ಬೆಂಗಳೂರು: ಮಲೇಷ್ಯಾಕ್ಕೆ ಅಕ್ರಮವಾಗಿ ಮಾದಕ ವಸ್ತು ಸಾಗಾಟ ಮಾಡುತ್ತಿದ್ದ ಜಾಲವನ್ನು ಕೆಂಪೇಗೌಡ ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ ಏರ್ ಕಾರ್ಗೋ ಅಧಿಕಾರಿ ಗಳು ಪತ್ತೆಹಚ್ಚಿದ್ದು, 24 ಕೋಟಿ ರೂ. ಮೌಲ್ಯದ 475 ಕೆ.ಜಿ. ಮಾದಕ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಜೂ. 23ರಂದು ವಿಮಾನ ನಿಲ್ದಾಣದ ಕಾರ್ಗೋ ಸಮುಚ್ಚಯದ ರಫ್ತು ಘಟಕದಲ್ಲಿ 81 ಅಮೋನಿಯಂ ಕ್ಲೋರೈಡ್ ಬ್ಯಾಗ್‌ಗಳ ಪೈಕಿ 2 ಬ್ಯಾಗ್‌ಗಳಲ್ಲಿ ಮಾದಕ ವಸ್ತುಗಳನ್ನಿಟ್ಟು ಮಲೇಷ್ಯಾಕ್ಕೆ ಕಳ್ಳ ಸಾಗಣೆ ಮಾಡಲು ಯತ್ನಿಸಲಾಗಿತ್ತು. ಈ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು ರಫ್ತು ಘಟಕವನ್ನು ಪರಿಶೀಲನೆ ನಡೆಸಿದಾಗ ಮಾದಕ ವಸ್ತು ಪತ್ತೆಯಾಗಿದ್ದು, 2.5 ಕೋಟಿ ರೂ. ಮೌಲ್ಯದ 50 ಕೆ.ಜಿ. ಮಾದಕ ವಸ್ತು ತುಂಬಿದ್ದ ಎರಡು ಚೀಲಗಳನ್ನು ವಶಕ್ಕೆ ಪಡೆಯಲಾಯಿತು.
ದಕ್ಷಿಣ ಭಾರತದಲ್ಲಿ ಇದೇ ಮೊದಲ ಬಾರಿಗೆ ಕಸ್ಟಮ್ಸ್ ಅಧಿಕಾರಿ ಗಳು ಬೃಹತ್ ಪ್ರಮಾಣದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಆರೋಪಿಗಳ ಪತ್ತೆಗಾಗಿ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಕಸ್ಟಮ್ಸ್ ಅಧಿಕಾರಿ ಡಿ. ಅನಿಲ್‌ಕುಮಾರ್ ತಿಳಿಸಿದ್ದಾರೆ.
ರಫ್ತು ಘಟಕದಲ್ಲಿ ಚೀಲದ ಮಾಲಕರ ಬಗ್ಗೆ ಮಾಹಿತಿ ಸಂಗ್ರಹಿಸಿ, ಮಲೇಷ್ಯಾಕ್ಕೆ ಅಕ್ರಮವಾಗಿ ರಫು ಮಾಡಲು ಮುಂದಾಗಿದ್ದ ಕೆಲವು ವ್ಯಕ್ತಿಗಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ ಕೊತ್ತನೂರಿ ನಲ್ಲಿನ ಗೋದಾಮಿನ ವಿಷಯ ಗೊತ್ತಾಗಿದೆ. ಈ ಮಾಹಿತಿ ಆಧರಿಸಿ ಕಸ್ಟಮ್ಸ್ ಅಧಿಕಾರಿಗಳು ಕಾರ್ಯಾ ಚರಣೆ ನಡೆಸಿ ಗೋದಾಮಿನ ಮೇಲೆ ದಾಳಿ ನಡೆಸಿದಾಗ 24 ಕೋ. ರೂ. ಮೌಲ್ಯದ 475 ಕೆ.ಜಿ. ಅಮೋನಿಯಂ ಕ್ಲೋರೈಡ್, ಎಪಿಡ್ರೈನ್ ಮಾದಕ ವಸ್ತು ಪತ್ತೆಯಾಗಿದೆ ಎಂದು ಹೇಳಿದರು.
ಎನ್‌ಸಿಬಿ ಕಾಯ್ದೆ 1985ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಕೇಂದ್ರ ಗುಪ್ತಚರ ವಿಭಾಗ ಮತ್ತು ವಿಶೇಷ ಗುಪ್ತಚರ ಮತ್ತು ಕಸ್ಟಮ್ ಏರ್ ಕಾರ್ಗೋ ಅಧಿಕಾರಿಗಳು ಜಂಟಿಯಾಗಿ ಈ ಕಾರ್ಯಾಚರಣೆಯನ್ನು ನಡೆಸಿದ್ದಾರೆ.