Advertisement

ಶಿಕ್ಷಕರ ಸಮಸ್ಯೆ ಪರಿಹಾರಕ್ಕೆ ಜಿಲ್ಲಾದ್ಯಂತ ಶಾಲೆ ಬಂದ್‌

01:12 PM Jul 10, 2019 | Suhan S |

ಕೋಲಾರ: ಶಿಕ್ಷಕರ ವರ್ಗಾವಣೆ ನೀತಿ ಬದಲಾವಣೆ, ಪದವೀಧರ ಶಿಕ್ಷಕರ ಸಮಸ್ಯೆ ಪರಿಹಾರ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮಂಗಳವಾರ ಪ್ರಾಥಮಿಕ ಶಾಲಾ ಶಿಕ್ಷಕರು ಜಿಲ್ಲಾದ್ಯಂತ ಶಾಲೆಗಳನ್ನು ಬಂದ್‌ ಮಾಡಿ ಜಿಲ್ಲಾ ಮತ್ತು ತಾಲೂಕು ಸಂಘಗಳ ನೇತೃತ್ವದಲ್ಲಿ ಪ್ರತ್ಯೇಕವಾಗಿ ಬೃಹತ್‌ ಪ್ರತಿಭಟನೆ ನಡೆಸಿದರು.

Advertisement

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಜಗನ್ನಾಥ್‌ ನೇತೃತ್ವದಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳ ನೂರಾರು ಶಿಕ್ಷಕರು ನಗರದ ಡಿಡಿಪಿಐ ಕಚೇರಿ ಮುಂದೆ ಬೃಹತ್‌ ಪ್ರತಿಭಟನೆ ನಡೆಸಿದರೆ, ತಾಲೂಕು ಅಧ್ಯಕ್ಷ ಆರ್‌.ಅನಿಲ್ಕುಮಾರ್‌ ನೇತೃತ್ವದಲ್ಲಿ ನಗರದ ಬಿಇಒ ಕಚೇರಿ ಮುಂದೆ ಪ್ರತಿಭಟನೆ ನಡೆಸುವ ಮೂಲಕ ಶಿಕ್ಷಕ ಸಂಘಟನೆಗಳ ಭಿನ್ನಮತ ಬಹಿರಂಗಗೊಂಡಿತು.

ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹ: ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಕೆ.ವಿ.ಜಗನ್ನಾಥ್‌ ಪ್ರತಿಭಟನಾ ನಿರತ ಶಿಕ್ಷಕರನ್ನುದ್ದೇಶಿಸಿ ಮಾತನಾಡಿ, ಪ್ರಾಥಮಿಕ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹಾಲಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಪದವೀಧರ ಶಿಕ್ಷಕರೆಂದು ಪರಿಗಣಿಸಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ವೇತನ ಶ್ರೇಣಿ ನಿಗದಿ ಗೊಳಿಸಬೇಕು, ನೂತನ ಪಿಂಚಣಿ ಯೋಜನೆ ರದ್ದು ಗೊಳಿಸಿ ಹಳೆ ಪಿಂಚಣಿ ಯೋಜನೆ ಮುಂದುವರಿ ಸಬೇಕು ಎಂದು ಆಗ್ರಹಿಸಿದರು.

ಮೂರು ವರ್ಷಗಳ ನಂತರ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಶುರುವಾಗಿದ್ದು, ಈ ಪ್ರಕ್ರಿಯೆ ಮುಗಿದ ನಂತರ ಅಕ್ಟೋಬರ್‌ ತಿಂಗಳಲ್ಲಿ ಮತ್ತೂಮ್ಮೆ ಕೋರಿಕೆ ವರ್ಗಾವಣೆ ನಡೆಸಬೇಕು. ಶಿಕ್ಷಕರ ಹೆಚ್ಚುವರಿ ಪ್ರಕ್ರಿಯೆಯಲ್ಲಿರುವ ನ್ಯೂನ್ಯತೆ ಸರಿಪಡಿಸಿ ಪ್ರತಿ ವಿಷಯಕ್ಕೆ ಒಬ್ಬ ಶಿಕ್ಷಕರನ್ನು ಪರಿಗಣಿಸಬೇಕು. ಶಿಕ್ಷಕರ, ವಿದ್ಯಾರ್ಥಿ ಅನುಪಾತ ಗುರುತಿಸುವಾಗ ಮುಖ್ಯಶಿಕ್ಷಕ, ದೈಹಿಕ ಶಿಕ್ಷಣ ಶಿಕ್ಷಕರನ್ನು ಹೊರತುಪಡಿಸಿ ಹೆಚ್ಚುವರಿ ಪ್ರಕ್ರಿಯೆ ಆರಂಭಿಸಬೇಕು ಎಂದರು.

ಉಪನಿರ್ದೇಶಕರ ಹುದ್ದೆವರೆಗೆ ಬಡ್ತಿ: ರಾಜ್ಯದ ಎಲ್ಲಾ ಪ್ರಾಥಮಿಕ ಶಾಲೆಗಳಲ್ಲಿ ಎಲ್ಕೆಜಿ, ಯುಕೆಜಿ ಆರಂಭಿಸಬೇಕು, 6ನೇ ವೇತನ ಆಯೋಗದ ಅಂತಿಮ ವರದಿ ಶಿಫಾರಸಿನಂತೆ ಮುಖ್ಯ ಶಿಕ್ಷಕರಿಗೆ ಬಡ್ತಿ ನೀಡಬೇಕು ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಉಪನಿರ್ದೇಶಕರ ಹುದ್ದೆವರೆಗೆ ಬಡ್ತಿ ನೀಡಬೇಕು ಎಂದು ಒತ್ತಾಯಿಸಿದರು.

Advertisement

ಕಪ್ಪು ಪಟ್ಟಿ ಧರಿಸಿ ಹೋರಾಟ: ಗ್ರಾಮೀಣ ಕೃಪಾಂಕ ಶಿಕ್ಷಕರ ವಜಾ ಆದ ಸೇವೆಯನ್ನು ಸತತ ಸೇವೆ ಎಂದು ಪರಿಗಣಿಸಿ ಆರ್ಥಿಕ ಹಾಗೂ ಇನ್ನಿತರೆ ಸೇವಾ ಸೌಲಭ್ಯ ನೀಡಬೇಕು. ಬೇಡಿಕೆಗಳಿಗೆ ಸ್ಪಂದಿಸದಿದ್ದಲ್ಲಿ ರಾಜ್ಯಾದ್ಯಂತ ಸೆ.5ರ ಶಿಕ್ಷಕರ ದಿನಾಚರಣೆಯಂದು ಕಪ್ಪು ಪಟ್ಟಿ ಧರಿಸಿ ರಾಜ್ಯ ಮಟ್ಟದಲ್ಲಿ ಹೋರಾಟ ನಡೆಸಲಾಗುವುದು ಎಂದು ಪ್ರತಿಭಟನಾನಿರತರು ಎಚ್ಚರಿಕೆ ನೀಡಿದರು.

ಡಿಡಿಪಿಐ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ವಿ.ಜಗನ್ನಾಥ್‌, ಜಿಲ್ಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಜಿ.ಶ್ರೀನಿವಾಸ್‌, ಶಿಕ್ಷಕರ ಸಂಘದ ಜಿಲ್ಲಾ ಗೌರವಾಧ್ಯಕ್ಷ ವೆಂಕಟಶಿವಪ್ಪ, ಬಂಗಾರಪೇಟೆ ಸರಕಾರಿ ನೌಕರರ ಸಂಘದ ಅಧ್ಯಕ್ಷ ಅಪ್ಪಯ್ಯ, ವಿವಿಧ ಸಂಘಗಳ ಪದಾಕಾರಿಗಳಾದ ಜಿ.ಎನ್‌.ಗೋವಿಂದರೆಡ್ಡಿ. ಎಂ.ನಾಗರಾಜ್‌, ಪಿ.ಎಂ.ಕೃಷ್ಣಮೂರ್ತಿ, ವಿ.ತಿಪ್ಪಣ್ಣ, ವಿನೋದ್‌ಬಾಬು ಇತರರು ನೇತೃತ್ವ ವಹಿಸಿದ್ದರು.

ಬಿಇಒ ಕಚೇರಿ ಎದುರು ನಡೆದ ತಾಲೂಕು ಶಿಕ್ಷಕರ ಪ್ರತಿಭಟನೆಯಲ್ಲಿ ಸಂಘದ ತಾಲೂಕು ಅಧ್ಯಕ್ಷ ಆರ್‌.ಅನಿಲ್ಕುಮಾರ್‌, ಖಜಾಂಚಿ ಬಿ.ಸತೀಶ್‌, ಉಪಾಧ್ಯಕ್ಷ ಎನ್‌.ನಂಜುಂಡಗೌಡ, ವರಲಕ್ಷ್ಮೀ, ಸಹ ಕಾರ್ಯದರ್ಶಿಗಳಾದ ಅಯಾಜ್‌ ಅಹ್ಮದ್‌, ಪದ್ಮಮ್ಮ, ಸಂಘಟನಾ ಕಾರ್ಯದರ್ಶಿಗಳಾದ ಕೆ.ಸಿ.ಮುನಿರಾಜು, ಸೌಮ್ಯಾಲತಾ, ಮುಖಂಡ ಎಂ.ಎಸ್‌.ಶ್ರೀನಿವಾಸ್‌ ಮಾಗೇರಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next