ಸಂಡೂರು: ದೇಶಕ್ಕೆ ಸ್ವಾತಂತ್ರ್ಯತಂದು ಕೊಟ್ಟ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರಿಗೂ ಸಂಡೂರಿಗೂ ಅವಿನಾಭಾವ ಸಂಬಂಧವಿದೆ. ಘೋರ್ಪಡೆ ವಂಶಸ್ಥರಾದ ಎಂ.ವೈ. ಘೋರ್ಪಡೆಯವರು ಪಟ್ಟಣದ ಆದರ್ಶ ಸಮುದಾಯ ಭವನದಲ್ಲಿ ಬೃಹತ್ ಕಂಚಿನ ಮೂರ್ತಿ ಸ್ಥಾಪಿಸುವ ಮೂಲಕ ಆ ನೆನಪನ್ನು ಜೀವಂತವಾಗಿಟ್ಟಿದ್ದಾರೆ.
ಇಲ್ಲಿಯ ಘೋರ್ಪಡೆ ರಾಜ ವಂಶಸ್ಥರು 1932ರಲ್ಲಿ ರಾಜ ಯಶವಂತರಾವ್ ಹಿಂದೂರಾವ್ ಘೋರ್ಪಡೆ ಒಂದು ಪ್ರೊಕ್ಲಾಮೇಷನ್ (ಆದೇಶ) ಹೊರಡಿಸಿದ್ದರು. ಅದರ ಪ್ರಕಾರ ಹರಿಜನರಿಗೆ ಸಮಾನವಾಗಿ ದೇವಸ್ಥಾನಗಳಲ್ಲಿ ಮುಕ್ತ ಪ್ರವೇಶ ಅವಕಾಶ ಮಾಡಿಕೊಡಲಾಯಿತು. ಆದ್ದರಿಂದ ಈ ಪ್ರದೇಶದಲ್ಲಿ ಅಸ್ಪೃಶ್ಯತೆ ಹೋಗಲಾಡಿಸಲಾಯಿತು. ಇದರಿಂದ ಆಕರ್ಷಿತರಾದ ಮಹಾತ್ಮ ಗಾಂಧಿಜಿಯವರು 1934ರಲ್ಲಿ ಸಂಡೂರಿಗೆ ಭೇಟಿ ನೀಡಿ ತಮ್ಮ “ಹರಿಜನ’ ಪತ್ರಿಕೆಯಲ್ಲಿ ಈ ರೀತಿ ವಿವರಿಸುತ್ತಾರೆ.
“ದಕ್ಷಿಣ ಭಾರತದ ಚಿಕ್ಕ ಸಂಸ್ಥಾನವಾದ ಸಂಡೂರು ಸಂಸ್ಥಾನ ಹರಿಜನರಿಗೆ ಗುಡಿಗಳ ಬಾಗಿಲು ತೆರೆದಿದೆ. ಇದರಿಂದ ಸ್ವರ್ಗವೇನು ಕೆಳಗಿ ಬೀಳಲಿಲ್ಲ’ ಎಂದು ಬರೆದರು. ಗಾಂಧೀಜಿಯವರ ಕನಸನ್ನು ಸಂಡೂರು ಸಂಸ್ಥಾನ ಸ್ವಾತಂತ್ರ್ಯ ಪೂರ್ವದಲ್ಲೇ ಜಾರಿಗೆ ತಂದಿತ್ತು. 1932ರಲ್ಲಿ ಸಂಡೂರು ಸಂಸ್ಥಾನದಲ್ಲಿ ನ್ಯಾಯಾಂಗ ವ್ಯವಸ್ಥೆ ಜಾರಿಗೆ ತಂದರು. ಬಳ್ಳಾರಿ ಜಿಲ್ಲಾ ನ್ಯಾಯಾಧಿಧೀಶರನ್ನು
ಸಂಡೂರು ಚೀಫ್ ಕೋರ್ಟ್‌ನ ನ್ಯಾಯಾಧೀಶರನ್ನಾಗಿ ನೇಮಕ ಮಾಡಿದರೆಂಬುದು ಸಂಡೂರಿನ ಐತಿಹಾಸಿಕ ಅಂಶವಾಗಿದೆ. ಗಾಂಧಿಧೀಜಿಯವರ ಸ್ಮರಣೆಯ ನಿಮಿತ್ತ ಅಂದಿನ ಕರ್ನಾಟಕದ ರಾಜ್ಯಪಾಲರಾದ ಖುರ್ಷಿದ್ ಅಲಂಖಾನ್ ಅವರನ್ನು ಆಹ್ವಾನಿಸಿ ಪದ್ಮಭೂಷಣ ಪ್ರಶಸ್ತಿ ಪಡೆದ ಶಿಲ್ಪಿ ರಾಮಸುತಾರ್ ಅವರಿಂದ ತಯಾರಿಸಿದ ಬೃಹತ್ ಗಾಂಧೀಜಿಯವರ ಕಂಚಿನ ಮೂರ್ತಿಯನ್ನು ಗಾಂಧಿಧೀಜಿಯವರ 125ನೇ ಜನ್ಮದಿನ ಅಂಗವಾಗಿ 11ನೇ ಅಕ್ಟೋಬರ್ 1995ರಲ್ಲಿ ಪಟ್ಟಣದ ಆದರ್ಶ ಸಮುದಾಯ ಭವನದಲ್ಲಿ ಸ್ಥಾಪಿಸಲಾಯಿತು.
-ಬಸವರಾಜ ಬಣಕಾರ