Advertisement

ಸರ್ವರ ಸಹಕಾರ, ಗುಣಮಟ್ಟದ ಶಿಕ್ಷಣದಿಂದ ಶಾಲೆಯೇ ಸ್ಮಾರ್ಟ್‌

07:55 PM Jun 19, 2019 | mahesh |

ಬಂಟ್ವಾಳ: ಶಿಕ್ಷಕರು ಹಾಗೂ ಹೆತ್ತವರಲ್ಲಿ ಇಚ್ಛಾಶಕ್ತಿಯಿದ್ದರೆ ಸರಕಾರಿ ಶಾಲೆಯೂ ಖಾಸಗಿ ಶಾಲೆಗಳನ್ನು ಮೀರಿ ಬೆಳೆಯುತ್ತದೆ ಎಂಬುದಕ್ಕೆ ಸಿದ್ದಕಟ್ಟೆಯ ಸರಕಾರಿ ಪ್ರೌಢಶಾಲೆ ಉತ್ತಮ ನಿದರ್ಶನ. ಇಲ್ಲಿನ ಪ್ರತಿ ತರಗತಿಯೂ ಸ್ಮಾರ್ಟ್‌ ಕ್ಲಾಸ್‌ ಆಗಿದ್ದು, ಇಡೀ ಶಾಲೆಯೇ ಸ್ಮಾರ್ಟ್‌ ಶಾಲೆಯಾಗಿ ಕಂಗೊಳಿಸುತ್ತಿದೆ.

Advertisement

ಸ್ಮಾರ್ಟ್‌ ಕ್ಲಾಸ್‌ ಜತೆಗೆ ಶಾಲೆಯ ಕೈತೋಟ, ಪ್ರಯೋಗಾಲಯಗಳು, ಶಾಲಾ ಡೈರಿ, ಸೋಲಾರ್‌ ಘಟಕ ಹೀಗೆ ಎಲ್ಲ ವಿಭಾಗಗಳಲ್ಲೂ ಯಶಸ್ಸು ಸಾಧಿಸಿದೆ. ಶಾಲೆಯಲ್ಲಿ ಒಟ್ಟು 202 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, 8, 9, 10ನೇ ತರಗತಿಗಳಿದ್ದು, ಇದರಲ್ಲಿ 9 ಮತ್ತು 10ನೇ ತರಗತಿಯಲ್ಲಿ ಎ ಮತ್ತು ಬಿ ಘಟಕಗಳಿವೆ.

5 ತರಗತಿಗಳಲ್ಲೂ ಎಲ್‌ಇಡಿ ಟಿವಿಗಳ ಮೂಲಕ ಶಿಕ್ಷಕರು ಬೋಧನೆ ಮಾಡುವ ವ್ಯವಸ್ಥೆಯಿದೆ. ಪ್ರಸ್ತುತ ಮಣಿಪಾಲ ಅಕಾಡೆಮಿಯಿಂದ ಇ-ತರಗತಿ ವ್ಯವಸ್ಥೆ ಲಭ್ಯವಾಗಿದ್ದು, ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ನೇರವಾಗಿ ಅಲ್ಲಿಂದಲೇ ಗಣಿತ, ವಿಜ್ಞಾನ, ಇಂಗ್ಲಿಷ್‌ ತರಗತಿಗಳನ್ನು ಬೋಧಿಸಲಾಗುತ್ತದೆ. ಶಾಲೆಯಲ್ಲಿ ಈ ವರ್ಷ ಸುಸಜ್ಜಿತ ಕಂಪ್ಯೂಟರ್‌ ಲ್ಯಾಬ್‌ ಕೂಡ ಅನುಷ್ಠಾನಗೊಳಲಿದ್ದು, ಬಳಿಕ ಕಂಪ್ಯೂಟರ್‌ ಶಿಕ್ಷಣವೂ ಲಭಿಸಲಿದೆ.

ಸಿಸಿ ಕೆಮರಾ
ಎನ್‌ಎಸ್‌ಕ್ಯುಎಫ್‌ನಿಂದ ಅಟೋ ಮೊಬೈಲ್‌, ಸೌಂದರ್ಯ ಮತ್ತು ಆರೋಗ್ಯ ವರ್ಧನೆ ಕೋರ್ಸ್‌ ನಡೆಯುತ್ತಿದ್ದು, 9ನೇ ತರಗತಿ ಬಳಿಕ ವಿದ್ಯಾರ್ಥಿ ಗಳು ಹಿಂದಿ ಬದಲು ಇದನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ. ಶಾಲೆಯಲ್ಲಿ ಎನ್ನೆಸ್ಸೆಸ್‌ ಘಟಕವೂ ಸಕ್ರೀಯವಾಗಿ ಕಾರ್ಯಾಚರಿ ಸುತ್ತಿದೆ. ಶಾಲೆಯ ತರಗತಿ, ಆವರಣ ಸಿಸಿ ಕೆಮರಾ ಕಣ್ಗಾವಲಿನಲ್ಲಿದೆ.

ಸುತ್ತಲೂ ಹಚ್ಚಹಸುರು
ಶಾಲೆಯನ್ನು ಪ್ರವೇಶಿಸುತ್ತಿದ್ದಂತೆ ಅಲ್ಲಿನ ಕೈತೋಟ ನಮ್ಮನ್ನು ಸ್ವಾಗತಿಸುತ್ತದೆ. ಬಗೆ ಬಗೆಯ ಔಷಧೀಯ ಗಿಡಗಳನ್ನು ನೆಡಲಾಗಿದ್ದು, ಅವುಗಳಿಗೆ ಗಣಿತದ ಆಕೃತಿಗಳನ್ನು ಹೋಲುವ ಕಟ್ಟೆ ನಿರ್ಮಿಸಲಾಗಿದೆ. ಪ್ರತಿವರ್ಷವೂ ಶಾಲೆಯ ಒಂದು ಬದಿಯಲ್ಲಿ ತರಕಾರಿಗಳನ್ನು ಬೆಳೆಸಲಾಗುತ್ತಿದ್ದು, ಅವುಗಳನ್ನು ಮಧ್ಯಾಹ್ನದ ಬಿಸಿಯೂಟಕ್ಕೆ ಬಳಸಲಾಗುತ್ತದೆ.

Advertisement

ಶಾಲೆಯ ಹಿಂಬದಿ ಕಳೆದ ವರ್ಷ ಹತ್ತಾರು ಹಣ್ಣಿನ ಗಿಡಗಳನ್ನು ನೆಡಲಾಗಿದ್ದು, ಪ್ರಸ್ತುತ ಅವುಗಳು ಸೊಗಸಾಗಿ ಬೆಳೆದಿವೆ. ಮಳೆ ನೀರು ಕೊಯ್ಲು ಘಟಕವನ್ನೂ ಶಾಲೆಯಲ್ಲಿ ಅನುಷ್ಠಾನಗೊಳಿಸಲಾಗಿದ್ದು, ಒಂದು ಬದಿಯ ಕಟ್ಟಡದ ಮೇಲಿನ ನೀರು ಪೂರ್ತಿಯಾಗಿ ಶಾಲೆಯ ಬಾವಿಗೆ ಹರಿಯುತ್ತಿದೆ. ಈ ಬಾರಿ ಮತ್ತೂಂದು ಕಟ್ಟಡ ನೀರಿನ ಮೂಲಕ ಕೊಳವೆಬಾವಿ ಸಮೀಪ ಘಟಕವನ್ನು ಅನುಷ್ಠಾನಗೊಳಿಸಲಾಗುವುದು ಎಂದು ಮುಖ್ಯ ಶಿಕ್ಷಕರು ತಿಳಿಸಿದ್ದಾರೆ.

ವಿದೇಶಿಗರ ಭೇಟಿ; ಕೊಡುಗೆ
ಶಾಲೆಗೆ ಬಂಟ್ವಾಳ ರೋಟರಿ ಕ್ಲಬ್‌ನಿಂದ ಸಾಕಷ್ಟು ಕೊಡುಗೆಗಳು ಲಭ್ಯವಾಗಿದ್ದು, ಸ್ಮಾರ್ಟ್‌ ಕ್ಲಾಸ್‌ ಕೂಡಾ ಅದರದ್ದೇ ಕೊಡುಗೆಯಾಗಿದೆ. ಕಳೆದ ವರ್ಷ ಶಾಲೆಗೆ ರೈಟ್‌ ಫಾರ್‌ ರೋಟರಿಯ ಸುಮಾರು 12 ದೇಶಗಳ 25 ಮಂದಿಯ ತಂಡ ಶಾಲೆಗೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸುವ ಜತೆಗೆ, ಶಾಲೆಗೆ ಸಾಕಷ್ಟು ಅನುದಾನಗಳನ್ನು ನೀಡಿ ಸಹಕರಿಸಿದೆ. ಶಾಲೆಯ ಶಿಸ್ತು ಹಾಗೂ ಗುಣಮಟ್ಟ, ಇಂಟರ್ಯಾಕ್ಟ್ ಕ್ಲಬ್‌ ಪ್ರಥಮ ಸ್ಥಾನ ಪಡೆದ ಹಿನ್ನೆಲೆಯಲ್ಲಿ ನಾವು ಈ ಶಾಲೆಗೆ ಸಾಕಷ್ಟು ಕೊಡುಗೆಗಳನ್ನು ನೀಡುವಂತಾಗಿದೆ ಎಂದು ಬಂಟ್ವಾಳ ರೋಟರಿ ಕ್ಲಬ್‌ನ ನಿಯೋಜಿತ ಅಧ್ಯಕ್ಷೆ ಶಿವಾನಿ ಬಾಳಿಗಾ ಹೇಳಿದ್ದಾರೆ.

ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳ
ಖಾಸಗಿ ಶಾಲೆಯಲ್ಲಿ ನೀಡುವ ಶಿಕ್ಷಣವನ್ನು ಇಲ್ಲಿ ಉಚಿತವಾಗಿ ಪಡೆಯಬಹುದಾಗಿದೆ. ಶಾಲೆಯ ಎಲ್ಲ ತರಗತಿಗಳು ಸ್ಮಾರ್ಟ್‌ ಆಗಿದ್ದು, ವಿದ್ಯಾರ್ಥಿಗಳ ಸಂಖ್ಯೆಯೂ ಉತ್ತಮ ವಾಗಿದೆ. ಎಲ್ಲರ ಸಹಕಾರ ದಿಂದಲೇ ಶಾಲೆ ಅಭಿವೃದ್ಧಿ ಸಾಧ್ಯವಾಗಿದೆ.
– ರಮಾನಂದ ಉಪಪ್ರಾಂಶುಪಾಲರು (ಮುಖ್ಯ ಶಿಕ್ಷಕ)

 ಮುಖ್ಯ ಶಿಕ್ಷಕರ ಅವಿರತ ಶ್ರಮ
ಖಾಸಗಿ ಶಾಲೆಯಲ್ಲೂ ಸಿಗದ ಗುಣಮಟ್ಟದ ಶಿಕ್ಷಣ ನಮ್ಮಲ್ಲಿ ಸಿಗುತ್ತಿರುವುದು ಹೆಮ್ಮೆಯ ವಿಚಾರ. ಶಾಲೆಯ ಈ ಯಶಸ್ಸಿಗೆ ಮುಖ್ಯ ಶಿಕ್ಷಕರ ವಿಶೇಷ ಶ್ರಮವೇ ಕಾರಣ. ಹೀಗಾಗಿ ಎಲ್ಲ ದೃಷ್ಟಿಯಿಂದಲೂ ಶಾಲೆ ಮಾದರಿಯಾಗಿ ಬೆಳೆದಿದೆ.
– ಉಮೇಶ್‌ ಗೌಡ‌, ಎಸ್‌ಡಿಎಂಸಿ, ಉಪಾಧ್ಯಕ್ಷರು

-  ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next