ಕುಷ್ಟಗಿ: ನೀರು ವ್ಯರ್ಥವಾಗಿ ಹರಿಯುವುದನ್ನು ಕಂಡಲ್ಲಿ ಕೂಡಲೇ ನಲ್ಲಿ ಬಂದ್ ಮಾಡಿ ನೀರು ವ್ಯರ್ಥವಾಗುವುದನ್ನು ತಡೆಯಿರಿ. ಇದು ಭವಿಷ್ಯದ ಪೀಳಿಗೆಗಾಗಿ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಹಿರಿಯ ಶ್ರೇಣಿ ನ್ಯಾಯಾಲಯದ ನ್ಯಾಯಾಧಿಧೀಶರಾದ ಬಿ.ಎಸ್. ಹೊನ್ನುಸ್ವಾಮಿ ಹೇಳಿದರು.
ಇಲ್ಲಿನ ಪುರಸಭೆ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ವಕೀಲರ ಸಂಘ, ಪುರಸಭೆ ಕುಷ್ಟಗಿ ಸಹಯೋಗದಲ್ಲಿ ವಿಶ್ವ ನೀರಿನ ದಿನಾಚರಣೆ ಹಾಗೂ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನೀರಿನ ಸಂರಕ್ಷಣೆಯಲ್ಲಿ ಸ್ಥಳೀಯ ಸಂಸ್ಥೆಗಳ ಪಾತ್ರ ಬಹುಮುಖ್ಯವಾಗಿದ್ದು, ಇದಕ್ಕೆ ಸಾರ್ವಜನಿಕರು ಸಹಕರಿಸಬೇಕೆಂದರು.
ಪ್ರಧಾನ ಸಿವ್ಹಿಲ್ ನ್ಯಾಯಾ ಧೀಶರಾದ ಚಂದ್ರಶೇಖರ ತಳವಾರ ಮಾತನಾಡಿ, ನಮ್ಮ ಪೂರ್ವಜರಿದ್ದ ಸಂದರ್ಭದಲ್ಲಿ ಜನಸಂಖ್ಯೆ ಕಡಿಮೆ ಇದ್ದು, ನೀರಿನ ಬಳಕೆ ಕಡಿಮೆ ಇತ್ತು. ಸಂಗ್ರಹ ಸಾಮಾರ್ಥ್ಯ ಕಡಿಮೆ ಇದ್ದವು. ಜನಸಂಖ್ಯೆ ಬೆಳೆದಂತೆ ಜಲಾಶಯ ನಿರ್ಮಿಸಲಾಗಿದ್ದು, ನೀರಿನ ಬಳಕೆ ಹೆಚ್ಚಿದೆ. ಅಂತರ್ಜಲ ಅಭಾವಕ್ಕೂ ಕಾರಣವಾಗಿದೆ ಎಂದರು.
ಹೆಚ್ಚುವರಿ ನ್ಯಾಯಾಲಯ ನ್ಯಾ ಯಾಧೀಶರಾದ ಸತೀಶ ಬಿ. ಮಾತನಾಡಿ, ಲೇಔಟ್‌ನಲ್ಲಿ 25 ನಿವೇಶನ ಇದ್ದರೆ 25 ನಿವೇಶನದಲ್ಲಿ ಕೊಳವೆಬಾವಿ ಕೊರೆಸಲಾಗುತ್ತಿದೆ. ಇದು ಅಂತರ್ಜಲ ಕಡಿಮೆಯಾಗಲು ಕಾರಣವಾಗಿದೆ. ಸ್ಥಳೀಯ ಸಂಸ್ಥೆಗಳು ಪ್ರತಿ ಲೇಔಟ್‌ಗೆ ಒಂದು ಕೊಳವೆಬಾವಿ ಹಾಕಿಸಿದರೆ ಲೇಔಟ್‌ನ ಎಲ್ಲ ಮನೆಗಳಿಗೆ ನೀರು ಪೂರೈಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಿ ಕ್ರಮ ಕೈಗೊಳ್ಳಬೇಕಿದೆ ಎಂದರು.
ನ್ಯಾಯವಾದಿಗಳ ಸಂಘದ ಅಧ್ಯಕ್ಷ ವೆಂಕಟೇಶ ಈಳಗೇರ, ನ್ಯಾಯವಾದಿ ಪರಸಪ್ಪ ಗುಜಮಾಗಡಿ, ಸರ್ಕಾರಿ ಸಹಾಯಕ ಅಭಿಯೋಜಕ ರಾಯನಗೌಡ ಎಲ್. ಪುರಸಭೆ ಮುಖ್ಯಾಧಿಕಾರಿ ಉಮೇಶ ಹಿರೇಮಠ, ಹಿರಿಯ ವಕೀಲರಾದ ನಾಗಪ್ಪ ಸೂಡಿ, ಡಿ. ಮಾರುತಿ, ವಯಸ್ಕರ ಶಿಕ್ಷಣಾಧಿಕಾರಿ ಉಮದೇವಿ ಸೊನ್ನದ ಇತರರಿದ್ದರು. ಸುರೇಶ ಜರಕುಂಟಿ ಸ್ವಾಗತಿಸಿದರು. ರಾಮನಗೌಡ ಮಾಲಿಪಾಟೀಲ ನಿರೂಪಿಸಿದರು.