Advertisement

ಪಲಿಮಾರು ಮಠ ಸೇರಲಿರುವ ಮಧ್ವಾಚಾರ್ಯರ ಗ್ರಂಥ

10:32 PM Jan 12, 2020 | Sriram |

ಉಡುಪಿ: ಪಲಿಮಾರು ಮಠದ 800 ವರ್ಷಗಳಷ್ಟು ಪ್ರಾಚೀನವಾದ ಮಧ್ವಾಚಾರ್ಯರ ಅತ್ಯಂತ ಅಮೂಲ್ಯವಾದ ಸರ್ವಮೂಲ ಗ್ರಂಥ ಉಡುಪಿ ಶ್ರೀಕೃಷ್ಣ ಮಠದ ಮಧ್ವ ಪೀಠದಲ್ಲಿ ಪರ್ಯಾಯ ವಿಶೇಷ ಪೂಜೆ ಮುಗಿಸಿ ಪಲಿಮಾರು ಮಠ ಸೇರಲು ಸಿದ್ಧಗೊಂಡಿದೆ.

Advertisement

ಗ್ರಂಥದ ವೈಶಿಷ್ಟ್ಯ
ಸರ್ವಮೂಲ ಗ್ರಂಥವನ್ನು ಮಧ್ವಾಚಾರ್ಯರು ಸ್ವತಃ ತಮ್ಮ ಪ್ರೀತಿಯ ಶಿಷ್ಯ ಪಲಿಮಾರು ಮಠದ ಮೊದಲ ಯತಿ ಶ್ರೀಹೃಷಿಕೇಶತೀರ್ಥ ಸ್ವಾಮೀಜಿ ಅವರಿಂದ ತಾಳೆಗರಿಯಲ್ಲಿ ಬರೆಸಿದ ಗ್ರಂಥ. ಸುಮಾರು 700 ತಾಳೆ ಪತ್ರಗಳಿರುವ ಈ ಗ್ರಂಥವು ಪಲಿಮಾರು ಮಠಕ್ಕೆ ಸೇರಿದೆ. ಆಚಾರ್ಯರಿಗೆ ನೀಡುವ ಗೌರವ ಹಾಗೂ ಪೂಜೆಯನ್ನು ಈ ಗ್ರಂಥಕ್ಕೆ ನೀಡಲಾಗುತ್ತದೆ.

ಮಧ್ವ ಪೀಠದಲ್ಲಿ ಪೂಜೆ
16 ವರ್ಷಗಳಿಗೊಮ್ಮೆ ಬರುವ ಪಲಿಮಾರು ಪರ್ಯಾಯದ ಅವಧಿಯಲ್ಲಿ ಸರ್ವಮೂಲ ಗ್ರಂಥವನ್ನು ಶ್ರೀಕೃಷ್ಣ ಮಠದ ಮಧ್ವಪೀಠದಲ್ಲಿ ಇರಿಸಿ ಗ್ರಂಥಕ್ಕೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. 800 ವರ್ಷಗಳಷ್ಟು ಪ್ರಾಚೀನವಾದ ಈ ಗ್ರಂಥ ಇನ್ನೂ ಸುರಕ್ಷಿತವಾಗಿರುವುದು ಆಶ್ಚರ್ಯ.

ವೀಕ್ಷಣೆಗೆ ಅವಕಾಶವಿಲ್ಲ
ಮಠವು ಸರ್ವಮೂಲ ಗ್ರಂಥವನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಸಾರ್ವಜನಿಕರ ವೀಕ್ಷಣೆಗೆ ಅವಕಾಶವಿಲ್ಲ. ಸುಮಾರು 700 ತಾಳೆ ಪತ್ರಗಳು ಹೊಂದಿರುವ ಈ ಗ್ರಂಥವನ್ನು ಭದ್ರವಾಗಿ ಬೆಳ್ಳಿ ಪೆಟ್ಟಿಗೆಯಲ್ಲಿ ಇಡಲಾಗಿದೆ. ಈ ಮೂಲಪ್ರತಿಗಳನ್ನು ಶ್ರೀವಿದ್ಯಾ ಧೀಶತೀರ್ಥ ಶ್ರೀಪಾದರು, ಡಾ|ಬನ್ನಂಜೆ ಗೋವಿಂದಾ ಚಾರ್ಯರ ಉಪಸ್ಥಿತಿಯಲ್ಲಿ ಅಮೆರಿಕದ ರಾಯ್‌ಸ್ಟರ್‌ ವಿ.ವಿ. ಸಂಶೋಧಕ, ಪ್ರಾಧ್ಯಾ ಪಕ ಡಾ|ಪಿ. ಆರ್‌.ಮುಕುಂದ್‌ ಅವರು ಡಿಜಿಟಲೈಸ್‌ ಮಾಡಿದ್ದಾರೆ. ಈ ಗ್ರಂಥದಲ್ಲಿ ದಿನ ನಿತ್ಯ ಬದುಕು, ಆಯುರ್ವೇದ, ಜ್ಯೋತಿಷ, ವೇದಾಂತ, ಗೀತೆ, ಇತಿಹಾಸ ಸೇರಿದಂತೆ 37 ವಿಷಯಗಳಿಗೆ ಸಂಬಂಧಿಸಿದ ಮಾಹಿತಿಗಳು ಇವೆ.

ಸಾಮಾನ್ಯ ವಿಷಯವಲ್ಲ
ಇಷ್ಟು ಪ್ರಾಚೀನ ಗ್ರಂಥಗಳು ಕಾಣ ಸಿಗುವುದು ಬಹಳ ವಿರಳ. ಏಕೆಂದರೆ ತಾಳೆಗರಿಯ ಗ್ರಂಥಗಳನ್ನು ಸಂರಕ್ಷಿಸುವುದು ಸಾಮಾನ್ಯ ವಿಷಯವಲ್ಲ. ಅದಕ್ಕಾಗಿಯೇ ಶ್ರೀವಿದ್ಯಾಮಾನ್ಯ ತೀರ್ಥ ಸ್ವಾಮೀಜಿ ತತ್ವ ಸಂಶೋಧನ ಸಂಸತ್‌ ಸಂಸ್ಥೆಯನ್ನು ಸ್ಥಾಪಿಸಿದ್ದರು. ಈ ಮೂಲಕ 120ಕ್ಕೂ ಹೆಚ್ಚಿನ ತಾಳೆ ಗರಿ ಪುಸ್ತಕಗಳನ್ನು ರಕ್ಷಿಸಲಾಗಿದೆ.
-ಡಾ| ವಂಶಿ ಕೃಷ್ಣ ಆಚಾರ್ಯ, ನಿರ್ದೇಶಕರು, ತಣ್ತೀ
ಸಂಶೋಧನ ಸಂಸತ್‌, ಉಡುಪಿ

Advertisement

ತುಳು ಲಿಪಿ ಬಳಕೆ
ತಾಳೆಪತ್ರದ ಗಾತ್ರ 60 ಸೆಂ.ಮೀ. ಅಗಲ, ಮೂರು ಸೆಂ.ಮೀ. ಎತ್ತರದ್ದಾಗಿದೆ. ಒಂದೊಂದು ತಾಳೆಗರಿಯಲ್ಲಿ 16 ಸಾಲುಗಳಿವೆ. ಕೆಲವು ತಾಳೆಗರಿಯಲ್ಲಿ ಒಂದೆರಡು ಸಾಲು ಹೆಚ್ಚು ಕಡಿಮೆ ಇದೆ. ಈ ಗ್ರಂಥವನ್ನು ತುಳು ಲಿಪಿಯನ್ನು ಬಳಸಿಕೊಂಡು ಸಂಸ್ಕೃತ ಭಾಷೆಯಲ್ಲಿ ಬರೆಯಲಾಗಿದೆ. ಅಂದಿನ ಕಾಲದಲ್ಲಿಯೇ ತುಳುವಿಗೂ ಲಿಪಿ ಇತ್ತು ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next