ಯಾರ್ಥಿ ಸಮುದಾಯದ ಪ್ರತಿನಿಧಿಗಳಾದ ನಾವು ನ್ಯಾಯಕ್ಕಾಗಿ ಧರಣಿ ನಡೆಸುತ್ತಿದ್ದರೆ ಸ್ಪಂದನೆ ಮಾಡುವ ಬದಲು ಬೆದರಿಕೆ ತಂತ್ರ ಅನುಸರಿಸುತ್ತಿದ್ದಾರೆ ಎಂದು ಧರಣಿ ನಿರತರು ಆಕ್ರೋಶ ವ್ಯಕ್ತಪಡಿಸಿದರು.

ಗುರುವಾರ ಸಂಜೆ ಸುದ್ದಿಗೋಷ್ಠಿ ನಡೆಸಿದ ಸದಸ್ಯರು, ಬಸವರಾಜ ಹೊರಟ್ಟಿಯಂತಹ ಹಿರಿಯರು ಧರಣಿ ಕುಳಿತಿರುವಾಗ ಸಚಿವರ ವರ್ತನೆ ಸರಿಯಲ್ಲ. ಮುಖ್ಯಮಂತ್ರಿಯವರು ತಕ್ಷಣ ಸಂಪುಟದಿಂದ ತನ್ವೀರ್‌ ಸೇಠ್ ಕೈ ಬಿಡಬೇಕು ಎಂದು ಆಗ್ರಹಿಸಿದರು.

Advertisement

ಶಿಕ್ಷಣ ಸಚಿವ ತನ್ವೀರ್‌ ಸೇಠ್ಗೆ ತರಾಟೆ
ಗಾಂಧಿ ಪ್ರತಿಮೆ ಬಳಿ ಪರಿಷತ್‌ ಸದಸ್ಯರು ಅಹೋರಾತ್ರಿ ಧರಣಿ ನಡೆಸುತ್ತಿದ್ದ ಸ್ಥಳಕ್ಕೆ ಬಂದ ಶಿಕ್ಷಣ ಸಚಿವ ತನ್ವೀರ್‌ ಸೇಠ್, ಪ್ರತಿಭಟನಾಕಾರರನ್ನು ಉದ್ದೇಶಿಸಿ ಏರಿದ ಧ್ವನಿಯಲ್ಲಿ ಆಗಮಿಸಿ ಧರಣಿ ಕೈ ಬಿಡುವವಂತೆ ಒತ್ತಾಯಿಸಿದರು. ಇದರಿಂದ ಕುಪಿತಗೊಂಡ ಬಸವರಾಜ ಹೊರಟ್ಟಿ ಹಾಗೂ ಪರಿಷತ್‌ ಸಭಾಪತಿ ಮರಿತಿಬ್ಬೇಗೌಡ ಸೇಠ್ರನ್ನು ತರಾಟೆಗೆ ತೆಗೆದುಕೊಂಡರು.

ಹೋರಟ್ಟಿ, “ನಮ್ಮನ್ನೇನು ಶಾಲೆ ಮಕ್ಕಳು ಎಂದುಕೊಂಡಿದ್ದೀರಾ? ಎದೆ ಮುಟ್ಟಿಕೊಂಡು ಹೇಳಿ ನೀವು ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸಿದ್ದೀರಾ? ಏನೆಂದುಕೊಂಡಿದ್ದೀರಿ ನೀವು? ಎಂದು ಪ್ರಶ್ನಿಸಿದರು. ಮರಿತಿಬ್ಬೇಗೌಡರು, ನಾವು ನಿಮ್ಮಂತೆಯೇ ಮಾತನಾಡಿದರೆ ದೊಡ್ಡ ಅನಾಹುತ ಆಗುತ್ತದೆ,’ ಎಂದು ಎಚ್ಚರಿಸಿದರು. ಇದರಿಂದ ವಿಚಲಿತರಾದ ಸೇಠ್ ಕ್ಷಮೆ ಯಾಚಿಸಿದರು.

ನಾನು ಬೆದರಿಕೆಯೊಡ್ಡಿಲ್ಲ. ಮುಖ್ಯಮಂತ್ರಿಯವರ ಜತೆ ಮಾತುಕತೆಗೆ ಸಮಯ ನಿಗದಿಪಡಿಸಿದರೂ ಪರಿಷತ್‌ ಸದಸ್ಯರು ಬರಲಿಲ್ಲ. ಅವರ ಉದ್ದೇಶವೇ ಬೇರೆ ಇದೆ. ಶಿಕ್ಷಕ ಸಮುದಾಯದ ಬಗ್ಗೆ ಸರ್ಕಾರಕ್ಕೂ ಕಾಳಜಿಯಿದ್ದು ಸಮಸ್ಯೆಗಳನ್ನು ಈಡೇರಿಸಲು ಬದ್ಧವಾಗಿದೆ.
-ತನ್ವೀರ್‌ ಸೇಠ್, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ 

Advertisement

Udayavani is now on Telegram. Click here to join our channel and stay updated with the latest news.

Next