ಕಲಬುರಗಿ: ರಾಜ್ಯದಲ್ಲಿ ಇಲ್ಲಿಯವರೆಗೆ ಆಡಳಿತ ಮಾಡಿದ ಪಕ್ಷಗಳು ಹಾಗೂ ವಿರೋಧ ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಇವುಗಳಿಂದ ಜನರಿಗೆ ಕಿಂಚಿತ್ತೂ ಒಳ್ಳೆಯದಲ್ಲಾಗಿಲ್ಲ ಎಂದು ಆಮ್ ಆದ್ಮಿ ಪಕ್ಷದ ದಕ್ಷಿಣ ಉಸ್ತುವಾರಿ ಸಿದ್ಧು ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಹಿಂದಿ ಪ್ರಚಾರ ಸಭೆಯಲ್ಲಿ ಶನಿವಾರ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಬಿಜೆಪಿ, ಕಾಂಗ್ರೆಸ್ ತೊರೆದು ಬಂದ ಕಾರ್ಯಕರ್ತರಾದ ಹೋರಾಟಗಾರ, ಸಾಹಿತಿ ಪ್ರೊ| ಶಿವರಾಜ ಪಾಟೀಲ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡು ಅವರು ಮಾತನಾಡಿದರು.
ರಾಜಕಾರಣಿಗಳು ತಮ್ಮ ಸ್ವಾರ್ಥ ಮತ್ತು ಅಧಿಕಾರದ ಆಸೆಗಾಗಿ ಒಂದಷ್ಟು ಕೆಲಸ ಮಾಡಿದ್ದೇವೆಂದು ತೋರಿಸಿದ್ದಾರೆಯೇ ಹೊರತು ಉತ್ತಮ ಸೇವೆ ಮಾಡಿಲ್ಲ. ಆದರೆ ಆಮ್ ಆದ್ಮಿ ಪಕ್ಷದಲ್ಲಿ ಮೊದಲು ಜನರಿಗೆ ಬೇಕಾಗಿರುವ ಅಭಿವೃದ್ಧಿ ಕಡೆ ಹೆಚ್ಚಿನ ಗಮನ ನೀಡಲಾಗುತ್ತಿದೆ. ಸಾಮಾನ್ಯ ವಕ್ತಿಗೆ ಬೇಕಾಗಿರುವ ಶುದ್ಧ ನೀರು, ವಿದ್ಯುತ್, ಉತ್ತಮ ಪರಿಸರ ಹಾಗೂ ಉದ್ಯೋಗ ಕಡೆ ಹೆಚ್ಚಿನ ಗಮನ ನೀಡಲಾಗುತ್ತಿದೆ ಎಂದರು.
ನಗರಾಧ್ಯಕ್ಷ ಸಜ್ಜಾದ ಅಲಿ ಇನಾಂದಾರ ಮಾತನಾಡಿ, ಜನರಿಗೆ ಉತ್ತಮ ಆಡಳಿತ ಹಾಗೂ ಉತ್ತಮ ಚಾರಿತ್ರ್ಯ ಹೊಂದಿರುವ ವ್ಯಕ್ತಿಗಳು ರಾಜಕೀಯದಲ್ಲಿ ಬೇಕಾಗಿದೆ. ಹೀಗಾಗಿ ನಾವು ರಾಜಕೀಯ ಮಾಡುವುದಕ್ಕಾಗಿ ಬಂದಿಲ್ಲ. ರಾಜಕೀಯ ವ್ಯವಸ್ಥೆ ಬದಲಿಸಲು ಬಂದಿದ್ದೇವೆ. ಸಾಮಾನ್ಯ ಜನರು ಹಣದ ಆಸೆಗೆ ಮತ ಮಾರಿಕೊಳ್ಳುವುದನ್ನು ಬಿಡಬೇಕು. ಈ ನಿಟ್ಟಿನಲ್ಲಿ ನಾವು ಕೆಲಸ ಮಾಡಬೇಕು ಎಂದು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು.
ಕೇಂದ್ರ ಸಮಿತಿ ರಾಜ್ಯ ಉಸ್ತುವಾರಿ ಉಪ ಪ್ರಭಾರಿ ಉಪೇಂದ್ರ ಗಾಂವಕರ ಮಾತನಾಡಿದರು. ಕೇಂದ್ರ ಸಮಿತಿ ರಾಜ್ಯ ಉಸ್ತುವಾರಿ ವಿವೇಕಾನಂದ, ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಜಗದೀಶ ಬಳ್ಳಾರಿ, ಮುಖಂಡರಾದ ಚಂದ್ರಶೇಖರ ಹಿರೇಮಠ, ಶೇಖರ ಸಿಂಗ್, ಮೋಶಿನ್, ಕಿರಣ ರಾಠೊಡ, ಸಚಿನ್ ಕೋಗನೂರ, ವಿವೇಕ ಕೋಗನೂರ, ಸಿದ್ಧು ಕೋಗನೂರ, ಬಸವರಾಜ ಕಲೇಕರ ಹಾಗೂ ಇನ್ನಿತರರು ಇದ್ದರು.