ಕುಂದಾಪುರ: ಶಾಸ್ತ್ರೀ ಪಾರ್ಕ್ ಸಮೀಪ ಕುಂದಾಪುರಕ್ಕೆ ಇದ್ದ ಏಕೈಕ ನೆಹರೂ ಮೈದಾನದಲ್ಲಿ ಚಟುವಟಿಕೆ ಅಡ್ಡಿಯಾಗಿದ್ದ ಮರಳನ್ನು ಕೊನೆಗೂ ತೆರವು ಮಾಡಲಾಗಿದೆ.
ಮುಖ್ಯಮಂತ್ರಿ ಕಾರ್ಯಕ್ರಮ ಇದ್ದ ಕಾರಣ ಮರಳನ್ನು ತೆರವು ಮಾಡಲಾಗಿದ್ದು ಈ ವರೆಗೆ ಹಲವು ಬಾರಿ ಸಂಘಟನೆಗಳು ಮನವಿ ಮಾಡಿದ್ದರೂ ಡಿವೈಎಫ್ಐ ಸಹಿ ಸಂಗ್ರಹ ಮಾಡಿದ್ದರೂ ಮರಳು ತೆರವಿಗೆ ಕ್ರಮ ಕೈಗೊಂಡಿರಲಿಲ್ಲ.
ಇನ್ನೊಂದು ಗಾಂಧಿ ಮೈದಾನ ಇದ್ದರೂ ಅದು ಕ್ರೀಡಾ ಚಟುವಟಿಕೆಗೆ ಮೀಸಲಾಗಿದೆ. ಇತರ ಸಾಂಸ್ಕೃತಿಕ ಕಾರ್ಯಕ್ರಮ, ಯಕ್ಷಗಾನಕ್ಕೆ ನೆಹರೂ ಮೈದಾನ ಏಕೈಕ ಆಸರೆಯಾಗಿತ್ತು. ಆದರೆ ಮಾರ್ಚ್ ಹಾಗೂ ಅನಂತರ ಇದನ್ನು ಯಕ್ಷಗಾನ ಚಟುವಟಿಕೆಗೆ ಕೊಡುವುದಿಲ್ಲ. ಏಕೆಂದರೆ ಇಲ್ಲಿ ಸರಕಾರಿ ಹಾಸ್ಟೆಲ್ ಇದ್ದು ಮಕ್ಕಳ ಓದಿಗೆ ಅಡ್ಡಿಯಾಗುತ್ತದೆ ಎಂದು ಕಾರಣ ನೀಡಲಾಗುತ್ತಿದೆ.
ನೆಹರೂ ಮೈದಾನದ ರಂಗಮಂದಿರ ಈಗ ಇದ್ದೂ ಇಲ್ಲದಂತಾಗಿದೆ. ಬಯಲಿನಲ್ಲಿ ಒಂದು ಸುಂದರ ರಂಗಮಂದಿರವನ್ನು ಪುರಸಭೆ ಸುವರ್ಣ ಮಹೋತ್ಸವ ನೆನಪಿಗೆ ಕಟ್ಟಿಸಿದೆ. ಈ ಮೈದಾನದಲ್ಲಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಆದರೆ ಇಲ್ಲಿ ಯುಜಿಡಿ ಕಾಮಗಾರಿಗಾಗಿ ತಂದು ಹಾಕಿದ್ದ ಭೀಕರ ಗಾತ್ರದ ಪೈಪ್‌ಗ್ಳಿಂದಾಗಿ ಮೈದಾನ ಪಾಳು ಬೀಳಲಾರಂಭಿಸಿದೆ. ಸಿಎಂ ಕಾರ್ಯಕ್ರಮ ನಿಮಿತ್ತ ಭದ್ರತೆಗಾಗಿಯೋ ಪೈಪ್‌ರಾಶಿ ಕಾಣಬಾರದೆಂದೋ ಟಾರ್ಪಾಲು ಹೊದಿಸಲಾಗಿದೆ.
ಕಾಮಗಾರಿಯ ಸಾಮಗ್ರಿ ಸಂಗ್ರಹ ಣೆಯ ಘನಲಾರಿಗಳು ಮೈದಾನದೆಲ್ಲೆಡೆ ಎಗ್ಗಿಲ್ಲದೆ ಸಂಚರಿಸಿದ ಪರಿಣಾಮ ಹೊಂಡಗುಂಡಿಗಳು ಬಿದ್ದಿವೆ. ಇವನ್ನೆಲ್ಲ ತೆರವು ಮಾಡುವ ಕಾರ್ಯ ನಡೆಯಲೇ ಇಲ್ಲ. ಒಟ್ಟಿನಲ್ಲಿ ಸಿಎಂ ಆಗಮನದ ಹಿನ್ನೆಲೆಯಲ್ಲಿ ಮರಳಾದರೂ ತೆರವಾ ಯಿತು ಎನ್ನುವ ಸಮಾಧಾನ ಸ್ಥಳೀಯ ರದ್ದು. ಮೈದಾನ ಅವ್ಯವಸ್ಥೆ ಕುರಿತು ಉದಯವಾಣಿ ವರದಿ ಮಾಡಿತ್ತು.