Advertisement

ಬೆಳೆ ಮೌಲ್ಯವರ್ಧನೆಯಲ್ಲಿ ಮಹಿಳೆ ಪಾತ್ರ ದೊಡ್ಡದು

03:50 PM Oct 20, 2018 | |

ವಿಜಯಪುರ: ಆಧುನಿಕ ಕೃಷಿಯಲ್ಲಿ ರೈತರು ಕೇವಲ ಬೆಳೆ ಬೆಳೆದರೆ ಸಾಲದು, ಬೆಳೆದ ಬೆಳೆಗೆ ನಿರೀಕ್ಷಿತ ಬೆಲೆ ಹಾಗೂ ಲಾಭ ಬರುವಂತಾಗಲು ರೈತರು ತಾವು ಬೆಳೆಗಳಿಗೆ ಮೌಲ್ಯವರ್ಧನೆ ಮಾಡುವುದು ಇಂದಿನ ಅಗತ್ಯವಾಗಿದೆ. ಈ ಕೆಲಸದಲ್ಲಿ ಮಹಿಳೆಯರ ಪಾತ್ರ ದೊಡ್ಡದು ಎಂದು ಮಾಜಿ ಸೈನಿಕ ಫಿಲಿಫ್‌ ಕುಂದರಗಿ ಅಭಿಪ್ರಾಯಪಟ್ಟರು.

Advertisement

ಹಿಟ್ನಳ್ಳಿಯಲ್ಲಿರುವ ಕೃಷಿ ವಿಜ್ಞಾನ ಕೇಂದ್ರ ಆಯೋಜಿಸಿದ್ದ ಮಹಿಳಾ ಕಿಸಾನ್‌ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಸಕ್ತ ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನಗಳಿಗಿಂತ ಮೌಲ್ಯವರ್ಧಿತ ಬೆಳೆಗೆ ಹೆಚ್ಚಿನ ಬೇಡಿಕೆ ಇದೆ. ಹೀಗಾಗಿ ರೈತರು ತಾವು ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ಬೆಲೆ ಕುಸಿತವಾದಾಗ ಮೌಲ್ಯವ ರ್ಧಿಸಿ ಕೃಷಿ ಬೆಳೆಗಳ ಪೂರಕ ಪದಾರ್ಥಗಳನ್ನು ತಯಾರಿಸುವ ಮೂಲಕ ಬೆಲೆ ಕುಸಿತಕ್ಕೆ ಸೆಡ್ಡು ಹೊಡೆಯಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ಕೃಷಿ ಬೆಳೆಗಳಿಗೆ ದ್ವಿಗುಣ ಬೆಲೆ ತಂದುಕೊಡುವ ಮೌಲ್ಯವರ್ಧನೆ ಮಾಡುವಲ್ಲಿ ರೈತ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ. ಮೌಲ್ಯವರ್ಧಕ ಕೃಷಿ ಉತ್ಪನ್ನಗಳ ಮಾರಾಟದಿಂದ ಮಹಿಳೆಯರು ಪೂರಕ ಆದಾಯದ ಗಳಿಸುವ ಜೊತೆಗೆ ಕುಟುಂಬದ ಆರ್ಥಿಕ ಶಕ್ತಿ ವೃದ್ಧಿಸುವ ಜೊತೆಗೆ ತಾವು
ಕೂಡ ಸ್ವಾವಲಂಬಿ ಜೀವನ ನಡೆಸಲು ಸಾಧ್ಯವಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ| ಎಸ್‌.ಎ. ಬಿರಾದಾರ ಮಾತನಾಡಿ, ಭಾರತದ ಕೃಷಿ ಪರಂಪರೆಯಲ್ಲಿ ಮಹಿಳೆಯರ ಪಾತ್ರ ಪ್ರಮುಖ ಸ್ಥಾನ ಪಡೆದಿದೆ. ಮಹಿಳೆ ಇಲ್ಲದ ಭಾರತೀಯ ಕೃಷಿ ಊಹೆಗೂ ಅಸಾಧ್ಯ. ಹೀಗಾಗಿ ಕೃಷಿ ಕಾಯಕದ ಮಹಿಳೆಯರು ಸಂಘಟಿತರಾಗಿ ಗ್ರಾಮೀಣ ಮಟ್ಟದಲ್ಲಿ ಸಂಘಗಳ ರಚಿಸಿಕೊಂಡು ಸರ್ಕಾರದ ಸೌಲಭ್ಯ ಪಡೆಯುವ ಜೊತೆಗೆ ನಿಮ್ಮ ಆರ್ಥಿಕ ಶಕ್ತಿ ವೃದ್ಧಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು. 

ಇದೇ ಸಂದರ್ಭದಲ್ಲಿ ಕೃಷಿ ಸಾಧಕಿ ರೈತ ಮಹಿಳೆ ದೊಂಡುಬಾಯಿ ಚವ್ಹಾಣ ಅವರನ್ನು ಸನ್ಮಾನಿಸಲಾಯಿತು. ಡಾ| ಎಸ್‌.ಎಂ. ವಸ್ತ್ರದ, ಡಾ| ಪ್ರೇಮಾ ಪಾಟೀಲ, ಡಾ| ಸಂಗೀತಾ ಜಾಧವ, ಶ್ರೀಶೈಲ ರಾಠೊಡ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next