ಮೊನ್ನೆ ಮನೆಯ ಮುಂದೆ ನಿಂತಿದ್ದಾಗ, ಒಬ್ಬ ಹುಡುಗನ ಕೈ ಕಾಲುಗಳನ್ನು ಹಿಡಿದುಕೊಂಡು, ಅವನಷ್ಟೇ ವಯಸ್ಸಿನ ಹುಡುಗರು ಹೊತ್ತೂಯ್ಯುತ್ತಿದ್ದರು. ಆ ಹುಡುಗ, ಅವರಿಂದ ಬಿಡಿಸಿಕೊಳ್ಳಲು ಹೆಣಗಾಡುತ್ತಾ, ಅಳುತ್ತಿದ್ದ. ಅವನು ಆದ್ಯಾವ ಘೋರ ತಪ್ಪು ಮಾಡಿದ್ದನೋ ತಿಳಿಯಲಿಲ್ಲ. ಗುಂಪಿನಲ್ಲಿದ್ದ ಒಬ್ಬ ಹುಡುಗನನ್ನು ಕೇಳಿದೆ. “ಪ್ರತಿದಿನವೂ ಶಾಲೆಗೆ ಬರದೆ ಉಂಡಾಡಿ ಗುಂಡನಂತೆ ಹೊರಗೆ ಅಡ್ಡಾಡುತ್ತಿದ್ದಾನೆ ಹಾಗಾಗಿ ಈ ರೀತಿ ಎತ್ತಿಕೊಂಡು ಶಾಲೆಗೆ ಹೋಗುತ್ತಿದ್ದೇವೆ’ ಎಂದು ಅವನು ಹೇಳಿದ.
ನನಗೆ ನಗು ತಡೆಯಲಾಗಲಿಲ್ಲ. ಏಕೆಂದರೆ, ನನ್ನ ಬಾಲ್ಯ ಕೂಡ ಇದರ ಹೊರತಾಗಿರಲಿಲ್ಲ. ಚಿಕ್ಕಂದಿನಲ್ಲಿ ನನಗೂ, ಶಾಲೆಯೆಂದರೆ ಅತೀವ ಭಯ. ಒಂದು ತರಹ ಜೈಲಿನಂತೆ ಭಾಸವಾಗುತ್ತಿತ್ತು. ಶಿಕ್ಷಕರೆಲ್ಲ, ಪೊಲೀಸರಂತೆ ಕಾಣುತ್ತಿದ್ದರು. ಅವರು ನಮಗೆ ಶಿಕ್ಷೆ ನೀಡುವುದಕ್ಕೇ ಇದ್ದಾರೆ ಎಂದು ನಾನಾಗ ಭಾವಿಸಿದ್ದೆ. ಪೋಷಕರು ಬೆಳಗ್ಗೆ ತಿಂಡಿ ತಿನ್ನಿಸಿ, ಯೂನಿಫಾರ್ಮ್ ಹಾಕಲು ಆರಂಭಿಸು ತ್ತಿದ್ದಂತೆಯೇ, ನಮ್ಮ ಅಳುವಿನ ಪಲ್ಲವಿ ಶುರುವಾಗುತಿತ್ತು. ನಿಜ ಹೇಳಬೇಕೆಂದರೆ, ಶಾಲೆಗೇ ಹೋಗುವ ಬದಲು ಮನೆಯಲ್ಲಿಯೇ ಆಟ ಆಡಿಕೊಂಡು ಇರುವುದೇ ನಮಗೆ ಹೆಚ್ಚು ಖುಷಿ ಕೊಡುತ್ತಿತ್ತು.
ಆದರೆ, ಪೋಷಕರು ಬಿಡಬೇಕಲ್ಲ? ನಮ್ಮ ಕಣ್ಣೀರಿನ ಜಲಪಾತಕ್ಕೂ, ಗೊಣ್ಣೆಯ ಅಭಿಷೇಕಕ್ಕೂ ಕೇರ್ ಮಾಡದೆ, ನಮ್ಮನ್ನು ಎಳೆದೊಯ್ದು, ಶಾಲೆಗೇ ಬಿಡುತ್ತಿದ್ದರು. ನಾವೋ, ಜಗಮೊಂಡರು. ಶಾಲೆ ತಪ್ಪಿಸುವುದಕ್ಕೆ ಪ್ರತಿದಿನ ಏನಾದರೂ ಉಪಾಯ ಹೂಡುತ್ತಿದ್ದೆವು. ನಾನು ಸ್ಕೂಲ್ ಬ್ಯಾಗನ್ನು ಎಲ್ಲಿಯಾದರೂ ಬಚ್ಚಿಟ್ಟು, ಅದು ಕಳೆದುಹೋಗಿದೆಯೆಂದು ಸುದ್ದಿ ಹಬ್ಬಿಸುತ್ತಿದ್ದೆ. ಬ್ಯಾಗ್ ಇಲ್ಲದಿದ್ದರೆ ಶಾಲೆಗೇ ಸೇರಿಸುವುದಿಲ್ಲವೆಂದು ಕಾರಣ ಹೇಳಿ, ಸಂಜೆವರೆಗೂ ಅದನ್ನು ಹುಡುಕುವಂತೆ ನಟಿಸುತ್ತಾ,
ಶಾಲೆಗೆ ಹೋಗುವುದರಿಂದ ತಪ್ಪಿಸಿಕೊಳ್ಳುತ್ತಿದ್ದೆ. ಚಳಿಗಾಲದಲ್ಲಿ, ಹುಲ್ಲಿಗೆ ಬೆಂಕಿ ಹಾಕಿ ಮೈ ಕಾಯಿಸಿಕೊಳ್ಳುತ್ತಿದ್ದವರ ಜೊತೆಗೆ ಕುಳಿತು, ದೇಹ ಬೆಚ್ಚಗಾದೊಡನೆ ಮನೆಗೆ ಓಡೋಡಿ ಬಂದು, ಅಮ್ಮನಿಂದ ನನ್ನ ಮೈಗೆ ಕೈ ತಾಕಿಸಿ, ನನಗೆ ತುಂಬಾ ಜ್ವರ ಬಂದಿದೆ ಎಂದು ಹೇಳಿ, ಮಲಗಿಬಿಡುತ್ತಿದ್ದೆ. ಇಲ್ಲವಾದರೆ, ಶೌಚಕ್ಕೆ ಹೋಗುತ್ತೇನೆಂದು ಹೋದವನು, ಅಲ್ಲಿಯೇ ತುಂಬಾ ಹೊತ್ತು ಕಳೆದು, ಇವತ್ತು ತಡವಾಯಿತು,
ಈಗ ಹೋದರೆ ಮೇಷ್ಟ್ರು ಹೊಡೆಯುತ್ತಾರೆಂದು ಹೇಳಿ, ಮನೆಯಲ್ಲಿಯೇ ಉಳಿದುಕೊಳ್ಳುತ್ತಿದ್ದೆ. ಹೀಗೆ, ಶಾಲೆಯೆಂದರೆ, ಅದೊಂದು ಜೈಲು ಎಂಬಂತೆ ಊಹಿಸಿಕೊಂಡು, ಶಾಲೆಗೆ ಚಕ್ಕರ್ ಹಾಕುವುದಕ್ಕೆ ದಿನಕ್ಕೊಂದು ನೆಪ ಹೂಡುತಿದ್ದೆ. ಆದರೆ, ದಿನ ಕಳೆದಂತೆ ಶಾಲೆಗೆ ಹೋಗುವುದು ರೂಢಿಯಾಯಿತು. ಹಲವು ಗೆಳೆಯರು ಪರಿಚಯವಾದ ನಂತರ, ಅದುವೇ ಸ್ವರ್ಗವೆನಿಸತೊಡಗಿತು.
* ಅಂಬ್ರೀಶ್ ಎಸ್. ಹೈಯ್ಯಾಳ್