Advertisement

ಉಳಿತಾಯದ ಲೆಕ್ಕ, ಇರಲಿ ಪಕ್ಕಾ

06:00 AM May 28, 2018 | Team Udayavani |

ಮೊದಲ ವೇತನವೆಂದರೆ ಯಾರಿಗೆ ತಾನೆ ಖುಷಿ ಇರಲ್ಲ ಹೇಳಿ? ವಿದ್ಯಾಭ್ಯಾಸ ಪೂರ್ಣಗೊಳಿಸಿದವರು ಸ್ವಂತ ಕಾಲ ಮೇಲೆ ನಿಲ್ಲುವ ಕ್ಷಣವದು. ಹುಡುಗಾಟಿಕೆಗೆ ಪೂರ್ಣ ವಿರಾಮ ಬಿದ್ದು, ಜವಾಬ್ದಾರಿ ಹೆಗಲೇರುವ ಹೊತ್ತದು. 23-25 ವರ್ಷ ವಯಸ್ಸಿಗೆ ಉದ್ಯೋಗಕ್ಕೆ ಸೇರಿಕೊಂಡರೆ ಸುಮಾರು 35 ವರ್ಷಗಳಷ್ಟು ಸುದೀರ್ಘ‌ ವೃತ್ತಿ ಜೀವನದುದ್ದಕ್ಕೂ ಜವಾಬ್ದಾರಿಗಳು ಹಾಗೂ ಸವಾಲುಗಳು ಒಂದೊಂದಾಗಿ ಸೇರಿಕೊಳ್ಳುತ್ತಾ ಹೋಗುತ್ತವೆ.

Advertisement

ಇವುಗಳಿಗೆ ಸಿದ್ಧವಾಗಿದ್ದು, ಗಳಿಸಿದ ಹಣವನ್ನು ಸೂಕ್ತ ರೀತಿಯಲ್ಲಿ ನಿಭಾಯಿಸುವುದು ದೊಡ್ಡ ಸವಾಲಾಗಿರುತ್ತದೆ. ಮೊದಲ ವೇತನ ಕೈಗೆತ್ತಿಕೊಳ್ಳುವ ಕ್ಷಣದಿಂದಲೇ ಯುವ ಜನರು ತಮ್ಮ ಹಣಕಾಸು ಯೋಜನೆಯನ್ನು ಆರಂಭಿಸಬೇಕು. ಬೈಕ್‌, ಕಾರು ಖರೀದಿ, ಮದುವೆ, ಆಭರಣ, ಮಕ್ಕಳ ವಿದ್ಯಾಭ್ಯಾಸ, ಮನೆ ನಿರ್ಮಾಣ ಹೀಗೆ ಒಂದೊಂದಾಗಿ ಬರುವ ಭವಿಷ್ಯದ ಖರ್ಚು ವೆಚ್ಚಗಳಿಗೆಲ್ಲ ಹಣ ಜೋಡಿಸಲು, ಸಮರ್ಪಕವಾಗಿ ಯೋಜಿಸಲು ಇದುವೇ ಮೊದಲ ಮೆಟ್ಟಿಲು ಎಂಬುದು ನೆನಪಿರಬೇಕು. 

ದುಡಿಯಲು ಕೈ ಕಾಲು ಗಟ್ಟಿಯಿದೆ, ಅಪ್ಪ- ಅಮ್ಮನ ಹಂಗಿಲ್ಲ, ಸ್ವಂತ ಸಂಪಾದನೆಯಿದೆ ಎಂಬ ಧೋರಣೆಯೊಂದಿಗೆ ದೀರ್ಘ‌ಕಾಲಿನ, ಹಣಕಾಸು ಯೋಜನೆಯಿಲ್ಲದೆ ಮೊದಲ ವೇತನ ಬರುತ್ತಿದ್ದಂತೆಯೇ ಬಿಂದಾಸ್‌ ಜೀವನ ಶುರುಹಚ್ಚಿಕೊಂಡರೆ ಮುಂದೊಂದು ದಿನ ಕೊರಗಬೇಕಾಗಬಹುದು. ಹಾಗಂತ, ದುಡಿದ ದುಡ್ಡನ್ನೆಲ್ಲ ಕಟ್ಟಿಟ್ಟು ಕಂಜೂಸ್‌ ಆಗಬೇಕಿಲ್ಲ. ದುಡಿದು ದಣಿದ ದೇಹ-ಮನಸ್ಸಿಗೆ ವಿರಾಮ, ಮನರಂಜನೆ, ಗೆಳೆಯರೊಡನೆ ಕೂಟ, ಮನೆಯವರೊಂದಿಗೆ ಸುತ್ತಾಟ ಎಲ್ಲವೂ ಅಗತ್ಯ.

ಆದರೆ ಅದರ ಜತೆಜತೆಯಲ್ಲೇ ಉಳಿತಾಯದ ಯೋಜನೆಯತ್ತಲೂ ಲಕ್ಷ್ಯವಿರಲಿ. ಬದುಕಿನ ಅನೇಕ ಉತ್ತಮ ಸಂಗತಿಗಳಲ್ಲಿ ಸಂಪತ್ತು ಸೃಷ್ಟಿ ಕೂಡಾ ಒಂದು. ಮೊದಲ ವೇತನದ ಚೆಕ್‌ನಿಂದಲೇ ಉಳಿತಾಯ ಆರಂಭಿಸಬೇಕು. ಮದುವೆಗಿಂತ ಮುನ್ನ ಸ್ವಂತ ಮನೆ, ಕಾರು ಹಾಗೂ ಸಂಗಾತಿಯ ಪ್ರಾಥಮಿಕ ಸೌಕರ್ಯಗಳನ್ನು ಪೂರೈಸಲು ಸಶಕ್ತರಾಗಿರಬೇಕು ಎನ್ನುತ್ತಾರೆ ಹಣಕಾಸು ಸಲಹಾ ತಜ್ಞರು.

ಆರಂಭಿಕ ಹಣಕಾಸು ಯೋಜನೆಗಳಿಗಾಗಿ ಈ ಕೆಳಗಿನ ಹೆಜ್ಜೆಗಳನ್ನು ರೂಢಿಸಿಕೊಳ್ಳಿ.
* ಈಗಿನ ದಿನಗಳಲ್ಲಿ ಉದ್ಯೋಗ ಸುರಕ್ಷಿತವಲ್ಲ ಎಂಬುದನ್ನು ಮರೆಯಬಾರದು. ಹಾಗಾಗಿ, ಕನಿಷ್ಠ 6 ತಿಂಗಳ ಮಾಸಿಕ ಖರ್ಚುಗಳಿಗಾಗುವಷ್ಟು ಆಪತ್ತು ನಿಧಿಯನ್ನು ನಿಧಾನವಾಗಿ ಒಟ್ಟುಗೂಡಿಸಿಡಬೇಕು.

Advertisement

* ಬ್ಯಾಂಕ್‌ನ ನಿಶ್ಚಿತ ಠೇವಣಿ ಮತ್ತು ಲಿಕ್ವಿಡ್‌ ಫ‌ಂಡ್‌ಗಳಲ್ಲಿ ಹೂಡಿಕೆ ನಡೆಸಬೇಕು.

* ಎಸ್‌ಐಪಿಗಳ ಮೂಲಕ ಈಕ್ವಿಟಿ ಮ್ಯೂಚುವಲ್‌ ಫ‌ಂಡ್‌ಗಳಲ್ಲಿ ಸಣ್ಣ ಮೊತ್ತಗಳನ್ನು ಹೂಡುವುದನ್ನು ಸಾಧ್ಯವಾದರೆ ಮೊದಲ ವೇತನದಿಂದಲೇ ಆರಂಭಿಸಬೇಕು. ಇದು ದೀರ್ಘ‌ಕಾಲಿಕ ನಿಧಿಯನ್ನು ನಿರ್ಮಿಸಿಕೊಳ್ಳಲು ನೆರವಾಗುತ್ತದೆ. 

* ತಿಂಗಳ ಆರಂಭದಲ್ಲೇ ಮಾಸಿಕ ಬಜೆಟ್‌ ಅನ್ನು ಮಾಡಿಕೊಳ್ಳಿ. ಖರ್ಚು ಮತ್ತು ಹೂಡಿಕೆಯಲ್ಲಿ ಅದಕ್ಕೆ ಬದ್ಧವಾಗಿರಿ. ದುಂದುವೆಚ್ಚ ಬೇಡ.

* ನಿಮ್ಮ ತಿಂಗಳ ಖರ್ಚನ್ನು ಎರಡು ಭಾಗ ಮಾಡಿಕೊಳ್ಳಿ. ಒಂದು, ಮಾಡಲೇಬೇಕಾದ ಖರ್ಚು, ಮತ್ತು ಇನ್ನೊಂದು, ಮಾಡಬಹುದಾದ ಖರ್ಚು. ದಿನಸಿ, ಔಷಧ, ವಿವಿಧ ಸೌಕರ್ಯಗಳ ಬಿಲ್‌ಗ‌ಳು ಇತ್ಯಾದಿ ಮಾಡಲೇಬೇಕಾದ ಖರ್ಚಿನಡಿ ಬರುತ್ತವೆ. ಪ್ರವಾಸ, ಮನರಂಜನೆ, ಹೋಟೆಲ್‌ ಊಟ, ಬಟ್ಟೆಬರೆ ಇತ್ಯಾದಿ ಮಾಡಬಹುದಾದ ಖರ್ಚಿನಡಿ ಬರುತ್ತವೆ. ನೆನಪಿಡಿ, ಯಾವುದೇ ತಿಂಗಳಲ್ಲೂ ಯಾವುದೇ ಕಾರಣಕ್ಕೂ ಮಾಡಬಹುದಾದ ಖರ್ಚು ಮಾಡಲೇಬೇಕಾದ ಖರ್ಚಿನ ಮೊತ್ತವನ್ನು ಮೀರಬಾರದು.

* ಪ್ರತಿ ತಿಂಗಳು ಆದಾಯದ ಶೇ.25ರಷ್ಟು ಭಾಗವನ್ನು ಉಳಿತಾಯಕ್ಕೆ ಮೀಸಲಿಡಬೇಕು.ಯಾವುದಾದರೂ ಒಂದು ತಿಂಗಳಲ್ಲಿ ಅಷ್ಟು ಭಾಗ ಉಳಿತಾಯ ಮಾಡಲು ಸಾಧ್ಯವಾಗದಿದ್ದರೆ, ಮುಂದಿನ ತಿಂಗಳಲ್ಲಿ ಖರ್ಚು ಮಿತಗೊಳಿಸಿ ಹೆಚ್ಚು ಉಳಿತಾಯ ಮಾಡಬೇಕು. ಈ ಉಳಿತಾಯದ ಬದ್ಧತೆಯು ಖರ್ಚು ಮಿತಿ ಮೀರದಂತೆ ಕಡಿವಾಣ ಹಾಕುತ್ತದೆ. 

* ಗಳಿಸದೇ ಇರುವ ಹಣವನ್ನು ಖರ್ಚು ಮಾಡಬೇಡಿ. ಅಂದರೆ, ಕ್ರೆಡಿಟ್‌ ಕಾರ್ಡ್‌, ಕುಟುಂಬ /ಸ್ನೇಹಿತರಿಂದ ಸಾಲ ಪಡೆಯುವುದು ಇತ್ಯಾದಿ ಮಾಡಬೇಡಿ. ಆದಾಯ ಮೀರಿದ ಈ ರೀತಿಯ ಖರ್ಚು ಮುಂದೆ ನಿಮ್ಮನ್ನು ಸಾಲದ ಸುಳಿಗೆ ಸಿಲುಕಿಸುತ್ತದೆ.

* ಗಳಿಸು, ಉಳಿಸು ಮತ್ತು ಭರಿಸು. ಉಳಿತಾಯದ ನಂತರ ಖರ್ಚು ಭರಿಸಬೇಕು. ಇದು ಹಣಕಾಸು ನಿರ್ವಹಣೆಯ ಧ್ಯೇಯವಾಗಿರಬೇಕು.

* ರಾಧ

Advertisement

Udayavani is now on Telegram. Click here to join our channel and stay updated with the latest news.

Next