ಬೆಂಗಳೂರು: ಹಳೇ ದ್ವೇಷದ ಹಿನ್ನೆಲೆಯಲ್ಲಿ ರೌಡಿಶೀಟರ್‌ವೊಬ್ಬನನ್ನು ನಾಲ್ವರು ಆಗಂತುಕರು ಆತನ ಮನೆಯ ಎದುರು ಹತ್ಯೆಗೈದು ಪರಾರಿಯಾಗಿರುವ ಘಟನೆ ನ್ಯೂ ಬಾಗಲೂರಿನಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ.
ಪಳನಿ (42) ಅಲಿಯಾಸ್ ಲೇಔಟ್ ಪಳನಿ ಹತ್ಯೆಯಾದ ರೌಡಿಶೀಟರ್. ಬೆಳಗ್ಗೆ 7 ಗಂಟೆ ಸುಮಾರಿಗೆ ಮನೆ ಬಳಿಯ ಟೀ ಅಂಗಡಿಗೆ ಹೋಗುತ್ತಿದ್ದ ಪಳನಿ ಮೇಲೆ ನಾಲ್ವರು ಹೆಲ್ಮೆಟ್‌ಧಾರಿಗಳು ಮಾರಕಾಸ್ತ್ರಗಳಿಂದ ಮನಬದ್ದಂತೆ ಹಲ್ಲೆ ನಡೆಸಿದರು.
ಪಳನಿಯನ್ನು ಕೂಡಲೇ ಸ್ಥಳೀಯರು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ. ಕೊಲೆಗೂ ಮೊದಲೇ ಸ್ಥಳಕ್ಕೆ ಬಂದಿರುವ ಆರೋಪಿಗಳು ಹತ್ತಿರದ ಸಿಸಿಟಿವಿಗಳನ್ನು ನಿಷ್ಕ್ರಿಯಗೊಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
20 ವರ್ಷಗಳ ಹಿಂದೆ ಕೆ.ಜಿ.ಹಳ್ಳಿ ಠಾಣೆಯಲ್ಲಿ ಪಳನಿ ವಿರುದ್ಧ ರೌಡಿಪಟ್ಟಿ ತೆರೆಯಲಾಗಿದ್ದು, ಮೂರು ಕೊಲೆ, 7 ಕೊಲೆ ಯತ್ನ ಮತ್ತು ಒಂದು ಪೊಕೊÕ ಪ್ರಕರಣ ಕೂಡ ದಾಖಲಾಗಿದೆ. ಪ್ರಕರಣವೊಂದರಲ್ಲಿ ಜೈಲು ಸೇರಿದ್ದ ಪಳನಿ ವಾರದ ಹಿಂದಷ್ಟೇ ಬಿಡುಗಡೆಯಾಗಿದ್ದ. ಈತನ ವಿರೋಧಿ ಬಣದವರೆ ಕೊಲೆ ಮಾಡಿರುವ ಸಾಧ್ಯತೆಗಳಿವೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಫೀಲ್ಡ್‌ನಲ್ಲಿ ಒಬ್ಬನೇ ಪಳನಿ: ಹತ್ತು ವರ್ಷಗಳ ಹಿಂದೆ ವಿವೇಕನಗರ ಠಾಣಾ ವ್ಯಾಪ್ತಿಯಲ್ಲಿ ಪಳನಿ ಎಂಬ ರೌಡಿಶೀಟರ್ ಜತೆ ವಿರೋಧ ಕಟ್ಟಿಕೊಂಡಿದ್ದ ಪಳನಿ ಅಲಿಯಾಸ್ ಲೇಔಟ್ ಪಳನಿ, “ಫೀಲ್ಡ್‌ನಲ್ಲಿ ಒಬ್ಬನೇ ಪಳನಿ ಇರಬೇಕು. ಅದು ನಾನಾಗಿರಬೇಕು,’ ಎಂದು 2003ರಲ್ಲಿ ವಿವೇಕನಗರದ ಪಳನಿ ಮೇಲೆ ಮಾರಣಾಂತಿಕ ದಾಳಿ ನಡೆಸಿ, ಕೊನೆಗೆ ಆಸ್ಪತ್ರೆಗೆ ನುಗ್ಗಿ ದಾರುಣವಾಗಿ ಹತ್ಯೆಗೈದಿದ್ದ.
ಈ ಪ್ರಕರಣದಲ್ಲಿ ಜೈಲು ಸೇರಿದ್ದ ಲೇಔಟ್ ಪಳನಿ ಹೊರಬರುತ್ತಿದ್ದಂತೆ ದಲಿತ ಸಂಘಟನೆಯೊಂದನ್ನು ಕಟ್ಟಿಕೊಂಡಿದ್ದ. ರಿಯಲ್ ಎಸ್ಟೇಟ್ ವ್ಯವಹಾರ ಕೂಡ ನಡೆಸುತ್ತಿದ್ದ. ಸ್ಥಳೀಯ ಪಾಲಿಕೆ ಸದಸ್ಯರ ಜತೆ ಕೂಡ ವಿರೋಧ ಕಟ್ಟಿಕೊಂಡು ಅವರ ಬೆಂಬಲಿಗರಿಗೂ ಎಚ್ಚರಿಕೆ ನೀಡಲು ಹೋಗಿ ಜೈಲು ಸೇರಿದ್ದ. ವಾರದ ಹಿಂದಷ್ಟೇ ಬಿಡುಗಡೆಯಾಗಿ ಬಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.