ಕೊಪ್ಪಳ: ನಗರದ ಗವಿಸಿದ್ದೇಶ್ವರ ಕಾಲೇಜಿನಲ್ಲಿ ಮತ ಎಣಿಕಾ ಕಾರ್ಯ ನಡೆಯುತ್ತಿರುವ ವೇಳೆಗೆ ಬಿಜೆಪಿ ಕಾರ್ಯಕರ್ತರು ಹೊರಗಡೆ ವಿಜಯೋತ್ಸವ ಆಚರಿಸುತ್ತಿದ್ದರು. ಏಳೆಂಟು ಸುತ್ತುಗಳ ಮತ ಎಣಿಕೆಯಿದ್ದರೂ ಕಮಲಕ್ಕೆ ಗೆಲುವಿನ ಸಿಹಿಯ ಸಂದೇಶ ದೊರೆತಂತೆ ಕಾಣುತ್ತಿತ್ತು. ಹಾಗಾಗಿ ಕ್ಷೇತ್ರದಲ್ಲೆಲ್ಲ ಕೇಸರಿ ಪಡೆ ವಿಜಯೋತ್ಸವಕ್ಕೆ ಮುಂದಾಯಿತು.
ವರವಾಯಿತೇ ನಾಗದೇವತೆ ಪೂಜೆ: ಲೋಕಸಮರದ ವೇಳೆ ಟಿಕೆಟ್ಗಾಗಿ ಭಾರಿ ಪ್ರಯಾಸಪಟ್ಟಿದ್ದ ಸಂಗಣ್ಣ ಕರಡಿ ಅವರ ಸ್ಥಿತಿಯನ್ನು ನೋಡಿ ಅವರ ಕುಟುಂಬ ಟಿಕೆಟ್ ಸಿಗುವಂತೆ ನಾಗದೇವತೆಗೆ ಪೂಜೆ ಮಾಡಿತ್ತು. ಟಿಕೆಟ್ ಸಿಕ್ಕ ಬೆನ್ನಲ್ಲೇ ಕುಟುಂಬ ಸಮೇತ ತೆರಳಿ ಕಮಲಾಪುರದ ಬಳಿಯ ನಾಗದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ, ಗೆಲುವಿಗೆ ಮತ್ತೂಂದು ಸಂಕಲ್ಪ ಮಾಡಿಕೊಂಡಿದ್ದರಂತೆ. ಈಗ ನಾಗದೇವತೆ ಕರಡಿಗೆ ವರದಾನವಾಯಿತೇ ಎನ್ನುವ ಮಾತು ಹಳ್ಳಿಗಳಲ್ಲಿ ಕೇಳಿ ಬಂದಿವೆ.
Advertisement
ಮತ ಎಣಿಕಾ ಕೇಂದ್ರದ ಸುತ್ತ 144 ನಿಷೇಧಾಜ್ಞೆ ಜಾರಿಯಲ್ಲಿದ್ದಿದ್ದರಿಂದ ಸ್ವತಃ ಸಂಗಣ್ಣ ಕರಡಿ ಅವರಿಗೆ ಮೆರವಣಿಗೆ ನಡೆಸಲು ಪೊಲೀಸರು ಅವಕಾಶ ಕಲ್ಪಿಸಲಿಲ್ಲ. ಗಂಜ್ ಸರ್ಕಲ್ ಬಳಿಯೇ ಬಂದು ಕರಡಿ ಅವರು ಕಾರ್ಯಕರ್ತರೊಂದಿಗೆ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡರು. ಬಳಿಕ ಎಲ್ಲೆಡೆ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ಮಹಿಳೆಯರು ಸಿಹಿ ಹಂಚಿ ಸಂಭ್ರಮಿಸಿದರು.