ದಾವಣಗೆರೆ: ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಓಟ ಹಮ್ಮಿಕೊಂಡು ಮಾರ್ಗಮಧ್ಯೆ ಭಾನುವಾರ ನಗರಕ್ಕೆ ಆಗಮಿಸಿದ ಬೆಂಗಳೂರು ಮೂಲದ ರೂಪಾ ಹಾಗೂ ಕುಮಾರ್ ದಂಪತಿ ನೇತೃತ್ವದ ರನ್ ಫಾರ್ ಮೋದಿ ತಂಡವನ್ನು ನಗರದ ಅಂಬೇಡ್ಕರ್ ವೃತ್ತದಲ್ಲಿ ಟೀಂ ಮೋದಿ, ಹಿಂದೂ ಜಾಗರಣಾ ವೇದಿಕೆಯಿಂದ ಸ್ವಾಗತಿಸಲಾಯಿತು.
ಈ ವೇಳೆ ರನ್ ಫಾರ್ ಮೋದಿ ತಂಡದ ನೀಲಗುಂದದ ಮಲ್ಲಪ್ಪ ಕುಮಾರ್ ಮಾತನಾಡಿ, ವಿಶ್ವನಾಯಕ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೂಮ್ಮೆ ದೇಶದ ಅಧಿಕಾರದ ಚುಕ್ಕಾಣಿ ಹಿಡಿಯಬೇಕು ಎಂಬುದು ಓಟದ ಮುಖ್ಯ ಉದ್ದೇಶವಾಗಿದೆ ಎಂದರು. ಅದಕ್ಕಾಗಿ ಜ.26 ರಿಂದ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ರನ್ ಫಾರ್ ಮೋದಿ ಎಂಬ ಶೀರ್ಷಿಕೆಯಡಿ 3600 ಕಿ. ಮೀ. ಓಟ ಹಮ್ಮಿಕೊಂಡಿದ್ದು, ಈಗಾಗಲೇ 900ಕ್ಕೂ ಹೆಚ್ಚು ಕಿ.ಮೀ ಕ್ರಮಿಸಿದ್ದೇವೆ ಎಂದರು.
ಈ ಯಾತ್ರೆ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆ, ಯೋಜನೆಗಳ ಬಗ್ಗೆ ಜನರಿಗೆ ಪರಿಚಯ ಮಾಡಿಕೊಡುತ್ತಿದ್ದೇವೆ. ಜೊತೆಗೆ ಸ್ವೀಟ್ ಇಂಡಿಯಾ, ಫಿಟ್ ಇಂಡಿಯಾ, ಬಿಪಿ-ಷುಗರ್ ಕ್ವಿಟ್ ಇಂಡಿಯಾ ಘೋಷಣೆಯೊಂದಿಗೆ ಉತ್ತಮ ಆರೋಗ್ಯದ ಅರಿವು ಮೂಡಿಸಲಾಗುತ್ತಿದೆ ಎಂದರು.
ಅಲ್ಲದೇ ಸ್ವಚ್ಛ ಭಾರತ್ ಯೋಜನೆಯ ತಿಳಿವಳಿಕೆ ಮೂಡಿಸಲಾಗುತ್ತಿದೆ. ಜೊತೆಗೆ ದೇಶದ ಗಡಿ ಕಾಯುತ್ತಿರುವ ಸೈನಿಕರಿಗಾಗಿ ಕಾಣಿಕೆ ಸಂಗ್ರಹಿಸುತ್ತಿದ್ದು, ಯಾತ್ರೆ ನಂತರ ಪ್ರಧಾನಿ ಮೋದಿ ಅವರ ಮೂಲಕ ಸೈನಿಕರಿಗೆ ಮುಟ್ಟಿಸುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು. ರನ್ ಫಾರ್ ಮೋದಿ ತಂಡದ ರೂಪಾ ಮಾತನಾಡಿ, ನಮ್ಮ ಉದ್ದೇಶದಲ್ಲಿ ಯಾವುದೇ ಸ್ವಾರ್ಥವಿಲ್ಲ. ಮತ್ತೂಮ್ಮೆ ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾಗಿ ಅಧಿಕಾರಕ್ಕೆ ಬರಬೇಕೆಂಬುದು ಮುಖ್ಯ ಧ್ಯೇಯ ಹಾಗೂ ಉದ್ದೇಶವಾಗಿದೆ. ಏ.10ಕ್ಕೆ ಓಟ ಅಂತ್ಯಗೊಳಿಸುವ ಗುರಿ ಇದೆ ಎಂದರು. ಈ ವೇಳೆ ಟೀಂ ಮೋದಿ ಸಂಚಾಲಕಿ ಶಾರದ, ಹಿಂದೂ ಜಾಗರಣಾ ವೇದಿಕೆ ಸಂಚಾಲಕ ಎಸ್.ಟಿ. ವೀರೇಶ್, ರಾಜನಹಳ್ಳಿ ಶಿವಕುಮಾರ್, ಪಿ.ಸಿ. ಶ್ರೀನಿವಾಸ್, ಧನುಷ್, ಕಾರ್ತಿಕ್, ಸತೀಶ್ ಪೂಜಾರಿ ಇತರರು ಇದ್ದರು.