ಮುಳಬಾಗಿಲು: ಕನ್ನಡ ನಾಡು ನುಡಿ, ಸಾಹಿತ್ಯವನ್ನು ತಾಲೂಕಿನಲ್ಲಿ ಪಸರಿಸಲು ಕನ್ನಡ ಸಾಹಿತ್ಯ ಪರಿಷತ್ ಘಟಕವು ತನ್ನ ಕಾರ್ಯಚಟುವಟಿಕೆಗಳಿಗೆ ಒಂದೂವರೆ ವರ್ಷಗಳ ಹಿಂದೆ ಪ್ರಾರಂಭಿಸಿದ ಕಚೇರಿ ಪದಾಧಿಕಾರಿಗಳ ನಿರ್ಲಕ್ಷ್ಯದಿಂದ ಪಾಳುಬಿದ್ದಿದೆ. ಸುತ್ತಲೂ ಗಿಡ ಗಂಟಿಗಳು ಬೆಳೆದು ಮಲಮೂತ್ರ ವಿಸರ್ಜನಾ ತಾಣವಾಗಿದೆ.
ಆಂಧ್ರದಂಚಿನಲ್ಲಿರುವ ತಾಲೂಕಿನ 30 ಕಿ.ಮೀ. ವ್ಯಾಪ್ತಿಯಲ್ಲಿ 350 ಹಳ್ಳಿಗಳಲ್ಲಿ 3ಲಕ್ಷಕ್ಕೂ ಅಧಿಕ ಜನಸಂಖ್ಯೆ ಇದೆ. ಇಲ್ಲಿನ ಜನರ ಮಾತೃ ಭಾಷೆ ಮತ್ತು ಆಡಳಿತ ಭಾಷೆ ಕನ್ನಡವೇ ಆದರೂ, ಆಡು ಭಾಷೆ ಮಾತ್ರ ತೆಲುಗು. ಹೀಗಾಗಿ ತಾಲೂಕಿನಲ್ಲಿ ಕನ್ನಡ ಅಭಿವೃದ್ಧಿ ಪಡಿಸಲು ಸಂಘಟನೆಗಳ ಹೋರಾಟಗಾರರಲ್ಲದೆ, ಸರ್ಕಾರಿ ನೌಕರಿಯಲ್ಲಿರುವ ಉದ್ಯೋಗಿಗಳು ಮತ್ತು ಭಾಷಾ ಜ್ಞಾನವಿರುವ ಮೇಧಾವಿಗಳು ಕಸಾಪದಲ್ಲಿ ಸದಸ್ಯತ್ವ ಹೊಂದಿ, ಕನ್ನಡ ಸಾಹಿತ್ಯ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಮೂಲಕ ಕನ್ನಡದ ಉಳಿವಿಗಾಗಿ ಶ್ರಮಿಸುತ್ತಿದ್ದಾರೆ.
ಮೇನಲ್ಲಿ ಉದ್ಘಾಟನೆ: ಇಂತಹ ಧ್ಯೇಯೋದ್ದೇಶಗಳಿಗಾಗಿ ಕಸಾಪ ಘಟಕವು ಒಂದೂವರೆ ವರ್ಷಗಳ ಹಿಂದೆ ಕನ್ನಡ ಕಾರ್ಯ ಚಟುವಟಿಕೆ ಕೈಗೊಳ್ಳಲು ಸಾರ್ವಜನಿಕ ಶಿಕ್ಷಣ ಇಲಾಖೆಗೆ ಸೇರಿದ ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಹೊಂದಿಕೊಂಡಿರುವ ಕಟ್ಟಡ ವನ್ನು ಪಡೆದುಕೊಂಡಿದೆ. ಅಂತೆಯೇ ತಾಲೂಕು ಕಸಾಪ ಅಧ್ಯಕ್ಷ ಜಯರಾಮ್ ರೆಡ್ಡಿ ಈ ಕಟ್ಟಡವನ್ನು ಮೇ ತಿಂಗಳಿನಲ್ಲಿ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಗಂಗಿರೆಡ್ಡಿ ಅವರ ಮೂಲಕ ಉದ್ಘಾಟನೆ ಮಾಡಿಸಿದ್ದರು.
ಮಲಮೂತ್ರ ವಿಸರ್ಜನೆ ತಾಣ: ಆದರೆ, ಕಸಾಪ ಘಟಕದ ಪದಾಧಿಕಾರಿಗಳು ಯಾವ ಉದ್ದೇಶಕ್ಕಾಗಿ ಈ ಕಟ್ಟಡವನ್ನು ಶಿಕ್ಷಣ ಇಲಾಖೆಯಿಂದ ಪಡೆದುಕೊಂಡರೋ ಆ ಒಂದು ಉದ್ದೇಶವನ್ನು ಮರೆತಿದ್ದಾರೆ. ಇದಕ್ಕೆ ಕಸಾಪ ಕಚೇರಿಯಲ್ಲಿ ಹಾಕಿರುವ ಬೀಗವೇ ಸಾಕ್ಷಿ. ಕಚೇರಿ ತೆರೆದು ಅದರಲ್ಲಿ ಯಾವುದೇ ಕನ್ನಡ ಕಾರ್ಯಕ್ರಮ, ಸಭೆ ನಡೆಸದೆ ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡದೇ ನಿರ್ಲಕ್ಷ್ಯ ವಹಿಸಿದೆ. ಇದ ರಿಂದ ಕಟ್ಟಡದಲ್ಲಿ ದೂಳು ತುಂಬಿದ್ದು, ಕ್ರಿಮಿಕೀಟಗಳು ಮತ್ತು ಜೇಡರ ಬಲೆ ತುಂಬಿದೆ. ಕಚೇರಿಯ ಮುಂಭಾಗ ಕಸ ತುಂಬಿಕೊಂಡು, ಗಿಡಗಂಟಿಗಳು ಬೆಳೆದು ತಿಪ್ಪೆಗುಂಡಿಯಾಗಿದ್ದು, ಮಲ ಮೂತ್ರಗಳ ವಿಸರ್ಜನಾ ತಾಣವಾಗಿ ಪರಿವರ್ತನೆಗೊಂಡಿದೆ. ಕಸಾಪ ತಾಲೂಕು ಅಧ್ಯಕ್ಷ ಜಯರಾಮರೆಡ್ಡಿ ಆಗಲಿ, ಜಿಲ್ಲಾಧ್ಯಕ್ಷ ನಾಗಾನಂದ ಕೆಂಪರಾಜ್ ಅವರಾಗಲಿ, ನಗರದಲ್ಲಿರುವ ಕಸಾಪ ಕಚೇರಿ ಕಡೆ ಗಮನ ಹರಿಸದೆ ಇರುವುದು ಬೇಸರದ ಸಂಗತಿ.
-ಎಂ.ನಾಗರಾಜಯ್ಯ