Advertisement

ಪಾಳುಬಿದ್ದ ತಹಶೀಲ್ದಾರ್‌ ವಸತಿಗೃಹ

12:24 PM Dec 21, 2019 | Suhan S |

ಹುಮನಾಬಾದ: ಪಟ್ಟಣದ ತಹಶೀಲ್ದಾರ್‌ ವಾಸ್ತವ್ಯದ ವಸತಿಗೃಹ ನಿರ್ವಹಣೆ ಕೊರತೆಯಿಂದ ಕಳೆದ ಒಂದು ವರ್ಷದಿಂದ ಬಳಕೆ ಇಲ್ಲದೇ ಪಾಳು ಬಿದ್ದಿದೆ.

Advertisement

ಕಳೆದ 3 ದಶಕದ ಹಿಂದೆ ನಿರ್ಮಿಸಲಾದ ಕಟ್ಟಡದಲ್ಲಿ ಕಳೆದೊಂದು ವರ್ಷದ ಹಿಂದಿನವರೆಗೆ ಅಂದರೆ ಮೂರು ವರ್ಷಕ್ಕೂ ಅಧಿಕ ಅವಧಿ ಯವರೆಗೆ ಸೇವೆ ಸಲ್ಲಿಸಿದ್ದ ತಹಶೀಲ್ದಾರ್‌ ಡಿ.ಎಂ. ಪಾಣಿ ಹಳೆಯ ಗೋಡೆಗಳಿಗೆ ಪಿಒಪಿ ಮಾಡಿಸಿ, ಹೊಸ ಬಣ್ಣ ಬಳಿಸಿದ್ದಾರೆ. ತಮ್ಮ ಇತಿಮಿತಿಯಲ್ಲಿ ಸಾಧ್ಯವಾದಷ್ಟು ದುರಸ್ತಿ ಕೈಗೊಂಡು ಈ ಕಟ್ಟಡದಲ್ಲೇ ಉಳಿದುಕೊಂಡಿದ್ದರು.

ಆದರೆ ಡಿ.ಎಂ. ಪಾಣಿ ಇಲ್ಲಿಂದ ಚಿತ್ತಾಪುರಕ್ಕೆ ವರ್ಗವಾಗಿ ಹೋದ ನಂತರ ಆ ಸ್ಥಾನಕ್ಕೆ ಬಂದಿರುವ ತಹಶೀಲ್ದಾರ್‌ ನಾಗಯ್ಯಸ್ವಾಮಿ ಹಿರೇಮಠ ಆ ಕಟ್ಟಡ ಬಳಕೆಗೆ ಯೋಗ್ಯವಿಲ್ಲವೆಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸಮುದಾಯ ಭವನದ ಪಕ್ಕದ ಲೋಕೋಪಯೋಗಿ ಇಲಾಖೆ ವಸತಿಗೃಹದಲ್ಲಿ ಉಳಿದುಕೊಂಡಿದ್ದಾರೆ.

ಉಂಡಾಡಿಗಳ ತಾಣ: ತಹಶೀಲ್ದಾರ್‌ ಇದ್ದಾಗಲೇ ರಾತ್ರಿ ಸಮಯದಲ್ಲಿ ಆ ಕಟ್ಟಡದ ಆಸುಪಾಸು ಉಂಡಾಡಿಗಳು ಕುಳಿತು ಜೂಜು ಆಡುವುದು, ಮದ್ಯ ಸೇವಿಸುವುದು ಸೇರಿದಂತೆ ವ್ಯರ್ಥ ಕಾಲಹರಣ ಮಾಡುತ್ತಿದ್ದರು. ಈಗ ಯಾರೂ ಇಲ್ಲದಿರುವುದು ಉಂಡಾಡಿಗಳಿಗೆ ಅನುಕೂಲವಾಗಿದೆ. ಹಗಲು-ರಾತ್ರಿ ಎನ್ನದೇ ನಿತ್ಯ ಅನೇಕರು ವಸತಿಗೃಹ ಬಾಗಿಲು, ಕಿಟಕಿ ಸಂಪೂರ್ಣ ಮುರಿದು ದುಶ್ಚಟಗಳನ್ನು ಮಾಡುವ ಅಡ್ಡೆಯನ್ನಾಗಿ ಮಾಡಿಕೊಂಡಿದ್ದಾರೆ.

ಮುರಿದ ಪರಿಕರ: ವಸತಿಗೃಹದಲ್ಲಿನ ಸ್ನಾನ ಕೋಣೆಯಲ್ಲಿ ನಲ್ಲಿ, ವಿವಿಧ ಪರಿಕರ ಅಲ್ಲದೇ ವಿದ್ಯುತ್‌ ವೈರಿಂಗ್‌ ಕಿತ್ತು ಬಲ್ಬ್ಗಳನ್ನು ಒಡೆದಿದ್ದಾರೆ. ಶೌಚಾಲಯದಲ್ಲಿ ಅಳವಡಿಸಿದ್ದ ಎಲ್ಲ ಪರಿಕರಗಳು ಒಡೆದು ಹಾಳಾಗಿವೆ. ಕೋಣೆಯಲ್ಲಿ ನೋಡಿದಲ್ಲೆಲ್ಲ ಸಿಗರೇಟ್‌ ಪ್ಯಾಕೆಟ್‌, ಮದ್ಯದ ಬಾಟಲ್‌ಗ‌ಳು ಸೇರಿದಂತೆ ಇತರೆ ನಿರುಪಯುಕ್ತ ವಸ್ತುಗಳೇ ರಾರಾಜಿಸುತ್ತವೆ.

Advertisement

ವಿಷಜಂತುಗಳ ಹಾವಳಿ: ವಸತಿಗೃಹ ಪ್ರಾಂಗಣದಲ್ಲಿ ಗಿಡಗಂಟಿ ಬೆಳೆದ ಹಿನ್ನೆಲೆಯಲ್ಲಿ ಆಗಾಗ ವಿಷ ಜಂತುಗಳು-ಹಂದಿಗಳು ಕಾಣಿಸಿಕೊಳ್ಳುತ್ತವೆ ಸಾರ್ವಜನಿಕರು ಹೇಳುತ್ತಾರೆ. ನಸುಕಿನ ಜಾವ ಮತ್ತು ರಾತ್ರಿ ಸಮಯದಲ್ಲಿ ತಾಲೂಕು ದಂಡಾಧಿಕಾರಿಗಳ ವಸತಿಗೃಹ ಪ್ರಾಂಗಣ ಸಾರ್ವಜನಿಕ ಶೌಚಾಲಯವಾಗಿ ಬಳಕೆಯಾಗುತ್ತಿರುವುದು ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಈವರೆಗಿನ ಅನೇಕ ತಹಶೀಲ್ದಾರ್‌ಗೆ ಆಶ್ರಯತಾಣವಾಗಿದ್ದ ವಸತಿಗೃಹವೀಗ ನಿರ್ವಹಣೆ ಕೊರತೆಯಿಂದ ಹಾಳಾಗಿದೆ.

ಈಗಿರುವ ಸ್ಥಿತಿಯಲ್ಲಿ ದುರಸ್ತಿ ಕೈಗೊಳ್ಳದಿದ್ದರೆ ವರ್ಷದೊಳಗೆ ಸಂಪೂರ್ಣ ಶಿಥಿಲಾವಸ್ಥೆ ತಲುಪುತ್ತದೆ. ಆದ್ದರಿಂದ ಕಟ್ಟಡ ನೆಲ ಕಚ್ಚುವ ಮುನ್ನ ಬಳಕೆ ಅನುಕೂಲ ಮಾಡಿಕೊಡಬೇಕೆಂಬುದು ಸಾರ್ವಜನಿಕರ ಒತ್ತಾಸೆ.

 

-ಶಶಿಕಾಂತ ಕೆ.ಭಗೋಜಿ

Advertisement

Udayavani is now on Telegram. Click here to join our channel and stay updated with the latest news.

Next