ಕೊಪ್ಪಳ: ಜಿಲ್ಲೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ತೆರೆದಿರುವ 8 ಮರಳು ಸಂಗ್ರಹಣಾ ಘಟಕದಲ್ಲಿ ಸಾರ್ವಜನಿಕರಿಗೆ ಮರಳೇ ಸಿಗುತ್ತಿಲ್ಲ. 5 ಸಂಗ್ರಹಣಾ ಘಟಕಗಳೇ ಅಂಟೆ ಕುಂಟೆ ನಡೆಯುತ್ತಿವೆ. ಇಲ್ಲಿ ಜನತೆಗೆ ಉದ್ದೇಶ ಪೂರ್ವಕವೇ ಕೃತಕ ಮರಳು ಅಭಾವ ಸೃಷ್ಟಿ ಮಾಡಲಾಗುತ್ತಿದೆ ಎನ್ನುವ ಆಪಾದನೆ ಕೇಳಿ ಬಂದಿದೆ.
ಇಲಾಖೆ ಅಧಿಕಾರಿಗಳು ಕೊಪ್ಪಳ ತಾಲೂಕಿನ ಮಂಗಳಾಪೂರ, ಕೋಳೂರು, ಕಾಟ್ರಳ್ಳಿ ಭಾಗದಲ್ಲಿ ಕೇಂದ್ರ ತೆರೆದಿದ್ದರೆ, ಯಲಬುರ್ಗಾ ತಾಲೂಕಿನಲ್ಲಿ ಯಡಿಯಾಪೂರ, ಕುಷ್ಟಗಿ ತಾಲೂಕಿನಲ್ಲಿ ಮಾಲಗಿತ್ತಿ, ಗಂಗಾವತಿ ತಾಲೂಕಿನಲ್ಲಿ ಉದ್ದಿಹಾಳ-1 ಮತ್ತು 2ನೇ ಬ್ಲಾಕ್ ತೆರೆದಿದ್ದಾರೆ. ಮರಳು ಇರುವ ಈ 8 ಬ್ಲಾಕ್‌ಗಳ ಪೈಕಿ ಸರಿಯಾಗಿ ನಡೆಯುತ್ತಿರುವುದು ಕೇವಲ 3 ಬ್ಲಾಕ್‌ಗಳು ಮಾತ್ರ. ಉಳಿದಂತೆ ಎಲ್ಲಿಯೂ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಇದರಿಂದ ಜನತೆ ಮನೆ ನಿರ್ಮಾಣ ಸೇರಿದಂತೆ ಇತರೆ ಬಳಕೆಗೆ ಮರಳಿಗಾಗಿ ಎಲ್ಲೆಡೆ ಅಲೆಯುವ ಸ್ಥಿತಿ ನಿರ್ಮಾಣವಾಗಿದೆ.
ಸರ್ಕಾರಿ ಕೆಲಸಕ್ಕೆ ಹೆಚ್ಚು ಪರ್ಮಿಟ್: ಅಚ್ಚರಿ ವಿಷಯವೆಂದರೆ ಇಲಾಖೆ ತೆರೆದಿರುವ ಮರಳು ಸಂಗ್ರಹಣಾ ಕೇಂದ್ರದಲ್ಲಿ 100 ಮೆಟ್ರಿಕ್ ಟನ್ ಮರಳು ಸಂಗ್ರಹಿಸಿದ್ದರೆ ಅದರಲ್ಲಿ 40 ಮೆಟ್ರಿಕ್ ಟನ್ ಹೊರ ಜಿಲ್ಲೆಗೆ ಪೂರೈಸಬಹುದು. 25 ಮೆಟ್ರಿಕ್ ಟನ್ ಸರ್ಕಾರಿ ಕಾಮಗಾರಿಗಳಿಗೆ ಕೊಡಬಹುದು. ಇನ್ನುಳಿದಂತೆ ಮರಳನ್ನು ಜಿಲ್ಲೆಯ ಒಳಗೆ ಪೂರೈಸಲು ನಿಯಮವಿದೆ. ಆದರೆ ವಿವಿಧೆಡೆ ತೆರೆದಿರುವ ತಪಾಸಣಾ ಕೇಂದ್ರದಲ್ಲಿ ಸರ್ಕಾರಿ ಕಾಮಗಾರಿಗಳಿಗೆ ಹೆಚ್ಚು ಬಳಕೆಯಾಗುತ್ತಿದೆಯೇ ವಿನಃ ಜನಕ್ಕೆ ಮರಳು ಸಿಗುತ್ತಿಲ್ಲ. ಜನರು ಮರಳಿಗಾಗಿ ಕೇಂದ್ರಕ್ಕೆ ಸುತ್ತಾಡಿ ಸುತ್ತಾಡಿ ಸುಸ್ತಾಗಿದ್ದಾರೆ.
ಅಕ್ರಮಕ್ಕೆ ತಡೆದೂ ಪರ್ಮಿಟ್ ಕೊಡ್ತಿಲ್ಲ: ಈಲ್ಲೆಯಲ್ಲಿ ಎಲ್ಲಿಯೂ ಮರಳನ್ನು ಅಕ್ರಮವಾಗಿ ಸಾಗಿಸುವಂತಿಲ್ಲ ಎಂದು ಅಧಿಕಾರಿ ವರ್ಗ ಹೇಳುತ್ತದೆ. ಅಕ್ರಮವಾಗಿ ಮರಳು ಸಾಗಿಸಿದರೆ ಸರ್ಕಾರದ ನಿಯಮ ಪ್ರಕಾರ ದಂಡ ಹಾಕುವ ಜತೆಗೆ ವಾಹನಗಳನ್ನು ಸೀಜ್ ಮಾಡುತ್ತಾರೆ. ಆದರೆ ಜನತೆಗೆ ಬೇಕಾದ ಮರಳನ್ನು ಪರ್ಮಿಟ್ ರೂಪದಲ್ಲಿಯೂ ಕೊಡುತ್ತಿಲ್ಲ. ಜನತೆಗೆ ಪರ್ಮಿಟ್ ಪಡೆಯಬೇಕೆಂದರೆ ಹರಸಾಹಸ ಮಾಡುವಂಥ ಸ್ಥಿತಿಯಿದೆ. ಇತ್ತ ಅನಧಿಕೃತವೂ ಸಿಗುತ್ತಿಲ್ಲ. ಅತ್ತ ಪರ್ಮಿಟ್ ಸಿಗುತ್ತಿಲ್ಲ ಎನ್ನುತ್ತಿದೆ ಜನತೆ.
ಬಂದ್ ಆಗಿವೆ ಕೇಂದ್ರಗಳು: ಕೊಪ್ಪಳ ತಾಲೂಕಿನ ಮಂಗಳಾಪೂರ, ಕೋಳೂರು ಹಾಗೂ ಕಾಟ್ರಳ್ಳಿ ಮರಳು ಸಂಗ್ರಹಣಾ ಕೇಂದ್ರಗಳಂತೂ ಬಂದ್ ಆಗಿವೆ. ಮಂಗಳಾಪೂರ ಕೇಂದ್ರ ಕೆಲವು ತಿಂಗಳು ನಡೆದಿತ್ತು. ಇನ್ನೂ ಕೋಳೂರು ಕಾಟ್ರಳ್ಳಿಯಲ್ಲಂತೂ ಕೇಂದ್ರಗಳೇ ಸರಿಯಾಗಿ ನಡೆದಿಲ್ಲ. ಗುತ್ತಿಗೆದಾರ ಒಂದು ವರ್ಷ ಕೇಂದ್ರವನ್ನು ಬಂದ್ ಇಟ್ಟಿದ್ದಾನೆ. ಇದರಿಂದ ಜನತೆ ಮರಳನ್ನು ಎಲ್ಲಿಂದ ಪಡೆಯಬೇಕು. ಜಿಲ್ಲೆಯಲ್ಲಿ ಅಧಿಕೃತ ಮರಳಿಗಿಂತ ಅನಧಿಕೃತ ಮರಳೇ ಜನರಿಗೆ ಸಿಗುತ್ತಿದೆ. ಆದರೆ ದರ ಮಾತ್ರ ಮೂರರಷ್ಟಾಗಿರುತ್ತದೆ. ಆ ಮರಳು ಖರೀದಿಸಲು ಕಷ್ಟ ಎನ್ನುವಂತಾಗಿದೆ. 3000 ರಿಂದ 3500 ರೂ.ಗೆ ಒಂದು ಟ್ರ್ಯಾಕ್ಟರ್ ಮರಳನ್ನು ಮಾರಲಾಗುತ್ತಿದೆ. ಇದಕ್ಕೆ ಕಡಿವಾಣವೇ ಇಲ್ಲವೆಂಬಂತಾಗಿದೆ. ಮರಳು ಮಾಫಿಯಾದಲ್ಲಿ ಉದ್ದೇಶ ಪೂರ್ವಕವೇ ಕೃತಕ ಮರಳು ಅಭಾವ ಸೃಷ್ಟಿಸಲಾಗುತ್ತ್ತಿದೆ ಎಂಬ ಆಪಾದನೆ ಕೇಳಿ ಬಂದಿದೆ. ಇದಕ್ಕೆ ಅಧಿಕಾರಿಗಳ ನಡೆ ಮಾತ್ರ ಮೌನವಾಗಿದೆ.
•8 ಬ್ಲಾಕ್‌ಗಳಲ್ಲಿ 5 ಬ್ಲಾಕ್‌ಗಳು ಅಂಟೆಕುಂಟೆ
•ಸರಿಯಾಗಿ ನಡೆದಿದ್ದು 3 ಬ್ಲಾಕ್‌ಗಳು ಮಾತ್ರ
•ಇಲ್ಲಿ ಅಧಿಕೃತಕ್ಕಿಂತ ಅನಧಿಕೃತವಾಗಿಯೇ ಸಿಗುತ್ತೆ
•ಸರ್ಕಾರಿ ಕಾಮಗಾರಿಗಳಿಗೇ ಬಳಕೆ ಹೆಚ್ಚು
•ದತ್ತು ಕಮ್ಮಾರ