Advertisement
ದೇವರ ಕೋಣೆಯೆಂದರೆ ಅದೊಂದು ಧನಾತ್ಮಕ ಶಕ್ತಿಯನ್ನು ಹೊಂದಿರುವ ಜಾಗ. ಅತ್ಯಂತ ಸ್ವಚ್ಛಂದ ಮತ್ತು ಮನಃ ಶಾಂತಿ ನೀಡಬಲ್ಲ ಪ್ರದೇಶ. ದಿನವೊಂದರಲ್ಲಿ ನಾವು ಈ ಕೋಣೆಯಲ್ಲಿ ಕಳೆಯುವ ಸಮಯ ಬಹು ಕಡಿಮೆಯೇ ಆದರೂ ಅಲ್ಲಿ ಸಿಗುವ ನೆಮ್ಮದಿ ಮತ್ತೆಲ್ಲೂ ಸಿಗಲಾರದು.
ಗುರು ಈಶಾನ್ಯ ದಿಕ್ಕಿನ ಅಧಿಪತಿಯಾಗಿದ್ದು, ಇದನ್ನು ಈಶಾನ್ ಕೋಣ ಎಂದೂ ಕರೆಯಲಾಗುತ್ತದೆ. ಈಶಾನ್ ಎಂದರೆ ಈಶ್ವರ ಅಥವಾ ದೇವರು ಎಂದರ್ಥ. ಆದುದರಿಂದ ಈ ದಿಕ್ಕಿನಲ್ಲಿ ದೇವರ ಕೋಣೆ ನಿರ್ಮಿಸಿದರೆ ಉತ್ತಮ. ಕೋಣೆಯಲ್ಲಿ ದೇವರ ಮೂರ್ತಿಗಳನ್ನು ನೆಲದ ಮೇಲೆ ಇಡಬಾರದು. ಎತ್ತರಿಸಿದ ವೇದಿಕೆ ಅಥವಾ ಪೀಠದ ಮೇಲೆ ಇಡಬೇಕು. ನೀವು ಪೂಜಿಸುವ ಮೊದಲು ದೇವರ ವಿಗ್ರಹ ಅಥವಾ ಫೋಟೋಗಳು ಬಿರುಕು ಬಂದಿವೆಯಾ ಅಥವಾ ಇತರೆ ಯಾವುದಾದಾರೂ ರೀತಿಯಲ್ಲಿ ಹಾನಿಗೊಂಡಿವೆಯಾ ಎಂಬುದನ್ನು ಪರೀಕ್ಷಿಸಿಕೊಳ್ಳಿ. ಹಾನಿಗೊಂಡಿದ್ದಲ್ಲಿ ಅವುಗಳನ್ನು ಪೂಜಿಸಿದರೆ ವಾಸ್ತು ಶಾಸ್ತ್ರದ ಪ್ರಕಾರ ಅದು ಅಮಂಗಳಕರ. ಮನೆಯ ಮುಖ್ಯ ಬಾಗಿಲಿನ ಎದುರು ದೇವರ ಕೋಣೆಯ ನಿರ್ಮಾಣ ಬೇಡ. ಹೀಗೆ ನಿರ್ಮಾಣ ಮಾಡಿದಲ್ಲಿ ದೇವರ ಕೋಣೆಯಲ್ಲಿ ಸೃಷ್ಟಿಯಾಗುವ ಸಕಾರಾತ್ಮಕ ಅಂಶದ ಪ್ರಮಾಣ ಕಡಿಮೆಯಾಗುತ್ತದೆ. ಹಾಗೆಯೇ ದೇವರ ಕೋಣೆಯಲ್ಲಿ ಕತ್ತಲೂ ಇರಬಾರದು. ಹಾಗಿದ್ದಲ್ಲಿ ಅದು ಇಡೀ ಮನೆಯ ಯೋಗ ಕ್ಷೇಮದ ಮೇಲೆ ಪ್ರಭಾವ ಬೀರುತ್ತದೆ. ಆದುದರಿಂದ ಒಂದು ತೈಲದ ದೀಪವನ್ನಾದರೂ ಬೆಳಗಿಸಿದರೆ ಒಳಿತು. ಯಾವತ್ತೂ ದೇವರ ಕೋಣೆಯನ್ನು ಬೆಡ್ ರೂಮ್‌ನಲ್ಲಿ ನಿರ್ಮಾಣ ಮಾಡಬಾರದು. ಹಾಗೆಯೇ ಈ ಕೋಣೆಯ ಎದುರು, ಮೇಲೆ ಅಥವಾ ಕೆಳಗೆ ಟಾಯ್ಲೆಟ್‌ಗಳ ನಿರ್ಮಾಣ ಕೂಡ ಇರಕೂಡದು. ಹೀಗಾದಲ್ಲಿ ಪೂಜಾ ಕೋಣೆಯ ಶುಭಕರ ವಾತಾವರಣ ಹಾಳಾಗುತ್ತದೆ.
Related Articles
ದೇವರ ಕೋಣೆಯ ಸ್ವಚ್ಛತೆ ಕಾಪಾಡಬೇಕಿರುವುದು ಅತಿ ಮುಖ್ಯ. ಕೋಣೆಯಲ್ಲಿನ ಜೇಡರ ಬಲೆಗಳು, ಪೂಜಾ ಸಾಮಗ್ರಿಗಳು, ದೇವರ ಪೀಠದ ಮೇಲೆ ಕೂತಿರುವ ಧೂಳು ಮುಂತಾದವನ್ನು ಆಗಾಗ ಸ್ವಚ್ಛಗೊಳಿಸಬೇಕು.
Advertisement
- ಪ್ರಸನ್ನ ಹೆಗಡೆ ಊರಕೇರಿ