ಮಂಡ್ಯ: ಅಕ್ರಮ ಕಲ್ಲು ಗಣಿಗಾರಿಕೆ ನಡೆಸಿದ ಹಿನ್ನೆಲೆಯಲ್ಲಿ ಪಾಂಡವಪುರ ತಾಲೂಕಿನ ಚಿನಕುರಳಿ ಹಾಗೂ ಹೊನಗಾನಹಳ್ಳಿ ಪಂಚಾಯಿತಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ವಿಧಿಸಿದ್ದ ರಾಜಧನ ಹಾಗೂ ದಂಡ ಮೊತ್ತ ಸೇರಿ 29.09 ಕೋಟಿ ರೂ. ಹಣವನ್ನು ಕೈಬಿಡುವಂತೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖಾ ಮುಖ್ಯಸ್ಥರೇ ಸೂಚನೆ ನೀಡಿದ್ದಾರೆ.
ಈ ಎರಡೂ ಗ್ರಾಮ ಪಂಚಾಯಿತಿಗಳ ಪರವಾಗಿ ವಕಾಲತ್ತು ವಹಿಸಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ದೇಶಕರಿಗೆ 10 ಮೇ 2019ರಂದು ಪತ್ರ ಬರೆದು ಈ ಎರಡೂ ಪಂಚಾಯಿತಿ ವ್ಯಾಪ್ತಿಯಲ್ಲಿ ಈ ಹಿಂದೆ ನಡೆಸಿರುವ ಕಲ್ಲು ಗಣಿಗಾರಿಕೆಗೆ ಸಂಬಂಧಿಸಿದಂತೆ ರಾಜಧನ ಮತ್ತು ದಂಡದ ಮೊತ್ತವನ್ನು ಕೈಬಿಡಲು ಪತ್ರದಲ್ಲಿ ಸೂಚಿಸಿದ್ದಾರೆ.
ಗ್ರಾಪಂಗಳ ಹೊಸ ವಾದ: ಕಲ್ಲು ಗಣಿಗಾರಿಕೆ ನಡೆಸಿ ಆದಾಯ ಗಳಿಸಿರುವ ಕಂಪನಿ, ಉದ್ಯಮಿ ಹಾಗೂ ಗುತ್ತಿಗೆದಾರರಿಂದ ಐದು ಪಟ್ಟು ದಂಡ ವಸೂಲಿಗೆ ನಿರಾಕರಿಸಿರುವ ಈ ಎರಡೂ ಗ್ರಾಮ ಪಂಚಾಯಿತಿಗಳು ಹೊಸತೊಂದು ವಾದವನ್ನು ಮುಂದಿಟ್ಟಿವೆ. ರಾಜಧನ ಹಾಗೂ ದಂಡ ಪಾವತಿಸುವ ಕುರಿತು ಚಿನಕುರಳಿ ಮತ್ತು ಹೊನಗಾನಹಳ್ಳಿ ಗ್ರಾಮ ಪಂಚಾಯಿತಿಗಳು 2018ರ ಡಿಸೆಂಬರ್ 28ರಂದು ನಿರ್ಣಯ ಕೈಗೊಂಡಿವೆ. ರಾಜಧನ ಮತ್ತು ದಂಡವನ್ನು ಹಿಂದೆ ಚಾಲ್ತಿಯಲ್ಲಿದ್ದ ನಿಯಮಗಳು ಹಾಗೂ ಆದೇಶದನ್ವಯ ಸಂಗ್ರಹಿಸಲಾಗಿದೆ. ನಿಯಮಾನುಸಾರ ಗ್ರಾಮ ಪಂಚಾಯಿತಿಗಳ ಮೂಲ ಸೌಕರ್ಯಕ್ಕೆ ರಾಜಧನವನ್ನು ವೆಚ್ಚ ಮಾಡಲಾಗಿದೆ. ಹೀಗಾಗಿ ದಂಡದ ಬಾಬ್ತನ್ನು ಇಲಾಖೆಗೆ ಪಾವತಿಸುವುದು ಸಾಧ್ಯವಿಲ್ಲ.
ಈ ಹಿನ್ನೆಲೆಯಲ್ಲಿ ದಂಡ ಪಾವತಿಸುವ ವಿಷಯವನ್ನು ಸರ್ಕಾರ ಪರಿಗಣಿಸಿ ಪಾವತಿಸಲು ತಿಳಿಸಲಾಗಿರುವ ಮೊತ್ತ ಹಾಗೂ ಬಡ್ಡಿ ಹಣವನ್ನು ಕೈಬಿಡುವಂತೆ ಮನವಿ ಮಾಡಿದ್ದಾರೆ.
ಗ್ರಾಮ ಮೂಲ ಸೌಲಭ್ಯಕ್ಕೇ ವೆಚ್ಚ: ಈ ವಾದವನ್ನೇ ಪುರಸ್ಕರಿಸಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಚಿನಕುರಳಿ ಮತ್ತು ಹೊನಗಾನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಕಳೆದ 50-60 ವರ್ಷಗಳಿಂದ ಹರಾಜಿನ ಮೂಲಕ ಕಲ್ಲು ಗಣಿ ಗುತ್ತಿಗೆಗಳನ್ನು ಹಂಚಿಕೆ ಮಾಡಲಾಗುತ್ತಿದೆ. ಈ ಹರಾಜು ಮೊತ್ತದಿಂದ ಸಂಗ್ರಹಿಸಲಾದ ಹಣದಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಗಳ ಮೊತ್ತದಿಂದ ಸಂಗ್ರಹಿಸಲಾದ ಹಣವನ್ನು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಗ್ರಾಮಗಳ ಮೂಲ ಸೌಲಭ್ಯಕ್ಕಾಗಿ ವೆಚ್ಚ ಮಾಡಲಾಗುತ್ತಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಆದ ಕಾರಣ ಚಿನಕುರಳಿ ಗ್ರಾಮ ಪಂಚಾಯಿತಿಯಲ್ಲಿ 1,30,58,100 ರೂ. ರಾಜಧನಕ್ಕೆ 5 ಪಟ್ಟು ದಂಡಮೊತ್ತ ಸೇರಿ 6,52,30,500 ರೂ. ಹಾಗೂ ಹೊನಗಾನಹಳ್ಳಿ ಗ್ರಾಮ ಪಂಚಾಯಿತಿ ಪಾವತಿಸಬೇಕಿದ್ದ 4,51,47,000 ರೂ.ಗಳಿಗೆ 5 ಪಟ್ಟು ದಂಡ ಮೊತ್ತ ಸೇರಿ 22,57,39,508 ರೂ.ಗಳನ್ನು ಕೈಬಿಡುವಂತೆ ಇದೀಗ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.
ಅಕ್ರಮ ಕಲ್ಲು ಗಣಿಗಾರಿಕೆಗೆ ಇಲಾಖಾ ಮೇಲಧಿಕಾರಿಗಳೇ ಕುಮ್ಮಕ್ಕು ನೀಡುತ್ತಿರುವುದರಿಂದ ಪಾಂಡವಪುರ ತಾಲೂಕಿನ ಚಿನಕುರಳಿ ಹೋಬಳಿಯ ಹೊನಗಾನಹಳ್ಳಿ, ಚಿನಕುರಳಿ ಹಾಗೂ ಬೇಬಿ ಬೆಟ್ಟ ವ್ಯಾಪ್ತಿಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ರಾಜಾರೋಷವಾಗಿ ನಡೆಯುತ್ತಿದೆ.