Advertisement

8 ವಿದ್ಯಾರ್ಥಿಗಳಿದ್ದ ಶಾಲೆಯಲ್ಲಿ ಈಗ 83 ವಿದ್ಯಾರ್ಥಿಗಳು

12:56 AM Jan 25, 2020 | Sriram |

ಬೈಂದೂರು: ಹೊಸ ಚಿಂತನೆಗಳು ಯಶಸ್ಸಿಗೆ ಕಾರಣವಾಗುತ್ತವೆ ಮಾತ್ರವಲ್ಲದೆ ಇತರರಿಗೂ ಮಾದರಿಯಾಗುತ್ತದೆ. ಎರಡು ವರ್ಷದ ಹಿಂದೆ ಗ್ರಾಮೀಣ ಭಾಗದ ಶಾಲೆಯೊಂದು ರೂಪಿಸಿದ ವಿಶಿಷ್ಟ ಪರಿಕಲ್ಪನೆ ಶಾಲೆಯ ಅಸ್ತಿತ್ವ ಉಳಿಸುವುದರೊಂದಿಗೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಲೂ ಕಾರಣವಾಗಿದೆ.

Advertisement

ಶಾಲಾಭಿವೃದ್ಧಿ ಸಮಿತಿ ಯತ್ನ
ಕಿರಿಮಂಜೇಶ್ವರ ಕ್ಲಸ್ಟರ್‌ ವ್ಯಾಪ್ತಿಯಲ್ಲಿ 1973ರಲ್ಲಿ ಅಲ್ಪಸಂಖ್ಯಾತ ಯೋಜನೆಯಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಾಗೂರು ಆರಂಭ ವಾಗಿತ್ತು. ಅಂದು ಉರ್ದು ಶಾಲೆಯಾಗಿದ್ದು 150 ವಿದ್ಯಾರ್ಥಿಗಳಿದ್ದರು. ಆಂಗ್ಲ ಮಾದ್ಯಮ ಶಾಲೆಗಳಿಂದಾಗಿ 2018-19ರಲ್ಲಿ ವಿದ್ಯಾರ್ಥಿಗಳ ಸಂಖ್ಯೆ 8ಕ್ಕೆ ಇಳಿಮುಖವಾಗಿತ್ತು. ಜತೆಗೆ ಶಾಲೆ ಉಳಿಸಿ ಕೊಳ್ಳುವುದು ಶಿಕ್ಷಕರಿಗೆ, ಎಸ್‌ಡಿಎಂಸಿ, ಹಳೆ ವಿದ್ಯಾರ್ಥಿಗಳಿಗೆ ಸವಾಲಾಗಿ ಪರಿಣಮಿಸಿತ್ತು.

ಈ ಸಂದರ್ಭ ಶಾಲಾಭಿವೃದ್ಧಿ ಸಮಿತಿ ಜಾರಿಗೆ ಬಂದಿದ್ದು, ಸಮಗ್ರ ಅಭಿವೃದ್ಧಿಗೆ ಚಿಂತನೆ ನಡೆಸಿತ್ತು.

ರೈಲಿನ ಪರಿಕಲ್ಪನೆಯ ಯಶಸ್ಸು
ಶಾಲೆಯನ್ನು ಆಕರ್ಷಕವನ್ನಾಗಿಸುವತ್ತ ಎಸ್‌ಡಿಎಂಸಿ ಶಾಲೆಗೆ ರೈಲಿನ ರೀತಿ ಪೈಂಟ್‌ ಮಾಡಿದೆ. ಜತೆಗೆ ಆಂಗ್ಲ ಮಾಧ್ಯಮ ಎಲ್‌.ಕೆ.ಜಿ, ಯು.ಕೆ.ಜಿ ಸ್ಮಾರ್ಟ್‌ ಕ್ಲಾಸ್‌, ನೋಟು ಪುಸ್ತಕ ನೀಡಿಕೆ, ನುರಿತ ಶಿಕ್ಷಕರ ನೇಮಕ, ಸಮವಸ್ತ್ರ, ಬಿಸಿಯೂಟ ಹಾಗೂ ಹಾಲು ನೀಡುವುದು, ವೈದ್ಯಕೀಯ ತಪಾಸಣೆ, ಕ್ರೀಡೋತ್ಸವ, ಪ್ರತಿಭಾ ಕಾರಂಜಿ ಸೇರಿದಂತೆ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿದೆ. ಶಾಲೆಗೆ ರೈಲಿನ ರೀತಿ ಪೈಂಟ್‌ ಮಾಡಿದ್ದು ಮೊದಲ ಯತ್ನವಾದ್ದರಿಂದ ಇದು ನೂರಾರು ಮಂದಿಯ ಆಕರ್ಷಣೆಗೆ ಕಾರಣವಾಗಿತ್ತು.

ಅತ್ಯುತ್ತಮ ಶಾಲೆ ಹೆಗ್ಗಳಿಕೆ
ಶಾಲೆ ವಿಶೇಷತೆ ಬಗ್ಗೆ ಆರಂಭದಲ್ಲಿ ಉದಯವಾಣಿಯಲ್ಲಿ ವರದಿಯಾಗಿದ್ದು ಬಳಿಕ ನಾಡಿನಾದ್ಯಂತ ಸುದ್ದಿಗಳು ಪ್ರಕಟಗೊಂಡಿವೆ. ಇದರ ಪರಿಣಾಮ ಶಾಲೆಗೆ 21 ಲಕ್ಷಕ್ಕೂ ಹೆಚ್ಚು ಧನಸಹಾಯ ಬಂದಿದೆ. ಸ್ವಂತ ವಾಹನ ಸೇರಿದಂತೆ ಹಲವು ಸೌಕರ್ಯ ಕಲ್ಪಿಸಲಾಗಿದೆ. 30ಕ್ಕೂ ಅಧಿಕ ವಿದ್ಯಾರ್ಥಿಗಳ ಸೇರ್ಪಡೆಯಾಗಿದೆ. ಬೈಂದೂರು ವ್ಯಾಪ್ತಿಯ ಅತ್ಯುತ್ತಮ ಶಾಲೆಗಳಲ್ಲೊಂದಾಗಿದೆ. ಪ್ರಸ್ತುತ ಈ ಶಾಲೆ ಕೊಠಡಿ ಅಗತ್ಯವನ್ನು ಹೊಂದಿದೆ.

Advertisement

ಕಟ್ಟಡ ಸೌಲಭ್ಯ ಬೇಕು
ಈ ಮಟ್ಟಿನ ಯಶಸ್ಸಿನ ನಿರೀಕ್ಷೆ ಇರಲಿಲ್ಲ. ಆದರೆ ಶಾಲಾಭಿವೃದ್ಧಿಯ ಉದ್ದೇಶ ಇತರರಿಗೂ ಮಾದರಿಯಾಗಿದೆ. ಇಲಾಖೆ ಹಾಗೂ ಸರಕಾರ ನಮ್ಮ ಪ್ರಯ°ಕ್ಕೆ ಇನ್ನಷ್ಟು ಸಾಥ್‌ ನೀಡಬೇಕು. ಅಗತ್ಯ ಇರುವ ಕಟ್ಟಡ ಸೌಲಭ್ಯ ಒದಗಿಸಬೇಕಾಗಿದೆ.
-ರವೀಂದ್ರ ಶ್ಯಾನುಭಾಗ್‌ ಅಧ್ಯಕ್ಷರು,ಶಾಲಾಭಿವೃದ್ಧಿ ಸಮಿತಿ

ಅತ್ಯುತ್ತಮವಾಗಿ ರೂಪಿಸುವ ಕಲ್ಪನೆ
ಶಾಲೆಯಲ್ಲಿ 8 ವಿದ್ಯಾರ್ಥಿಗಳಷ್ಟೇ ಇದ್ದು ಮುಚ್ಚುವ ಭೀತಿಯಲ್ಲಿದ್ದಾಗ ರೈಲಿನ ರೀತಿ ಪೈಂಟ್‌ ಮಾಡುವ, ಆಕರ್ಷಕವನ್ನಾಗಿಸುವ ಐಡಿಯಾ ಹೊಳೆದಿತ್ತು. ಈ ಯತ್ನಕ್ಕೆ ಪ್ರಚಾರ ಸಿಕ್ಕಿದ್ದು ಬೆಳವಣಿಗೆಗೆ ಕಾರಣವಾಗಿದೆ. 2023ಕ್ಕೆ ಶಾಲೆಗೆ 50 ವರ್ಷ ಪೂರೈಸುತ್ತದೆ. ಈ ಸಂದರ್ಭ ಶಾಲೆಯನ್ನು ಅತ್ಯುತ್ತಮವಾಗಿ ರೂಪಿಸುವ ಕಲ್ಪನೆಯಿದೆ.
-ವಿಶ್ವನಾಥ ಪೂಜಾರಿ,
ಮುಖ್ಯೋಪಾಧ್ಯಾಯರು.

ಮಾದರಿ ಶಾಲೆ
ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾದಾಗ ಶಿಕ್ಷಕರು ಮತ್ತು ಸಮಿತಿ ಸದಸ್ಯರ ಯೋಜನೆ ಅದ್ಭುತವಾಗಿದ್ದು, ಯಶಸ್ಸು ಕಂಡಿದೆ. ಶಾಲೆಯ ಅಭಿವೃದ್ಧಿಗೆ ಇಂತಹ ಚಿಂತನೆಗಳು, ಇಲಾಖೆಯ ಕಾರ್ಯಕ್ರಮ ಸಮರ್ಪಕ ಅಳವಡಿಕೆಯಾದಾಗ ಯಶಸ್ಸು ಸಾಧ್ಯ.
-ಅಬ್ದುಲ್‌ ರವೂಫ್‌,
ಕ್ಷೇತ್ರ ಸಮನ್ವಯಾಧಿಕಾರಿ ಬೈಂದೂರು.

Advertisement

Udayavani is now on Telegram. Click here to join our channel and stay updated with the latest news.

Next