Advertisement

ಕಾನ್ಕಿ ಸರಕಾರಿ ಶಾಲೆ ಅಭಿವೃದ್ಧಿಗೆ ಬೇಕಿದೆ ನೆರವು

12:37 AM Sep 28, 2019 | Sriram |

ಜಡ್ಕಲ್‌: ಬೈಂದೂರು ವಲಯದ ಜಡ್ಕಲ್‌ ಗ್ರಾ.ಪಂ. ವ್ಯಾಪ್ತಿಯ ಮುದೂರು ಸಮೀಪದ ಕಾನ್ಕಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯು ಮೂಲ ಸೌಕರ್ಯ ವಂಚಿತವಾಗಿದೆ. ಸಾವಿರಾರು ಮಂದಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ ಗ್ರಾಮೀಣ ಪ್ರದೇಶದ ಈ ಸರಕಾರಿ ಶಾಲೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು, ಶಿಕ್ಷಣ ಇಲಾಖೆಯೊಂದಿಗೆ ಊರಿನವರು ಕೈಜೋಡಿಸಬೇಕಾದ ತುರ್ತು ಈಗಿನದು.

Advertisement

ಮುದೂರು ಸಮೀಪದ ಕಾನ್ಕಿಯ ಪ್ರಕೃತಿ ಸೌಂದರ್ಯದ ಮಧ್ಯೆ ಕಂಗೊಳಿಸಬೇಕಿದ್ದ ಸರಕಾರಿ ಕಿ.ಪ್ರಾ. ಶಾಲೆಯೊಂದು, ಮೂಲ ಸೌಕರ್ಯವಿಲ್ಲದೆ ಅಸ್ತಿತ್ವವನ್ನೇ ಕಳೆದುಕೊಂಡಂತಿದೆ. ಈ ಶಾಲೆಗೆ ಸುಮಾರು 50 ವರ್ಷಗಳಿಗೂ ಹಿಂದಿನ ಇತಿಹಾಸವಿದೆ. ಸಾವಿರಾರು ಮಂದಿ ವಿದ್ಯಾರ್ಥಿಗಳು ವಿದ್ಯಾರ್ಜನೆಗೈದು, ಉತ್ತಮ ಭವಿಷ್ಯ ಕಟ್ಟಿಕೊಂಡ ಈ ಶಾಲೆಯ ಭವಿಷ್ಯವೇ ಆತಂಕದಲ್ಲಿದ್ದಂತಿದೆ.

16 ವಿದ್ಯಾರ್ಥಿಗಳು
ಈ ಶಾಲೆಯಲ್ಲಿ 1ರಿಂದ 5ನೇ ತರಗತಿಯವರೆಗೆ ಕಲಿಸಲಾಗುತ್ತಿದ್ದು, 1 ರಲ್ಲಿ 4 ಮಕ್ಕಳು, 2ರಲ್ಲಿ ಒಬ್ಬ, 3 ರಲ್ಲಿ 3, 4 ರಲ್ಲಿ 5, 5 ರಲ್ಲಿ 3 ಮಂದಿ ಸೇರಿ ಒಟ್ಟು 16 ಮಕ್ಕಳಿದ್ದಾರೆ.
ಮುಖ್ಯ ಶಿಕ್ಷಕರೊಬ್ಬರಿದ್ದು, ಮತ್ತೂಬ್ಬರು ಗೌರವ ಶಿಕ್ಷಕಿಯಿದ್ದಾರೆ.

ಶೌಚಾಲಯಕ್ಕಿಲ್ಲ ಭದ್ರತೆ
ಶಾಲೆಯ ಶೌಚಾಲಯದ ಬಾಗಿಲು ಮುರಿದು ಹೋಗಿ, ಹಲವು ತಿಂಗಳೇ ಕಳೆದರೂ, ದುರಸ್ತಿಗೆ ಬೇಕಾದ ಅನುದಾನ ನೀಡುವಲ್ಲಿ ಸಂಬಂಧಪಟ್ಟ ಇಲಾಖೆಯಾಗಲಿ, ಜನಪ್ರತಿನಿಧಿಗಳಾಗಲಿ ಮುಂದಾಗುತ್ತಲೇ ಇಲ್ಲ. ಹೆಣ್ಣು ಮಕ್ಕಳಿರುವ ಈ ಶಾಲೆಯಲ್ಲಿನ ಶೌಚಾಲಯ ಬಳಸಲಾಗದ ಸ್ಥಿತಿಯಲ್ಲಿದೆ. ಮೇಲ್ಛಾವಣಿ ಕೂಡ ಹಳೆಯದಾಗಿದ್ದು, ಕಿಟಕಿಗೆ ಬಾಗಿಲುಗಳೇ ಇಲ್ಲವಾಗಿದೆ. ಸ್ವಂತ ನೀರಿನ ಮೂಲವೂ ಸಹ ಇಲ್ಲ.

50 ವರ್ಷಗಳ ಇತಿಹಾಸ
ಈ ಶಾಲೆಗೆ 50 ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದೆ. 15 ವರ್ಷಗಳ ಹಿಂದಿನವರೆಗೂ ಇಲ್ಲಿ ಪ್ರತಿ ಶೈಕ್ಷಣಿಕ ಸಾಲಿನಲ್ಲೂ 100 ಕ್ಕೂ ಹೆಚ್ಚು ಮಕ್ಕಳು ಕಲಿಯುತ್ತಿದ್ದರು.
ಆದರೆ ಇಲ್ಲೇ ಸಮೀಪದ ಆಂಗ್ಲ ಮಾಧ್ಯಮ ಶಾಲೆಯೊಂದು ಆರಂಭವಾಗಿ, ಈ ಶಾಲೆಗೆ ಹೊಡೆತ ಬಿದ್ದಿದೆ. ಮಕ್ಕಳ ಸಂಖ್ಯೆ ಗಣನೀಯವಾಗಿ ಕುಸಿದಿದೆ ಎನ್ನುವುದಾಗಿ ಇಲ್ಲಿನ ಹಿರಿಯರೊಬ್ಬರು ಹೇಳುತ್ತಾರೆ.

Advertisement

ಎರಡೇ ಕೋಣೆ – 5 ತರಗತಿ
ಈ ಶಾಲೆಯಲ್ಲಿ 1 ರಿಂದ 5 ನೇ ತರಗತಿಯವರೆಗೆ ಕಲಿಸಲಾಗುತ್ತಿದ್ದರೂ, ಇಲ್ಲಿರುವುದು ಕೇವಲ ಎರಡು ಕೋಣೆಗಳು ಮಾತ್ರ. ಒಟ್ಟು 3 ಕೋಣೆಗಳಿದ್ದರೂ, ಅದರಲ್ಲಿ ಒಂದು ಬಿಸಿಯೂಟ ತಯಾರಿಗೆ ಬಳಕೆಯಾಗುತ್ತಿದೆ. ಆ ಅಡುಗೆ ಕೋಣೆ ಸುಮಾರು 35 – 40 ವರ್ಷಗಳ ಹಿಂದೆ ನಿರ್ಮಿಸಿದ್ದ ಕಟ್ಟಡವಾಗಿದ್ದು, ಅದು ಕೂಡ ಭಾರೀ ಗಾಳಿ – ಮಳೆಗೆ ಕುಸಿಯುವ ಭೀತಿಯಿದೆ. ಇನ್ನು ಪಾಠ – ಪ್ರವಚನ ನಡೆಯುವ ಇನ್ನುಳಿದ ಎರಡು ಕೋಣೆಗಳು ಕೂಡ ಮಣ್ಣಿನ ಗೋಡೆಯದ್ದಾಗಿದ್ದು, ಅದು ಸುಮಾರು 20 ವರ್ಷಗಳ ಹಿಂದೆ ನಿರ್ಮಿಸಿದ್ದಾಗಿದೆ.

ಮನವಿ ಸಲ್ಲಿಸಲಾಗಿದೆ
ಶಾಲೆಯ ಶೌಚಾಲಯದ ಬಾಗಿಲು ಮುರಿದಿರುವ ಬಗ್ಗೆ ಈಗಾಗಲೇ ಸ್ಥಳೀಯ ಪಂಚಾಯತ್‌ಗೆ ಮನವಿ ಸಲ್ಲಿಸಲಾಗಿದೆ. ಇನ್ನು ಸಂಬಂಧಪಟ್ಟ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೂ ಮನವಿ ಮಾಡಲಾಗಿದೆ. ಸುಮಾರು 3 ವರ್ಷಗಳ ಹಿಂದೊಮ್ಮೆ ಈ ಶಾಲೆಯ ದುರಸ್ತಿಗೆ ಜಿ.ಪಂ. ನಿಂದ 1 ಲಕ್ಷ ರೂ. ಅನುದಾನ ನೀಡಲಾಗಿತ್ತು ಅಷ್ಟೇ.
-ದೇವಯ್ಯ, ಮುಖ್ಯ ಶಿಕ್ಷಕರು

ಪ್ರಸ್ತಾವನೆ ಸಲ್ಲಿಸಲಾಗಿದೆ
ಇಲಾಖೆಯಿಂದ ನಮ್ಮ ವಲಯದ ಶಾಲೆಗಳ ದುರಸ್ತಿಗೆ ಪ್ರತ್ಯೇಕ ಅನುದಾನ ಅಂತ ಬರುವುದಿಲ್ಲ. ಈ ಬಗ್ಗೆ ಸ್ಥಳೀಯ ಪಂಚಾಯತ್‌, ತಾ.ಪಂ. ಅಥವಾ ಜಿ.ಪಂ. ಸದಸ್ಯರ ಗಮನಕ್ಕೆ ತಂದು ದುರಸ್ತಿಗೆ ಬೇಡಿಕೆ ಸಲ್ಲಿಸಬಹುದು. ಕಾನ್ಕಿ ಶಾಲೆ ಸಹಿತ ಬೈಂದೂರು ವಲಯದಲ್ಲಿ ಮಳೆಯಿಂದ ಹಾನಿಗೊಳಗಾದ ಎಲ್ಲ ಶಾಲೆಗಳ ದುರಸ್ತಿ ಸಂಬಂಧ ಈಗಾಗಲೇ ಶಾಸಕರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
-ಜ್ಯೋತಿ, ಕ್ಷೇತ್ರ ಶಿಕ್ಷಣಾಧಿಕಾರಿ, ಬೈಂದೂರು ವಲಯ

ಇದೇ ಶಾಲೆ ಆಸರೆ
ಈ ಶಾಲೆಗೆ ಕಾನ್ಕಿ ಮಾತ್ರವಲ್ಲದೆ, ವೈಲಾಳಿ, ದುಪ್ತಿ, ಹೊಳ್‌ಮಕ್ಕಿ, ಬೂರ್ದಡಿ ಕಡೆಗಳಿಂದ ಇಲ್ಲಿಗೆ ಬರುತ್ತಾರೆ. ಸುತ್ತಮುತ್ತಲಿನ ಊರುಗಳಿಗೆ ಈ ಕಿರಿಯ ಪ್ರಾಥಮಿಕ ಶಾಲೆಯೇ ಆಸರೆಯಾಗಿದೆ. ಸಮೀಪದಲ್ಲಿ ಪ್ರೌಢಶಾಲೆಯಿದ್ದರೂ, ಹತ್ತಿರದಲ್ಲಿರುವ ಪ್ರಾಥಮಿಕ ಶಾಲೆ ಇದೊಂದೆ. ಇದು ಬಿಟ್ಟರೆ ಮೆಕ್ಕೆಯಲ್ಲಿದೆ, ಇನ್ನು ಸುಮಾರು 6 ಕಿ.ಮೀ. ದೂರದ ಸೆಳ್ಕೊàಡು ಹಾಗೂ 3-4 ಕಿ.ಮೀ. ದೂರದ ಬೀಸಿನಪಾರೆಯಲ್ಲಿದೆ.

-ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next