ಶನಿವಾರ ಬಂತೆಂದರೆ ನಂಜನಗೂಡಿನ ಹೆಗ್ಗಡಹಳ್ಳಿ ಶಾಲೆಯ ಮಕ್ಕಳು ಪೇಪರ್ ಕವರ್ ಮಾಡುತ್ತಾರೆ. ಅದನ್ನು ಮನೆಗೆ ತೆಗೆದುಕೊಂಡು ಹೋಗುವುದಿಲ್ಲ. ಬದಲಾಗಿ, ” ಇನ್ನು ಮೇಲೆ ನೀವು ಪ್ಲಾಸ್ಟಿಕ್ ಬಳಸಬೇಡಿ. ಇದನ್ನು ಬಳಸಿ. ತಗೊಳ್ಳಿ’ ಅಂತ ಊರ ಮುಂದಿನ ಅಂಗಡಿಗಳಿಗೆ ಕೊಟ್ಟು ಬರುತ್ತಾರೆ. ಹೀಗೆ ಕೊಟ್ಟಾಗ ಅಂಗಡಿಯವರಿಗೆ ಕಸಿವಿಸಿ ಆಗೋದು ಗ್ಯಾರಂಟಿ.
ನಾವು ಮಾಡಬೇಕಾದ ಕಾರ್ಯವನ್ನು ಮಕ್ಕಳು ಮಾಡುತ್ತಿದ್ದಾರಲ್ಲ ಅಂತ. ಹೀಗೆ, ಹೆಗ್ಗಡಹಳ್ಳಿಯ 9-10ನೇ ತರಗತಿ 160ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈಗ ಪ್ಲಾಸ್ಟಿಕ್ ವಿರುದ್ಧ ತಿರುಗಿ ಬಿದ್ದಿದ್ದಾರೆ.
ಪ್ಲಾಸ್ಟಿಕ್ ಬಳಸಿದರೆ ಏನೇನಾಗುತ್ತದೆ, ಆರೋಗ್ಯದ ಮೇಲೆ ಯಾವ ರೀತಿ ದುಷ್ಪರಿಣಾಮ ಬೀರುತ್ತದೆ ಅನ್ನೋದನ್ನೆಲ್ಲಾ ಈ ಹುಡುಗರು ಅರೆದು ಕುಡಿದಿದ್ದಾರೆ. ಇದಕ್ಕೆಲ್ಲಾ ಕಾರಣ, ನಾಟಕದ ಮೇಷ್ಟ್ರು ಸಂತೋಷ್ ಗುಡ್ಡಿಯಂಗಡಿ. ಅವರು ವಿಜ್ಞಾನ ನಾಟಕ ಮಾಡಿಸುವಾಗ ಪ್ಲಾಸ್ಟಿಕ್ ಪರಿಣಾಮದ ಬಗ್ಗೆ ತಿಳಿಹೇಳಿದರು. ಇಷ್ಟೇ ಆದರೆ ಪ್ರಯೋಜನವಿಲ್ಲ. ನಾಟಕದ ನಂತರ ಮಕ್ಕಳೂ ಮರೆಯಬಹುದು ಅಂತ ವಿದ್ಯಾರ್ಥಿಗಳಿಗೆ ಅವರವರ ಮನೆಯಲ್ಲಿ ಬಳಸುವ ಪ್ಲಾಸ್ಟಿಕ್ ಅನ್ನು ತರಲು ಹೇಳಿದರು. ಹೀಗೆ ತಂದ ಪ್ಲಾಸ್ಟಿಕ್ ಅನ್ನು ಶಾಲೆಯ ಒಂದು ರೂಮಿನಲ್ಲಿ ಗುಡ್ಡೆ ಹಾಕಿ, ಆಯಾ ಕಂಪನಿ ಆಧರಿಸಿ ವಾರಕ್ಕೆ ಒಂದು ದಿನ ಬೇರ್ಪಡಿಸುತ್ತಾರೆ. ನಂತರ ಕಂಪನಿಗಳ ಪಟ್ಟಿ ಮಾಡಿ, ವಿಳಾಸ ಹುಡುಕಿ, ಆಯಾ ಕಂಪನಿಗಳಿಗೆ “ನಿಮ್ಮ ಕಂಪನಿಯಿಂದ ತಿಂಗಳಿಗೆ ಇಷ್ಟು ಪ್ಲಾಸ್ಟಿಕ್ ಬಳಕೆಯಾಗುತ್ತಿದೆ. ಇದರಿಂದ ಪರಿಸರದ ಮೇಲೆ ಕೆಟ್ಟ ಪರಿಣಾಮ ಆಗುತ್ತಿದೆ. ಹೀಗೆ ಮಾಡಿದರೆ ಮುಂದಿನ ನಮ್ಮ ಜನಾಂಗದ ಗತಿ ಏನು? ‘ ಅಂತ ಪ್ರಶ್ನೆ ಮಾಡಿ ಪತ್ರ ಬರೆದರು. ಹೀಗೆ, ಪತ್ರ ಬರೆಯಲು ಶುರುಮಾಡಿಯೇ 6 ತಿಂಗಳಾಯಿತು. ಈ ವರಗೆ 30ಕ್ಕೂ ಹೆಚ್ಚು ಕಂಪನಿಗಳಿಗೆ ಪತ್ರಗಳು ಹೋಗಿವೆ. ಅದರಲ್ಲಿ ಕೋಲ್ಗೆಟ್ ಕಂಪನಿ ಎಚ್ಚೆತ್ತುಕೊಂಡು, ಶಾಲೆಗೆ ಪತ್ರಹಾಕಿ. “2025 ರ ಒಳಗಾಗಿ ನಾವು ಪ್ಲಾಸ್ಟಿಕ್ ಮರು ಬಳಕೆಗೆ ಯೋಜಿಸಿದ್ದೇವೆ. ನಿಮ್ಮ ಕಾಳಜಿಗೆ ಧನ್ಯವಾದ’ ಅಂತ ಮರು ಪತ್ರ ಬರೆದಿದೆಯಂತೆ.
ಇಷ್ಟೆಲ್ಲಾ ಹೇಗೆ ಸಾಧ್ಯ?
ಈ ನಾಟಕದ ಮೇಷ್ಟ್ರದೇ ಕೈವಾಡ. ಅವರು ವಿದ್ಯಾರ್ಥಿಗಳಿಗೆ ಪ್ಲಾಸ್ಟಿಕ್ ಪರಿಣಾಮದ ವೀಡಿಯೋ ತೋರಿಸಿದ್ದಾರೆ. ರುವಾಂಡದಲ್ಲಿ ಪ್ಲಾಸ್ಟಿಕ್ ಬಳಕೆಯನ್ನ ಉಗ್ರವಾಗಿ ವಿರೋಧಿಸಿದ್ದರಿಂದ ಗಳಿಸಿರುವ ಆರೋಗ್ಯಭಾಗ್ಯದ ಬಗ್ಗೆ ತಿಳಿ ಹೇಳಿದ್ದಾರೆ. ಹೀಗಾಗಿ, 160 ವಿದ್ಯಾರ್ಥಿಗಳಲ್ಲಿ ಪ್ಲಾಸ್ಟಿಕ್ ದುಷ್ಪರಿಣಾಮಗಳ ಬಗ್ಗೆ ಇರಿವು ಮೂಡಿದೆ. ಇದು ಯಾವ ಮಟ್ಟಕ್ಕೆ ಪರಿಣಾಮ ಬೀರಿದೆ ಎಂದರೆ, ಶಾಲೆಗೆ ಬರುವಾಗ ರಸ್ತೆಯಲ್ಲಿ ಸಿಗುವ ಪ್ಲಾಸ್ಟಿಕ್ ತಂದು ಶಾಲೆಗೆ ಹಾಕುತ್ತಾರೆ. ನಂತರ ಅದನ್ನು ವಿಂಗಡಿಸಿ, ಚರ್ಚೆ ಮಾಡಿ, ಮೇಷ್ಟ್ರ ಜೊತೆ ಸೇರಿ ಕಂಪನಿಗೆ ಪತ್ರ ಬರೆಯುತ್ತಿದ್ದಾರೆ.
ಮಕ್ಕಳು ಬರೆದ ಪತ್ರವನ್ನು ಕೊರಿಯರ್ ಮೂಲಕ ಕಳುಹಿಸುತ್ತಿದ್ದೆವು. ಅದಕ್ಕೆ ಖರ್ಚು ಹೆಚ್ಚಾಗುತ್ತದೆ. ಹೀಗಾಗಿ, ರಿಜಿಸ್ಟರ್ ಪೋಸ್ಟ್ ಮಾಡುತ್ತಿದ್ದೇವೆ ಎನ್ನುತ್ತಾರೆ ಸಂತೋಷ್.
ಅಂದಹಾಗೆ, ಈಗ ಪ್ರಧಾನಿಗಳಿಗೂ, ಮುಖ್ಯಮಂತ್ರಿಗಳಿಗೂ ಪತ್ರ ಬರೆದಿದ್ದಾರಂತೆ. ಇವರ ಈ ಚಟುವಟಿಕೆಗಳಿಂದ ಸ್ಥಳೀಯ ಸರ್ಕಾರಿ ಯಂತ್ರಗಳೂ ಚುರುಕುಗೊಂಡಿವೆ. ಇಂಥ ಚಟುವಟಿಕೆಗಳು ನಡೆಯೋದು ಕೂಡ ಸರ್ಕಾರಿ ಶಾಲೇಲಿ ಮಾತ್ರ ಅನ್ನೋದೇ ಹೆಮ್ಮೆ.