Advertisement

ಗೂಂಡಾಸ್ತ್ರ ಬಳಕೆಯಾಗುತ್ತಿಲ್ಲ

11:17 AM Nov 11, 2017 | |

ಬೆಂಗಳೂರು: ರೌಡಿಗಳ ಹತೋಟಿಗೆ ಗೂಂಡಾ ಕಾಯ್ದೆಯನ್ನು ಸಮರ್ಪಕವಾಗಿ ಬಳಸುವಂತೆ ಪೊಲೀಸ್‌ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಎಫ್ಕೆಸಿಸಿಐನಲ್ಲಿ ಶುಕ್ರವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು/

Advertisement

ನಮ್ಮಲ್ಲಿ ಗೂಂಡಾ ಕಾಯ್ದೆಯನ್ನು ಸರಿಯಾಗಿ ಉಪಯೋಗಿಸುತ್ತಿಲ್ಲ. ರೌಡಿಸಂ ಹತೋಟಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ನಿಮ್ಮ ಪೊಲೀಸ್‌ಠಾಣಾ ವ್ಯಾಪ್ತಿಯಲ್ಲಿ ರೌಡಿಗಳು ಇರಬೇಕು. ಇಲ್ಲವೇ ಪೊಲೀಸರಿರಬೇಕು. ಯಾರು ಇರಬೇಕು ಎಂಬುದನ್ನು ನೀವೇ ತೀರ್ಮಾನಿಸಿಕೊಳ್ಳಿ ಎಂದಿದ್ದೇನೆ.

ರೌಡಿಗಳು ಮನೆಯಲ್ಲಿರಬೇಕು ಅಥವಾ ರಾಜ್ಯ ಬಿಟ್ಟು ಹೋಗಬೇಕು. ಹೀಗೆ ಮಾಡಲು ಈಗಿರುವ ಅಧಿಕಾರ ಸಾಲದೇ ಎಂದು ಕೇಳಿದ್ದು, ಪದೇ ಪದೇ ಸಾರ್ವಜನಿಕರಿಗೆ ತೊಂದರೆ ಕೊಡುವವರಿಗೆ ಗೂಂಡಾ ಕಾಯ್ದೆಯಡಿ ಬಂಧಿಸುವಂತೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.

ಬಾಲಕಿಯರು ಮತ್ತು ಮಹಿಳಾ ಶಾಲಾ- ಕಾಲೇಜುಗಳು ಸುತ್ತಮುತ್ತ ಪೊಲೀಸ್‌ ಬೀಟ್‌ಗೆ ವ್ಯವಸ್ಥೆ ಮಾಡಿದ್ದು, ಪೋಲಿ ಹುಡುಗರು ಚುಡಾಯಿಸುವಂತ ಘಟನೆಗಳಿಗೆ ಕಡಿವಾಣ ಹಾಕಲು ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ. ಮೀಟರ್‌ ಬಡ್ಡಿ, ಓಸಿ, ಗಾಂಜಾ ಮಾರಾಟ ಇಲ್ಲದಂತೆ ಮಾಡಬೇಕು.

ಹೊರ ದೇಶಗಳಿಂದ ಶಿಕ್ಷಣಕ್ಕಾಗಿ ಬಂದು ಪುಂಡಾಟಿಕೆ ಮಾಡುವವರ ವೀಸಾ ರದ್ದುಪಡಿಸಿ, ವಾಪಸ್‌ ಕಳುಹಿಸುವಂತೆ ಅಧಿಕಾರಿಗೆ ಸೂಚನೆ ನೀಡಲಾಗಿದೆ. ಪ್ರತಿ ಏರಿಯಾಗಳಲ್ಲೂ ಬೀಟ್‌ ಪೊಲೀಸರನ್ನು ನೇಮಕ ಮಾಡಿದ್ದು, ಸರಗಳ್ಳತನ, ಅತ್ಯಾಚಾರ, ಕಳ್ಳತನ ತಡೆಗೆ ಎಚ್ಚರ ವಹಿಸುವಂತೆ ಸೂಚಿಸಿದ್ದೇನೆ ಎಂದರು. 

Advertisement

ನಂಬರ್‌ ಪ್ಲೇಟ್‌ ಮೇಲೆ ವಾಹನದ ನೋಂದಣಿ ಸಂಖ್ಯೆ ಬಿಟ್ಟು ಬೇರೆ ಯಾವುದೇ ರೀತಿಯ ಬರಹಗಳನ್ನು ಬರೆದುಕೊಂಡಿದ್ದರೆ, ಅವುಗಳನ್ನು ಕಿತ್ತುಹಾಕಿ ಕೇಸು ಮಾಡಬೇಕು. ವೀಲಿಂಗ್‌, ಹೆಲ್ಮೆಟ್‌ ಧರಿಸದೇ ಬೈಕ್‌ ಚಾಲನೆ, ಮದ್ಯ ಸೇವಿಸಿ ವಾಹನ ಚಾಲನೆ ಸೇರಿದಂತೆ ಟ್ರಾಫಿಕ್‌ ನಿಯಮಗಳನ್ನು ಪಾಲನೆ ಮಾಡದವರ ವಿರುದ್ಧ ಕೇಸು ದಾಖಲಿಸಿ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ.

ಶೇ.40ರಷ್ಟು ರಸ್ತೆ ಅಪಘಾತಗಳು ವಾಹನ ಚಾಲನೆ ಮಾಡುವಾಗ ಮೊಬೈಲ್‌ ಬಳಸುವುದು  ಮತ್ತು ಸೀಟ್‌ಬೆಲ್ಟ್ ಧರಿಸದೇ ನಡೆಯುತ್ತಿದ್ದು, ಜನಸಾಮಾನ್ಯರೇ ಈ ಬಗ್ಗೆ ಜಾಗೃತಿ ವಹಿಸಬೇಕು ಎಂದು ಹೇಳಿದರು. 

ಸಿಸಿ ಕ್ಯಾಮೆರಾ ಅಳವಡಿಕೆ: ಬಿಬಿಎಂಪಿ ಮತ್ತು ಪೊಲೀಸ್‌ ಇಲಾಖೆ ಸಹಯೋಗದಲ್ಲಿ ತಲಾ 10 ಲಕ್ಷ ರೂ.ವೆಚ್ಚದಂತೆ ಎಷ್ಟು ಸಿಸಿ ಕ್ಯಾಮೆರಾ ಬರುತ್ತವೆಯೋ ಅಷ್ಟನ್ನು ಆಯಾ ವಾರ್ಡ್‌ಗಳಲ್ಲಿ ಅವಳಡಿಸಲು ಕ್ರಮಕೈಗೊಳ್ಳುವಂತೆ ಮೇಯರ್‌ ಸಂಪತ್‌ರಾಜ್‌ ಅವರಲ್ಲಿ ವಿನಂತಿಸಿದ್ದೇನೆ. ಎಲ್ಲಾ ವಾರ್ಡ್‌ಗಳ ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವುದರಿಂದ ಅಪರಾಧ ಕೃತ್ಯಗಳ ತಡೆಗೆ ಅನುಕೂಲವಾಗಲಿದೆ. ಮುಂದಿನ ವಾರದಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು. 

ಸಿಡಿಪಿ ಬದಲಾಗಬೇಕು: ಯಾವುದೇ ಹೊಸ ಬಡಾವಣೆ ನಿರ್ಮಾಣವಾಗಬೇಕಾದರೂ, ಪಾರ್ಕ್‌, ಆಟದ ಮೈದಾನ ಇರುವಂತೆ ಪಾರ್ಕಿಂಗ್‌ ವ್ಯವಸ್ಥೆ ಇರುಬೇಕಾದ್ದು ಕಡ್ಡಾಯ. ಇಲ್ಲಿಯವರೆಗೂ ಅಂತಹ ವ್ಯವಸ್ಥೆಯನ್ನೇ ಮಾಡಿಲ್ಲ. ಇನ್ನು ಮುಂದಾದರೂ ಪಾರ್ಕಿಂಗ್‌ ವ್ಯವಸ್ಥೆ ಇರುವಂತೆ ಮಾಡಲು ಸಿಡಿಪಿ (ಸಿಟಿ ಡೆವಲಪ್‌ಮೆಂಟ್‌ ಪ್ಲಾನ್‌)ಬದಲಾಯಿಸಬೇಕಿದೆ ಎಂದರು. 

ದ್ವಿಮುಖ ಸಂಚಾರ ವ್ಯವಸ್ಥೆ ಕಲ್ಪಿಸಿ: ಟೌನ್‌ಹಾಲ್‌-ಮಿನರ್ವ ವೃತ್ತ, ಕೆ.ಆರ್‌.ವೃತ್ತದಿಂದ ಸಿಟಿ ಸಿವಿಲ್‌ ಕೋರ್ಟ್‌, ವಿಠuಲ ಮಲ್ಯ ರಸ್ತೆಯಿಂದ ಹಡ್ಸನ್‌ ವೃತ್ತ ಹಾಗೂ ರಿಚ್‌ಮಂಡ್‌ ವೃತ್ತದಿಂದ ಅಶೋಕ ನಗರ ವೃತ್ತದ ವರೆಗಿನ ರಸ್ತೆಗಳು ಏಕಮುಖ ಸಂಚಾರ ವ್ಯವಸ್ಥೆ ಇದೆ. ಅದನ್ನು ದ್ವಿಮುಖ ಸಂಚಾರಯಾಗಿ ಪರಿವರ್ತಿಸಲು ಕ್ರಮಕೈಗೊಂಡರೆ, ಟ್ರಾಫಿಕ್‌ ಸಮಸ್ಯೆ ಕಡಿಮೆಯಾಗಲಿದೆ.

ಕೆಲವು ಸಿಗ್ನಲ್‌ಗ‌ಳಲ್ಲಿ ಅಳವಡಿಸಲಾಗಿರುವ ಟೈಮರ್‌ಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಅದಕ್ಕಾಗಿ ಮುಖ್ಯವಾದ ಜಂಕ್ಷನ್‌ಗಳಲ್ಲಿ ಅತ್ಯಾಧುನಿಕ ಸೌರಶಕ್ತಿ ಸಿಗ್ನಲ್‌ ವ್ಯವಸ್ಥೆ ಮಾಡಬೇಕು ಎಂದು ಎಫ್ಕೆಸಿಸಿಐ ಪ್ರವಾಸೋದ್ಯಮ ಸಮಿತಿ ಅಧ್ಯಕ್ಷ ಪ್ರಕಾಶ್‌ ಮಂಡೋತ್‌ ಮನವಿ ಮಾಡಿದರು. 

ಸಿಸಿ ಕ್ಯಾಮೆರಾಗೆ ದೇಣಿಗೆ: ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕುವ ಜತೆಗೆ ಟ್ರಾಫಿಕ್‌ ಜಂಪ್‌ ಇತ್ಯಾದಿ ಸಮಸ್ಯೆಗಳ ನಿವಾರಣೆಗೆ ಪೊಲೀಸ್‌ ಇಲಾಖೆ ಸಹಕಾರದಲ್ಲಿ ಎಫ್ಕೆಸಿಸಿ ವತಿಯಿಂದ ಕೆ.ಜಿ.ರಸ್ತೆಯಲ್ಲಿ ಅಗತ್ಯ ಸಿಸಿ ಕ್ಯಾಮೆರಾ ಅಳವಡಿಸಲು ದೇಣಿಗೆ ನೀಡಲಾಗುವುದು ಎಂದು ಸಂಸ್ಥೆ ಅಧ್ಯಕ್ಷ ಕೆ.ರವಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next