Advertisement

Lung Health: ಶ್ವಾಸಕೋಶಗಳ ಆರೋಗ್ಯದಲ್ಲಿ ವಿಟಮಿನ್‌ಗಳ ಪಾತ್ರ

02:14 PM Jun 16, 2024 | Team Udayavani |

ಆಹಾರದ ಮೂಲಕ ಅಥವಾ ಅಗತ್ಯ ಬಿದ್ದರೆ ಮಲ್ಟಿವಿಟಮಿನ್‌ಗಳ ಮೂಲಕ ದೇಹಕ್ಕೆ ಆವಶ್ಯಕವಾಗಿರುವ ವಿಟಮಿನ್‌ಗಳನ್ನು ಪೂರೈಸುವುದು ನಮ್ಮ ರೋಗನಿರೋಧಕ ಶಕ್ತಿಯನ್ನು ಕಾಯ್ದುಕೊಳ್ಳುವುದಕ್ಕೆ ಒಂದು ಅತ್ಯುತ್ತಮ ವಿಧಾನ ಎಂಬುದನ್ನು ನಾವು ಆಗಾಗ ಕೇಳುತ್ತಿರುತ್ತೇವೆ ಅಥವಾ ಓದುತ್ತಿರುತ್ತೇವೆ. ಆದರೆ ಇದು ಯಾಕೆ ಎಂಬುದು ನಮಗೆ ತಿಳಿದಿದೆಯೇ?

Advertisement

ಶ್ವಾಸಕೋಶಗಳು ಶ್ವಾಸಾಂಗ ವ್ಯವಸ್ಥೆಗೆ ಬುನಾದಿಯಂತಿರುವ ಅಂಗಗಳು. ವಾತಾವರಣದಿಂದ ಆಮ್ಲಜನಕವನ್ನು ಪರಿಶೋಧಿಸಿ ಜೀವಕೋಶಗಳ ಸ್ತರದಲ್ಲಿ ನಡೆಯುವ ಏರೋಬಿಕ್‌ ಶ್ವಾಸೋಚ್ಚ್ವಾಸ ಕ್ರಿಯೆಗೆ ಒದಗುವಂತೆ ಮಾಡುವುದು ಶ್ವಾಸಕೋಶಗಳ ಪ್ರಧಾನ ಕಾರ್ಯ. ಆದರೆ ಈ ಉಸಿರಾಟ ಕ್ರಿಯೆಯ ಜತೆಗೆ ಅವುಗಳು ಇತರ ಕೆಲವು ಉಸರಾಟೇತರ ಕಾರ್ಯಚಟುವಟಿಕೆಗಳನ್ನು ಕೂಡ ನಿರ್ವಹಿಸುತ್ತವೆ. ಶ್ವಾಸಕೋಶಗಳು ಮಾಲಿನ್ಯಕಾರಕಗಳು, ಮೈಕ್ರೊಬಯೋಟಾ ಮತ್ತು ಅಲರ್ಜಿಕಾರಕಗಳಂತಹ ತುಲನಾತ್ಮಕವಾಗಿ ಕಡಿಮೆ ಅಪಾಯಕಾರಿಯಾಗಿರುವ ಅಂಶಗಳ ಜತೆಗೆ ನಿರಂತರವಾಗಿ ಸಂಪರ್ಕದಲ್ಲಿರುತ್ತವೆ.

ಶ್ವಾಸಾಂಗದ ಒಳಪದರ (ರೆಸ್ಪಿರೇಟರಿ ಎಪಿಥೇಲಿಯಂ)ವು ಶಾಖದ ಜತೆಗೂಡಿ, ಆದ್ರ ಆದ್ರವಾಗಿದ್ದು ಶ್ವಾಸಾಂಗದ ಮೂಲಕ ಒಳಬರುವ ಈ ಅಂಶಗಳನ್ನು ನಿವಾರಿಸುತ್ತದೆ. ದಿ ಸಿಲಿಯೇಟೆಡ್‌ ಸ್ಯುಡೊಸ್ಟ್ರಾಟಿಫೈಡ್‌ ಕೊಲಮ್ನಾರ್‌ ಎಪಿಥೇಲಿಯಂ ಎಂಬ ಸಂರಚನೆಯು ಶ್ವಾಸಾಂಗ ವ್ಯೂಹದ ಒಳಭಾಗವನ್ನಿಡೀ ಆವರಿಸಿಕೊಂಡಿದೆ. ಸೂಕ್ಷ್ಮದರ್ಶಕದ ಮೂಲಕ ಈ ಸಂರಚನೆಯನ್ನು ವೀಕ್ಷಿಸಿದರೆ ಅತ್ಯಂತ ಸೂಕ್ಷ್ಮವಾದ ಕೇಶರಾಶಿಯಂತೆ ಅದು ಇರುವುದು ಕಂಡುಬರುತ್ತದೆ. ಈ ಕೇಶರಾಶಿಯಂತಹ ರಚನೆಯು ಶ್ವಾಸಕೋಶಗಳ ಒಳ ಪ್ರವೇಶಿಸುವ ಗಾಳಿಯ ಸರಾಗ ಚಲನೆ ಮತ್ತು ಹದಗೊಳಿಸುವುದರ ಜತೆಗೆ ಆಗಲೇ ಹೇಳಿದ ಕೆಟ್ಟ ಅಂಶಗಳನ್ನು ಹೊರಕ್ಕೆ ಕಳುಹಿಸುವ ಎಸ್ಕಲೇಟರ್‌ ನಂತೆ ಕೆಲಸ ಮಾಡುತ್ತದೆ.

ಶೀತವಾದಾಗ ನಾವು ಕೆಮ್ಮುವ ಅಥವಾ ಧೂಮಪಾನಿಗಳು ಕ್ಯಾಕರಿಸಿ ಉಗಿಯುವ ಅಥವಾ ಎಲ್ಲರಲ್ಲೂ ಮೂಗು, ಗಂಟಲಿನಲ್ಲಿ ಇರುವ ಸಿಂಬಳ ಅಥವಾ ಲೋಳೆಯಾದ ದ್ರವವು ಶ್ವಾಸಾಂಗದ ರಕ್ಷಣೆಯ ಮೊದಲ ತಡೆಬೇಲಿಯಂತೆ ಕೆಲಸ ಮಾಡಲು “ಗೊಬ್ಲೆಟ್‌ ಸೆಲ್‌’ಗಳಿಂದ ಉತ್ಪಾದನೆಯಾಗುತ್ತದೆ.

ಶ್ವಾಸಾಂಗದಲ್ಲಿ ಉತ್ಪಾದನೆಯಾಗುವ ಈ ಲೋಳೆದ್ರವವು ಆ್ಯಂಟಿಮೈಕ್ರೋಬಿಯಲ್‌ ಪೆಪ್ಟೆ„ಡ್‌ಗಳು, ಡಿಫೆನ್ಸಿನ್‌ಗಳು, ಸೈಟೊಕಿನ್‌ ಗಳು ಮತ್ತು ಆ್ಯಂಟಿಬಾಡಿಯಂತಹ ರಾಸಾಯನಿಕ ಅಂಶಗಳು ಮತ್ತು ರಿಸೆಪ್ಟರ್‌ಗಳನ್ನು ಕೂಡ ಹೊಂದಿರುತ್ತದೆ. ಇನ್‌ಫ್ಲಮೇಟರಿ ಮೀಡಿಯೇಟರ್‌ಗಳನ್ನು ಕೂಡ ಈ ಲೋಳೆದ್ರವವು ಹೊಂದಿದ್ದು, ಇವುಗಳಲ್ಲಿ ಐಜಿಎ (IgA) ಎಂಬುದು ಮುಖ್ಯ ಘಟಕವಾಗಿದೆ. ಈ ರೋಗಪ್ರತಿಬಂಧಕ ಕಾಯಗಳು ಸಂಭಾವ್ಯ ರೋಗಕಾರಕ ಅಪಾಯಗಳನ್ನು ಗುರುತಿಸಿ ಪ್ರತಿರಕ್ಷಣೆ ಒದಗಿಸುವ ಜತೆಗೆ ಶ್ವಾಸಕೋಶಗಳ ಸಹಜ ಕಾರ್ಯಚಟುವಟಿಕೆಗಳಿಗೆ ಉರಿಯೂತವು ಅಡ್ಡಿಯಾಗದಂತೆ ತಡೆಯುವ ಉರಿಯೂತ ಪ್ರಕ್ರಿಯೆಯ ನಿಯಂತ್ರಣದ ಕೆಲಸವನ್ನೂ ಮಾಡುತ್ತವೆ.

Advertisement

ಇದರ ಜತೆಗೆ ಗಂಟಲಿನಲ್ಲಿರುವ ಟಾನ್ಸಿಲ್‌ಗ‌ಳಲ್ಲಿ ಇರುವ ರಚನೆಯನ್ನು ಹೋಲುವ ಶ್ವಾಸಾಂಗದ ಫಾಲಿಕ್ಯುಲಾರ್‌ ಭಾಗಗಳಲ್ಲಿ ಟಿ ಮತ್ತು ಬಿ ಲಿಂಫೊಸೈಟ್‌ಗಳು (ಬಿಎಎಲ್‌ಟಿ – ಬ್ರಾಂಕಸ್‌-ಅಸೋಸಿಯೇಟೆಡ್‌ ಲಿಂಫಾಯಿಡ್‌ ಟಿಶ್ಯೂ) ಸಮೃದ್ಧವಾಗಿದ್ದು, ಸೋಂಕುಗಳ ವಿರುದ್ಧ ಹೋರಾಟದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ. ಈ ಎಲ್ಲ ಅತೀ ಸೂಕ್ಷ್ಮವಾದ ಸಂರಚನೆಗಳು ಜತೆಗೂಡಿ ನಾವು ಸೋಂಕುಗಳಿಗೆ ಒಳಗಾಗದೆ ಮತ್ತು ಪರಿಸರದ ಜತೆಗೆ ಸಮತೋಲನದಲ್ಲಿದ್ದು ಶ್ವಾಸಕೋಶಗಳು ಆರೋಗ್ಯಯುತವಾಗಿ ಕಾರ್ಯನಿರ್ವಹಿಸುವಂತೆ ಮಾಡುತ್ತವೆ.

ಧೂಮಪಾನದಿಂದ ಉಂಟಾದ ಆಕ್ಸಿಡೇಟಿವ್‌ ಒತ್ತಡ, ಒಳಾಂಗಣ ಅಥವಾ ಹೊರಾಂಗಣದ ಮಾಲಿನ್ಯ ಅಥವಾ ಸೋಂಕಿನಿಂದಾಗಿ ಈ ಸೂಕ್ಷ್ಮ ಸಮತೋಲನವು ಹದಗೆಡಬಹುದಾಗಿದೆ. ಅಸ್ತಮಾ, ಸಿಒಪಿಡಿ ರೋಗಿಗಳ ಶ್ವಾಸಾಂಗ ಮಾರ್ಗದಲ್ಲಿ ಉಂಟಾಗುವ ಉರಿಯೂತ ಪ್ರತಿಸ್ಪಂದನೆಯು ರೆಸ್ಪಿರೇಟರಿ ಎಪಿಥೇಲಿಯಂ, ಜನ್ಮಜಾತ ರೋಗನಿರೋಧಕ ವ್ಯವಸ್ಥೆ ಮತ್ತು ಆ ಬಳಿಕ ಉಂಟಾದ ರೋಗ ನಿರೋಧಕ ಶಕ್ತಿಗಳ ಪರಸ್ಪರ ಸಂವಹನವನ್ನು ಒಳಗೊಂಡಿದ್ದು, ಇದು ದೀರ್ಘ‌ಕಾಲೀನ ಉರಿಯೂತ ಪ್ರತಿಸ್ಪಂದನೆಯನ್ನು ಪ್ರಚೋದಿಸುತ್ತದೆ.

ಅಸ್ತಮಾ, ಸಿಒಪಿಡಿ ಮತ್ತು ಶ್ವಾಸಾಂಗ ವೈರಾಣು ಸೋಂಕುಗಳಂತಹ ಶ್ವಾಸಾಂಗ ಅಡಚಣೆ ಕಾಯಿಲೆ (ಒಬ್‌ಸ್ಟ್ರಕ್ಟಿವ್‌ ಪಲ್ಮನರಿ ಡಿಸೀಸಸ್‌) ಗಳ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ತಡೆಯುವ ಹಾಗೂ ಅವುಗಳ ನಿರ್ವಹಣೆಯ ಕಾರ್ಯವಿಧಾನದಲ್ಲಿ ಆಹಾರ ಶೈಲಿ ಮತ್ತು ಪೌಷ್ಟಿಕಾಂಶಗಳು ಪ್ರಾಮುಖ್ಯ, ಬದಲಾಯಿಸಬಹುದಾದ ಅಂಶಗಳಾಗಿವೆ. ಸಸ್ಯಜನ್ಯ ಅಥವಾ ಪ್ರಾಣಿಜನ್ಯವಾದ ಹಲವಾರು ವಿಧದ ಆಹಾರಗಳಲ್ಲಿ ವಿಟಮಿನ್‌ ಗಳು ಮತ್ತು ಸೂಕ್ಷ್ಮ ಪೋಷಕಾಂಶಗಳು ಲಭ್ಯವಿವೆ. ತಮ್ಮ ಪೌಷ್ಟಿಕಾಂಶ ಪಾತ್ರದ ಜತೆಗೆ ಅವು ರೋಗನಿರೋಧಕ ಶಕ್ತಿ ಮತ್ತು ಕರುಳಿನಲ್ಲಿ ಮತ್ತು ಶ್ವಾಸಾಂಗದಲ್ಲಿರುವಂತಹ ಲೋಳೆದ್ರವಗಳ ಸ್ಥಿರೀಕರಣ (ಹೋಮಿಯೊಸ್ಟಾಸಿಸ್‌) ಕ್ರಿಯೆಯಲ್ಲಿಯೂ ಭಾಗವಹಿಸುತ್ತವೆ.

ಈ ಕ್ರಿಯೆಯಲ್ಲಿ ರೋಗ ನಿರೋಧಕ ಪ್ರತಿಕ್ರಿಯೆಯ ನಿಯಂತ್ರಕ ಮಾಲೆಕ್ಯೂಲ್‌ಗ‌ಳ ಜೈವಿಕ ಸಂಶ್ಲೇಷಣೆಗೆ ಅಗತ್ಯವಾದ ಪ್ರಧಾನ ಆಧಾರ ಅಂಶಗಳನ್ನು ಪಡೆಯಲಾಗುತ್ತದೆ. ಶ್ವಾಸಕೋಶಗಳ ಆರೋಗ್ಯ ಮತ್ತು ಹೋಮಿಯೋಸ್ಟಾಸಿಸ್‌ ಕ್ರಿಯೆಗೆ ಸಂಬಂಧಿಸಿದ ಹೇಳುವುದಾದರೆ, ತಮ್ಮ ಉರಿಯೂತ ನಿರೋಧಕ ಕಾರ್ಯದಿಂದ ಮಾತ್ರವಲ್ಲದೆ ರೋಗಕಾರಕಗಳ ವಿರುದ್ಧ ಪ್ರತಿರೋಧಕ ಪ್ರತಿಸ್ಪಂದನೆಯಲ್ಲಿಯೂ ಭಾಗವಹಿಸುವ ಗುಣ ಹೊಂದಿರುವುದರಿಂದ ವಿಟಮಿನ್‌ ಡಿ, ಎ, ಸಿ ಮತ್ತು ಇ ಬಹು ಮುಖ್ಯ ಎಂದು ಪರಿಗಣಿತವಾಗಿವೆ.

ಈ ವಿಟಮಿನ್‌ಗಳ ಪೈಕಿ ವಿಟಮಿನ್‌ ಡಿ ಅತ್ಯಂತ ಮುಖ್ಯವಾದದ್ದು. ವಿಟಮಿನ್‌ ಡಿಯ ಚಯಾಪಚಯ ಕ್ರಿಯೆ ಮತ್ತು ಜೀವಶಾಸ್ತ್ರೀಯ ಪರಿಣಾಮಗಳ ಬಗ್ಗೆ ನಮ್ಮ ತಿಳಿವಳಿಕೆ ಇತ್ತೀಚೆಗಿನ ವರ್ಷಗಳಲ್ಲಿ ಅಪಾರವಾಗಿ ಬೆಳೆದಿದೆ. ವಿಟಮಿನ್‌ ಡಿಯು ಅಪಾರವಾದ ರೋಗ ಪ್ರತಿರೋಧ ಶಕ್ತಿ ಪರಿವರ್ತಕ ಗುಣ ಹೊಂದಿರುವುದು ಸ್ಪಷ್ಟವಾಗಿದೆ. ವಿಟಮಿನ್‌ ಡಿ ಕೊರತೆಯಾದರೆ ಪ್ರಮುಖ ಶ್ವಾಸಾಂಗ ವ್ಯೂಹ ಸೋಂಕುಗಳು ಮತ್ತು ಮೈಕೊಬ್ಯಾಕ್ಟೀರಿಯಲ್‌ ಸೋಂಕುಗಳಿಗೆ ತುತ್ತಾಗುವ ಅಪಾಯ ಹೆಚ್ಚುತ್ತದೆ ಎಂಬುದು ಸೋಂಕುರೋಗಶಾಸ್ತ್ರೀಯ ಅಧ್ಯಯನಗಳಿಂದ ತಿಳಿದುಬಂದಿದೆ.

ಅಲ್ಲದೆ ವಿಟಮಿನ್‌ ಡಿಯು ಅಸ್ತಮಾ ಉಂಟಾಗಲು ಮತ್ತು ಅದರ ಚಿಕಿತ್ಸೆಯಲ್ಲಿ ಪ್ರಾಮುಖ್ಯ ಪಾತ್ರ ವಹಿಸಬಹುದಾಗಿದೆ ಎಂಬುದು ಕೂಡ ಗೊತ್ತಾಗಿದೆ. ಮೈಕೊಬ್ಯಾಕ್ಟೀರಿಯಲ್‌ ಸೋಂಕುಗಳ ಚಿಕಿತ್ಸೆಯಲ್ಲಿ ಅತಿನೇರಳೆ ಬೆಳಕು ಸಹಾಯ ಮಾಡಬಲ್ಲುದು ಎಂಬುದು ಸುಮಾರು ಒಂದು ಶತಮಾನದಷ್ಟು ಹಿಂದೆಯೇ ನಮಗೆ ತಿಳಿದುಬಂದಿತ್ತು.

ಲೂಪಸ್‌ ವಲ್ಗಾರಿಸ್‌ (ಚರ್ಮದ ಕ್ಷಯ ರೋಗ) ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ಅತಿನೇರಳೆ ಬೆಳಕು ಪ್ರಯೋಜನಕಾರಿ ಎಂಬುದನ್ನು ಸಾಬೀತುಪಡಿಸಿದ್ದಕ್ಕಾಗಿ ನೀಲ್ಸ್‌ ಫಿನ್ಸೆನ್‌ ಎಂಬ ವಿಜ್ಞಾನಿಗೆ 1903ರಲ್ಲಿ ವೈದ್ಯಕೀಯ ವಿಜ್ಞಾನದ ನೊಬೆಲ್‌ ಪ್ರಶಸ್ತಿಯನ್ನು ಘೋಷಿಸಲಾಗಿತ್ತು. 19ನೇ ಶತಮಾನದ ಕೊನೆಯ ವೇಳೆಗೆ ಹರ್ಮನ್‌ ಬ್ರಹ್ಮರ್‌ ಎಂಬ ಇನ್ನೊಬ್ಬ ವಿಜ್ಞಾನಿ ಕ್ಷಯ ರೋಗಿಗಳ ಚಿಕಿತ್ಸೆಗಾಗಿ ಮೊತ್ತಮೊದಲ ಸ್ಯಾನಟೋರಿಯಂ ಸ್ಥಾಪಿಸಿದ್ದರು.

ಇಲ್ಲಿ ಕ್ಷಯ ರೋಗಿಗಳು ಸಾಕಷ್ಟು ಎತ್ತರದ ಪ್ರದೇಶದಲ್ಲಿದ್ದು, ತಾಜಾ ಗಾಳಿ ಮತ್ತು ಉತ್ತಮ ಪೌಷ್ಟಿಕಾಂಶ ಪಡೆಯುವಂತೆ ಮಾಡಲಾಗಿತ್ತು. ಈ ಸ್ಯಾನಿಟೋರಿಯಂಗಳಲ್ಲಿ ಇದ್ದ ಕ್ಷಯ ರೋಗಿಗಳು ಅತಿನೇರಳೆ ಬೆಳಕಿಗೆ ಒಡ್ಡಿಕೊಂಡದ್ದರಿಂದ ಮತ್ತು ಚರ್ಮದಲ್ಲಿ ವಿಟಮಿನ್‌ ಡಿಯ ಪೂರ್ವ ಸ್ವರೂಪದ ಉತ್ಪಾದನೆ ಹೆಚ್ಚಿದ್ದರಿಂದ ಇಲ್ಲಿದ್ದ ಕ್ಷಯ ರೋಗಿಗಳು ಪ್ರಯೋಜನ ಪಡೆಯುವಂತಾಯಿತು ಎಂಬುದಾಗಿ ಆ ಬಳಿಕ ಊಹಿಸಲಾಯಿತು.

ಕಳೆದ ಹಲವಾರು ದಶಕಗಳಿಂದ ಅಸ್ತಮಾ ಪ್ರಕರಣಗಳಲ್ಲಿ ಗಣನೀಯ ಏರಿಕೆ ಕಂಡುಬರುತ್ತಿದೆ, ಇದೇ ಅವಧಿಯಲ್ಲಿ ವಿಟಮಿನ್‌ ಡಿ ಕೊರತೆಯೂ ಇದಕ್ಕೆ ಅನುಗುಣವಾಗಿ ಹೆಚ್ಚಳ ಕಂಡಿದೆ. ಅಸ್ತಮಾ ರೋಗಿಗಳಲ್ಲಿ ವಿಟಮಿನ್‌ ಡಿ ಕೊರತೆಯು ಸಾಮಾನ್ಯವಾಗಿದ್ದು, ವಿಟಮಿನ್‌ ಡಿಯನ್ನು ಪೂರೈಸುವುದರಿಂದ ಅಸ್ತಮಾದ ತೀವ್ರತೆ ಕಡಿಮೆಯಾಗುವುದು ಹಾಗೂ ಕಾರ್ಟಿಕೊಸ್ಟಿರಾಯ್ಡಗಳಂತಹ ಅಸ್ತಮಾ ಚಿಕಿತ್ಸೆಗೆ ಪ್ರತಿಸ್ಪಂದನೆ ಚೆನ್ನಾಗಿ ಆಗುವುದು ಸಾಧ್ಯ. ವಿಟಮಿನ್‌ ಡಿಯನ್ನು ಪೂರೈಸಿದರೆ ಟಿ ಲಿಂಫೊಸೈಟ್‌ ರೆಗ್ಯುಲೇಟರ್‌ ಒದಗುವುದು ಮತ್ತು ಇಮ್ಯೂನ್‌ ಮೀಡಿಯೇಟರ್‌ ಆಗಿರುವ ಐಎಲ್‌-1 ಸ್ರಾವವಾಗುವುದರಿಂದ ಇದು ಸಾಧ್ಯವಾಗುತ್ತದೆ.

ಡಾ| ಉದಯ ಸುರೇಶ್‌ಕುಮಾರ್‌,

ಕನ್ಸಲ್ಟಂಟ್‌ ಪಲ್ಮನಾಲಜಿಸ್ಟ್‌,

ಕೆಎಂಸಿ ಆಸ್ಪತ್ರೆ,

ಡಾ| ಬಿ.ಆರ್‌. ಅಂಬೇಡ್ಕರ್‌ ವೃತ್ತ,

ಮಂಗಳೂರು

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಪಲ್ಮನಾಲಜಿ ವಿಭಾಗ, ಕೆಎಂಸಿ, ಮಂಗಳೂರು)

Advertisement

Udayavani is now on Telegram. Click here to join our channel and stay updated with the latest news.

Next