Advertisement

ಹಿಂದುಳಿದ ವಿದ್ಯಾರ್ಥಿಗಳ ವಿದೇಶಿ ವ್ಯಾಸಂಗ ಯೋಜನೆ ತಡೆ ಹಿಡಿದಿಲ್ಲ

11:47 PM Feb 23, 2024 | Team Udayavani |

ಬೆಂಗಳೂರು: ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ವಿದೇಶಿ ವಿವಿಗಳಲ್ಲಿ ಉನ್ನತ ವ್ಯಾಸಂಗ ಮಾಡಲು ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಒದಗಿಸುವ ಯೋಜನೆಯನ್ನು ತಡೆ ಹಿಡಿದಿಲ್ಲ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ತಂಗಡಗಿ ಸ್ಪಷ್ಟಪಡಿಸಿದ್ದಾರೆ.

Advertisement

ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್‌ನ ಕೆ.ಎ.ತಿಪ್ಪೇಸ್ವಾಮಿ ಪ್ರಶ್ನೆಗೆ ಉತ್ತರಿಸಿ, 2023-24ನೇ ಸಾಲಿನ ಬಜೆಟ್‌ನಲ್ಲಿ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗ ಮಾಡುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಶೂನ್ಯ ಬಡ್ಡಿ ದರದಲ್ಲಿ ಪ್ರತಿ ವಿದ್ಯಾರ್ಥಿಗೆ 20 ಲಕ್ಷ ರೂ. ಸಾಲ ಸೌಲಭ್ಯ ಒದಗಿಸುವ ಯೋಜನೆಯನ್ನು ಮುಂದುವರಿಸುವ ಬಗ್ಗೆ ಘೋಷಿಸಲಾಗಿದೆ.

ಅದರಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯ ವಿವಿಧ ನಿಗಮಗಳ ಮೂಲಕ ಈ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಈ ಯೋಜನೆಯನ್ನು ತಡೆಹಿಡಿಯುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದರು.

ಹಿಂದಿನ ಸರಕಾರದಲ್ಲಿ 100 ವಿದೇಶಿ ವಿವಿಗಳನ್ನು ಗುರುತಿಸಲಾಗಿತ್ತು. ನಮ್ಮ ಸರಕಾರ ಬಂದ ಮೇಲೆ 500 ವಿವಿಗಳನ್ನು ಗುರುತಿಸಲಾಗಿದೆ. ಈ ವಿದೇಶಿ ವಿವಿಗಳಲ್ಲಿ ಉನ್ನತ ವ್ಯಾಸಾಂಗ ಯೋಜನೆಯಡಿ 133 ಅಭ್ಯರ್ಥಿಗಳಿಗೆ 12.80 ಕೋ. ರೂ. ನೀಡುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಸಚಿವರು ವಿವರಿಸಿದರು.

ನೀರಾ: ಸದನದಲ್ಲಿ ಸ್ವಾರಸ್ಯಕರ ಚರ್ಚೆ
ಬೆಂಗಳೂರು: “ನೀರಾ ನಶೆ’ ಬಗ್ಗೆ ಮೇಲ್ಮನೆಯಲ್ಲಿ ಸ್ವಾರಸ್ಯಕರ ಚರ್ಚೆ ನಡೆದು ಸದಸ್ಯರು ಪರಸ್ಪರ ಕಾಲೆಳೆದುಕೊಂಡ ಪ್ರಸಂಗ ಶುಕ್ರವಾರ ನಡೆಯಿತು.

Advertisement

ಸಾರಾಯಿ ನಿಷೇಧಕ್ಕೆ ಸಂಬಂಧಿಸಿದ ಪ್ರಶ್ನೋತ್ತರ ವೇಳೆ ಮಧ್ಯಪ್ರವೇಶಿಸಿದ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ರಾಜ್ಯದಲ್ಲಿ ಸಾರಾಯಿ, ಶೇಂದಿ ನಿಷೇಧ ಆಗಿದೆ. ನೀರಾ ತೆಗೆಯುವ ಪದ್ಧತಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.

ಅದಕ್ಕೆ ನೀವು ಎಂದಾದರೂ ನೀರಾ ಕುಡಿದಿದ್ದೀರಾ ಎಂದು ಡಿಸಿಎಂ ಕೇಳಿದರು. ನಾನು ನಿಮ್ಮ ಹಾಗೆ ದಪ್ಪ ಇಲ್ಲ; ಕುಡಿದರೆ ತಡೆದುಕೊಳ್ಳುವ ಶಕ್ತಿ ಇಲ್ಲ, ಏನಾದರೂ ಹೆಚ್ಚು ಕಡಿಮೆ ಆದರೆ ಎಂದು ಕುಡಿಯುವ ಧೈರ್ಯ ಮಾಡಿಲ್ಲ ಎಂದು ಪೂಜಾರಿ ಹೇಳಿದರು. ಪ್ರಕೃತಿ ಮುಂದೆ ಯಾರೂ ಏನೂ ಮಾಡಕ್ಕಾಗುವುದಿಲ್ಲ. 30 ವರ್ಷಗಳ ಹಿಂದೆ ನಾನು ನೀರಾ ಕುಡಿದಿದ್ದೆ, ಅದೊಂದು ತರಹ ಜ್ಯೂಸ್‌ ಇದ್ದಂತಿತ್ತು. ಅದನ್ನು ಕುಡಿದು ಅಮಲು ಏರಿಲ್ಲ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ಆಗ ಬಿ.ಕೆ. ಹರಿಪ್ರಸಾದ್‌, ಪೂಜಾರಿಯವರು ಕುಡಿಯುವುದಿಲ್ಲ; ಅವರಿಗೇನಿ ದ್ದರೂ ಕುಡಿಸಿ ಅಭ್ಯಾಸವಿದೆ ಎಂದರು. ಅದು ಅವರ ವೃತ್ತಿ ಎಂದು ಶಿವಕುಮಾರ್‌ ಹೇಳಿದಾಗ, ವೃತ್ತಿ ಅಲ್ಲ, ನಮ್ಮ ಉಪ ಕಸಬು. ಮೊದಲೇ ನಾವು ಹೆಂಡ ಮಾರು ವವರು ಎಂದು ಹಣೆಪಟ್ಟಿ ಕಟ್ಟಿಕೊಂಡಿದ್ದೇವೆ ಎಂದು ಹರಿಪ್ರಸಾದ್‌ ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next