Advertisement

ಗುರು ಭಕ್ತಿಯ ಪಾವಿತ್ರ್ಯ ಮಹತ್ತರ: ವಿಧುಶೇಖರ ಭಾರತೀ ಸ್ವಾಮೀಜಿ

03:45 AM Jun 30, 2017 | Harsha Rao |

ಚಿತ್ತಾರಿ: ಗುರುಭಕ್ತಿಯ ಪಾವಿತ್ರ್ಯ ಎಷ್ಟೊಂದು ಮಹತ್ತರವಾದುದು ಎಂಬುದಕ್ಕೆ ಭಗವಾನ್‌ ಶ್ರೀ ರಾಮಚಂದ್ರ ಪ್ರತ್ಯಕ್ಷ ಉದಾಹರಣೆಯೆಂದು ಶೃಂಗೇರಿ ಜಗದ್ಗುರು ಶ್ರೀ ಭಾರತೀ ತೀರ್ಥ ಮಹಾ ಸನ್ನಿಧಾನಂಗಳವರ ತತ್ಕರಕಮಲ ಸಂಚಾತರಾದ ಶ್ರೀ ವಿಧುಶೇಖರ ಭಾರತೀ ಸ್ವಾಮಿ ಆಶೀರ್ವಚನವಿತ್ತು ಹೇಳಿದರು.

Advertisement

ದಕ್ಷಿಣ ಭಾರತದಾದ್ಯಂತ ಧರ್ಮಯಾತ್ರೆಯನ್ನು ನಡೆಸಿ ಶೃಂಗೇರಿಗೆ ತೆರಳುವ ಮಾರ್ಗವಾಗಿ ಹೊಸ ದುರ್ಗ ತಾಲೂಕಿನ ಚಿತ್ತಾರಿ ಬಾರಿಕ್ಕಾಡು ಶ್ರೀ ಮಲ್ಲಿಕಾರ್ಜುನ ದೇವಳದಲ್ಲಿ ಶ್ರೀಗಳಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು.
ಭಗವಾನ್‌ ಶ್ರೀ ರಾಮಚಂದ್ರನ ಪಿತೃವಾಕ್ಯ ಪರಿಪಾಲನೆ, ಧರ್ಮರಕ್ಷಣೆ, ದ್ವಾಪರ ಯುಗದಲ್ಲಿ ಬೋಧಿಸಿದ ಭಗವದ್ಗೀತೆಯ ಸಂದೇಶ, ಗುರುಭಕ್ತಿಯ ಪರಿ ಣಾಮ ಸಿದ್ಧಿಸಿದ ಅನುಭವವನ್ನು ಸಮಸ್ತರಿಗೂ ತಲುಪಿಸುವ ಮುನ್ನ, ಭಗವಂತ ಗುರುವಿನ ಸ್ಥಾನವನ್ನು ಅಲಂಕರಿಸಿಕೊಂಡಂತೆ ವೇದ್ಯವೆನಿಸುತ್ತದೆ ಎಂದವರು ತಮ್ಮ ಆಶೀರ್ವಚನದಲ್ಲಿ ಅರಿವಿನ ಮುತ್ತುಗಳನ್ನು ಪೋಣಿಸಿದರು.

ಪ್ರತಿಯೊಬ್ಬನು ಗುರುವಿನ ಬೋಧನೆಯನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದರ ಜತೆಗೆ ಸನ್ಮಾರ್ಗದಲ್ಲಿ ನಡೆದರೆ ಸ್ವರ್ಗ. ದುರ್ಮಾರ್ಗದಲ್ಲಿ ನಡೆದರೆ ನರಕವೆಂಬ ನಂಬಿಕೆಗೆ ಬದ್ಧರಾಗಿರಬೇಕು. ಈ ಮೂಲಕ ಆಸ್ತಿಕರೆಂಬ ಮೇರು ಚಿಂತನೆ ಪರಿಪೂರ್ಣತೆ ಪಡೆದುಕೊಳ್ಳುವುದು ಸಾಧ್ಯವೆಂದರು.

ಈ ನಿಟ್ಟಿನಲ್ಲಿ ಸುದೀರ್ಘ‌ ಕಾಲದಿಂದ ಶೃಂಗೇರಿ ಮಠಕ್ಕೆ ತೆರಳಿ ಶ್ರೀ ಶೃಂಗೇರಿ ಶಾರದೆಯ ದರ್ಶನದ ಜೊತೆಗೆ ಗುರುಗಳ ಪಾದಪೂಜೆ ನಡೆಸುತ್ತಿರುವ ರಾಮರಾಜಕ್ಷತ್ರಿಯ ಯಾನೆ ಕೋಟೆಯಾರ್‌ ಶಿಷ್ಯ ಪರಂಪರೆಯ ಮಂದಿಯ ಕಾರ್ಯ ಸರ್ವತ್ರ ಅನುಕರಣೀಯವಾಗಿದೆ. ಇಂಥದೊಂದು ಬೃಹತ್‌ ಕಾರ್ಯಕ್ರಮ ಗುರುಭಕ್ತಿಯ ಪರಿಣಾಮ ಇವರು ಉನ್ನತಿಯತ್ತ ಸಾಗುತ್ತಿರುವುದರ ದ್ಯೋತಕವಾಗಿದೆ ಎಂದು ಶೃಂಗೇರಿ ಶ್ರೀಗಳು ತಮ್ಮ ಆಶೀರ್ವಚನದಲ್ಲಿ ಸ್ಮರಿಸಿಕೊಂಡರು.

ಗಣಹೋಮ, ವಿಶೇಷ ಪೂಜೆ
ಶೃಂಗೇರಿ ಶ್ರೀಗಳ ಆಗಮನ ನಿಮಿತ್ತ ಶ್ರೀ ಮಲ್ಲಿಕಾ ರ್ಜುನ ದೇವಳದಲ್ಲಿ ತಂತ್ರಿವರ್ಯರಾದ ಬ್ರಹ್ಮಶ್ರೀ ಪದ್ಮನಾಭ ಬಾರಿಕ್ಕಾಡುತ್ತಾಯ ಅವರ ಮುಂದಾಳತ್ವದಲ್ಲಿ ಬ್ರಹ್ಮಶ್ರೀ ಸುಬ್ರಹ್ಮಣ್ಯ ಬಾರಿಕ್ಕಾಡುತ್ತಾಯ ಅವರು ಗಣಹೋಮ ಹಾಗೂ ವಿಶೇಷ ಪೂಜೆ ನೆರವೇರಿಸಿದರು. ಗುರುಗಳ ಪಾದಪೂಜೆ, ಭಿಕ್ಷಾವಂದನೆ, ಮಂತ್ರಾಕ್ಷತೆ ಸ್ವೀಕರಿಸುವ ಮೂಲಕ ಧನ್ಯತೆ ಪಡೆದುಕೊಂಡರು.

Advertisement
Advertisement

Udayavani is now on Telegram. Click here to join our channel and stay updated with the latest news.

Next