Advertisement

ಪಾಳುಬಿದ್ದ ಕಾರಿಂಜ ಯಾತ್ರಿ ನಿವಾಸ

11:39 PM Nov 02, 2020 | mahesh |

ಪುಂಜಾಲಕಟ್ಟೆ: ಪುರಾತನ ದೇವಸ್ಥಾನಗಳು ಯಾತ್ರಿಕರ ಆಕರ್ಷಣೀಯ ತಾಣವೂ ಆಗಿರಲಿ ಎಂದು ಸರಕಾರ ಪ್ರವಾ ಸೋದ್ಯಮ ಇಲಾಖೆ ಮೂಲಕ ಹಲವಾರು ಯೋಜ ನೆಗಳನ್ನು ಹಮ್ಮಿಕೊಳ್ಳುತ್ತದೆ. ಆದರೆ ಆ ಯೋಜನೆಗಳನ್ನು ಸರಿಯಾಗಿ ಅನುಷ್ಠಾನ ಗೊಳಿಸದಿದ್ದರೆ ಪ್ರಯೋಜನವಿಲ್ಲದಂತಾಗಿ ಹಳ್ಳಹಿಡಿಯುತ್ತದೆ ಎಂಬುದಕ್ಕೆ ಸಾಕ್ಷಿ ಯಾಗಿದೆ ಬಂಟ್ವಾಳ ತಾಲೂಕಿನ ಕಾರಿಂಜ ಮಹತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನದ ಬಳಿ ಪ್ರವಾಸೋದ್ಯಮ ಇಲಾಖೆಯಿಂದ ನಿರ್ಮಾಣಗೊಂಡಿರುವ ಅತಿಥಿಗೃಹ.

Advertisement

ನಿಸರ್ಗ ಸೌಂದರ್ಯದ ಮಧ್ಯೆ ಯಾತ್ರಿ ಕರನ್ನು ಸೆಳೆಯುವ ತಾಣವಾಗಿರುವ ಕಾರಿಂಜ ಕ್ಷೇತ್ರವನ್ನು ಅಭಿವೃದ್ಧಿ ಪಡಿಸು ವುದರೊಂದಿಗೆ ಪ್ರವಾಸೋದ್ಯಮ ತಾಣವಾಗಿ ರೂಪಿಸುವ ಪ್ರಯತ್ನ ಇಲ್ಲಿ ಹಲವು ವರ್ಷಗಳಿಂದ ನಡೆಯುತ್ತಲೇ ಇದೆ.

ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ನಡೆಸುವ ಚಿಂತನೆಯು ನಡೆಯುತ್ತಿದೆ. ಆದರೆ ಯಾತ್ರಿಕರು ಬಂದರೆ ಅವರು ಉಳಿದುಕೊಳ್ಳುವ ಯಾತ್ರಿ ನಿವಾಸ ಅತಿಥಿಗೃಹ ಪಾಳು ಬಿದ್ದಿದೆ. ನಿರ್ವಹಣೆ ಕೊರತೆಯಿಂದ ನಿಷ್ಪ್ರಯೋಜಕವಾಗಿದೆ. ಸುತ್ತಲೂ ಗಿಡ, ಕಳೆಗಂಟಿಗಳು ಬೆಳೆದಿದೆ. ಪ್ರವಾಸಿಗಳು, ದೇಗುಲಕ್ಕೆ ಬರುವ ಭಕ್ತರು ಉಳಿದುಕೊಳ್ಳುವ ನಿಟ್ಟಿನಲ್ಲಿ 1997ರಲ್ಲಿ ಅತಿಥಿಗೃಹವನ್ನು ನಿರ್ಮಿಸಲಾಗಿದೆ. ವಿಶಾಲವಾದ ಕೆರೆಯ ಪಕ್ಕ, ಕೊಡ್ಯಮಲೆ ಅರಣ್ಯ ತಪ್ಪಲಿನಲ್ಲಿ ಇರುವ ಅತಿಥಿಗೃಹ ಪ್ರಸ್ತುತ ಅಕ್ರಮ ಚಟುವಟಿಕೆಗಳ ಅಡ್ಡೆಯಾಗಿ ಮಾರ್ಪಟ್ಟಿದೆ. ಕೆಲವು ಕೊಠಡಿಗಳ ಬಾಗಿಲು ತೆರೆದುಕೊಂಡಿದೆ. ಅಲ್ಲಲ್ಲಿ ಮದ್ಯದ ಬಾಟಲುಗಳು ಬಿದ್ದುಕೊಂಡಿವೆ.ರಾತ್ರಿಯ ಅಕ್ರಮಕ್ಕೆ ಮೇಣದ ಬತ್ತಿ ಸಾಕ್ಷಿಯಾಗಿದೆ. ಸ್ವತ್ಛತೆ ಮರೀಚಿಕೆಯಾಗಿದೆ. ಕಬ್ಬಿಣದ ಬೆಂಚುಗಳು ತಲೆಕೆಳಗಾಗಿ ಬಿದ್ದುಕೊಂಡಿವೆ.

ಪೊದೆಗಳ ಮಧ್ಯೆ ಇರುವ ಶೌಚಾಲಯ
ಅತಿಥಿ ಗೃಹದ ಪಕ್ಕ ಇರುವ ಸಾರ್ವಜನಿಕ ಶೌಚಾಲಯ ಪೊದೆಗಳ ಮಧ್ಯೆ ಮರೆ ಯಾಗಿದೆ. ಜನರು ಶೌಚಾಲಯದ ಒಳ ಹೋಗಲು ಭಯ ಪಡುವಂತಿದೆ. ಅರಣ್ಯದ ಪಕ್ಕದಲ್ಲಿರುವ ಈ ಶೌಚಾಲಯದೊಳಗೆ ಹಾವು ಮೊದಲಾದ ವಿಷಜಂತುಗಳಿದ್ದರೂ ಅಚ್ಚರಿಯಿಲ್ಲ. ಆಟಿ ಅಮಾವಾಸ್ಯೆ, ವಾರ್ಷಿಕ ಜಾತ್ರೆಗಳ ಸಂದರ್ಭ ಕ್ಷೇತ್ರದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಸೇರುತ್ತಾರೆ. ಸಾರ್ವಜನಿಕ ಶೌಚಾಲಯ ಬಳಕೆಗೆ ಸಿಗದೆ ಜನರು ಬಯಲು ಶೌಚಾಲಯವನ್ನೇ ಅವಲಂಬಿಸ ಬೇಕಾಗುತ್ತದೆ. ಕೆಲವು ವರ್ಷಗಳ ಹಿಂದೆಯಷ್ಟೆ ನಿರ್ಮಾಣಗೊಂಡ ಸ್ವಾಸ್ಥ್ಯ ಪಥ ಹಾಗೂ ಸ್ತ್ರೋತ್ರವನಗಳು ನಿರ್ವಹಣೆಯ ಕೊರತೆಯಿಂದ ಸೊರಗುತ್ತಿದೆ.

ಸರಿ ಪಡಿಸಲಾಗುವುದು
ಕಾರಿಂಜ ಕ್ಷೇತ್ರದ ಐತಿಹಾಸಿಕ ಹಿನ್ನೆಲೆಗೆ ಧಕ್ಕೆಯಾಗದಂತೆ, ಕೃತಕತೆಯನ್ನು ತಂದುಕೊಳ್ಳದೆ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತೇವೆ. ಶೌಚಾಲಯ ಮೊದಲಾದ ಮೂಲ ಸೌಕರ್ಯಗಳನ್ನು ಒದಗಿಸಲಿದ್ದೇವೆ. ಅದಕ್ಕೆ ಬೇಕಾದ ಅನುದಾನವನ್ನು ಪ್ರವಾಸೋದ್ಯಮ ಇಲಾಖೆ , ಧಾರ್ಮಿಕ ದತ್ತಿ ಇಲಾಖೆಯಿಂದ ತರಿಸಿಕೊಳ್ಳಲಿದ್ದೇವೆ.
-ಕೋಟ ಶ್ರೀನಿವಾಸ ಪೂಜಾರಿ, ದ.ಕ. ಜಿಲ್ಲಾ ಉಸ್ತುವಾರಿ ಸಚಿವರು

Advertisement

 

Advertisement

Udayavani is now on Telegram. Click here to join our channel and stay updated with the latest news.

Next