Advertisement

ರೈತರಿಗೆ ಇನ್ನೂ “ಬೆಳಕು’ತೋರದ ಯೋಜನೆ​​​​​​​

06:55 AM Aug 27, 2018 | |

ಬಾಗಲಕೋಟೆ: ಪಕ್ಕದ ತೆಲಂಗಾಣ ಮಾದರಿ ರಾಜ್ಯದ ಖುಷ್ಕಿ ಭೂಮಿ ಹೊಂದಿದ ರೈತರಿಗಾಗಿ ರಾಜ್ಯ ಸರ್ಕಾರ ಘೋಷಣೆ ಮಾಡಿದ “ರೈತ ಬೆಳಕು’ ಯೋಜನೆ ಈವರೆಗೂ ಅನುಷ್ಠಾನಗೊಂಡಿಲ್ಲ. ಸೂಕ್ತ ನಿಯಮಾವಳಿಯೂ ರೂಪಿಸಿಲ್ಲ. ಹೀಗಾಗಿ ಈ ಯೋಜನೆ ಪ್ರಸಕ್ತ ವರ್ಷ ಅನುಷ್ಠಾನಗೊಳ್ಳುವುದು ಅನುಮಾನ.

Advertisement

ತೆಲಂಗಾಣದಲ್ಲಿ ರೈತರಿಗೆ ನೀಡುವ ಪ್ರೋತ್ಸಾಹ ಧನದಂತೆ ರಾಜ್ಯದಲ್ಲೂ ರೈತ ಬೆಳಕು ಹೆಸರಿನ ಯೋಜನೆ ಜಾರಿಗೊಳಿಸುವ ಬಗ್ಗೆ ಸರ್ಕಾರ ತೀರ್ಮಾನಿಸಿತ್ತು. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಮಂಡಿಸಿದ ಕೊನೆಯ ಬಜೆಟ್‌ನಲ್ಲಿ ಯೋಜನೆ ಘೋಷಣೆ ಮಾಡುವ ಜತೆಗೆ 3,500 ಕೋಟಿ ಮೀಸಲಿಟ್ಟಿದ್ದರು. ಬಳಿಕ ಕುಮಾರಸ್ವಾಮಿ ಸಿಎಂ ಆಗಿ, ಘೋಷಣೆ ಮಾಡಿದ ಬಜೆಟ್‌ನಲ್ಲಿ ಯೋಜನೆ ಮುಂದುವರಿಸಿದ್ದರೂ ಅದು ಈವರೆಗೆ ಜಾರಿಗೊಂಡಿಲ್ಲ.

ರಾಜ್ಯದ ಒಣ ಬೇಸಾಯ ಹೊಂದಿದ ರೈತರಿಗೆ ಬೆಳೆ ಪರಿಹಾರ ಕೊಡುವ ಬದಲು ಬಿತ್ತನೆ ಮಾಡಲಿ, ಮಾಡದಿರಲಿ ಒಂದು ಹೆಕ್ಟೇರ್‌ಗೆ 5 ಸಾವಿರ ಪ್ರೋತ್ಸಾಹಧನ ನೀಡುವುದು. ಒಬ್ಬ ರೈತರಿಗೆ ಗರಿಷ್ಠ 2 ಹೆಕ್ಟೇರ್‌ಗೆ ಈ ಹಣ ನೀಡುವ ಯೋಜನೆಯೇ ರೈತ ಬೆಳಕು ಯೋಜನೆ. ಇದು ತೆಲಂಗಾಣದಲ್ಲಿ ಪರಿಣಾಮಕಾರಿಯಾಗಿ ಜಾರಿಗೊಂಡಿದೆ. ಅಲ್ಲಿನ ರೈತರಿಗೆ ಎಕರೆಗೆ 4 ಸಾವಿರ ರೂ.ಪ್ರೋತ್ಸಾಹಧನವನ್ನು ಸರ್ಕಾರ ನೀಡುತ್ತಿದೆ.

ತೆಲಂಗಾಣಕ್ಕೆ ತಂಡ: ತೆಲಂಗಾಣದಲ್ಲಿ ಯೋಜನೆ ಯಾವ ರೀತಿ ಅನುಷ್ಠಾನಗೊಂಡಿದೆ, ಅಲ್ಲಿನ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ರಾಜ್ಯದ ಕೃಷಿ ಇಲಾಖೆ ಅಧಿಕಾರಿಗಳ ತಂಡವನ್ನು ಸರ್ಕಾರ ಕಳೆದ ಏಪ್ರಿಲ್‌ನಲ್ಲಿ ಅಧ್ಯಯನಕ್ಕೆ ಕಳುಹಿಸಿತ್ತು. ಆ ತಂಡದಲ್ಲಿ ಕೃಷಿ ಇಲಾಖೆಯಿಂದ ಬಾಗಲಕೋಟೆಯ ಜಂಟಿ ಕೃಷಿ ನಿರ್ದೇಶಕ ಡಾ| ಪಿ.ರಮೇಶಕುಮಾರ ಕೂಡ ತೆರಳಿದ್ದರು. ಅವರು ಯೋಜನೆ ಅನುಷ್ಠಾನ ಕುರಿತು ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ನೀಡಿದ್ದಾರೆ. ಆದರೆ, ಅದು ಈವರೆಗೆ ನಿಯಮಾವಳಿ ರೂಪ ಪಡೆದು ಜಾರಿಗೊಂಡಿಲ್ಲ.

ಮೊದಲು ಪೋಡಿಮುಕ್ತ: ತೆಲಂಗಾಣದಲ್ಲಿ ಈ ಯೋಜನೆ ಪರಿಣಾಮಕಾರಿಯಾಗಿ ಜಾರಿಗೊಳ್ಳಲು ಅಲ್ಲಿನ ಸರ್ಕಾರದ ದಿಟ್ಟ ಕ್ರಮಗಳೇ ಕಾರಣ. ತೆಲಂಗಾಣದಲ್ಲಿ ಒಟ್ಟಾರೆ ಕೃಷಿ ಭೂಮಿಯ ಪೋಡಿ ಮಾಡಲಾಗಿದೆ. ಹೀಗಾಗಿ ಭೂಮಿ ಹೊಂದಿರುವ ಪ್ರತಿಯೊಬ್ಬ ರೈತರಿಗೂ ಎಕರೆಗೆ ತಲಾ 4 ಸಾವಿರ ಪ್ರೋತ್ಸಾಹಧನ ನೀಡಲಾಗುತ್ತದೆ. ಕೃಷಿ ಇಲಾಖೆಯ ಇತರೆ ಯೋಜನೆಗಳ ಜತೆಗೆ ಈ 4 ಸಾವಿರ ಪ್ರೋತ್ಸಾಹಧನ ಪ್ರತ್ಯೇಕವಾಗಿ ಕೊಡುತ್ತಿದ್ದು, ಪೋಡಿಮುಕ್ತ ಮಾಡಿದ್ದರಿಂದ ಅದು ದುರುಪಯೋಗವಾಗಲು ಸಾಧ್ಯವೇ ಇಲ್ಲ ಎನ್ನುತ್ತಾರೆ ಅಧಿಕಾರಿಗಳು.

Advertisement

ರೈತರು ಕಡ್ಡಾಯವಾಗಿ ಬಿತ್ತನೆ ಮಾಡಬೇಕೆಂಬ ನಿಯಮ ಅಲ್ಲಿಲ್ಲ. ಫಾರ್ಮರ್‌ ವೆಲ್‌ಫೇರ್‌ ಕಮಿಟಿ ರಚಿಸಿದ್ದು, ಈ ಕಮಿಟಿ ಆಯಾ ಮಂಡಲ ವ್ಯಾಪ್ತಿಯಲ್ಲಿವೆ. ಕಮಿಟಿ ಕೈಗೊಳ್ಳುವ ನಿರ್ಧಾರವನ್ನೇ ಸರ್ಕಾರ ಒಪ್ಪಿಕೊಂಡು ಜಾರಿಗೊಳಿಸುತ್ತದೆ. ಇದು ಇಡೀ ತೆಲಂಗಾಣ ರೈತರಿಗೆ ವರದಾನದ ಯೋಜನೆಯಾಗಿದೆ.

ರಾಜ್ಯದಲ್ಲಿ ಎಷ್ಟಿದೆ ಭೂಮಿ?
ರಾಜ್ಯದಲ್ಲಿ 1,90,50,068 ಹೆಕ್ಟೇರ್‌ (1.90 ಕೋಟಿ ಹೆಕ್ಟೇರ್‌) ಭೌಗೋಳಿಕ ವಿಸ್ತೀರ್ಣವಿದ್ದು, ಅದರಲ್ಲಿ 30,73,376 (30.73 ಲಕ್ಷ ಹೆಕ್ಟೇರ್‌) ಅರಣ್ಯ ಪ್ರದೇಶವಿದೆ. ಅಲ್ಲದೇ 14,75,908 (14.76 ಲಕ್ಷ) ಹೆಕ್ಟೇರ್‌ ಕೃಷಿಯೇತರ ಭೂಮಿಯಿದ್ದು, 7,93,353 (7.93 ಲಕ್ಷ ) ಬಂಜರು ಭೂಮಿಯಿದೆ. ಇನ್ನು 4,08,841 (8.09 ಲಕ್ಷ) ಹೆಕ್ಟೇರ್‌ ಉಪಯೋಗಕ್ಕೆ ಬಾರದ ಭೂಮಿ. ನಮ್ಮಲ್ಲಿ ಒಟ್ಟು ಕೃಷಿ ಭೂಮಿ 1,20,08,583 (1.20 ಕೋಟಿ) ಹೆಕ್ಟೇರ್‌ ಇದ್ದು, ಅದರಲ್ಲಿ 1.06 ಕೋಟಿ ಹೆಕ್ಟೇರ್‌ ಬಿತ್ತನೆ ಭೂಮಿ  ರಾಜ್ಯದಲ್ಲಿದೆ. ಅಂದಾಜು 75 ಲಕ್ಷ ರೈತರ 64 ಲಕ್ಷ ಹೆಕ್ಟೇರ್‌ ಒಣ ಬೇಸಾಯ ಭೂಮಿಗೆ, ರೈತ ಬೆಳಕು ಯೋಜನೆ ಅಳವಡಿಸಬೇಕೆಂಬ ಉದ್ದೇಶ ಹೊಂದಲಾಗಿತ್ತು.

ಈವರೆಗೆ  ಯೋಜನೆಗೆ  ನಿಯಮಾವಳಿ ರೂಪಿಸಿ ಅನುಷ್ಠಾನಗೊಳಿಸಿಲ್ಲ. ಈ ಕುರಿತು ಕೃಷಿ ಸಚಿವರೊಂದಿಗೆ ಚರ್ಚಿಸಿ ಯೋಜನೆಯನ್ನು  ರಾಜ್ಯಾದ್ಯಂತ ಜಾರಿಗೊಳಿಸಲು ತಿಳಿಸುತ್ತೇನೆ.
– ಆರ್‌.ವಿ. ದೇಶಪಾಂಡೆ, ಕಂದಾಯ ಸಚಿವ

ಯೋಜನೆ ಜಾರಿಗೊಳಿಸಲು ತೆಲಂಗಾಣದಲ್ಲಿ ಕೈಗೊಂಡ ಕ್ರಮ ಹಾಗೂ ಅನುಷ್ಠಾನಗೊಳಿಸಿದ ಕುರಿತ ಅಧ್ಯಯನ ನಡೆಸಲು ರಾಜ್ಯ ಸರ್ಕಾರದಿಂದ ನನ್ನನ್ನು ಕಳುಹಿಸಲಾಗಿತ್ತು. ಈ ಯೋಜನೆ ಹೇಗೆ ಜಾರಿಗೊಳಿಸಬೇಕು ಎಂಬುದರ ವಿವರವಾದ  ವರದಿ ಸರ್ಕಾರಕ್ಕೆ ಸಲ್ಲಿಸಿದ್ದೇನೆ.
– ಡಾ.ಪಿ.ರಮೇಶಕುಮಾರ, ಜಂಟಿ ಕೃಷಿ ನಿರ್ದೇಶಕ (ತೆಲಂಗಾಣ ಅಧ್ಯಯನಕ್ಕೆ ತೆರಳಿದ್ದ  ಅಧಿಕಾರಿ)

– ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next