Advertisement

ಅಂದಿನ ಕಾಲದಲ್ಲೇ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುತ್ತಿದ್ದ ಶಾಲೆ

09:59 AM Nov 15, 2019 | mahesh |

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

Advertisement

1990 ಶಾಲೆ ಆರಂಭ
ಪ್ರಸ್ತುತ 120 ವಿದ್ಯಾರ್ಥಿಗಳು

ಕಡಬ: ಸ್ವಾತಂತ್ರ್ಯ ಪೂರ್ವದಲ್ಲಿ ಪರಿಸರದ ಮಕ್ಕಳಿಗೆ ಶಿಕ್ಷಣ ನೀಡಬೇಕೆನ್ನುವ ಸದುದ್ದೇಶದಿಂದ ಸಾಮಾಜಿಕ ಮುಂದಾಳು, ಕೊಡುಗೈ ದಾನಿ ಮರ್ದಾಳ ಬೀಡು ದಿ| ತಿಮ್ಮಯ್ಯ ಕೊಂಡೆ ಅವರು 1900ನೇ ಇಸವಿಯ ಸುಮಾರಿಗೆ ತಮ್ಮ ಮನೆಯ ಒಂದು ಪಾರ್ಶ್ವದಲ್ಲಿ ಶಾಲೆಯನ್ನು ಆರಂಭಿಸಿದ್ದರು. ಅದೇ ಶಾಲೆ ಬಳಿಕ ಮರ್ದಾಳ ಪೇಟೆಗೆ ಸ್ಥಳಾಂತರಗೊಂಡಿತ್ತು. ಈ ಶಾಲೆಗೆ ಒಟ್ಟು 1.84 ಎಕ್ರೆ ಜಮೀನು ಇದೆ.

ಮರ್ದಾಳ ಬೀಡಿನಲ್ಲಿ ಆರಂಭ
ಮರ್ದಾಳ ಬೀಡು ಜೈನ ಮನೆತನದ ಪ್ರತಿಷ್ಠಿತ ಮನೆ. ಅಂದಿನ ಕಾಲದಲ್ಲಿ ಬಡತನದ ಕಾರಣದಿಂದಾಗಿ ಮಕ್ಕಳನ್ನು ಶಾಲೆಗೆ ಕಳುಹಿಸುವ ಆಸಕ್ತಿ ಊರ ಜನರಿಗಿರಲಿಲ್ಲ. ಆಗ ಮನೆಯಲ್ಲಿಯೇ ಶಾಲೆಗೆಂದು ಬರುತ್ತಿದ್ದ ಮಕ್ಕಳಿಗೆ ಬಿಸಿಯೂಟದ ವ್ಯವಸ್ಥೆ ಮಾಡಿದ್ದ ಹೆಗ್ಗಳಿಗೆ ದಿ| ತಿಮ್ಮಯ್ಯ ಕೊಂಡೆ ಅವರದ್ದು. ಹಲವು ವರ್ಷಗಳ ಕಾಲ ಶಾಲೆಯು ಬೀಡಿನಲ್ಲಿಯೇ ನಡೆಯಿತು. ಬಳಿಕ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆಯೇ ಗ್ರಾಮದ ಕೇಂದ್ರ ಸ್ಥಾನವಾಗಿದ್ದ ಮರ್ದಾಳ ಪೇಟೆಯಲ್ಲಿ ತಮ್ಮದೇ ಜಾಗದಲ್ಲಿ ಶಾಲೆಗಾಗಿ ಕಟ್ಟಡ ನಿರ್ಮಿಸಿ ಅಲ್ಲಿಗೆ ಶಾಲೆಯನ್ನು ಸ್ಥಳಾಂತರಿಸಿ ಹಲವು ವರ್ಷ ಮುನ್ನಡೆಸಿದರು.

ಅನಂತರದಲ್ಲಿ ಅವರ ತಮ್ಮನ ಮಗ ದಿ| ಶೇಷಪ್ಪ ಆರಿಗ ಜೈನ್‌ ಅವರು ಶಾಲೆಯ ಜವಾಬ್ದಾರಿಯನ್ನು ವಹಿಸಿಕೊಂಡು ಸುಸೂತ್ರವಾಗಿ ಮುನ್ನಡೆಸಿ 1960ರ ಸುಮಾರಿಗೆ ಜಿಲ್ಲಾ ಬೋರ್ಡ್‌ಗೆ ಬಿಟ್ಟುಕೊಟ್ಟರು. ಜಿಲ್ಲಾ ಬೋರ್ಡ್‌ ಕಟ್ಟಡ ಮತ್ತು ಸ್ಥಳದ ಮೌಲ್ಯವೆಂದು ಆ ಕಾಲದ 6 ಸಾವಿರ ರೂ. ಅನ್ನು ನೀಡುತ್ತೇವೆಂದು ತಿಳಿಸಿದರೂ, ಆ ಹಣವನ್ನು ಪಡೆಯದೇ ಸ್ಥಳವನ್ನು ದಾನ ಮಾಡಿದರು. 1996ರಲ್ಲಿ ಶಾಲೆಯು ಹಿರಿಯ ಪ್ರಾಥಮಿಕ ಶಾಲೆಯಾಗಿ ಮೇಲ್ದರ್ಜೆಗೇರಿದಾಗ ಹೊಸ ಕಟ್ಟಡಕ್ಕೆ ಮತ್ತಷ್ಟು ಸ್ಥಳದಾನ ಮಾಡುವ ಮೂಲಕ ಶೇಷಪ್ಪ ಆರಿಗ ಜೈನ್‌ ಅವರು ಕಾಯವಳಿದರೂ ಕೀರ್ತಿ ಉಳಿಯುವುದು ಎನ್ನುವ ಮಾತಿನಂತೆ ಊರ ಜನಮಾನಸದಲ್ಲಿ ಅಮರರಾಗಿದ್ದಾರೆ.

Advertisement

ಮೂಲ ಸೌಕರ್ಯಗಳು
ಜನಪ್ರತಿನಿಧಿಗಳು, ರೋಟರಿ ಸಂಸ್ಥೆ ಹಾಗೂ ದಾನಿಗಳ ನೆರವಿನಿಂದ ಶಾಲೆಗೆ ವಿದ್ಯುನ್ಮಾನ ಕಲಿಕಾ ಘಟಕ, ಶಾಲಾ ಆವರಣ ಗೋಡೆ ನಿರ್ಮಾಣ, ಇಂಟರ್‌ಲಾಕ್‌ ಅಳವಡಿಕೆ, ಧ್ವನಿವರ್ಧಕ ವ್ಯವಸ್ಥೆ, ಕಂಪ್ಯೂಟರ್‌, ಶುದ್ಧ ಕುಡಿಯುವ ನೀರಿನ ಘಟಕ, ಶಾಲಾ ಕಟ್ಟಡ ದುರಸ್ತಿ, ವರ್ಲಿ ಚಿತ್ರ ರಚನೆ, ಮಳೆ ಕೊಯ್ಲು ಮುಂತಾದ ವ್ಯವಸ್ಥೆಗಳಾಗಿವೆ. ಶತಮಾನೋತ್ಸವ ಸಮಿತಿ ಅಧ್ಯಕ್ಷರಾಗಿದ್ದ ಸ್ಥಳೀಯ ಯುವ ಉದ್ಯಮಿ ಶಿವಪ್ರಸಾದ್‌ ಕೈಕುರೆ ಅವರು ತನ್ನ ತಂದೆ ದಿ| ಬಾಬು ಗೌಡ ಕೈಕುರೆ ಅವರ ಸ್ಮರಣಾರ್ಥ ಶಾಲೆಗೆ ನಿರ್ಮಿಸಿಕೊಟ್ಟ ಸುಂದರ ಪ್ರವೇಶ ದ್ವಾರ ಶಾಲೆಯ ಮೆರುಗನ್ನು ಹೆಚ್ಚಿಸಿದೆ. ಮಂಗಳೂರಿನ ಲೆಸ್ಲಿ ಗೋವಿಯಸ್‌ ಅವರು ಶಾಲೆಗೆ ರಂಗಮಂದಿರವನ್ನು ಕೊಡುಗೆಯಾಗಿ ನಿರ್ಮಿಸಿ ಕೊಟ್ಟಿದ್ದಾರೆ. ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ಟೈಲರಿಂಗ್‌, ಕಂಪ್ಯೂಟರ್‌, ಕರಕುಶಲ ವಸ್ತುಗಳ ತಯಾರಿಕೆ, ಸ್ಕೌಟ್ಸ್‌, ಗೈಡ್ಸ್‌ ಇತ್ಯಾದಿ ತರಬೇತಿಗಳನ್ನೂ ನೀಡಲಾಗುತ್ತಿದೆ. ಈ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿದ್ದ ಗಣಪತಿ ಭಟ್‌ ಹಾಗೂ ಪ್ರಸ್ತುತ ಸೇವೆ ಸಲ್ಲಿಸುತ್ತಿರುವ ರಾಮಕೃಷ್ಣ ಮಲ್ಲಾರ ಅವರಿಗೆ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ದೊರೆತಿರುವುದು ಶಾಲೆಗೆ ಹಿರಿಮೆಗೆ ಮತ್ತೂಂದು ಗರಿಯನ್ನು ಮೂಡಿಸಿದೆ.

ಮುಖ್ಯ ಶಿಕ್ಷಕರು
ಶಾಲೆ ಆರಂಭಗೊಂಡ ಕೆಲ ಸಮಯ ದಿ| ತಿಮ್ಮಯ್ಯ ಕೊಂಡೆಯವರೇ ಪಾಠ ಹೇಳಿಕೊಡುತ್ತಿದ್ದರು. ಬಳಿಕ ಕೊಲ್ಯ ಸುಬ್ರಾಯ ಗೌಡರನ್ನು ಶಿಕ್ಷಕರಾಗಿ, ಮುಖ್ಯ ಶಿಕ್ಷಕರಾಗಿ ನೇಮಿಸಿಕೊಳ್ಳಲಾಯಿತು. ಶಾಲೆಯು ಮರ್ದಾಳಕ್ಕೆ ಸ್ಥಳಾಂತರಗೊಂಡ ಬಳಿಕವೂ ಹಲವು ವರ್ಷ ಸುಬ್ರಾಯ ಗೌಡರೇ ಮುಖ್ಯ ಶಿಕ್ಷಕರಾಗಿದ್ದರು. ಬಳಿಕ ಕುಕ್ಕಣ್ಣ ಮಾಸ್ಟ್ರೆ, ನೆಲ್ಸನ್‌ ಕಡಬ, ಬಾಲಣ್ಣ ಗೌಡ ಪಣೆಮಜಲು, ಅಚ್ಯುತ ಗೌಡ ಪಣೆಮಜಲು, ವಿಲಿಯಂ ಡಿ’ಸೋಜಾ, ಮೋನಪ್ಪ ಗೌಡ ಬಿಳಿನೆಲೆ ಬೈಲು, ನಾರಾಯಣ ರಾವ್‌ ವೇಣೂರು, ಧರ್ಮರಾಜ ಇಂದ್ರ ಮರ್ದಾಳ, ಪದ್ಮಯ್ಯ ಗೌಡ ಆರಿಗ, ವಿ.ಎಂ. ಕುರಿಯನ್‌, ಗಣಪತಿ ಭಟ್‌ ಕೋಡಿಂಬಾಳ, ಜನಾರ್ದನ ಗೌಡ ಪಣೆಮಜಲು ಮುಖ್ಯಶಿಕ್ಷಕರಾಗಿ ದ್ದರು. ಪ್ರಸ್ತುತ ದೇವಕಿ ಮುಖ್ಯ ಶಿಕ್ಷಕಿಯಾಗಿದ್ದಾರೆ.

ನಮ್ಮ ಮರ್ದಾಳ ಬೀಡು ಮನೆಯಲ್ಲಿ ಆರಂಭಗೊಂಡ ಈ ಶಾಲೆ ಸಾವಿರಾರು ಮಂದಿಗೆ ಶಿಕ್ಷಣ ನೀಡಿ ಅವರ ಬಾಳನ್ನು ಬೆಳಗಿಸಿರುವುದು ದೊಡ್ಡ ಸಾಧನೆ. ಹಿರಿಯರು ಗ್ರಾಮೀಣ ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡುವ ಉದ್ದೇಶದಿಂದ ತಮ್ಮ ಖರ್ಚಿನಲ್ಲಿ ಶಿಕ್ಷಕರಿಗೆ ಊಟ ವಸತಿ ನೀಡಿ ಆರಂಭಿಸಿದ ಈ ಶಿಕ್ಷಣ ಸಂಸ್ಥೆ ಇಂದು ಎಲ್ಲರ ಸಹಕಾರ ದೊಂದಿಗೆ ಬೃಹದಾಕಾರವಾಗಿ ಬೆಳೆದು ಶತಮಾನೋತ್ಸವವನ್ನು ಸಂಭ್ರಮದಿಂದ ಆಚರಿಸಿಕೊಂಡಿರುವುದು ಸಂತಸದ ಸಂಗತಿ.
-ಶಾರದಾ ಜಯಕುಮಾರ್‌ , ಮರ್ದಾಳಬೀಡು

ಹಳ್ಳಿಯ ಬಡ ಮಕ್ಕಳು ಕೂಡ ಉತ್ತಮ ಶಿಕ್ಷಣ ಪಡೆಯಬೇಕೆಂಬ ಉದ್ದೇಶದಿಂದ ಮರ್ದಾಳ ಬೀಡು ದಿ| ತಿಮ್ಮಯ್ಯ ಕೊಂಡೆಯವರು ಆರಂಭಿಸಿದ ಈ ಶಾಲೆ ಹಂತ ಹಂತವಾಗಿ ಅಭಿವೃದ್ಧಿ ಹೊಂದಿ ಪರಿಸರದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಕೆಲ ವರ್ಷಗಳ ಹಿಂದೆ ಶತಮಾನೋತ್ಸವ ಸಂಭ್ರಮವನ್ನು ಅದ್ದೂರಿಯಾಗಿ ಆಚರಿಸಿರುವುದು ಹೆಮ್ಮೆಯ ಸಂಗತಿಯಾಗಿದೆ. ಇಂತಹ ಶಾಲೆಯಲ್ಲಿ ಸೇವೆ ಸಲ್ಲಿಸಲು ಅವಕಾಶ ಲಭಿಸಿರುವುದು ನಮ್ಮ ಪೂರ್ವ ಜನ್ಮದ ಪುಣ್ಯವೇ ಸರಿ.
– ದೇವಕಿ, ಮುಖ್ಯ ಶಿಕ್ಷಕಿ

– ನಾಗರಾಜ್‌ ಎನ್‌.ಕೆ.

Advertisement

Udayavani is now on Telegram. Click here to join our channel and stay updated with the latest news.

Next