Advertisement

ಒಂದು ಕೊಠಡಿಯಿಂದ ಆರಂಭಗೊಂಡ ಶಾಲೆಗೀಗ ನೂರ ಹದಿನೇಳು ವರ್ಷ

09:58 AM Dec 06, 2019 | mahesh |

19ನೇ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

Advertisement

1912 ಶಾಲೆ ಆರಂಭ
ಹುಲ್ಲಿನ ಮೇಲ್ಛಾವಣಿಯಲ್ಲಿ ಶಾಲೆ ಆರಂಭ

ಮಹಾನಗರ: ಹಳ್ಳಿ ಮಕ್ಕಳ ವಿದ್ಯಾಭ್ಯಾಸಕ್ಕೆಂದು ಹುಲ್ಲಿನ ಮೇಲ್ಚಾವಣಿಯ ಒಂದು ಕಟ್ಟಡದಿಂದ ಆರಂಭಗೊಂಡ ಮೂಡುಶೆಡ್ಡೆಯ ದ.ಕ.ಜಿ.ಪಂ. ಮಾದರಿ ಹಿರಿಯ ಪ್ರಾಥಮಿಕ ಶಾಲೆಗೀಗ ನೂರ ಹದಿನೇಳರ ಹರೆಯ. 1912ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಬೋರ್ಡ್‌ನ ವತಿಯಿಂದ ಕಿರಿಯ ಪ್ರಾಥಮಿಕ ಶಾಲೆಯಾಗಿ ಮೂಡುಶೆಡ್ಡೆ ಶಾಲೆಯು ಆರಂಭಗೊಂಡಿತು. ಅನಂತರ 1951ರಲ್ಲಿ ಹಿರಿಯ ಪ್ರಾಥಮಿಕ ಶಾಲೆಯಾಗಿ ಪರಿವರ್ತನೆಗೊಂಡಿತು. ಆರಂಭದ ದಿನಗಳಲ್ಲಿ ಹುಲ್ಲಿನ ಮೇಲ್ಛಾವಣಿಯಿಂದ ಆರಂಭಗೊಂಡ ಶಾಲೆಗೆ ದಿ| ಬಿ.ಎಸ್‌. ಭಾಸ್ಕರ ರೈ ಅವರ ಮುಂದಾಳತ್ವದಲ್ಲಿ ಮತ್ತು ಊರವರ ಸಹಕಾರದಿಂದ 1953ರಲ್ಲಿ ಭವ್ಯ ಕಟ್ಟಡವು ನಿರ್ಮಾಣವಾಯಿತು.

ಅಂದಿನ ಕಾಲದಿಂದ ಇಂದಿನವರೆಗೆ ಗ್ರಾಮೀಣ ಜನರ ಬದುಕನ್ನು ಉನ್ನತ ಪಥದತ್ತ ಕೊಂಡೊಯ್ಯಲು ಈ ಶಾಲೆ ಕಾರಣವಾಗಿದೆ. ಅದರ ಹಿಂದೆ ಹತ್ತಾರು ಮುಖ್ಯ ಶಿಕ್ಷಕರು, ಶಿಕ್ಷಕರು, ಊರಿನ ಮತ್ತು ಪರವೂರಿನ ಮಂದಿಯ ಸಹಕಾರವೂ ಇದೆ. ಅಂದಹಾಗೆ, ವಾಮಂಜೂರು, ಗುರುಪುರ, ಪಡುಶೆಡ್ಡೆ ಸಹಿತ ಸುತ್ತಮುತ್ತಲಿನ ಪ್ರದೇಶದ ಮಂದಿಯ ವಿದ್ಯಾರ್ಜನೆಗೆ ಈ ಶಾಲೆ ಆಸರೆಯಾಗಿತ್ತು.

ಕೊಠಡಿ ನಿರ್ಮಾಣ
ಒಂದು ಹಂತದಲ್ಲಿ 1,200ಕ್ಕೂ ಹೆಚ್ಚಿನ ಮಂದಿ ಇದ್ದ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಜಿ.ಪಂಚಾಯತ್‌, ಶಾಲಾ ಶೈಕ್ಷಣಿಕ ಸಮಿತಿ, ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಕೊಠಡಿಗಳನ್ನು ನಿರ್ಮಾಣ ಮಾಡಲಾಯಿತು. ಸದ್ಯ ಮೂಡುಶೆಡ್ಡೆ ಶಾಲೆಯು 20 ಕೊಠಡಿಗಳನ್ನು ಹೊಂದಿದೆ.

Advertisement

ನಲಿ-ಕಲಿಯಲ್ಲಿ ವಿದ್ಯಾಭ್ಯಾಸ
2014ರ ಜುಲೈ ತಿಂಗಳಿನಿಂದ ಮೂಡುಶೆಡ್ಡೆ ಶಾಲೆಯಲ್ಲಿ ಸುಬ್ರಾಯ ಪೈ ಎನ್‌. ಅವರು ಮುಖ್ಯ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. 8 ಶಿಕ್ಷಕಿಯರನ್ನು ಒಳಗೊಂಡಂತೆ ವಿವಿಧ ಪ್ರದೇಶಗಳ 166 ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. 2011-12ನೇ ಸಾಲಿನಲ್ಲಿ ಮುಖ್ಯ ಶಿಕ್ಷಕರ ಕೊಠಡಿ ಮಂಜೂರಾಗಿದ್ದು, ಅದರ ಸದುಪ ಯೋಗಪಡಿಸಿಕೊಳ್ಳಲಾಗುತ್ತಿದೆ. ನಲಿ-ಕಲಿಯಲ್ಲಿ 1ರಿಂದ 3ನೇ ತರಗತಿಗಳ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪಡೆಯುವಂತಾಗಿದೆ.

1980ರಲ್ಲಿ ಹಳೇ ವಿದ್ಯಾರ್ಥಿ ಸಂಘ ಸ್ಥಾಪನೆಯಾಯಿತು. ಇದರ ಮುಖೇನ ಕಂಪೌಂಡ್‌ ವಿಸ್ತರಣೆ, ಧ್ವಜಸ್ತಂಭ, ಶಾಲಾ ಕೊಠಡಿ ನಿರ್ಮಾಣ ಮಾಡಲಾಗಿದೆ. 1996 ರಲ್ಲಿ ಪ್ರೌಢ ಶಾಲೆಗೆ ಮನವಿ ಸಲ್ಲಿಸಿ, ಪ್ರೌಢಶಾಲೆಯೂ ನಿರ್ಮಾಣವಾಗಿದೆ. 2012ರಲ್ಲಿ ಊರ ವರ ನೇತೃ ತ್ವದಲ್ಲಿ ಶತಮಾನೋತ್ಸವ ನೆನಪಿಗಾಗಿ ಆವರಣ ಗೋಡೆ ಪುನರ್‌ ನಿರ್ಮಾಣ ಮಾಡಲಾಗಿದೆ.

ಶಾಲೆಯ ಶೈಕ್ಷಣಿಕ ಸಾಧನೆ
ಭಾರತ್‌ ಸ್ಕೌಟ್‌-ಗೈಡ್ಸ್‌, ಸೇವಾದಳ, ಚಿತ್ರಕಲೆ, ಇಂಗ್ಲಿಷ್‌ ಪಾಠ ಮುಂತಾದ ವಿಷಯಗಳಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ. ತಿಂಗಳಿಗೊಮ್ಮೆ ವಿದ್ಯಾರ್ಥಿಗಳ ಮಂತ್ರಿ ಮಂಡಲ, ಯೋಗ ತರಬೇತಿ ಸಹಿತ ವಿವಿಧ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಸೈ ಎನಿಸಿಕೊಂಡಿದ್ದಾರೆ.
ಮೂಡುಶೆಡ್ಡೆ ಶಾಲೆಯ ವಿದ್ಯಾರ್ಥಿಗಳು ಈಗಾಗಲೇ ಕ್ರೀಡಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಖೋ-ಖೋ, ಚದುರಂಗ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ತಾಲೂಕು, ಜಿಲ್ಲಾ ಮಟ್ಟದಲ್ಲಿ ಸಾಧನೆಗೈದಿದ್ದಾರೆ. 2019ರ ಸಾಲಿನ ಕ್ರೀಡಾಕೂಟದಲ್ಲಿ ತಾಲೂಕು ಮಟ್ಟದಲ್ಲಿ ಶಾಲಾ ವಿದ್ಯಾರ್ಥಿಗಳ ತಂಡ ಪ್ರಶಸ್ತಿ ಪಡೆದಿದೆ.

ಬಡ ಮಕ್ಕಳಿಗೆ ಪುಸ್ತಕ ವಿತರಣೆ
ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕಿರಣ್‌ ಶೆಟ್ಟಿ ಅವರು “ಸುದಿನ’ಕ್ಕೆ ಪ್ರತಿಕ್ರಿಯಿಸಿ “ಸುತ್ತಮುತ್ತಲ ವಿದ್ಯಾರ್ಥಿಗಳು ಹೆಚ್ಚಾಗಿ ಆಂಗ್ಲ ಮಾಧ್ಯಮ ಶಾಲೆಗೆ ಹೋಗುತ್ತಿದ್ದಾರೆ. ಈಗ ಮೂಡುಶೆಡ್ಡೆ ಶಾಲೆಯಲ್ಲಿಯೂ ಆಂಗ್ಲ ಮಾಧ್ಯಮ ಕಲಿಕೆ ಆರಂಭವಾಗಿದ್ದು, ಮುಂದಿನ ವರ್ಷ ಶಾಲಾ ಆರಂಭಕ್ಕೂ ಮುನ್ನ ವಿದ್ಯಾರ್ಥಿಗಳಿಗೆ ಈ ಬಗ್ಗೆ ಅರಿವು ಮೂಡಿಸುತ್ತೇವೆ. ಅಲ್ಲದೆ, ಹಳೆ ವಿದ್ಯಾರ್ಥಿ ಸಂಘ ಮತ್ತು ಶಾಲಾ ವಾರ್ಷಿಕೋತ್ಸವ ಜಂಟಿಯಾಗಿ ನಡೆಯುತ್ತದೆ. ಬಡ ಮಕ್ಕಳಿಗೆ ಬಟ್ಟೆ, ಪಾಠ ಪುಸ್ತಕಗಳ ವಿತರಣೆ ನಡೆಸುತ್ತೇವೆ’ ಎಂದಿದ್ದಾರೆ.

ಶಾಲೆ ಯಲ್ಲಿ ಈಗಾ ಗಲೇ ಮೂಲ ಸೌಕರ್ಯ ಇದೆ. ಶಾಲೆಯ ಅಭಿವೃದ್ಧಿಯಲ್ಲಿ ಊರಿನವರ, ಹಳೆ ವಿದ್ಯಾರ್ಥಿಗಳ ಎಸ್‌ಡಿಎಂಸಿ, ಶಿಕ್ಷಕರ, ದಾನಿಗಳ ಸಹಿಭಾಗಿತ್ವ ಇದ್ದು, ಶೈಕ್ಷಣಿಕ ಮತ್ತು ಕ್ರೀಡಾರಂಗದಲ್ಲಿ ಶಾಲೆಯು ಪ್ರಗತಿ ಸಾಧಿಸಿದೆ.
-ಸುಬ್ರಾಯ ಪೈ ಎನ್‌., ಮುಖ್ಯ ಶಿಕ್ಷಕ

ನಾನು ಕಲಿಯುವ ಸಮಯದಲ್ಲಿ ಇಂದಿನ ಯಾವುದೇ ಆಂಗ್ಲ ಮಾಧ್ಯಮ ಶಾಲೆಗಿಂತ ಕನ್ನಡ ಶಾಲೆ ಕಡಿಮೆ ಇರಲಿಲ್ಲ. ಒಂದೊಂದು ತರಗತಿಗೆ ಒಬ್ಬೊಬ್ಬರಂತೆ ಶಿಕ್ಷಕರು ಇದ್ದರು. ಉದ್ಯೋಗ ಕ್ಷೇತ್ರದಲ್ಲಿ ನಾನು ಈ ಮಟ್ಟಕ್ಕೆ ತಲುಪಲು ಮೂಡುಶೆಡ್ಡೆ ಶಾಲೆ ಕೂಡ ಪ್ರಮುಖ ಕಾರಣ.
– ಶ್ರೀನಿವಾಸ ಉಡುಪ, ಹಳೆ ವಿದ್ಯಾರ್ಥಿ

-ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next