Advertisement

ಅಂತಃಕರಣವನ್ನು ತಟ್ಟುವ ವೃದ್ಧಾಪ್ಯದ ಬವಣೆಯ ಮೋಕ್ಷ

01:21 AM Jan 03, 2020 | mahesh |

ನಾನಿಲ್ಲಿ ಯಾವುದೇ ಬಿಸಿನೆಸ್‌ ಅಥವಾ ಮರಣದ ವ್ಯಾಪಾರ ಮಾಡ್ತಾ ಇಲ್ಲ ಅನ್ನುವ ಕೃಷ್ಣಾನಂದರ ಖಡಕ್‌ ಮಾತು ನಾಟಕದ ಆರಂಭಕ್ಕೆ ಒಂದು ಬಿಗಿಯನ್ನು ತಂದು ಕೊಡುತ್ತದೆ. ತಮ್ಮ ಸ್ವಂತ ನಿರ್ಧಾರದಿಂದ ನಮ್ಮ ಸೇವೆಯನ್ನು ಬಯಸುವವರಷ್ಟೇ ಇಲ್ಲಿ ಬರಬಹುದು , ಹಣವನ್ನು ನೋಡಿ ಇಲ್ಲಿ ಯಾರನ್ನೂ ಸೇರಿಸಿಕೊಳ್ಳಲಾಗುವುದಿಲ್ಲ ಎಂಬ
ಮಾತು ಅಂತಃಕರಣಕ್ಕೆ ತಟ್ಟುತ್ತದೆ

Advertisement

ಮುಂಬಯಿ ಕಲಾ ಜಗತ್ತು ತಂಡದವರು ಇರಾ ಕಲ್ಲಾಡಿ ಅರಸು ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಮೋಕ್ಷ ನಾಟಕವನ್ನು ಪ್ರದರ್ಶಿಸಿದರು. ತೋನ್ಸೆ ವಿಜಯ ಕುಮಾರ್‌ ಶೆಟ್ಟಿ ಅವರು ದಶಕಗಳ ಹಿಂದೆ ಮುಂಬಯಿ ನಗರದ ವೃದ್ಧರ ಬದುಕಿನ ಕೊನೆಯ ದಿನಗಳ ಜಂಜಾಟದ ಬಗ್ಗೆ ಬರೆದ ನಾಟಕವಿದು. ಒಂದು ಕಾಲದಲ್ಲಿ ಮುಂಬಯಿಯ ಬದುಕಿನ ಜಂಜಾಟದ ಕತೆಯಾಗಿದ್ದರೂ ನಮ್ಮ ಊರು ನಮ್ಮ ಹಳ್ಳಿಯಲ್ಲೂ ಎದುರಾಗುವ ಕತೆ -ವ್ಯಥೆ ಇದು.

ನಾನಿಲ್ಲಿ ಯಾವುದೇ ಬಿಸಿನೆಸ್‌ ಅಥವಾ ಮರಣದ ವ್ಯಾಪಾರ ಮಾಡ್ತಾ ಇಲ್ಲ ಅನ್ನುವ ಕೃಷ್ಣಾನಂದರ ಖಡಕ್‌ ಮಾತು ನಾಟಕದ ಆರಂಭಕ್ಕೆ ಒಂದು ಬಿಗಿಯನ್ನು ತಂದು ಕೊಡುತ್ತದೆ. ತಮ್ಮ ಸ್ವಂತ ನಿರ್ಧಾರದಿಂದ ನಮ್ಮ ಸೇವೆಯನ್ನು ಬಯಸುವವರಷ್ಟೇ ಇಲ್ಲಿ ಬರಬಹುದು , ಹಣವನ್ನು ನೋಡಿ ಇಲ್ಲಿ ಯಾರನ್ನೂ ಸೇರಿಸಿಕೊಳ್ಳಲಾಗುವುದಿಲ್ಲ ಎಂಬ ಮಾತು ಅಂತಃಕರಣಕ್ಕೆ ತಟ್ಟುತ್ತದೆ . ಇಡೀ ನಾಟಕದ ಆಶಯಕ್ಕೆ ಮುನ್ನುಡಿಯಂತೆ ಈ ಮಾತು ಮಾರ್ದನಿಸುತ್ತದೆ.

ಕೃಷ್ಣಾನಂದ ವೃದ್ಧಾಶ್ರಮವೊಂದನ್ನು ನಡೆಸುತ್ತಿರುತ್ತಾರೆ. ಉದಾತ್ತ ಮನಸ್ಸಿನ , ಮಾನವೀಯ ಅಂತಕರಣದ ಕೃಷ್ಣಾನಂದರಿಗೆ ತಾನು ನಡೆಸುತ್ತಿರುವ ವೃದ್ಧಾಶ್ರಮ ಒಂದು ವ್ಯವಹಾರದ ಕೇಂದ್ರವಲ್ಲ. ಆ ಕಾರಣಕ್ಕೆ ಅವರು ಅದನ್ನು ವೃದ್ಧಾಶ್ರಮ ಎಂದು ಕರೆಯದೆ ಮುಕ್ತಿಧಾಮ ಎಂದು ಹೆಸರಿಸಿದ್ದರು. ತಮ್ಮಲ್ಲಿಗೆ ಬರುವವರು ಆಶ್ರಮದ ಹೊರಗಡೆ ಇರುವ ಬೋರ್ಡ್‌ನಲ್ಲಿ ಬರೆದಂತಹ ಮುಕ್ತಿಧಾಮ ಎಂಬ ಹೆಸರನ್ನು ಸರಿಯಾಗಿ ಗಮನಿಸಬೇಕೆಂಬ ಆಗ್ರಹ ಅವರದ್ದು.

ಇಂತಹ ವೃದ್ಧಾಶ್ರಮ ಯಾ ಮುಕ್ತಿಧಾಮಕ್ಕೆ ತನ್ನ ತಂದೆಯನ್ನು ಸೇರಿಸಲು ಕೃಷ್ಣಾನಂದರು ಶೇಖರ್‌ಗೆ ಅನುಮತಿ ನೀಡುವುದಿಲ್ಲ. ಆದರೆ ರಾತ್ರಿಯಾದ ಕಾರಣಕ್ಕೆ ಒಂದು ದಿನದ ಮಟ್ಟಿಗೆ ತಂಗಲು ಅವಕಾಶ ನೀಡುತ್ತಾರೆ. ಆ ಒಂದು ದಿನದ ವಾಸ್ತವ್ಯ ಶೇಖರ್‌ನ ಅಸ್ತಿತ್ವವನ್ನೆ ಅಲುಗಾಡಿಸಿ ಬಿಡುತ್ತದೆ. ತಂದೆ ಮಗನ ಸಂಬಂಧ, ವಾತ್ಸಲ್ಯ ಜೊತೆಗೆ ಮಗನ ಕರ್ತವ್ಯದ ಆತ್ಮಸಾಕ್ಷಿಯನ್ನು ಬಡೆದಿಬ್ಬಿಸುತ್ತದೆ.

Advertisement

ಮಗ ತುಂಬಾ ಬ್ಯುಸಿ ಮನುಷ್ಯ . ಐ.ಟಿ. ಕಂಪೆನಿಯ ದೊಡ್ಡ ಹುದ್ದೆಯಲ್ಲಿರುವವ. ತಂದೆಯನ್ನು ಆಶ್ರಮಕ್ಕೆ ಸಾಗಹಾಕಲು ಬಂದಿದ್ದ. ಆ ರಾತ್ರಿ ಆಶ್ರಮದಲ್ಲಿ ತಂದೆ ಮಗನಿಗೆ ಒಂದಷ್ಟು ಏಕಾಂತವಾಗಿ ಮಾತನಾಡುವ ಸಮಯ ಸಿಕ್ಕಿರುತ್ತದೆ. ಅದರ ಮಗ ಲ್ಯಾಪ್‌ಟಾಪ್‌ ಬಿಡಿಸಿಕೊಂಡು ಅಲ್ಲೂ ಕೆಲಸದಲ್ಲಿ ಮಗ್ನ. ಆದರೂ ತಂದೆ ಇದೇ ಸಿಕ್ಕಿದ ಅವಕಾಶ ಎಂದು ಮಗನನ್ನು ಮಾತಿಗೆ ಎಳೆಯುತ್ತಾನೆ. ಮಗನ ಪಕ್ಕ ಕೂರಲು ತವಕಿಸುತ್ತಾನೆ. ಮಗ ದೂರ ಸರಿದಾಗ ಚಳಿಯ ನೆಪದಲ್ಲಿ ಮಗನ ಸಾಮಿಪ್ಯ ಬಯಸುತ್ತಾನೆ. ಮಗನನ್ನು ಮಾತಿಗೆಳೆಯಲು ಮಗನ ಬಾಲ್ಯದ ದಿನಗಳನ್ನು ನೆನಪಿಸುತ್ತಾನೆ. ಎಲ್ಲದಕ್ಕೂ ಶೇಖರನದ್ದು ನಿರ್ಲಿಪ್ತ ಪ್ರತಿಕ್ರಿಯೆ.

ಈ ಹಂತದಲ್ಲಿ ನಾಟಕದೊಳಗೆ ಮತ್ತೂಂದು ಕತೆ ತೆರೆದು ಕೊಳ್ಳುತ್ತದೆ. ಆಶ್ರಮದಲ್ಲಿ ವೃದ್ಧೆಯೊಬ್ಬರನ್ನು ಕೃಷ್ಣಾನಂದರು ತಾಯಿಗೆ ಸಮಾನರಾಗಿ ಉಚರಿಸಿರುತ್ತಾರೆ. ಈ ಹಿರಿ ತಾಯಿಗೆ ಅಮೆರಿಕದಲ್ಲಿರುವ ತನ್ನ ಮೊಮ್ಮಗನ ಬರುವಿಕೆಗಾಗಿ ಕಾಯುವ ಹಪಾಹಪಿ ಒಂದೆಡೆಯಾದರೆ , ಮೊಮ್ಮಗ ಅಮೆರಿಕದಲ್ಲಿ ಹಿಂದೆಯೇ ಮೃತಪಟ್ಟ ಘಟನೆಯನ್ನು ವೃದ್ಧೆಯಿಂದ ಮುಚ್ಚಿಟ್ಟ ಕೃಷ್ಣಾನಂದರ ತೊಳಲಾಟ ಇನ್ನೊಂದೆಡೆ. ಇಂತಹ ಸನ್ನಿವೇಶದಲ್ಲಿ ಕೃಷ್ಣಾನಂದರು ಒಂದು ಗಳಿಗೆಗಾಗಿ ವೃದ್ಧೆಯ ಮೊಮ್ಮಗನಾಗಿ ನಟಿಸುವಂತೆ ಶೇಖರನನ್ನು ಒತ್ತಾಯ ಮಾಡುತ್ತಾರೆ.

ಶೇಖರ್‌ ಒತ್ತಾಯಕ್ಕೆ ಕಟ್ಟುಬಿದ್ದು ವೃದ್ಧೆಯ ಮೊಮ್ಮಗನಾಗಿ ನಟನೆ ಮಾಡುತ್ತಾನೆ. ಕಣ್ಣು ಕಾಣದ ಇಳಿ ವಯಸ್ಸಿನ ಅಜ್ಜಿ ತನ್ನ ಮೊಮ್ಮಗನನ್ನು ಆಡಿ ಬೆಳಸಿದ ಬಾಲ್ಯವನ್ನು ಕಣ್ಣಿಗೆ ಕಟ್ಟುವಂತೆ ಹೇಳುತ್ತಾ ಸಾಗುವಾಗಲೆಲ್ಲಾ ಶೇಖರ್‌ಗೆ ತನ್ನ ತಂದೆ ತನ್ನನ್ನು ಲಾಲನೆಪಾಲನೆ ಮಾಡಿದ್ದು ಕಣ್ಣ ಮುಂದೆ ಬರುತ್ತದೆ. ಮೊಮ್ಮಗನನ್ನು ನೋಡಿದ ಬಳಿಕವೇ ತಾನು ಸಾಯುದೆಂಬ ಸಂಕಲ್ಪದಲ್ಲಿದ್ದ ಆ ವೃದ್ಧೆ ಮೊಮ್ಮಗನ ಭೇಟಿಯ ಖುಷಿಯಿಂದ ಸಂತೃಪ್ತಳಾಗುತ್ತಾಳೆ, ಅಲ್ಲೇ ಆಕೆಯ ಪ್ರಾಣವು ಹೋಗುತ್ತದೆ.

ಈ ಘಟನೆ ಶೇಖರ್‌ಗೆ ಆಶ್ರಮವಾಸಿ ತಂದೆ ಹಾಗೂ ಮನೆಯಲ್ಲಿ ನಿತ್ಯ ಜೊತೆಯಾಗಿರುವ ತಂದೆಯ ವ್ಯತ್ಯಾಸವನ್ನು ಎದೆ ಬಗೆದು ತೋರಿಸಿಕೊಡುತ್ತದೆ. ತಂದೆಯಾದವನಿಗೂ ವೃದ್ಧಾ$Âಪ್ಯದಲ್ಲಿ ತನ್ನ ಮಕ್ಕಳ ಜೊತೆಗಿರಬೇಕೆಂಬ ಅಂತಹ ಸೆಳೆತ ಏನದು ಎಂಬುದನ್ನು ನಾಟಕ ಸಾಕ್ಷಾತ್‌ಕರಿಸುತ್ತದೆ.ಇವತ್ತು ಈ ತಾಯಿ ಹೋದ ಜಾಗಕ್ಕೆ ನಾಳೆ ನಿನ್ನ ತಂದೆ ಬರುತ್ತಾರೆ ಎಂದು ಕೃಷ್ಣಾನಂದರು ಹೇಳುವ ಮಾತು ಶೇಖರನಿಗೆ ಕರ್ಣ ಕಠೊರವಾಗುತ್ತದೆ. ಆ ಕ್ಷಣವೇ ತನ್ನ ತಂದೆಯೊಂದಿಗೆ ಮರಳಿ ಮನೆಗೆ ಹೋಗಲು ನಿರ್ಧರಿಸುತ್ತಾನೆ.

ತಂದೆ ಮಗನ ಬಾಲ್ಯದ ಉಪ್ಪಿನ ಆಟ , ಕಣ್ಣಾಮುಚ್ಚಾಲೆ ಆಟ ಪ್ರೇಕ್ಷಕರನ್ನು ತಮ್ಮ ಬಾಲ್ಯಕ್ಕೆ ಕೊಂಡೊಯ್ಯುವಷ್ಟು ಮನ ತಟ್ಟುವಂತಿತ್ತು. ತಾನೊಂದು ಪಾಪದ ಪಿಂಡ ಎಂದು ಬಿಕ್ಕಳಿಸುವ ಆಶ್ರಮದ ಪರಿಚಾರಕ ಸೂರ್ಯ ತನ್ನ ನೋವಿನ ಮರೆಯಲ್ಲೂ ಆಶ್ರಮವಾಸಿಗಳ ಪಾಲಿನ ಪ್ರೀತಿಯ ಕಣ್ಮಣಿಯಾಗಿ ಮನಸೆಳೆಯುತ್ತಾನೆ. ತನ್ನ ಮುಗ್ಧತೆಯಲ್ಲೇ ನಾಟಕದ ಲವಲವಿಕೆಯ ಪಾತ್ರವಾಗುತ್ತಾನೆ ಸೂರ್ಯ.

ಒಟ್ಟು ನಾಟಕವು ಅಚ್ಚುಕಟ್ಟಾಗಿ ಮೂಡಿ ಬಂದಿತ್ತು. ನಟರಾದ ಹರೀಶ್‌ , ಕೃಷ್ಣ , ಚಂದ್ರಾವತಿ , ತೋನ್ಸೆ ವಿಜಯ ಕುಮಾರ್‌ ಶೆಟ್ಟಿ ಅವರ ಅಭಿನಯ ಮನೋಜ್ಞವಾಗಿತ್ತು. ಸತೀಶ್‌ ಸುರತ್ಕಲ್‌ ಅವರ ಹಿತಮಿತವಾದ ಸಂಗೀತ , ಲಭ್ಯ ಬೆಳಕಿನ ವ್ಯವಸ್ಥೆಯನ್ನು ಸಮರ್ಥವಾಗಿ ಬಳಸಿಕೊಂಡದ್ದು ತಂಡದ ಹೆಗ್ಗಳಿಕೆ .

ತಾರಾನಾಥ್‌ ಗಟ್ಟಿ, ಕಾಪಿಕಾಡ್‌

Advertisement

Udayavani is now on Telegram. Click here to join our channel and stay updated with the latest news.

Next